ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ಯಾನ ಸಚಿತ್ರ

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಕೆಲ್‌ ಬಿಲವ್ಡ್‌ ಒಬ್ಬ ಯೋಗಿ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಕೆರಿಬಿಯನ್‌ ಸಂಸ್ಕೃತಿ ಹೊಂದಿರುವ ಗಯಾನ ದೇಶದಲ್ಲಿ 1951ರಲ್ಲಿ ಹುಟ್ಟಿದವರು. 14 ವರ್ಷದವರಿದ್ದಾಗಲೇ ಅವರಿಗೆ ಧ್ಯಾನ, ಯೋಗ ಅತೀಂದ್ರಿಯ ವಿದ್ಯಮಾನ ಇತ್ಯಾದಿಗಳ ಬಗ್ಗೆ ಆಸಕ್ತಿ ಬೆಳೆಯಿತು. ಫಿಲಿಪ್ಪೀನ್ಸ್‌, ಭಾರತ ಇತ್ಯಾದಿ ಪೌರಾತ್ಯ ದೇಶಗಳಿಗೆ ಭೇಟಿ ಕೊಟ್ಟು ಇಲ್ಲಿನ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಮಾರ್ಷಲ್‌ ಆರ್ಟ್ಸ್‌ ಮತ್ತು ಅಷ್ಟಾಂಗ ಯೋಗ ಕಲಿತರು. 1979ರಲ್ಲಿ ವೈಷ್ಣವ ಪಂಥದ ಸ್ವಾಮಿ ಭಕ್ತಿವೇದಾಂತ ಪ್ರಭುಪಾದ ಅವರ ಶಿಷ್ಯತ್ವ ಪರಂಪರೆಯಲ್ಲಿ ಸನ್ಯಾಸ ಸ್ವೀಕರಿಸಿ ಯೋಗಿ ಮಾಧ್ವಾಚಾರ್ಯ ಎಂದು ನಾಮಾಂಕಿತರಾದರು.

ಧ್ಯಾನ, ಆತ್ಮ, ಕನಸುಗಳು, ಸೂಕ್ಷ್ಮ ಶರೀರ, ಕುಂಡಲಿನಿ ಯೋಗ ಇತ್ಯಾದಿಗಳ ಬಗ್ಗೆ ಅವರು ಇಂಗ್ಲಿಷ್‌ನಲ್ಲಿ ಬರೆದಿರುವ ಪುಸ್ತಕಗಳನ್ನು ಈಗ ಕನ್ನಡಕ್ಕೆ ಅನುವಾದಿಸಲಾಗಿದೆ. ವೃತ್ತಿಯಿಂದ ಎಂಜಿನಿಯರ್‌ ಆಗಿರುವ ಯೋಗ, ಧ್ಯಾನಗಳ ಬಗ್ಗೆ ಆಸಕ್ತಿ ಹೊಂದಿರುವ ಅರ್ಪನ ಉಕ್ಕುಂದ್‌, ಮೈಕೆಲ್‌ ಬಿಲವ್ಡ್‌ ಅವರ ನಾಲ್ಕು ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

‘ಧ್ಯಾನ– ಸಚಿತ್ರ’ ಪುಸ್ತಕದಲ್ಲಿ ಧ್ಯಾನದ ಬಗ್ಗೆ ಸಚಿತ್ರವಾಗಿ ವಿವರಿಸಲಾಗಿದೆ. ಆಸ್ಟ್ರಲ್‌ ಪ್ರೊಜೆಕ್ಷನ್‌ನಲ್ಲಿ ನಮ್ಮ ಸೂಕ್ಷ್ಮ ಶರೀಶ, ಸ್ಥೂಲ ಶರೀರದಿಂದ ಬೇರೆಯಾಗುವುದರ ಬಗ್ಗೆ ಬರೆಯಲಾಗಿದೆ. ಸ್ವಯಂನ ಕೇಂದ್ರಭಾಗದ ಅನ್ವೇಷಣೆಯಲ್ಲಿ ನಮ್ಮ ಆತ್ಮದ ಸ್ಥಾನವನ್ನು ಕಂಡುಕೊಳ್ಳುವ ಬಗೆ ವಿವರಿಸಲಾಗಿದೆ. ‘ನಿದ್ರಾ ಪಾರ್ಶ್ವವಾಯು’ವಿನಲ್ಲಿ ‘ನಿದ್ರಾ ಪಾರ್ಶ್ವವಾಯು’ ಆಗುವುದೇಕೆ? ನಾವು ಕನಸು ಕಾಣುವುದು, ನಮ್ಮ ಸೂಕ್ಷ್ಮ ಶರೀರ ನಿದ್ರೆಯಲ್ಲಿ ಅಲೆದಾಡುವುದು ಇತ್ಯಾದಿಗಳ ಬಗ್ಗೆ ವಿವರಣೆ ಇದೆ.

‘ಪ್ರತಿ ವ್ಯಕ್ತಿಯೂ ವಿಶ್ರಮಿಸಿಕೊಳ್ಳುವ ಮುಂಚೆ ಶಾಂತನಾಗಲು ಪ್ರಯತ್ನಿಸಬೇಕು. ಪ್ರತಿ ರಾತ್ರಿ ನಿದ್ರೆಗೆ ಜಾರುವ ಮೊದಲು ಮೂವತ್ತು ನಿಮಿಷಗಳ ಕಾಲ ತಮ್ಮ ಜೀವನವನ್ನು ಮರುಪರಿಶೀಲಿಸಬೇಕು. ಶಾಂತವಾಗುವುದು ಧ್ಯಾನಕ್ಕೆ ಸಿದ್ಧತೆ ಆಗಿದೆ. ಆದರೆ, ಅದು ಸ್ವತಃ ಧ್ಯಾನವಲ್ಲ. ಶಾಂತವಾಗುವುದು ನಮ್ಮಲ್ಲಿನ ಬಹುತೇಕರನ್ನು ಸ್ವಸ್ಥಚಿತ್ತ ಸ್ಥಿತಿಯಲ್ಲಿ ಇರಿಸಲು ಸಾಕಾಗುತ್ತದೆ. ಶಾಂತವಾಗುವುದು ಮಾನಸಿಕ ಹಾಗೂ ಭಾವನಾತ್ಮಕ ಚಟುವಟಿಕೆಗಳನ್ನು ಶಾಂತಗೊಳಿಸುತ್ತದೆ. ಆರಂಭಿಕ ಹಂತಗಳಲ್ಲಿ ಧ್ಯಾನವೆಂದರೆ ಸ್ವಲ್ಪ ಸಮಯ ಶಾಂತವಾಗಿರುವುದು ಎಂದರ್ಥ.

ಧ್ಯಾನಿಸಲು ಶಾಂತವಾದ ಸ್ಥಳವನ್ನು ಹುಡುಕಬೇಡಿ. ಬದಲಿಗೆ, ಅತ್ಯಂತ ಅನುಕೂಲಕರವಾದ ಪರಿಸರವನ್ನು ಹುಡುಕಿ. ಸಂಪೂರ್ಣವಾಗಿ ಶಾಂತವಾಗಿರುವ ಪರಿಸರ ಎಂಬುದು ಇಲ್ಲ. ಇಡೀ ಸೃಷ್ಟಿಯು ಪ್ರತಿ ಮಟ್ಟದಲ್ಲಿ ಕಂಪನಗಳಿಂದ ಝೇಂಕರಿಸುತ್ತಿದೆ.’ ಇದು ‘ಧ್ಯಾನ –ಸಚಿತ್ರ’ ಪುಸ್ತಕದ ಕೆಲ ಸಾಲುಗಳು. ಇಂಗ್ಲಿಷ್‌ನಲ್ಲಿ ಇಂತಹ ಹಲವು ಬಗೆಯ ಪುಸ್ತಕಗಳಿದ್ದರೂ ಕನ್ನಡದಲ್ಲಿ ಅವು ಅಪರೂಪ. ಯೋಗ, ಧ್ಯಾನ, ಇಂದ್ರೀಯಾತೀತ ಅನುಭವ ಇತ್ಯಾದಿಗಳ ಬಗ್ಗೆ ಆಸಕ್ತಿ ಇರುವವರು ಈ ಪುಸ್ತಕಗಳನ್ನು ಓದಬಹುದು. ಅನುವಾದ ಮತ್ತಷ್ಟು ಸರಳವಾಗಿರಬೇಕಿತ್ತು. ಬರವಣಿಗೆ ಮತ್ತಷ್ಟು ಬಿಗಿಯಾಗಿರಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT