ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಸು ಕ್ರಿಸ್ತ ಕಥನ

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಡಿಸೆಂಬರ್ ತಿಂಗಳು ಕ್ರಿಶ್ಚಿಯನ್ನರಿಗೆ ವಿಶೇಷ. ಏಸು ಕ್ರಿಸ್ತ ಹುಟ್ಟಿದ ದಿನವನ್ನು ಸಮುದಾಯದವರು ಆಚರಿಸುವ ಮಾಸವಿದು.

ಏಸು ಕ್ರಿಸ್ತ ಹುಟ್ಟಿದ ವಾತಾವರಣವನ್ನು ಮರುಸೃಷ್ಟಿಸುವುದು ಬಹುತೇಕ ಆಚರಣೆಗಳ ಪ್ರಮುಖ ಭಾಗ. ಮನೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುತ್ತಾರೆ. ಏಸು ಕ್ರಿಸ್ತ ಗೋದಲೆಯಲ್ಲಿ ಹುಟ್ಟಿದ ರೀತಿಯನ್ನು ಲ್ಯೂಕ್ ಹಾಗೂ ಮ್ಯಾಥ್ಯೂ ರೂಪಿಸಿದ ಬೈಬಲ್‌ನ ಹೊಸ ಒಡಂಬಡಿಕೆಗಳ ಭಾಗಗಳಲ್ಲಿ ಬಣ್ಣಿಸಲಾಗಿದೆ. ಅವನ್ನು ಜನರಿಗೆ ತಿಳಿಸುತ್ತಾರೆ. ಪ್ರಾಚೀನ ಕಾಲದಿಂದಲೂ ಈ ಭಾಗಗಳಿಂದ ಸ್ಫೂರ್ತಿ ಪಡೆದೇ ಶಿಲ್ಪಿಗಳು ಹಾಗೂ ಕಲಾವಿದರು ಕಲಾಕೃತಿಗಳನ್ನು ರೂಪಿಸುತ್ತಾ ಬಂದಿದ್ದಾರೆ.

ಏಸು ಕ್ರಿಸ್ತ ಹುಟ್ಟಿದ ಸಂದರ್ಭದ ಚಿತ್ರಣವನ್ನು ಮೊದಲು ಮರುಸೃಷ್ಟಿಸಿದ್ದು ಅಸ್ಸಿಸಿಯ ಸೇಂಟ್ ಫ್ರಾನ್ಸಿಸ್. 1223ರಲ್ಲಿ ಗೋದಲಿ, ಎತ್ತು ಹಾಗೂ ಕತ್ತೆಯನ್ನು ಇಟಲಿಯ ಗ್ರೆಸಿಯೊ ಎಂಬ ಹಳ್ಳಿಯ ಗುಹೆಯಲ್ಲಿ ರೂಪಿಸಿದ. ‘ಬೆಥ್ಲೆಹ್ಯಾಮ್‌ನ ಶಿಶು’ ಹುಟ್ಟಿದ ಸಂದರ್ಭದ ಮರುಸೃಷ್ಟಿ ಕಂಡು ಹಳ್ಳಿಯ ಜನ ಸಹಜವಾಗಿಯೇ ನಿಬ್ಬೆರಗಾಗಿದ್ದರು. ಈ ದೇಸೀ ಸನ್ನಿವೇಶ ತುಂಬಾ ಜನಪ್ರಿಯವಾಯಿತಷ್ಟೇ ಅಲ್ಲದೆ ಚರ್ಚ್‌ಗಳಲ್ಲಿ ಇದನ್ನು ಅನುಸರಿಸುವುದು ಕಡ್ಡಾಯ ಎಂಬಂತಾಯಿತು. ಕ್ರಮೇಣ ಕ್ರಿಸ್ಮಸ್ ಅಲಂಕಾರದ ಭಾಗವಾಗಿಯೂ ಇದರ ಮರುಸೃಷ್ಟಿಗಳು ಮುಂದುವರಿದವು.

ಗೋದಲಿಯಲ್ಲಿ ಮಲಗಿದ ಶೈಶವಾವಸ್ಥೆಯ ಏಸು ಕ್ರಿಸ್ತ, ಮೇರಿ ಹಾಗೂ ಜೋಸೆಫ್ ಪ್ರತಿಮೆಗಳು ಅಲಂಕಾರದಲ್ಲಿ ತುಂಬಾ ಮುಖ್ಯ. ಮ್ಯಾಗಿ, ಏಂಜೆಲ್ಸ್, ಕುರಿಗಾಹಿಗಳು ಹಾಗೂ ಇತರ ಪ್ರಾಣಿಗಳನ್ನು ಬೇಕಾದರೆ ಮರುಸೃಷ್ಟಿಯ ಭಾಗವಾಗಿಸಬಹುದು. ಬೈಬಲ್‌ನ ಇತರ ಅಧ್ಯಾಯಗಳಲ್ಲಿ ಹೇಳಲಾಗಿರುವ ಸನ್ನಿವೇಶಗಳನ್ನೂ ಮರುಸೃಷ್ಟಿಸುವ ಅವಕಾಶ ಅಲಂಕಾರ ಮಾಡುವ ಕಲಾವಿದರಿಗೆ ಇರುತ್ತದೆ. ಯುರೋಪ್ ಹಾಗೂ ಅಮೆರಿಕದಲ್ಲಿ ದೇಸೀ ಸನ್ನಿವೇಶಗಳ ಮರುಸೃಷ್ಟಿ ಅತಿ ಹೆಚ್ಚು ಜನಪ್ರಿಯವಾಗಿವೆ. ಕೆಲವು ದೇಶಗಳಲ್ಲಿ ಜನರೇ ಪಾತ್ರಧಾರಿಗಳಾಗಿ ಏಸು ಹುಟ್ಟಿದ ಸಂದರ್ಭವನ್ನು ನಟಿಸಿ ತೋರಿಸುವುದೂ ಉಂಟು. ಜೋಸೆಫ್ ಹಾಗೂ ಮೇರಿ ವೇಷಧಾರಿಗಳು ಮನೆಯಿಂದ ಮನೆಗೆ ಸಾಗುತ್ತಾ, ನೆಲೆಗಾಗಿ ಬೇಡುತ್ತಾರೆ. ಎಲ್ಲರೂ ತಿರಸ್ಕರಿಸಿದ ಮೇಲೆ ಗೋದಲಿಯಲ್ಲಿ ಏಸು ಹುಟ್ಟುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಇವೆಲ್ಲವನ್ನೂ ಜೀವಂತ ಪ್ರಾಣಿಗಳನ್ನೂ ಬಳಸಿ, ಅಭಿನಯಿಸಿ ತೋರುವ ಕಲಾವಿದರಿದ್ದಾರೆ.

ಯುನೈಟೆಡ್‌ ಕಿಂಗ್‌ಡಂನ ವಿಲ್ಟ್‌ಷೈರ್‌ ಪಟ್ಟಣದಲ್ಲಿ 1,254 ಮಂದಿ ಏಸು ಹುಟ್ಟಿದ ಸಂದರ್ಭದ ಸನ್ನಿವೇಶವನ್ನು ನಟಿಸಿ ತೋರಿಸಿ, ದಾಖಲೆ ನಿರ್ಮಿಸಿದರು. 2016ರ ಡಿಸೆಂಬರ್ 3ರಂದು ಕಲಾವಿದರು ಈ ಪ್ರದರ್ಶನ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT