ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಮನೆಯಲ್ಲಿ ಸುಳ್ಳಿನ ನಗ್ನ ನರ್ತನ!

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸಾವಿನ ನಿರೀಕ್ಷೆಯಲ್ಲಿ ಇರುವವರ ತುಟಿಗಳ ಮೇಲೆ ಸತ್ಯವು ನರ್ತಿಸುತ್ತದೆ ಎಂಬ ತತ್ವದ ಆಧಾರದ ಮೇಲೆ ಮರಣಪೂರ್ವ ಹೇಳಿಕೆಗೆ (dying declaration) ಮಹತ್ವ ಲಭಿಸಿದೆ. ಭಾರತ ಸಾಕ್ಷ್ಯ ಅಧಿನಿಯಮದ ಕಲಂ 32ರ ಅನುಸಾರ ಮರಣಪೂರ್ವ ಹೇಳಿಕೆಯನ್ನು ನಂಬಲರ್ಹವಾದ ಮತ್ತು ಪ್ರಬಲವಾದ ಸಾಕ್ಷ್ಯ ಎಂದು ಪರಿಗಣಿಸಲಾಗಿದೆ.

80ರ ದಶಕದಲ್ಲಿ ವರದಕ್ಷಿಣೆ ಸಾವು ಅವ್ಯಾಹತವಾಗಿದ್ದವು. ಹೀಗಾಗಿ ಭಾರತೀಯ ದಂಡ ಸಂಹಿತೆಗೆ(ಐ.ಪಿ.ಸಿ) 304–ಬಿ ಎನ್ನುವ ವಿಶೇಷ ಕಲಂ ಸೇರಿಸಿ, ವರದಕ್ಷಿಣೆಗಾಗಿ ಪೀಡಿಸುವ ಪತಿ ಮತ್ತು ಆತನ ಸಂಬಂಧಿಗಳಿಗೆ ಏಳು ವರ್ಷಕ್ಕೆ ಕಡಿಮೆ ಇಲ್ಲದಂತೆ ಮತ್ತು ಜೀವಾವಧಿಯವರೆಗೂ ಶಿಕ್ಷೆ ವಿಧಿಸಬಹುದೆಂಬ ಅಂಶವನ್ನು ಸೇರಿಸಲಾಯಿತು.

ಮರಣಪೂರ್ವ ಹೇಳಿಕೆಯು ಮಹತ್ವದ್ದೆಂದು ಭಾವಿಸಲಾಗಿದೆಯಾದರೂ ಇದನ್ನು ಸುಲಭವಾಗಿ ತಿರುಚಲು ಸಾಧ್ಯವಿರುವುದರಿಂದ ನ್ಯಾಯಾಲಯಗಳು ಇಂತಹ ಸಾಕ್ಷ್ಯವನ್ನು ಎಚ್ಚರಿಕೆಯಿಂದ ಸ್ವೀಕರಿಸುತ್ತವೆ. ಇಂತಹದೊಂದು ಪ್ರಕರಣದಲ್ಲಿ ಸಿಲುಕಿದ್ದ ರಂಗಪ್ಪನವರನ್ನು ನನಗೆ ಪರಿಚಯಿಸಿ ಇವರ ಪರವಾಗಿ ಕೇಸ್ ನಡೆಸಬೇಕೆಂದು ಸ್ನೇಹಿತ ಸೋಮಶೇಖರ್ ಕೇಳಿಕೊಂಡರು.

ಚಾರ್ಜ್‌ಶೀಟ್ ಓದಿದಾಗ ಕಂಡು ಬಂದಿದ್ದೇನೆಂದರೆ, ಮದುವೆ ಮಾಡಿಸಿದವರನ್ನೇ ಆರೋಪಿಯನ್ನಾಗಿಸಿ ಕಟಕಟೆಗೆ ಎಳೆದು ತರಲಾಗಿತ್ತು.

ರಂಗಪ್ಪ ಮತ್ತು ರಮೇಶ 35 ವರ್ಷಗಳ ಹಿಂದೆ ಕುಣಿಗಲ್‌ನಿಂದ ಬೆಂಗಳೂರಿನ ಕಮಲಾನಗರಕ್ಕೆ ಬಂದು ನೆಲೆಸಿದ್ದರು. ರಂಗಪ್ಪ ಹಳ್ಳಿಯನ್ನು ತೊರೆದರೂ ಗ್ರಾಮಸ್ಥರ ಒಡನಾಟವನ್ನು ಬಿಟ್ಟಿರಲಿಲ್ಲ, ದುಡಿದು ಉತ್ತಮ ಜೀವನ ಸಾಗಿಸುತ್ತಿದ್ದರು. ಆದರೆ, ರಮೇಶ ಇದಕ್ಕೆ ತದ್ವಿರುದ್ಧವಾಗಿದ್ದರು.

ಕುಣಿಗಲ್ ಪಕ್ಕದ ಅವರಗೆರೆಯ ವಾಸು ಮತ್ತು ಅವರ ತಂಗಿ ಸುಧಾ, ರಂಗಪ್ಪನ ಮನೆಗೆ ಬಾಡಿಗೆಗೆ ಬಂದರು. ವಾಸು ಉದ್ಯಮಿಯೊಬ್ಬರ ಸಹಾಯಕನಾಗಿದ್ದರೆ, ಸುಧಾ ಆಭರಣ ಮಳಿಗೆಯೊಂದರಲ್ಲಿ ಪರಿಚಾರಿಕೆಯಾಗಿ ಕೆಲಸ ಮಾಡುತ್ತಿದ್ದರು. ವಾಸುವಿನ ಸ್ವಭಾವ ರಂಗಪ್ಪನ ಪತ್ನಿ ರತ್ನಮ್ಮನಿಗೆ ಪ್ರಿಯವಾಗಿತ್ತು. ಹೀಗಾಗಿ ವಾಸು, ರಂಗಪ್ಪನವರ ಮನೆಯ ಮಗನಂತಾದ.

ರಮೇಶನ ಹೆಂಡತಿ ಮಾರಕ್ಕ ಸ್ವಲ್ಪ ಜೋರು. ಮಗಳು ಶ್ರೀಲತಾ, ಮಾರಕ್ಕನ ನೆರಳಿನಂತಿದ್ದಳು. ಮದುವೆ ವಯಸ್ಸಿಗೆ ಬಂದಿದ್ದ ಶ್ರೀಲತಾಳಿಗೆ ವರ ಹುಡುಕಿಕೊಡುವಂತೆ ರಂಗಪ್ಪ ಮತ್ತು ರತ್ನಮ್ಮನವರನ್ನು ರಮೇಶ ಕೇಳಿಕೊಂಡರು. ‘ವಾಸುವಿಗಿಂತ ಒಳ್ಳೆಯ ಹುಡುಗ ಸದ್ಯ ನನ್ನ ಕಣ್ಣಮುಂದಿಲ್ಲ. ನಾವೆಲ್ಲಾ ಒಂದೇ ಸಮುದಾಯದವರು. ಅವನಿಗಿಂತ ಉತ್ತಮ ಯಾರಿದ್ದಾರೆ’ ಎಂದು ರತ್ನಮ್ಮ ಕೇಳಿದರು. ರಮೇಶನ ಬಯಕೆಯಂತೆ ವಾಸು ಮತ್ತು ಶ್ರೀಲತಾಳ ಮದುವೆ ನಡೆಯಿತು.

ಶ್ರೀಲತಾ ಸಂಸಾರ ಆರಂಭಿಸಿದ ಒಂದೆರಡು ವಾರದಲ್ಲಿಯೇ ವರಸೆ ಬದಲಿಸಿದಳು. ಪ್ರತ್ಯೇಕವಾಗಿ ವಾಸಿಸುವ ಬಯಕೆ ತೋಡಿಕೊಂಡಳು. ವಾಸುವಿಗೆ ಇದು ಸರಿ ಕಾಣಲಿಲ್ಲ. ‘ತಂಗಿ ನಮ್ಮ ಜೊತೆಗೇ ಇರಲಿ’ ಎಂದು ಸಮಾಧಾನ ಪಡಿಸಿದ.

ಸ್ವಲ್ಪದಿವಸ ಸುಮ್ಮನಾದಂತೆ ಕಂಡ ಶ್ರೀಲತಾ, ತಾಯಿ ಮನೆಗೆ ಹೋಗಿ ಬಂದಾಗಲೆಲ್ಲ ಮತ್ತದೇ ವಿಚಾರದಲ್ಲಿ ವಾಸುವನ್ನು ಪೀಡಿಸತೊಡಗಿದಳು. ಸುಧಾರಿಸುತ್ತಾಳೆ ಎಂಬ ಆಶಯದೊಂದಿಗೆ ವಾಸು ನೋವನ್ನು ನುಂಗಿಕೊಂಡ. ಈ ನಡುವೆ ಶ್ರೀಲತಾ ಗರ್ಭಿಣಿಯಾದಳು.

ಹೀಗಿದ್ದಾಗ ವಾಸು, ಸ್ನೇಹಿತನ ಮದುವೆಗೆ ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಯಿತು. ಎಂಟು ತಿಂಗಳ ಗರ್ಭಿಣಿಗೆ ಪ್ರಯಾಣ ಹಿತವಲ್ಲವೆಂದು ಒಬ್ಬನೇ ತೆರಳಿ, ಮದುವೆ ಮುಗಿಸಿಕೊಂಡು ಮರುದಿನ ಬೆಳಿಗ್ಗೆ ಕಮಲಾನಗರದ ಮನೆಗೆ ಬಂದವನನ್ನು ಶ್ರೀಲತಾ ಅಸಹ್ಯ ಮಾತಿನಿಂದಲೇ ಎದುರುಗೊಂಡಳು. ಇದಕ್ಕೆ ತಲೆಕೆಡಿಸಿಕೊಳ್ಳದ ವಾಸು ಡ್ಯೂಟಿಗೆ ತಡವಾಗುತ್ತದೆಂದು ಸ್ನಾನಕ್ಕೆ ಬಚ್ಚಲಿಗೆ ತೆರಳಲು ಅನುವಾದ. ಇದರಿಂದ ಮತ್ತಷ್ಟು ಕ್ರುದ್ಧಳಾದ ಶ್ರೀಲತಾ, ‘ನನ್ನ ಮಾತೆಂದರೆ ಇಷ್ಟು ಉದಾಸೀನವೇ ನಿಮಗೆ. ನೋಡಿ ನಿಮಗೆ ಬುದ್ಧಿ ಕಲಿಸುತ್ತೇನೆ’ ಎಂದು ಅಬ್ಬರಿಸಿದವಳೇ, ಅಡುಗೆ ಕೋಣೆಗೆ ಹೋಗಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ಬೆಂಕಿಯಲ್ಲಿ ಬೇಯುತ್ತಿದ್ದ ಆಕೆಯ ಕೂಗಾಟ ಕೇಳಿ ಅಕ್ಕಪಕ್ಕದವರೆಲ್ಲ ಕ್ಷಣಾರ್ಧದಲ್ಲಿ ಮನೆ ಮುಂದೆ ಜಮಾಯಿಸಿದರು. ಶ್ರೀಲತಾಳ ಆರ್ತನಾದ, ಮನೆಯಲ್ಲಿ ಆವರಿಸಿದ್ದ ದಟ್ಟ ಹೊಗೆ ಜಮಾಯಿಸಿದ್ದ ಜನರನ್ನು ಒಳ ನುಗ್ಗದಂತೆ ತಡೆಯಿತು.

ಪಕ್ಕದ ರಸ್ತೆಯಲ್ಲಿದ್ದ ಕುಮಾರನಿಗೆ ಈ ಸುದ್ದಿ ತಿಳಿಯಿತು. ಸಹಾಯ ಕೋರಿ ಮೊಬೈಲ್ ಕರೆ ಬಂದೊಡನೆಯೆ ಆತ ಮಿಂಚಿನಂತೆ ಬಂದು ಒಳಹೊಕ್ಕು, ಬೆಡ್‌ಶೀಟಿನಲ್ಲಿ ಶ್ರೀಲತಾಳನ್ನು ಸುತ್ತಿ ಮಾರುತಿ ವ್ಯಾನಿನೊಳಗೆ ಹಾಕಿಕೊಂಡು ವಾಸು ಜೊತೆಗೆ ನೇರವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಬಂದು ಸೇರಿಸಿದ. ಇವರ ಹಿಂದೆಯೇ ರಂಗಪ್ಪನೂ ಆಸ್ಪತ್ರೆ ತಲುಪಿದ.

ಅನಾಹುತದ ಸುದ್ದಿ ತಿಳಿದು ರಮೇಶ, ಮಾರಕ್ಕ ಮತ್ತಾಕೆಯ ಬಂಧುಗಳು ಆಸ್ಪತ್ರೆಗೆ ಬಂದವರೇ ವಾಸುವಿನ ಮೇಲೆ ಮುಗಿಬಿದ್ದರು. ಸಮಾಧಾನ ಪಡಿಸಲು ಮುಂದಾದ ರಂಗಪ್ಪನನ್ನು ಗುರಿಯಾಗಿಸಿಕೊಂಡು, ‘ಇವನಿಂದಲೇ ನಮ್ಮ ಮಗಳು ಈ ಸ್ಥಿತಿಗೆ ತಲುಪಿದ್ದು’ ಎಂದು ಗೋಳಿಡತೊಡಗಿದರು. ಇವರ ಚೀರಾಟ, ಆರ್ಭಟ ಹೆಚ್ಚುತ್ತಿದ್ದಂತೆಯೇ ರಂಗಪ್ಪ ಅಲ್ಲಿಂದ ಕಾಲ್ಕಿತ್ತ.

ಹೊಸದಾಗಿ ಸೇವೆಗೆ ಬಂದಿದ್ದ ಸ್ಥಾನಿಕ ವೈದ್ಯಾಧಿಕಾರಿಯೂ ಇವರ ವರ್ತನೆಯಿಂದ ಅಸಹಾಯಕರಾದರು. ಈ ಮಧ್ಯೆ ಆಸ್ಪತ್ರೆಗೆ ಧಾವಿಸಿ ಬಂದ ಪೊಲೀಸರು ಗಾಯಾಳುವಿನ ಬಂಧುಗಳ ಅಟ್ಟಹಾಸಕ್ಕೆ ಗುರಾಣಿಯಾದರು. ಏನೊಂದೂ ವಿಚಾರಿಸದೆ ವಾಸುವನ್ನು ಠಾಣೆಗೆ ಎಳೆದೊಯ್ದರು.

ಗಾಯಾಳುವಿನ ಮರಣಪೂರ್ವ ಹೇಳಿಕೆಯನ್ನು ದಾಖಲಿಸುವ ಜವಾಬ್ದಾರಿ ಹೊತ್ತಿದ್ದ ಹೆಡ್ ಕಾನ್ಸ್‌ಟೆಬಲ್, ರಮೇಶ ಹೇಳಿದಂತೆ ಹೇಳಿಕೆ ಬರೆದುಕೊಂಡರು. ಗಾಯಾಳುವಿನ ಆರೋಗ್ಯದ ಸ್ಥಿತಿಗತಿ ಮತ್ತು ಹೇಳಿಕೆ ನೀಡುವ ಸಾಮರ್ಥ್ಯಕ್ಕೆ ವೈದ್ಯರಿಂದ ದೃಢೀಕರಣ ಹಾಕಿಸಿಕೊಳ್ಳಲಾಯಿತು. ನಂತರ ಈ ಹೇಳಿಕೆಯನ್ನು ಪೊಲೀಸ್‌ ಠಾಣೆಗೆ ತಂದು ಹಾಜರುಪಡಿಸಲಾಯಿತು. ಇದನ್ನು ಆಧರಿಸಿ ವಾಸು, ಸುಧಾ, ರಂಗಪ್ಪ, ರತ್ನಮ್ಮನ ವಿರುದ್ಧ ವರದಕ್ಷಿಣೆ ಕಿರುಕುಳ, ಪ್ರಚೋದನೆ ಆರೋಪದ ಮೇಲೆ ಎಫ್.ಐ.ಆರ್. ದಾಖಲಿಸಲಾಯಿತು.

ಎಫ್.ಐ.ಆರ್. ಇನ್ನೂ ಮ್ಯಾಜಿಸ್ಟ್ರೇಟರಿಗೆ ತಲುಪಿರಲಿಲ್ಲ; ಅಷ್ಟರಲ್ಲಿ ಶ್ರೀಲತಾಳ ಸಾವಿನ ಸುದ್ದಿ ಬಂತು. ಸುದ್ದಿ ಹಿಂದೆಯೇ ಠಾಣೆಗೆ ಬಂದ ಮಾರಕ್ಕನ ಬಂಧುಗಳನ್ನು ನಿಭಾಯಿಸಲಾಗದೆ ಇನ್ಸ್‌ಪೆಕ್ಟರ್ ತರಾತುರಿಯಲ್ಲಿ ವಾಸುವನ್ನು ನ್ಯಾಯಾಲಯಕ್ಕೆ ಕರೆದೊಯ್ದರು. ಆ ವೇಳೆಗಾಗಲೇ ನ್ಯಾಯಾಲಯದ ಕಲಾಪ ಮುಗಿದಿತ್ತು. ಹೀಗಾಗಿ ಅವನನ್ನು ನೇರ ನ್ಯಾಯಾಧೀಶರ ಗೃಹಕಚೇರಿಗೆ ಕರೆದೊಯ್ಯಲಾಯಿತು.

ಆಗಷ್ಟೇ ಮನೆಗೆ ಬಂದಿದ್ದ ನ್ಯಾಯಾಧೀಶರು ಅಸಮಾಧಾನದಿಂದಲೇ ‘ಇಲ್ಲಿಗೇಕೆ ಕರೆತಂದಿರಿ’ ಎಂದು ಆತುರಾತುರವಾಗಿ ಪ್ರಕ್ರಿಯೆ ಮುಗಿಸಿ ವಾಸುವನ್ನು ಜೈಲಿಗೆ ಕಳುಹಿಸುವಂತೆ ಆದೇಶಿಸಿದರು. ‘ಶ್ರೀಲತಾಗೆ ವರದಕ್ಷಿಣೆ ತರುವಂತೆ ನಿತ್ಯವೂ ವಾಸು ಕಿರುಕುಳ ಮತ್ತು ಪ್ರಚೋದನೆ ನೀಡುತ್ತಿದ್ದ. ವಾಸು ತಮ್ಮ ಖಾಸಾ ತಮ್ಮ ಎಂದು ಹೇಳಿ  ನಂಬಿಸಿ ರತ್ನಮ್ಮ ಮದುವೆ ಮಾಡಿಸಿದರು’ ಎಂಬ ಹೇಳಿಕೆಗಳನ್ನು ಸೃಷ್ಟಿಸಲಾಯಿತು.

ಮರಣಪೂರ್ವ ಹೇಳಿಕೆಯನ್ನು ಆಧರಿಸಿ ಐ.ಪಿ.ಸಿ. ಕಲಂ 304-ಬಿ, 306, 498-ಎ, ಸಹವಾಚಕ 34 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3 ಮತ್ತು 4ರ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು.

ಇದಾದ ಮೇಲೆ ಕೆಲಸವೆಲ್ಲಾ ಮುಗಿಯಿತು ಎಂದು ಮೈ ಮರೆತಿದ್ದವರಿಗೆ ಪ್ರಕರಣವು ಜೈಲಿನಲ್ಲಿ ತಿರುವು ಪಡೆದಿದ್ದರ ಸುಳಿವೇ ಇರಲಿಲ್ಲ. ವಾಸುವನ್ನು ಜೈಲಿಗೆ ಕರೆತಂದಾಗ ಆತನ ದೇಹದ ಮೇಲಿನ ಗಾಯವನ್ನು ಗುರುತಿಸಿ ಆ ಕೂಡಲೇ ಜೈಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನಿಗೆ ಚಿಕಿತ್ಸೆ ನೀಡಿದ್ದ ಡಾ.ಶಶಿಕಲಾ ಗಾಯದ ಪ್ರಮಾಣ ಮತ್ತು ಹಿನ್ನೆಲೆ ಕುರಿತು ಕಡತದಲ್ಲಿ ಅಚ್ಚುಕಟ್ಟಾಗಿ ನಮೂದಿಸಿದ್ದರು.

ತಮ್ಮೆಲ್ಲ ಪ್ರಭಾವ ಬಳಸಿ ಸ್ನೇಹಿತನ ವಿರುದ್ಧ ತೊಡೆತಟ್ಟಿದ್ದ ರಮೇಶ ಮತ್ತು ಮಾರಕ್ಕ ರಣೋತ್ಸಾಹದಿಂದಲೇ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದರು. ಆರೋಪಿಗಳನ್ನು ದಿಟ್ಟಿಸಿ ವ್ಯಂಗ್ಯದ ಮಾತುಗಳಿಂದ ಅವರ ದಿಗಿಲನ್ನು ಇನ್ನಷ್ಟು ಹೆಚ್ಚಿಸಿದ್ದರು.

ಆರಂಭದಲ್ಲಿ ರಮೇಶ, ಮಾರಕ್ಕನನ್ನು ವಿಚಾರಣೆಗೆ ಒಳಪಡಿಸಿದ ಅಭಿಯೋಜಕರಿಗೆ ಇವರ ಹೇಳಿಕೆಗಳು ಅತ್ಯುತ್ಸಾಹವನ್ನೇ ತಂದಿದ್ದವು. ವಿಚಾರಣೆಗೆ ಮುನ್ನವೇ ತರಬೇತಿ ಪಡೆದಿದ್ದ ಇವರನ್ನು ಪಾಟೀ ಸವಾಲಿನಲ್ಲಿ ಮಣಿಸುವುದು ಸುಲಭದ ಕೆಲಸವಾಗಿರಲಿಲ್ಲ. ನೈಜ ಸಂಗತಿಗಳನ್ನು ಮರೆಮಾಚಿ ಹೇರಳವಾಗಿ ಸುಳ್ಳನ್ನು ಪೋಣಿಸಿದ್ದಲ್ಲದೇ, ಭಾವುಕರಾಗಿ ಸಾಕ್ಷಿ ನುಡಿದಿದ್ದ ಪರಿಣಾಮ ನನ್ನ ಕಕ್ಷಿದಾರರು ಕಳೆಗುಂದಿದ್ದರು.

ಆದರೆ, ಘಟನಾ ಸ್ಥಳದಿಂದ ಶ್ರೀಲತಾಳನ್ನು ಆಸ್ಪತ್ರೆಗೆ ಎತ್ತಿ ಹಾಕಿಕೊಂಡು ಹೋಗಿದ್ದ ಕುಮಾರನನ್ನು ವಿಚಾರಣೆಗೆ ಒಳಪಡಿಸದೆ ಕೈಬಿಟ್ಟ ಪ್ರಾಸಿಕ್ಯೂಟರ್ ನಡೆ ನ್ಯಾಯಾಲಯಕ್ಕೆ ಮಾತ್ರವಲ್ಲ, ನನಗೂ ಅಚ್ಚರಿಯನ್ನುಂಟು ಮಾಡಿತು. ವೈದ್ಯರ ವಿಚಾರಣೆಯನ್ನು ನಡೆಸಿದ ಪ್ರಾಸಿಕ್ಯೂಟರ್, ಹೇಳಿಕೆ ನೀಡಿದಾಗ ಗಾಯಾಳು ಸಮರ್ಥಳಾಗಿದ್ದಳೆಂದು ಸ್ಥಾನಿಕ ವೈದ್ಯಾಧಿಕಾರಿಯಿಂದ ಹೇಳಿಸಿ ಹೆಮ್ಮೆಯಿಂದ ಬೀಗುತ್ತಾ ಕುಳಿತರು.

ಪಾಟೀ ಸವಾಲಿಗೆ ನಿಂತ ನಾನು ಆರೋಪ ಪಟ್ಟಿಯಲ್ಲೇ ಅಡಕವಾಗಿದ್ದ ಗಾಯಾಳುವಿನ ಕೇಸ್‌ ಶೀಟಲ್ಲಿ ನಮೂದಾಗಿದ್ದ ರೋಗಿಯ ಸ್ಥಿತಿಗತಿಯ ಕ್ಷಣ ಕ್ಷಣದ ಟಿಪ್ಪಣಿಯನ್ನು ತೆರೆದಿಟ್ಟಾಗ ವೈದ್ಯರ ಮುಖ ಪೆಚ್ಚಾಯಿತು. ಮರಣಪೂರ್ವ ಹೇಳಿಕೆಯನ್ನು ಬರೆಯಲಾಯಿತೆಂದ ಸಮಯದಲ್ಲೇ ಅಪಘಾತ ಚಿಕಿತ್ಸೆ ವಿಭಾಗದ ವೈದ್ಯಾಧಿಕಾರಿ (ಸಿಎಂಒ), ‘ಗಾಯಾಳುವಿನ ಆರೋಗ್ಯ ತೀವ್ರ ಕುಸಿತಗೊಂಡಿತ್ತು. ಅವರಿಗೆ ಮೈಮೇಲೆ ಎಚ್ಚರವಿರಲಿಲ್ಲ’ ಎಂಬ ಅಂಶವನ್ನು ಸ್ಪಷ್ಟವಾಗಿ ನಮೂದಿಸಿದ್ದರು.

‘ಗಾಯಾಳುವನ್ನು ಆಸ್ಪತ್ರೆಗೆ ಕರೆತಂದಾಗ ಆಕೆಯ ದೇಹದ ಮೇಲೆ 2 ಮತ್ತು 3ನೇ ದರ್ಜೆಯ ಸುಟ್ಟ ಗಾಯಗಳಾಗಿದ್ದವು. ದೇಹ ಶೇ 93ರಷ್ಟು ಬೆಂದು ಹೋಗಿತ್ತು. ಗರ್ಭಿಣಿಯು ಬೆಂಕಿಯ ಜ್ವಾಲೆಯಿಂದ ತೀವ್ರ ಆಘಾತಕ್ಕೀಡಾಗಿದ್ದಾಳೆ’ ಎಂದು ಬರೆದಿದ್ದರು. ಗಾಯಾಳುವಿನ ಬಂಧುಗಳ ಒತ್ತಡಕ್ಕೆ ತಮ್ಮ ವಿವೇಚನೆ ಬಲಿಕೊಟ್ಟಿದ್ದ ಸ್ಥಾನಿಕ ವೈದ್ಯಾಧಿಕಾರಿಯು, ಮರಣಪೂರ್ವ ಹೇಳಿಕೆಯನ್ನು ದಾಖಲಿಸಿಕೊಂಡ ಕುರಿತಂತೆ ರೋಗಿಯ ಕೇಸ್ ಶೀಟಿನಲ್ಲಿ ಪೂರಕ ಟಿಪ್ಪಣಿಯನ್ನು ನಮೂದಿಸಿರಲಿಲ್ಲ. ಈ ವಿವರಗಳ ಕಡೆ ಗಮನ ಹರಿಸದೆ ಕೇವಲ ಮರಣಪೂರ್ವ ಹೇಳಿಕೆಗೆ ಒತ್ತು ನೀಡಿದ್ದ ಕಾರಣ ಸ್ಥಾನಿಕ ವೈದ್ಯಾಧಿಕಾರಿಯ ಸಾಕ್ಷ್ಯ ದುರ್ಬಲವಾಯಿತು.

ಹೆಡ್‌ಕಾನ್ಸ್‌ಟೆಬಲ್‌ರನ್ನು ವಿಚಾರಣೆಗೆ ಒಳಪಡಿಸಿ ಮರಣಪೂರ್ವ ಹೇಳಿಕೆಯಲ್ಲಿನ ಸಂಗತಿಗಳನ್ನು ನಿರೂಪಿಸುವ ಪ್ರಯತ್ನವನ್ನು ಪ್ರಾಸಿಕ್ಯೂಟರ್ ಮಾಡಿದರು. ಮರಣಪೂರ್ವ ಹೇಳಿಕೆಯ ಅಂಶಗಳು ಗೊಂದಲಮಯವಾಗಿರುವುದನ್ನು ತೋರಿಸಲು ದಂಡ ಪ್ರಕ್ರಿಯಾ ಸಂಹಿತೆ (ಸಿ.ಆರ್.ಪಿ.ಸಿ) ಕಲಂ 91ರ ಅಡಿಯಲ್ಲಿ ಅರ್ಜಿ ಸಲ್ಲಿಸಿ, ‘ವಾಸು ಕೂಡ ದುರ್ಘಟನೆಯಲ್ಲಿ ಗಾಯಗೊಂಡಿದ್ದಾನೆ ಆತನಿಗೆ ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶ್ರೀಲತಾಳನ್ನು ರಕ್ಷಿಸುವ ಧಾವಂತದಲ್ಲಿ ಬಚ್ಚಲಿನಿಂದ ಓಡಿ ಬಂದು ಆಕೆಯನ್ನು ತಬ್ಬಿಕೊಂಡಿದ್ದರಿಂದ ಆತನ ಭುಜ, ಎದೆ, ತೋಳುಗಳು, ಹೊಟ್ಟೆ, ಕಾಲಿನ ಕೆಳ ಭಾಗಕ್ಕೆ ಸುಟ್ಟಗಾಯಗಳಾಗಿರುವ ಸಂಗತಿಯನ್ನು ಮರೆಮಾಚಲಾಗಿದೆ. ಮರಣಪೂರ್ವ ಹೇಳಿಕೆಯಲ್ಲಿ ‘ವಾಸು ನನ್ನ ಸಹಾಯಕ್ಕೆ ಬರಲಿಲ್ಲ’ ಎಂದು ಗಾಯಾಳು ಹೇಳಿದ್ದಾಳೆ. ಹಾಗಾಗಿ ಜೈಲಿನಿಂದ ವಾಸುವಿನ ಆಸ್ಪ‍ತ್ರೆ ಕೇಸ್ ಶೀಟನ್ನು ತರಿಸಬೇಕು’ ಎಂಬ ನನ್ನ ಕೋರಿಕೆಗೆ ನ್ಯಾಯಾಲಯ ಸಮ್ಮತಿಸಿತು.

ಆರೋಪಿಯನ್ನು ಬಂಧಿಸಿದ ನಂತರ ಆತನ ದೈಹಿಕ ಲಕ್ಷಣ, ಮಚ್ಚೆ, ಗಾಯಗಳ ಕುರಿತು ಠಾಣೆಯಲ್ಲಿನ ಸರ್ಚ್ ರಿಜಿಸ್ಟರಿನಲ್ಲಿ ದಾಖಲಿಸಬೇಕೆಂಬ ನಿಯಮ ಪೊಲೀಸ್ ಕೈಪಿಡಿಯಲ್ಲಿದೆ. ಅಗತ್ಯ ಸನ್ನಿವೇಶಗಳಲ್ಲಿ ಬಂಧಿತನ ವೈದ್ಯಕೀಯ ಪರೀಕ್ಷೆ ಮಾಡಬೇಕೆಂದು ಸಿ.ಆರ್.ಪಿ.ಸಿ ಕಲಂ 53 ತಿಳಿಸುತ್ತದೆ. ಅಪರಾಧ ಪ್ರಕರಣಗಳಲ್ಲಿ ಕೃತ್ಯ ಜರುಗುವಾಗ ಆರೋಪಿಯೊಬ್ಬನ ತತ್‌ಕ್ಷಣದ ಪ್ರತಿಕ್ರಿಯೆ ಹೇಗಿತ್ತೆಂಬ ಅಂಶವು ಹಲವು ಸನ್ನಿವೇಶಗಳಲ್ಲಿ ಆರೋಪಿಯು ಅಪರಾಧ ಎಸಗಲು ಮಾನಸಿಕವಾಗಿ ಸಜ್ಜಾಗಿದ್ದನೇ ಇಲ್ಲವೇ ಎಂಬುದನ್ನು ನಿರೂಪಿಸುತ್ತದೆ.

ಪ್ರಚೋದನೆ ಇಲ್ಲದಿದ್ದರೂ ಗಂಡನನ್ನು ಮಣಿಸಿಯೇ ತೀರಬೇಕೆಂಬ ಇರಾದೆಯಲ್ಲಿ ಶ್ರೀಲತಾ ಬೆಂಕಿ ಹಚ್ಚಿಕೊಂಡಿದ್ದಳು. ಇವಳನ್ನು ರಕ್ಷಿಸುವಾಗ ವಾಸುವಿಗೆ ಗಾಯಗಳಾಗಿದ್ದವು. ಆದರೆ, ಈ ಸಂಗತಿಗಳು ಬಯಲಾದರೆ ಆತನಿಗೆ ಅದು ಸಹಾಯಕವಾಗುತ್ತದೆ ಎಂದು ಊಹಿಸಿಯೇ ಅವನಿಗೆ ಚಿಕಿತ್ಸೆ ಕೊಡಿಸಿರಲಿಲ್ಲ ಮತ್ತು ಠಾಣೆಯ ದೇಹ ಶೋಧ ರಿಜಿಸ್ಟರಿನಲ್ಲಿಯೂ ದಾಖಲಿಸಿರಲಿಲ್ಲ. ಈ ವಿಚಾರಗಳನ್ನು ಸಮರ್ಥಿಸಿಕೊಳ್ಳಲಾಗದ ತನಿಖಾಧಿಕಾರಿ ಪಾಟೀ ಸವಾಲಿನಲ್ಲಿ ಸೋಲೊಪ್ಪಿಕೊಂಡರು.

ಪ್ರಾಸಿಕ್ಯೂಟರ್ ಕೈಬಿಟ್ಟಿದ್ದ ಕುಮಾರನನ್ನು ಆರೋಪಿಗಳ ಪರವಾಗಿ ವಿಚಾರಣೆಗೆ ಒಳಪಡಿಸಿದಾಗ ಅವರು, ‘ಘಟನೆ ಸಂಭವಿಸಿದ ಕೆಲವೇ ಕ್ಷಣದಲ್ಲಿ ಅಲ್ಲಿಗೆ ತೆರಳಿದ್ದೆ. ಶ್ರೀಲತಾ ಮತ್ತು ವಾಸು ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದೆ. ಆ ವೇಳೆಗೆ ಶ್ರೀಲತಾ ನಿತ್ರಾಣಳಾಗಿದ್ದಳು. ಆಕೆಯ ಮಾತುಗಳು ಸ್ಪಷ್ಟವಾಗಿರಲಿಲ್ಲ. ಆಕೆಯ ಹೇಳಿಕೆಯನ್ನು ರಮೇಶನೇ ಖುದ್ದು ಹೇಳಿ ಬರೆಯಿಸಿದ’ ಎಂದು ಬಂಧುಗಳ ದೌರ್ಜನ್ಯ ಕುರಿತು ವಿವರಿಸಿದರು.

ಡಾ. ಶಶಿಕಲಾ ಅವರು ವಾಸುವಿನ ದೇಹದ ಮೇಲೆ ಕಂಡು ಬಂದಿದ್ದ ಗಾಯಗಳನ್ನು ವಿವರಿಸಿ, ಆತನು ಚಿಕಿತ್ಸೆಗೆ ಬರುವ 12ರಿಂದ 24 ಗಂಟೆಗಳ ಪೂರ್ವದಲ್ಲಿಯೇ ಗಾಯಗಳಾಗಿದ್ದವು ಎಂದರು. ‘ಎದೆ, ಭುಜ, ತೋಳುಗಳು, ಹೊಟ್ಟೆಯ ಮೇಲಿನ ಗಾಯಗಳು ಬೆಂಕಿಯಲ್ಲಿ ಉರಿಯುತ್ತಿರುವವರನ್ನು ರಕ್ಷಿಸಲು ಹೋಗಿ ತಬ್ಬಿಕೊಂಡಾಗ ಆಗಿರುವ ಸಾಧ್ಯತೆಗಳಿವೆ’ ಎಂಬ ನನ್ನ ಅಭಿಪ್ರಾಯವನ್ನು ದೃಢಪಡಿಸಿದರು.

ವಾಸುವಿನ ದೇಹದ ಮೇಲಿನ ಗಾಯಗಳಿಗೆ ಸ್ಪಷ್ಟೀಕರಣ ನೀಡಲಾಗದ ಪ್ರಾಸಿಕ್ಯೂಟರ್ ಅವರನ್ನು ಕುರಿತು ಮತ್ತು ಮರಣಪೂರ್ವ ಹೇಳಿಕೆಯಲ್ಲಿನ ಗೊಂದಲಗಳನ್ನು ಕುರಿತು ಸೆಷನ್ಸ್ ನ್ಯಾಯಾಧೀಶ ಸುರೇಶ್‌ರವರು ಶೇಕ್ಸ್‌ಪಿಯರ್‌ನ ‘Truth dances on the lips of dying persons’ ಎಂಬ ತತ್ವವನ್ನು ಹೇಳಿದರು. ಆದರೆ ಈ
ಪ್ರಕರಣದಲ್ಲಿ ಇದು ಕಾಣಿಸುತ್ತಿಲ್ಲ ಎಂದು ವಿಚಾರಣೆ ಮುಕ್ತಾಯಗೊಳಿಸಿ ಎಲ್ಲರನ್ನೂ ಆರೋಪ ಮುಕ್ತಗೊಳಿಸಿದರು.

(ಲೇಖಕ ಹೈಕೋರ್ಟ್‌ ವಕೀಲ)

ಹೆಸರುಗಳನ್ನು ಬದಲಾಯಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT