7

ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

Published:
Updated:
ಮೂರನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

ಹಾವೇರಿ: ಗೋವಿನ ಜೋಳ ಖರೀದಿ ಕೇಂದ್ರ ತೆರೆಯಬೇಕು, ಬೆಳೆವಿಮೆ ಪರಿಹಾರದ ಬಾಕಿ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿನ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವು ಎರಡನೇ ದಿನವಾದ ಶುಕ್ರವಾರವೂ ಮುಂದುವರಿದಿದ್ದು, ಮೂರನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯ ಪ್ರಮುಖ ಬೆಳೆಯಾದ ಗೋವಿನ ಜೋಳಕ್ಕೆ ಬೆಂಬಲ ಬೆಲೆಯನ್ನು ನೀಡಿ, ಖರೀದಿ ಕೇಂದ್ರವನ್ನು ತಕ್ಷಣವೇ ಆರಂಭಿಸಬೇಕು. ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ನಿರ್ಧರಿಸಿದೆ. ಆದರೆ, ಖರೀದಿ ಕೇಂದ್ರವನ್ನು ರಾಜ್ಯದಲ್ಲಿ ಈ ವರೆಗೂ ತೆರೆದಿಲ್ಲ ಎಂದರು.

'ಕೇಂದ್ರ ಸರ್ಕಾರ ಖರೀದಿ ಕೇಂದ್ರವನ್ನು ತೆರೆಯದೇ ಇದ್ದರೂ, ನಾವು ತೆರೆಯುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ, ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ಈಗಾಗಲೇ, ಕೆಲವು ರಾಜ್ಯಗಳಲ್ಲಿ ಗೋವಿನ ಜೋಳವನ್ನು ಬೆಂಬಲ ಬೆಲೆಯ ಮೂಲಕ ಖರೀದಿಸಲಾಗುತ್ತಿದೆ. ನಮ್ಮ ರಾಜ್ಯ ಸರ್ಕಾರವೂ ಖರೀದಿಸಬೇಕು ಎಂದು ಆಗ್ರಿಹಿಸಿದ ಅವರು, ಬೆಳೆ ವಿಮೆ ಕಂಪೆನಿಗಳು ರೈತರಿಗೆ ಕೋಟಿಗಟ್ಟಲೆ ಹಣವನ್ನು ವಂಚನೆ ಮಾಡುತ್ತಿವೆ ಎಂದು ದೂರಿದರು.

ಕೇಂದ್ರ ಸರ್ಕಾರ ಘೋಷಿಸಿರುವ ಪ್ರತಿ ಕ್ವಿಂಟಲ್‌ ₹ 1,450 ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ₹ 350 ಪ್ರೋತ್ಸಾಹ ಧನ ಸೇರ್ಪಡೆ ಮಾಡಿ, ₹1,800 ಘೋಷಣೆ ಮಾಡಬೇಕು. ಹತ್ತಿ, ಶೇಂಗಾ, ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ‘ನಮ್ಮ ಸರ್ಕಾರವು ರೈತರ ಪರವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ರೈತಪರ ಕೆಲಸಗಳನ್ನು ಮಾಡಿದೆ. ಗೋವಿನ ಜೋಳಕ್ಕೆ ಬೆಂಬಲ ಬೆಲೆಯನ್ನು ನೀಡಿ ಖರೀದಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಡಿ.23ಕ್ಕೆ ಅವರೊಂದಿಗೆ ಈ ವಿಷಯದ ಕುರಿತು ರೈತರ ಸಮ್ಮುಖದಲ್ಲಿಯೇ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪರಪ್ಪನವರ, ಶಶಿಧರಸ್ವಾಮಿ ಛತ್ರದಮಠ, ಸುರೇಶ ಚಲವಾದಿ, ದಿಳ್ಳೆಪ್ಪ ಮಣ್ಣೂರ, ನಾಗಣ್ಣ ವಾಲಿಕಾರ, ಸಾವಂತಪ್ಪ ಸಾಲಿ, ಚಂದ್ರಕಾಂತ ಕರ್ಜಗಿ, ಬಸವರಾಜ ಕಾಯಕದ, ಕೊಟ್ರೇಶ ಕರ್ಜಗಿ, ಬಸವಣ್ಣ ನಾಳಕರ, ಶಿವಯೋಗಿ ಅಂಗಡಿ, ಮಂಜುನಾಥ ಕದಂ, ಶಂಕ್ರಣ್ಣ ಇಟಗಿ, ಬಸಪ್ಪ ಗಂಗಾಯಿ ಕೊಪ್ಪ ಇದ್ದರು.

* * 

ಅಧಿಕಾರಿಗಳ ತಪ್ಪಿನಿಂದ ರೈತರಿಗೆ ದೊರೆಯಬೇಕಾದ ಎಷ್ಟೋ ಸವಲತ್ತುಗಳು ತಲುಪಿಲ್ಲ. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಿ

ರಾಮಣ್ಣ ಕೆಂಚಳ್ಳೇರ ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry