7

ಗಂಟೆ, ದಿನ, ಸೆಕೆಂಡುಗಳ ಲೆಕ್ಕಾಚಾರ

Published:
Updated:
ಗಂಟೆ, ದಿನ, ಸೆಕೆಂಡುಗಳ ಲೆಕ್ಕಾಚಾರ

‘ಇದು ಹತ್ತರಲ್ಲಿ ಒಂದು ಎನ್ನುವಂಥ ಸಿನಿಮಾ ಅಲ್ಲ’ ಹೀಗೆ ಘಂಟಾಘೋಷವಾಗಿ ಹೇಳಿಕೊಂಡರು ನಿರ್ದೇಶಕ ಜಿ.ಕೆ. ಮಧುಸೂಧನ್‌. ‘ಭಿನ್ನತೆ ಟೈಟಲ್‌ನಷ್ಟೇ ಇರುವುದಲ್ಲ. ಈ ಚಿತ್ರದ ಕಥೆ ಯಾವ ಫಾರ್ಮುಲಾಗೂ ಸಿಗದ, ಯಾವುದೇ ಟ್ರೆಂಡ್‌ಗೆ ಕಟ್ಟುಬೀಳದ, ಯಾವ ಇಮೇಜ್‌ಗೂ ಜೋತುಬೀಳದ  ತಾಜಾ ಕನಸನ್ನು ಕಟ್ಟಿಕೊಡುವ ಪ್ರಯತ್ನ’ ಎಂಬ ವಿವರಣೆಯನ್ನೂ ಅವರು ನೀಡಿದರು.

ಜನವರಿ ಐದರಂದು ಬಿಡುಗಡೆಯಾಗಲಿರುವ ‘ಮೂರು ಗಂಟೆ ಮೂವತ್ತು ದಿನ ಮೂವತ್ತು ಸೆಕೆಂಡ್‌’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಂಡದವರು ಮಾತಾಡಿದ್ದಕ್ಕಿಂತ ದೃಶ್ಯಿಕೆಗಳು ಮಾತಾಡಿದ್ದೇ ಹೆಚ್ಚು. ಸಿನಿಮಾದ ಬಗೆಗಿನ ಮಾಹಿತಿಗಳನ್ನೆಲ್ಲ ಅವರು ದೃಶ್ಯತುಣುಕು ಮಾಡಿಯೇ ತೋರಿಸಿದರು.

ಸರಳ ಪ್ರೇಮಕಥೆ, ಅದರ ಜತೆಗೆ ಒಂದಿಷ್ಟು ಥ್ರಿಲ್ಲಿಂಗ್‌ ಟಾಸ್ಕ್‌, ಜತೆಗೊಂದು ಗಂಭೀರ ಚಾಲೆಂಜ್‌ಗಳನ್ನು ಇಟ್ಟುಕೊಂಡು ಕಥೆ ಹೆಣೆದಿದ್ದಾರೆ ಮಧುಸೂಧನ್‌. ಎಲ್ಲ ವರ್ಗದ ಪ್ರೇಕ್ಷಕರಿಗೂ ಒಂದೇ ತಟ್ಟೆಯಲ್ಲಿ ರಸದೌತಣ ನೀಡುವ ಪ್ರಯತ್ನ ಅವರದು. ಇದರ ಜತೆ ಮಸಾಲೆ, ಹಾಸ್ಯ, ಫೈಟ್‌, ನೃತ್ಯ, ಅನಿರೀಕ್ಷಿತ ತಿರುವುಗಳು ಎಲ್ಲವೂ ಇವೆಯಂತೆ.

ಇಷ್ಟೆಲ್ಲ ಹೇಳಿಯೂ ಕಥೆಯ ಎಳೆಯನ್ನು ಮಾತ್ರ ಯಾರೂ ಬಿಟ್ಟುಕೊಡಲಿಲ್ಲ. ‘ಒಂದು ಸಣ್ಣ ಎಳೆಯನ್ನು ಬಿಟ್ಟುಕೊಟ್ಟರೆ ಇಡೀ ಸಿನಿಮಾದ ಸ್ವಾರಸ್ಯವೇ ಹಾಳಾಗುತ್ತದೆ’ ಎಂಬ ಆತಂಕ ಅವರದು.

ಅರುಣ್‌ ಗೌಡ ಮತ್ತು ಕಾವ್ಯಾ ಶೆಟ್ಟಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಯಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್‌, ಜಯಲಕ್ಷ್ಮೀ ಪಾಟೀಲ, ಸುಂದರ್‌, ಯಮುನಾ, ಸುಧಾರಾಣಿ, ದೇವರಾಜ್‌ ಅವರಂಥ ಹಿರಿಯ ಕಲಾವಿದರೂ ಇದ್ದಾರೆ.

ಚಿತ್ರವನ್ನು ಪೂರ್ಣಗೊಳಿಸಿ, ಅದನ್ನು ಆಯ್ದ ನೋಡುಗರ ಎದುರು ಪ್ರದರ್ಶಿಸಿ ಅವರಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿ ಅದಕ್ಕೆ ಅನುಗುಣವಾಗಿ ನಿರೂಪಣೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಇಷ್ಟೆಲ್ಲ ಸಿದ್ಧತೆ ನಡೆಸಿ ಈಗ ತೆರೆಯ ಮೇಲೆ ಬರಲು ನಿರ್ಧರಿಸಿದ್ದಾರೆ.

ನಾಯಕನಾಗಿ ನಟಿಸಿರುವ ಅರುಣ್‌ ಗೌಡ ಮಾತನಾಡಿ, ‘ಇದು ತುಂಬ ಒಳ್ಳೆಯ ಕಥೆ ಇರುವ ಸಿನಿಮಾ. ಅಷ್ಟೇ ಅಲ್ಲ, ಒಂದು ರೀತಿಯ ಸವಾಲಿನ ಪಾತ್ರ ಇರುವ ಸಿನಿಮಾ. ಅದಕ್ಕಾಗಿಯೇ ಸಾಕಷ್ಟು ಸಿದ್ಧತೆ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ’ ಎಂದರು. ಟೀಸರ್‌ನಲ್ಲಿ ಅವರನ್ನು ನೋಡಿದಾಗ ನ್ಯಾಯವಾದಿಯ ಪಾತ್ರ ಎಂಬುದು ಸ್ಪಷ್ಟವಾಗುತ್ತಿತ್ತು. ಹಾಗೆಯೇ ಕಾವ್ಯಾ ಶೆಟ್ಟಿ ಟಿ.ವಿ. ಕಾರ್ಯಕ್ರಮ ನಿರೂಪಕಿಯ ಪಾತ್ರದಲ್ಲಿ ನಟಿಸಿದ್ದಾರೆ.

ಶ್ರೀಧರ್‌ ವಿ. ಸಂಭ್ರಮ್‌ ಈ ಚಿತ್ರಕ್ಕೆ ಸಂಗೀತ ಹೊಸೆದಿದ್ದಾರೆ. ‘ಮೊದಲನೇ ಸಿನಿಮಾ ಎಂದು ಎಲ್ಲಿಯೂ ಅನಿಸದಷ್ಟು ಚೆನ್ನಾಗಿ ಮಧುಸೂಧನ್‌ ಸಿನಿಮಾ ಮಾಡಿದ್ದಾರೆ. ಕೆಲವೇ ಕೆಲವರಿಗೆ ತಂತ್ರಜ್ಞರನ್ನು ಸಮರ್ಥ ಟೂಲ್‌ ಆಗಿ ಬಳಸಿಕೊಳ್ಳುವುದು ತಿಳಿದಿರುತ್ತದೆ. ಇವರು ಅಂಥ ಅಪರೂಪದ ನಿರ್ದೇಶಕರು’ ಎಂದು ಹಾಡಿ ಹೊಗಳಿದರು.

ಕಾವ್ಯಾ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. ಹಿರಿಯ ನಟಿ ಸುಧಾರಾಣಿ ಮಾತನಾಡಿ ‘ನಾನು ಮತ್ತು ದೇವರಾಜ್‌ ತುಂಬ ಕಾಲದ ನಂತರ ಜೋಡಿಯಾಗಿ ನಟಿಸಿದ್ದೇವೆ. ಇದು ನನಗೆ ಖುಷಿಕೊಟ್ಟ ಪಾತ್ರ. ಜನರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಶ್ರೀನಿವಾಸ ರಾಮಯ್ಯ ಛಾಯಾಗ್ರಹಣ ಈ ಚಿತ್ರಕ್ಕಿದೆ. ಜನವರಿ ಆರರಂದು ಎಪ್ಪತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ತಂಡ ಹಾಕಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry