ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಯ ರಾಮ ಕರಿಮಣಿಯೇ ಆಗಿಬಿಟ್ಟ

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ರಾಮನನ್ನು 'ಸೀತೆಯ ಗಂಡ' (ಸೀತಾಪತಿ) ಎಂದಷ್ಟೇ ಪರಿಭಾವಿಸುವ ದೊಡ್ಡ ಜಾನಪದ ಪರಂಪರೆ ದಕ್ಷಿಣ ಭಾರತದಲ್ಲಿ ಇದೆ. ಮಠಗಳಲ್ಲಿ 'ಮೂಲ ರಾಮದೇವರು' (ರಾಯರ ಮಠ), 'ದಿಗ್ವಿಜಯ ರಾಮದೇವರು' (ಉತ್ತರಾದಿಮಠ) ಇತ್ಯಾದಿಯಾಗಿ ‘ಸ್ವತಂತ್ರ ಅಸ್ತಿತ್ವ’ ಇದ್ದರೂ ದಾಸರಿಗೆ 'ಸೀತಾರಾಮಸ್ವಾಮಿ' ಎಂದು ಕರೆಯುವುದೇ ಇಷ್ಟ. ಬಿಜೆಪಿಯವರು ಹಂಚಿದ ಬಿಲ್ಲು ಧರಿಸಿ ಬಾಣ ಹಿಡಿದ ರಾಮನ ಚಿತ್ರಪಟಗಳನ್ನು ಹೊರತುಪಡಿಸಿದರೆ, ರಾಮ ಅಂದ್ರೆ ಎಲ್ಲಾ ಕಡೆ ಇರುವುದು ಕುಟುಂಬದ ಚಿತ್ರಗಳೇ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿಯಂತೂ ಸೀತೆಯನ್ನು ತೊಡೆಯ ಮೇಲೆ ಕೂಡಿಸಿಕೊಂಡು ಸಲ್ಲಾಪ ಮಾಡುವ ರೊಮ್ಯಾಂಟಿಕ್ ರಾಮನ ಚಿತ್ರಪಟಗಳು ಜನಪ್ರಿಯ. ಭದ್ರಾಚಲಂ ದೇಗುಲದಲ್ಲಿಯೂ ಸೀತೆ-ಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವ ರಾಮನ ವಿಗ್ರಹಕ್ಕೆ ಪೂಜೆ ನಡೆಯುವುದು.

ರಾಮದಾಸರ ಪ್ರಭಾವ ಇಂದಿಗೂ ಗಾಢವಾಗಿರುವ ಈ ಪ್ರದೇಶದಲ್ಲಿ ಸೀತಾ- ರಾಮರ ಆದರ್ಶ ದಾಂಪತ್ಯ ಕೊಂಡಾಡುವ ನೂರಾರು ಜಾನಪದ ಗೀತೆಗಳೂ ಮತ್ತು ಕೀರ್ತನೆಗಳು ಪ್ರಚಲಿತದಲ್ಲಿವೆ. ‘ಗೋದಾವರಿ’ ಚಿತ್ರದಲ್ಲಿ ಬಳಸಿಕೊಂಡಿರುವ ವೇಟೂರಿ ಸುಂದರರಾಮಮೂರ್ತಿ ರಚನೆಯ ‘ರಾಮ ಚಕ್ಕನಿ ಸೀತಕಿ’ ಹಾಡಿನಲ್ಲೂ ಇಂಥ ಗೀತೆಗಳ ಪ್ರಭಾವ ದಟ್ಟವಾಗಿರುವುದು ಗೋಚರಿಸುತ್ತದೆ. ಕೆ.ಎಂ. ರಾಧಾಕೃಷ್ಣನ್ ಅವರ ಸಂಗೀತ ನಿರ್ದೇಶನದಲ್ಲಿ ಗಾಯತ್ರಿ ಸೊಗಸಾಗಿ ಹಾಡಿದ್ದಾರೆ. ಮಾಧುರ್ಯ ಪ್ರಧಾನವಾಗಿರುವ ಈ ಹಾಡು ಪ್ರತಿ ಬಾರಿ ಯೋಚಿಸಿದಾಗಲೂ ಹೊಸ ಅರ್ಥಗಳನ್ನು ಹೊಮ್ಮಿಸುವ ಉತ್ತಮ ಕವಿತೆಯೂ ಹೌದು.

***

‘ನೀಲ ಗಗನ ಘನವಿಚಲನ

ಧರಣಿಜಾಶ್ರೀರಮಣ

ಮಧುರವದನ ನಳಿನನಯನ

ಮನವಿ ವಿನರಾ ರಾಮ’

(ಆಕಾಶ ನೀಲಿ ಮೈಬಣ್ಣದ, ತೂಕದ ಹೆಜ್ಜೆಗಳನ್ನಿಡುವ, ಭೂದೇವಿಯ ಮಗಳನ್ನು ವರಿಸಿದ, ಸುಂದರ ಮುಖವುಳ್ಳ, ಕಮಲದಂಥ ಕಣ್ಣುಗಳುಳ್ಳ ರಾಮನೇ ನನ್ನ ಮನವಿ ಆಲಿಸು)

ಮುಂದಿನ ಚರಣಗಳಿಗೆ ಪೀಠಿಕೆಯಂತೆ ಬಂದಿರುವ ಪಲ್ಲವಿ ಇದು. ಮುಂದಿನ ಸಾಲುಗಳು ಕಟ್ಟಿಕೊಡುವ ಭಾವ ತುಮುಲಗಳಿಗೆ ಪ್ರಸ್ತಾವವೂ ಹೌದು.

‘ರಾಮ ಚಕ್ಕನಿ ಸೀತಕಿ

ಅರಚೇತ ಗೋರಿಂಟ

ಇಂತ ಚಕ್ಕನಿ ಚುಕ್ಕಕಿ

ಇಂಕೆವರು ಮೊಗುಡಂಟ’

(ರಾಮನ ಇಷ್ಟದ ಸೀತೆಗೆ ಗೋರಂಟಿ ಹಚ್ಚೋಣ, ಇಂಥ ಮುದ್ದು ತಾರೆಯ ವರಿಸಲು ಇನ್ಯಾರಿಗೆ ಸಾಧ್ಯ?)

ಇದು ಸೀತೆಯ ಗೆಳತಿಯೊಬ್ಬಳ ಸ್ವಗತ. ಬಹುಶಃ ಸೀತಾ ಸ್ವಯಂವರಕ್ಕೆಂದು ಬಂದ ರಾಮನನ್ನು ಸೀತೆಯ ಗೆಳತಿಯೊಬ್ಬಳು ನೋಡಿದ್ದಾಳೆ. ನೋಡಿದ ತಕ್ಷಣ ಅವನೇ ತನ್ನ ಸಖಿಗೆ ಸರಿಯಾದ ಪತಿ ಎಂದು ತೀರ್ಮಾನಿಸಿಯೂ ಬಿಟ್ಟಿದ್ದಾಳೆ. ಇಲ್ಲಿ ಸೀತೆಯನ್ನು 'ಚಕ್ಕನಿ ಚುಕ್ಕಿ' (ಚಂದದ ನಕ್ಷತ್ರ) ಎಂದು ಸಂಬೋಧಿಸಿರುವುದನ್ನು ಗಮನಿಸಬೇಕು. ಇದು ತನ್ನ ಗೆಳತಿಯ ಮೇಲೆ ಆ ಸಖಿ ಇಟ್ಟಿರುವ ಪ್ರೇಮವನ್ನೂ ಸೂಚಿಸುವ ಪದವಾಗದೆ?

ಈ ಹಾಡಿನ ಸೊಗಸು ನಂತರದ ಸಾಲುಗಳಲ್ಲಿ ಇನ್ನೂ ಚೆನ್ನಾಗಿ ತೆರೆದುಕೊಳ್ಳುತ್ತದೆ.

‘ಉಡತ ವೀಪುನ ವೇಲು ವಿಡಿಚಿನ

ಪುಡಮಿ ಅಲ್ಲುಡು ರಾಮುಡೇ

ಎಡಮ ಚೇತನು ಸಿವುಡಿ ವಿಲ್ಲುನು

ಎತ್ತಿನ ಆ ರಾಮುಡೇ

ಎತ್ತಗಲಡಾ ಸೀತ ಜಡನು

ತಾಳಿ ಕಟ್ಟೆ ವೇಳಲೊ’

(ಅಳಿಲಿನ ಮೈಸವರಿದ ಭೂದೇವಿಯ ಅಳಿಯ ರಾಮ ಶಿವಧನುಸ್ಸನ್ನೇನೋ ಎಡಗೈಲಿ ಎತ್ತಿದ. ಆದರೆ, ತಾಳಿ ಕಟ್ಟುವಾಗ ಅವನಿಗೆ ನಮ್ಮ ಸೀತೆಯ ಜಡೆಯನ್ನಾದರೂ ಸರಿಸಲು ಸಾಧ್ಯವಾದೀತೇ?)

ಹೆಣ್ಣಿನ ಮನಸಿನಿಂದ ಸೀತಾ ಸ್ವಯಂವರವನ್ನು ಹೊಸದಾಗಿ ನೋಡುವ ಸಾಧ್ಯತೆ ಇರುವ ಸಾಲುಗಳಿವು. ಸ್ವಯಂವರಕ್ಕೆಂದು ರಾಮ ಬಂದಿದ್ದಾನೆ. ಅವನು ಅರಮನೆ ಪ್ರವೇಶಿಸುವ ಮೊದಲು ಅವನ ಬಳಿಗೆ ಅಳಿಲೊಂದು ಓಡಿ ಬಂತಂತೆ. ಹೀಗೆ ಓಡಿ ಬಂದ ಅಳಿಲಿನ ಮೈಸವರಿದ ರಾಮ, ಕುಶಲ ವಿಚಾರಿಸಿ ಮುಂದುವರಿದ. ಇದನ್ನು ಗಮನಿಸಿದ ಭೂದೇವಿ ಅದೇ ಕ್ಷಣ 'ಇವನೇ ನನ್ನ ಅಳಿಯ' ಎಂದು ಸಂಕಲ್ಪಿಸಿದಳು.

ಭೂಮಿಯ ಮೇಲಿರುವ ಎಲ್ಲ ವಸ್ತುಗಳಲ್ಲೂ ಒಂದಲ್ಲ ಒಂದು ರೂಪದಲ್ಲಿ ನಿಂತವಳು ಭೂದೇವಿಯೇ ತಾನೆ? ರಾಮನನ್ನು ತನ್ನ ಅಳಿಯ ಎಂದು ಅವಳೇ ಸಂಕಲ್ಪಿಸಿದ ಮೇಲೆ ಶಿವಧನುಸ್ಸನ್ನು ರಾಮ ಎತ್ತುವುದರಲ್ಲಿ ಏನು ಅಚ್ಚರಿಯಿದೆ? ಈಗಿರುವ ಪ್ರಶ್ನೆಯೇ ಬೇರೆ. ಜೀವಕಾರುಣ್ಯದಿಂದ ಇಷ್ಟದ ಹುಡುಗಿಯ ತಾಯಿಯನ್ನು ಒಲಿಸಿಕೊಂಡ ರಾಮನ ಎದುರು ಈಗ ಆ ಹುಡುಗಿಯ ಮನಸು ಗೆಲ್ಲುವ ಸವಾಲಿದೆ. ಹುಡುಗಿಯ ಮನಸು ಗೆಲ್ಲದೆ ಅವಳ ಜಡೆ ಎತ್ತಲು ಅವಕಾಶವಾದರೂ ಉಂಟೆ?

‘ಎರ್‍ರ ಜಾಬಿಲಿ ಚೇಯಿ ಗಿಲ್ಲಿ

ರಾಮುಡೇದನಿ ಅಡುಗುತುಂಟೆ

ಚೂಡಲೇದನಿ ಪೆದವಿ ಚಪ್ಪೆ

ಚೆಪ್ಪಲೇಮನಿ ಕನುಲು ಚೆಪ್ಪೆ

ನಲ್ಲ ಪೂಸೈನಾಡು ದೇವುಡು

ನಲ್ಲನಿ ರಘುರಾಮುಡು’

(ಕೈ ಚಿವುಟಿದ ಕೆಂಪು ಚಂದ್ರಮ ರಾಮ ಎಲ್ಲಿ ಎಂದು ಕೇಳ್ತಿದ್ದ, ನೋಡಿಲ್ಲ ಅಂತ ತುಟಿ ಹೇಳ್ತಿತ್ತು, ಹೇಳಲ್ಲ ಅಂತ ಕಣ್ಣು ಹೇಳ್ತಿತ್ತು, ಕಪ್ಪು ಮೈಬಣ್ಣದ ರಾಮ ಸೀತೆಯ ಕೊರಳಿಗೆ ಕರಿಮಣಿಯೇ ಆಗಿಹೋದ)

ಜಾನಪದ ಕವಿಗಳಿಗೆ ತೀರಾ ಸಹಜ ಎನಿಸುವ ‘ಮಾಂತ್ರಿಕ ವಾಸ್ತವ’ದ (ಮ್ಯಾಜಿಕಲ್ ರಿಯಾಲಿಸಂ) ಸಾಲುಗಳಿವು. ಪ್ರಕೃತಿಯ ಭಾಗವಾಗಿರುವ ಯಾವುದೇ ವಸ್ತು, ಗ್ರಹ, ಉಪಗ್ರಹ, ಪ್ರಾಣಿಗಳು ಅವರ ಕಲ್ಪನೆಯಲ್ಲಿ ಏನು ಬೇಕಾದರೂ ಆಗಬಲ್ಲವು. ಹೇಗೆ ಬೇಕಾದರೂ ವರ್ತಿಸಬಲ್ಲವು.

ರಾಮನನ್ನು ನೋಡಿ ಮೈಮರೆತಿರುವ ಸೀತೆಯ ಗೆಳತಿಯನ್ನು ಎಚ್ಚರಿಸಲು ಚಂದ್ರನೇ ಭೂಮಿಗೆ ಬರಬೇಕಾಯಿತು. ಕೆಂಪು ಚಂದ್ರಮ ಅವಳ ಕೈಚಿವುಟಿ ‘ಎಲ್ಲಿದ್ದಾನೆ ರಾಮ’ ಎಂದು ಪ್ರಶ್ನಿಸಿದ. ಚಂದ್ರನಷ್ಟೇ ಕೆಂಪಾಗಿದ್ದನೋ, ತನ್ನ ಸಖಿಯನ್ನು ವರಿಸಲು ಬಂದಿದ್ದ ರಾಮನನ್ನು ತನಗೆ ಅರಿವಿಲ್ಲದೇ ಮೋಹಿಸುತ್ತಿದ್ದ ಈಕೆಯೂ ಕೆಂಪಾಗಿದ್ದಳೋ?

‘ರಾಮ ಎಲ್ಲಿ’ ಎಂದು ಕೇಳಿದ ಚಂದ್ರನಿಗೆ ಏನೆಂದು ಉತ್ತರಿಸುವುದು. ತುಟಿ ನೋಡಿಲ್ಲ ಅನ್ನುತ್ತಿತ್ತು. ಕಣ್ಣು ಹೇಳಲ್ಲ ಅಂದುಬಿಡ್ತು. ನೋಡುವ ಕಣ್ಣು ಮಾತನಾಡಲೂ ಬಲ್ಲುದು, ಮಾತನಾಡುವ ತುಟಿ ನೋಡಲೂ ಬಲ್ಲುದು! ಅತ್ತ ಸೀತೆಯ ಸಖಿ ಚಂದ್ರನೊಂದಿಗೆ ಮಾತನಾಡುತ್ತಿರುವಾಗಲೇ, ಇತ್ತ ಕರಿಯ ರಾಮ ಸೀತೆಯ ಕೊರಳಿನ ಕರಿಮಣಿಯೇ ಆಗಿಹೋದ.

ರಾಮನನ್ನು ‘ಕರಿಯ’ ಎಂದು ಕರೆದು ಕರಿಮಣಿಗೆ ಸಮೀಕರಿಸಿರುವುದು ಎಷ್ಟು ಚೆನ್ನಾಗಿದೆ ಅಲ್ಲವೇ? ಕರಿಯ ಎನ್ನುವ ಪದವು ಸಖಿಯು ಸೀತೆಯೊಡನೆ ಹೊಂದಿದ್ದ ಸಲುಗೆಯನ್ನೂ ಮನಗಾಣಿಸುವುದಿಲ್ಲವೇ?

‘ಚುಕ್ಕನಡಿಗ ದಿಕ್ಕುನಡಿಗ

ಚೆಮ್ಮಗಿಲ್ಲಿನ ಚೂಪುನಡಿಗ

ನೀರು ಪೊಂಗಿನ ಕನುಲಲೋನ

ನೀಟಿ ತೆರಲೆ ಅಡ್ಡು ನಿಲಿಚೆ

ಚೂಸುಕೋಮನಿ ಮನಸು ತೆಲಿಪೆ

ಮನಸು ಮಾಟಲು ಕಾದುಗಾ’

(ತಾರೆಯನ್ನು ಕೇಳಿದೆ, ದಿಕ್ಕುಗಳನ್ನು ಕೇಳಿದೆ, ನೀರು ತುಂಬಿ ಮಂಜಾಗಿದ್ದ ದೃಷ್ಟಿಯನ್ನು ಕೇಳಿದೆ, ಎದುರಿಗೆ ಯಾರಿದ್ದಾರೆ ಅಂತ ಕಾಣಿಸಿದರೆ ತಾನೆ? ನೀರಿನ ಗೋಡೆಯೇ ಅಡ್ಡಬಂದಿತ್ತು. ನೋಡಿಬಿಡು ಅಂತ ಮನಸು ಹೇಳ್ತು, ಆದ್ರೆ ಅದು ಮನಸಿನ ಮಾತಷ್ಟೇ ಅಲ್ಲವಲ್ಲ)

ಇಷ್ಟು ಹೊತ್ತೂ ರಾಮನನ್ನೇ ಧ್ಯಾನಿಸುತ್ತಾ ಮೈಮರೆತಿದ್ದ ಸೀತೆಯ ಗೆಳತಿಗೆ ರಾಮನನ್ನು ಮತ್ತೊಮ್ಮೆ ನೋಡುವ ಆಸೆಯಾಗಿದೆ. ಚಂದ್ರ ಎಚ್ಚರಿಸಿದ್ದೂ ಅದಕೊಂದು ನೆಪ. ಮನುಷ್ಯನಾಗಿ ಎದುರಿದ್ದವನು ಸೀತೆಯ ಕೊರಳಿನ ಕರಿಮಣಿಯಾಗಿದ್ದು ಮತ್ತೊಂದು ಕಾರಣ. ರಾಮ ಈಗ ಕೇವಲ ರಾಮನಲ್ಲ. ಅವನು ಸೀತಾಪತಿ. ಅವನನ್ನು ಮೊದಲಿನಂತೆ ಇಷ್ಟಪಟ್ಟು ನೋಡಬಹುದೇ? ಆದರೂ ಮನಸು ತಡೀತಿಲ್ಲ. ವ್ಯಕ್ತಿಗೂ ದೃಷ್ಟಿಗೂ ಮಧ್ಯೆ ಕಣ್ಣೀರಿನ ಗೋಡೆಯೇ ನಿಂತಿದೆ. ನೋಡಿ ಬಿಡು ಅನ್ನೋದು ಮನಸಿನ ಮಾತು. ಆದ್ರೆ ಮನಸಿನ ಮಾತಷ್ಟೇ ಅಲ್ಲವಲ್ಲ.

ಮನಸನ್ನು ಮೀರಿದ ಮತ್ತೇನೋ ಒಂದು ರಾಮನನ್ನು ಅಪೇಕ್ಷಿಸುತ್ತಿದೆ. ಸೀತೆಯ ಕೊರಳಿಗೆ ಕರಿಮಣಿಯಾದ ರಾಮನನ್ನು ನನಗೆ ಇನ್ನೊಂದು ಸಲವಾದರೂ ಕಾಣಿಸ್ತಾನಾ?

‘ಇಂದುವದನ ಕುಂದರದನ ಮಂದಗಮನ ಭಾಮಾ
ಎಂದುವಲನ ಇಂದುವದನ ಇಂತಮದನಾ
ಪ್ರೇಮಾ’

(ಚಂದ್ರನಂತೆ ಮುಖವುಳ್ಳ, ಮಲ್ಲಿಗೆಯಂಥ ಹಲ್ಲುಳ್ಳ, ನಿಧಾನವಾಗಿ ಚಲಿಸುವ ಹೆಣ್ಣೇ? ನಿನ್ನ ಮನದಲ್ಲೇಕಿಷ್ಟು ಆಂದೋಲನ? ಪ್ರೇಮವೇ?)

ಕೊನೆಯ ಚರಣದಲ್ಲಿ ಕವಿಯೇ ಮಾತನಾಡುತ್ತಾನೆ. ಪಲ್ಲವಿಯಲ್ಲಿ ಇದೇ ಧಾಟಿ ಮತ್ತು ಶೈಲಿಯಲ್ಲಿ ರಾಮನನ್ನು ವರ್ಣಿಸಿದ್ದ ಕವಿಯು ಕೊನೆಯ ಚರಣದಲ್ಲಿ ಸಖಿಯನ್ನು ವರ್ಣಿಸುತ್ತಾನೆ. ದೇವರ ಹಾದಿಯಲ್ಲಿ ಸಾಗುವ ಭಕ್ತರನ್ನು ಅದೇ ಶ್ರೇಣಿಯಲ್ಲಿ ಕಾಣುವ ಪ್ರಯತ್ನದಂತೆ ಇದು ಭಾಸವಾಗುತ್ತೆ.

ಪಲ್ಲವಿಯಲ್ಲಿ ರಾಮನನ್ನು ‘ಘನವಿಚಲನ’ ಎಂದು ವರ್ಣಿಸಿದ್ದ ಕವಿ, ಕೊನೆಯ ಚರಣದಲ್ಲಿ ಸಖಿಯನ್ನು ‘ಮಂದಗಮನ’ ಎಂದು ವರ್ಣಿಸುತ್ತಾನೆ. ಅವನು ತೂಕದ ಹೆಜ್ಜೆಗಳನ್ನು ಇಡುವ ದೇವರಾದರೆ, ಈಕೆ ನಿಧಾನವಾಗಿಯಾದರೂ ಅವನತ್ತ ಸಾಗುವ ಭಕ್ತೆ. ಹಾಡಿನ ಮೂರನೇ ಚರಣದಲ್ಲಿ ಚಂದ್ರನಿಂದ ಕೈಚಿವುಟಿಸಿಕೊಂಡಿದ್ದ ಸಖಿಯ ಮುಖದಲ್ಲಿಯೇ ಈಗ ಚಂದ್ರ ಕುಳಿತುಬಿಟ್ಟಿದ್ದಾನೆ. ಇಷ್ಟೆಲ್ಲಾ ಇದ್ದರೂ ಆಕೆಯ ಮನಸು ಪ್ರಕ್ಷುಬ್ದ. ಎಷ್ಟೇ ಆಗಲಿ ಪ್ರೇಮಿಸಿದ ಮನಸಲ್ಲವೇ? ಭಾವುಕತೆ ಇಲ್ಲದೆ ಭಕ್ತಿ ಮೂಡಲು ಸಾಧ್ಯವೇ? ಭಾವುಕತೆ ಇದ್ದೆಡೆ ನೋವು ಇರದೇ?

***
ಪದಗಳನ್ನು ಒಡೆದು ಅರ್ಥ ವಿವರಿಸುವಾಗ ಅನೇಕ ಸಲ ಭಾವದ ಎಳೆಗಳು ತಪ್ಪಿಹೋಗಬಹುದು. ನಮ್ಮ ಭಾವನೆಗಳನ್ನು ಆರೋಪಿಸುವ ಮತ್ತು ಅನ್ವಯಿಸುವ ಭರದಲ್ಲಿ ಕವಿತೆಯ ಭಾವವೂ ಲುಪ್ತವಾಗಬಹುದು. ಈ ಬರಹವನ್ನು ಇದೇ ಮಿತಿಯ ಚೌಕಟ್ಟಿನಲ್ಲಿ ಓದಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT