ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಬೊಟ್‍ಗಳು ನಮ್ಮ ಮಕ್ಕಳ ಕಸುಬು ಕಸಿಯುವವೇ?

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ಮಕ್ಕಳಾದ ಟೋಬಿ (7) ಮತ್ತು ಆಂಟನ್‍ಗೆ (4) ಎಲ್ಲಾ ಮಕ್ಕಳಂತೆಯೇ ರೋಬೊಟ್ ಗೀಳು. ರಾತ್ರಿ ಮಲಗುವ ಮುನ್ನ ಅವರು ನೋಡುವ ಎಳೆಯರ ಪುಸ್ತಕಗಳಲ್ಲಿ ಡ್ರ್ಯಾಗನ್ ಮತ್ತು ಡೈನೊಸಾರ್‌ಗಳಿಗಿಂತ ಸಂತಸಮಯ ಹಾಗೂ ಸಹಾಯ ನೀಡುವ ರೋಬೊಟ್‍ಗಳ ಪ್ರಸ್ತಾಪ ಹೆಚ್ಚಾಗಿ ಕಂಡುಬರುತ್ತದೆ. ಅದೊಂದು ದಿನ ನಾನು ಟೋಬಿಯನ್ನು, ‘ಮಕ್ಕಳಿಗೆ ರೋಬೊಟ್‍ಗಳನ್ನು ಕಂಡರೆ ಅದೇಕೆ ಅಷ್ಟೊಂದು ಇಷ್ಟ’ ಎಂದು ಕೇಳಿದೆ.

‘ಏಕೆಂದರೆ, ಅವು ನಮಗಾಗಿ ಕೆಲಸ ಮಾಡುತ್ತವೆ ಅದಕ್ಕೆ’ ಎಂದ.

‘ಆದರೆ ಮುಂದೊಂದು ದಿನ ನೀನು ಅವುಗಳಿಗಾಗಿ ಕೆಲಸ ಮಾಡಬೇಕಾಗಿ ಬರಬಹುದು’ ಎಂದು ಆತನಿಗೆ ಹೇಳುವ ಧೈರ್ಯ ನನಗೆ ಬರಲಿಲ್ಲ ಅಥವಾ, ನನಗಿರುವ ಭಯವೇನೆಂದರೆ, ಅವುಗಳಿಂದಾಗಿ ನನ್ನ ಮಗ ಮುಂದೆ ಕೆಲಸವನ್ನೇ ಮಾಡದ ಆಲಸಿಯೂ ಆಗಿಬಿಡಬಹುದು ಎಂಬುದು.

ಎಲಾನ್ ಮಸ್ಕ್, ಬಿಲ್ ಗೇಟ್ಸ್, ಸ್ಟೀಫನ್ ಹಾಕಿಂಗ್ ಸೇರಿದಂತೆ ಅದೆಷ್ಟೋ ಗಣ್ಯರು ಹತ್ತಿಕ್ಕಲಾಗದ ಈ ಯಂತ್ರಗಳ ಬಳಕೆ ಹೆಚ್ಚುತ್ತಿರುವ ಕುರಿತು ಈಗಾಗಲೇ ಆತಂಕ ಹೊರಹಾಕುತ್ತಿದ್ದಾರೆ. ಹೌದು, ರೋಬೊಟ್‍ಗಳಿಗೆ ನಮ್ಮ ಚಾಣಾಕ್ಷತೆಯನ್ನು ಮೀರಿಸುವ ಹಾಗೂ ಮಾನವ ಸಂತತಿಯನ್ನೇ ನಾಶಗೊಳಿಸುವ ವಿಧ್ವಂಸಕ ಸಾಮರ್ಥ್ಯ ಇದೆ. ಆದರೆ ಇದಕ್ಕೆ ಮುನ್ನ, ಅಂದರೆ ನನ್ನ ಮಕ್ಕಳು 20ರ ಪ್ರಾಯಕ್ಕೆ ಕಾಲಿಡುವ ವೇಳೆಗೆ ಇವು ಅಸಂಖ್ಯ ವೃತ್ತಿಗಳನ್ನು ಹೇಳಹೆಸರಿಲ್ಲದಂತೆ ಅಪ್ರಸ್ತುತಗೊಳಿಸಲಿವೆ. ಇವುಗಳಿಂದಾಗಿ ನಮ್ಮ ಮಕ್ಕಳ ಭವಿಷ್ಯದ ವೃತ್ತಿಗಳಿಗೆ ಇರುವ ಅಪಾಯಗಳನ್ನು ಮನಗಾಣಲು ವಿಶೇಷ ಪರಿಣತಿಯೇನೂ ಬೇಕಾಗಿಲ್ಲ.

ಉದಾಹರಣೆಯೊಂದನ್ನು ನೋಡೋಣ: ನೀವು ನಿಮ್ಮ ಮಗಳನ್ನು ರೇಡಿಯಾಲಜಿಸ್ಟ್ ಮಾಡಿಸಲೆಂದು ‘ಯೇಲ್ ಸ್ಕೂಲ್ ಆಫ್ ಮೆಡಿಸಿನ್‌’ಗೆ ಕಳುಹಿಸುವ ಕನಸು ಹೊಂದಿದ್ದೀರಿ ಎಂದುಕೊಳ್ಳಿ. ಯಾಕಾಗಬಾರದು? ಈಗಿನ ಲಭ್ಯ ಮಾಹಿತಿಗಳ ಪ್ರಕಾರ ನ್ಯೂಯಾರ್ಕ್‌ನಲ್ಲಿ ರೇಡಿಯಾಲಜಿಸ್ಟ್‌ಗೆ ವಾರ್ಷಿಕ
4.7 ಲಕ್ಷ ಡಾಲರ್ (ಸುಮಾರು ₹3 ಕೋಟಿ) ಸಂಪಾದನೆ ಇದೆ.

ಆದರೆ ಇತ್ತೀಚೆಗೆ ಹಠಾತ್ತನೆ ಈ ವೃತ್ತಿ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ ಸಾಧನವು ಕ್ರಮೇಣವಾಗಿ ಸ್ಕ್ಯಾನಿಂಗ್ ವರದಿ ನೀಡುವುದರಲ್ಲಿ ನಿಷ್ಣಾತವಾಗುತ್ತಿರುವುದೇ ಇದಕ್ಕೆ ಕಾರಣ. ಆರ್ಟೆರಿಸ್ ಎಂಬ ನವೋದ್ಯಮ ಈಗಾಗಲೇ ಸಿದ್ಧಪಡಿಸಿರುವ ತಂತ್ರಾಂಶವು ಹೃದಯದ ಮೂಲಕ ಹರಿಯುವ ರಕ್ತದ ಎಂಆರ್‍ಐ ವಿಶ್ಲೇಷಣೆಯನ್ನು ಕೇವಲ 15 ಸೆಕೆಂಡುಗಳಲ್ಲಿ ಮಾಡಬಲ್ಲದು. ಆದರೆ ಮಾನವ ತಜ್ಞರು ಇದೇ ವರದಿ ಸಿದ್ಧಪಡಿಸಲು ಕನಿಷ್ಠ 45 ನಿಮಿಷ ಹಿಡಿಯುತ್ತದೆ.

ನಿಮ್ಮ ಮಗಳು ಸರ್ಜನ್ ಆಗಬೇಕೆಂದಿದ್ದಾಳೆ ಎಂದುಕೊಳ್ಳಿ. ಆ ವೃತ್ತಿಯೂ ಸುರಕ್ಷಿತ ಎನ್ನಲಾಗದು. ‘ಸೈಂಟಿಫಿಕ್ ಅಮೆರಿಕನ್’ ನಿಯತಕಾಲಿಕದ ಪ್ರಕಾರ, ನಾಶಗೊಂಡಿರುವ ಅಂಗಾಂಗಗಳನ್ನು ಮತ್ತು ಕ್ಯಾನ್ಸರ್‌ಪೀಡಿತ ಅಂಗಾಂಶಗಳನ್ನು ತೆಗೆಯುವಲ್ಲಿ ರೋಬೊಟ್‍ಗಳು ಸರ್ಜನ್ನರಿಗೆ ಈಗಾಗಲೇ ಸಹಾಯಕರಾಗಿ ಕೆಲಸ ಮಾಡುತ್ತಿವೆ. ಕಳೆದ ವರ್ಷ, ಜೀವಂತ ಹಂದಿಯ ರೋಗಗ್ರಸ್ತ ಕರುಳನ್ನು ಸರಿಪಡಿಸುವ ಪರೀಕ್ಷಾರ್ಥ ಸ್ಪರ್ಧೆಯಲ್ಲಿ ಸ್ಟಾರ್ (ಸ್ಮಾರ್ಟ್ ಟಿಷ್ಯೂ ಆಟೊನಾಮಸ್ ರೋಬೊಟ್) ಎಂಬ ರೋಬೊಟ್ ಸರ್ಜನ್, ಮಾನವ ಸರ್ಜನ್‍ಗಳಿಗಿಂತ ಮೇಲುಗೈ ಸಾಧಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.

ಹೀಗಾಗಿ, ನಿಮ್ಮ ಮಗಳು ಉತ್ತಮ ಸಂಪಾದನೆಯ ದೃಷ್ಟಿಯಿಂದ ಕಾರ್ಪೊರೇಟ್ ವಕೀಲೆಯಾಗಲೆಂದು ಬಯಸಿ ಕಾನೂನು ವಿದ್ಯಾಲಯ ಸೇರಲು ಮನಸ್ಸು ಮಾಡುತ್ತಾಳೆ ಎಂದುಕೊಳ್ಳಿ. ಆ ವೃತ್ತಿಯ ಮೇಲೂ ಕರಿಛಾಯೆ ಮುಸುಕುತ್ತಿದೆ. ದಾಖಲೆ ಪರಿಶೀಲನೆಯಂತಹ ಏಕತಾನತೆಯ ಎಲ್ಲಾ ಕಾನೂನು ಕೆಲಸಗಳಿಗೂ ಇಂತಹ ಅಪಾಯವಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಜೆ.ಪಿ. ಮಾರ್ಗನ್ ಚೇಸ್ ಅಂಡ್ ಕಂಪೆನಿ ಸೇರಿದಂತೆ ಹಲವು ಸಂಸ್ಥೆಗಳು ಈಗಾಗಲೇ ಕಾನೂನು ದಾಖಲಾತಿಗಳ ಪರಿಶೀಲನೆಗೆ ಹಾಗೂ ಯಾವ್ಯಾವ ದಾಖಲಾತಿಗಳು ಸೂಕ್ತ ಎಂಬುದನ್ನು ನಿರ್ಧರಿಸಲು ತಂತ್ರಾಂಶಗಳ ಮೊರೆ ಹೋಗಿವೆ. ಇದರಿಂದಾಗಿ ಹಲವಾರು ಮಾನವ ಗಂಟೆಗಳ ವಿನಿಯೋಗದ ಮೇಲೆ ಹೂಡುವ ಬಂಡವಾಳ ಕಡಿಮೆಯಾಗಿದೆ ಎಂಬುದು ಆ ಕಂಪೆನಿಗಳ ಅಭಿಪ್ರಾಯ. ಕಿರಾ ಸಿಸ್ಟಮ್ಸ್ ಎಂಬ ಕಂಪೆನಿಯು ಒಪ್ಪಂದ ದಾಖಲಾತಿಗಳ ಪರಿಶೀಲನೆಗಾಗಿ ವಕೀಲರಿಗೆ ನೀಡುತ್ತಿದ್ದ ಸಮಯವನ್ನು ಶೇ 20ರಿಂದ ಶೇ 60ರಷ್ಟು ಕಡಿತಗೊಳಿಸಿದೆ ಎಂದು ವರದಿಯಾಗಿದೆ.

ನಾನು, ನನ್ನ ಮಕ್ಕಳಿಗೆ ವೃತ್ತಿ ಭದ್ರತೆಯ ದೃಷ್ಟಿಯಿಂದ ಪತ್ರಿಕೋದ್ಯಮ ಸೂಕ್ತ ಎಂಬ ಸಲಹೆ ನೀಡುತ್ತೇನೆ ಎಂದುಕೊಳ್ಳಿ. ಅದು ಕೂಡ ಭ್ರಮೆಯೆ. 'ದಿ ಅಸೋಸಿಯೇಟೆಡ್ ಪ್ರೆಸ್' ಸುದ್ದಿಸಂಸ್ಥೆಯು ವಾಲ್ ಸ್ಟ್ರೀಟ್ ಗಳಿಕೆ ಮತ್ತು ಕೆಲವು ಕಾಲೇಜು ಕ್ರೀಡಾ ವರದಿಗಳನ್ನು ಕ್ಷಿಪ್ರವಾಗಿ ಸಿದ್ಧಪಡಿಸುವ ಸಲುವಾಗಿ ಆಟೊಮೇಟೆಡ್ ಇನ್‍ಸೈಟ್ಸ್ ಎಂಬ ಕಂಪೆನಿ ರೂಪಿಸಿರುವ ತಂತ್ರಾಂಶ ಬಳಸುತ್ತಿದೆ. ಅಲ್ಲದೇ ಕಳೆದ ವರ್ಷ ಸಂಸ್ಥೆಯು ಲೀಗ್ ಬೇಸ್‍ಬಾಲ್ ವರದಿಗಾರಿಕೆ ಹೊಣೆಯನ್ನು ರೋಬೊಟ್‍ಗಳಿಗೇ ವಹಿಸಿತ್ತು.

ವಿಮಾನದ ಪೈಲಟ್‍ನಂತಹ ಇನ್ನಿತರ ಆಕರ್ಷಕ ವೃತ್ತಿಗಳಾದರೂ ಹೇಗೆ? ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (ಡಿಎಆರ್‍ಪಿಎ) ಸಿದ್ಧಪಡಿಸಿರುವ  ಕೊ-ಪೈಲಟ್‌ ಎಂಬ ರೋಬೊಟ್‌  737 ಅಣಕು ವಿಮಾನವನ್ನು ಯಶಸ್ವಿಯಾಗಿ ಚಲಾಯಿಸಿ ಇಳಿಸಿದೆ. 2015ರ ಸಮೀಕ್ಷೆಯೊಂದರ ಪ್ರಕಾರ, ಬೋಯಿಂಗ್ 777 ವಾಣಿಜ್ಯ ವಿಮಾನಗಳ ಪೈಲಟ್‍ಗಳು ಪ್ರತಿ ಹಾರಾಟದಲ್ಲಿ ವಾಸ್ತವವಾಗಿ ಆ ಕೆಲಸ ಮಾಡುವುದು ಸರಾಸರಿ 7 ನಿಮಿಷಗಳು ಮಾತ್ರ ಎಂಬುದನ್ನು ಗಮನಿಸಿದಾಗ ಇದೇನೂ ನನಗೆ ಅಚ್ಚರಿ ಎನ್ನಿಸದು. ಚಾಲಕರಹಿತ ಕಾರುಗಳು ಸನಿಹದಲ್ಲೇ ಇರುವಾಗ ಚಾಲಕ ರಹಿತ ವಿಮಾನಗಳು ದೂರ ಎನ್ನಲಾಗದು.

ವಾಲ್ ಸ್ಟ್ರೀಟ್‍ನಲ್ಲಿ ದೊಡ್ಡ ದೊಡ್ಡ ಬ್ಯಾಂಕುಗಳು ಕೂಡ ಬೆಟ್ಟಿಂಗ್ ಸಲಹೆ ನೀಡಬಲ್ಲ ತಂತ್ರಾಂಶಗಳನ್ನು, ರೋಬೊಟ್‌ ಅರ್ಥಶಾಸ್ತ್ರಜ್ಞರನ್ನು ಉಪಯೋಗಿಸುತ್ತಿವೆ. ಸಹಜ ಭಾಷಾ ಸಂಸ್ಕರಣವನ್ನು ಆಧರಿಸಿ ಕೇಂದ್ರೀಯ ಬ್ಯಾಂಕಿನ ವ್ಯಾಖ್ಯಾನ ವಿಶ್ಲೇಷಿಸಬಲ್ಲ ಹಾಗೂ ಆ ಮೂಲಕ ವಿತ್ತೀಯ ನೀತಿಯನ್ನು ಊಹಿಸಬಲ್ಲ ಸಾಮರ್ಥ್ಯ ಈ ರೋಬೊಟ್‍ಗಳಿಗಿದೆ. ಪ್ರಪಂಚದ ಅತಿ ದೊಡ್ಡ ಹೂಡಿಕೆ ಕಂಪೆನಿಯಾದ ‘ಬ್ಲ್ಯಾಕ್ ರಾಕ್’ ಈ ವರ್ಷಾರಂಭದಲ್ಲಿ, ‘ಷೇರುಗಳ ಆಯ್ಕೆಗಾಗಿ ಅತ್ಯಂತ ಹೆಚ್ಚು ಸಂಭಾವನೆ ನೀಡಲಾಗುತ್ತಿದ್ದ ಕೆಲವು ತಜ್ಞರ ಬದಲಿಗೆ ಕಂಪ್ಯೂಟರ್ ಅಲ್ಗಾರಿದಮ್‍ಗಳನ್ನು ಆಶ್ರಯಿಸಲಾಗುವುದು’ ಎಂಬ ಹೇಳಿಕೆ ನೀಡಿದ್ದು ದೊಡ್ಡ ಸಂಚಲನವನ್ನೇ ಎಬ್ಬಿಸಿತ್ತು.

ಈ ಭೀತಿ ಭ್ರಮೆಯೇ? ಅಥವಾ ಇದನ್ನು ಭ್ರಮೆ ಎನ್ನಲಾಗದೇ?- ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗ 2013ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಈಗಿರುವ ಶೇ 47ರಷ್ಟು ಉದ್ಯೋಗಗಳು ಇನ್ನು ಒಂದು ಅಥವಾ ಎರಡು ದಶಕಗಳಲ್ಲಿ ಅಸ್ತಿತ್ವ ಕಳೆದುಕೊಳ್ಳಲಿವೆ. ಕ್ರೀಡಾ ರೆಫರಿ, ವಿಮಾ ಅಂಡರ್‌ರೈಟರ್, ಲೋನ್ ಆಫೀಸರ್ ಒಳಗೊಂಡು ಹಲವು ಉದ್ಯೋಗಗಳು ಈ ಅಪಾಯದ ಪಟ್ಟಿಯಲ್ಲಿವೆ.

ಮೆಕೆನ್ಸಿ ಗ್ಲೋಬಲ್ ಇನ್‍ಸ್ಟಿಟ್ಯೂಟ್ ಕಳೆದ ವಾರವಷ್ಟೇ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಕೃತಕ ಬುದ್ಧಿಮತ್ತೆ ಬಳಕೆಯಿಂದಾಗಿ, ಮುಂದಿನ ಸುಮಾರು 12 ವರ್ಷಗಳ ಅವಧಿಯಲ್ಲಿ ಪ್ರತಿ ಮೂವರಲ್ಲಿ ಒಬ್ಬ ಅಮೆರಿಕ ಪ್ರಜೆ ತನ್ನ ವೃತ್ತಿಯನ್ನು ಬದಲಿಸಬೇಕಾಗುತ್ತದೆ.

ನಮ್ಮ ಮಕ್ಕಳ ವೃತ್ತಿಗಳನ್ನು ರೋಬೊಟ್‌ನಿಂದ ರಕ್ಷಿಸುವುದು  ಹೇಗೆ ಎಂಬ ಬಗ್ಗೆ ನನ್ನಂತೆಯೇ ಹಲವು ಪೋಷಕರು ಚಿಂತೆಗೀಡಾಗಿದ್ದಾರೆ ಎಂಬುದು ನನಗೆ ಗೊತ್ತು. ನನ್ನ ಮಗನ ಭವಿಷ್ಯವನ್ನೇ ಮುಂದಿಟ್ಟುಕೊಂಡು, ‘ದೊಡ್ಡವರಾದ ಮೇಲೆ ಅವರೇನು ಮಾಡುತ್ತಾರೆ’- ಎಂದು ಕೇಳಿಕೊಳ್ಳುತ್ತೇನೆ. ಟೋಬಿಗೆ ಕಾರು ಮತ್ತು ಸಿನಿಮಾ ಗೀಳೂ ಇದೆ. ಮುಂದೆ, ಉಬರ್ ಚಾಲಕನಾಗುತ್ತೇನೆ ಅಥವಾ ನಟನಾಗುತ್ತೇನೆ ಎಂದು ಅವನು ಹೇಳಿದ್ದ. (ಈ ಎರಡು ವೃತ್ತಿಗಳಲ್ಲಿ ಹೆಚ್ಚಿನ ವ್ಯತ್ಯಾಸವೇನಿಲ್ಲ ಎಂಬುದು ಎಳೆಯವಯಸ್ಸಿನ ಅವನಿಗೆ ಹೇಗಾದರೂ ಅರ್ಥವಾದೀತು).

ಉಬರ್ ಡ್ರೈವರ್‌ಗಳ ಭವಿಷ್ಯ ಎಂತಹ ಡೋಲಾಯಮಾನ ಸ್ಥಿತಿಯಲ್ಲಿದೆ ಎಂಬುದು ರಹಸ್ಯ ಸಂಗತಿಯೇನೂ ಅಲ್ಲ. ಅವರು ಈಗಲೇ ಬೃಹತ್ ಪಾರ್ಕಿಂಗ್ ಗ್ಯಾರೇಜ್‍ನಲ್ಲಿ ತಮ್ಮ ಸ್ಥಳವನ್ನು ಕಾಯ್ದಿರಿಸಬೇಕಾದ ಸ್ಥಿತಿ ಇದೆ. ಏಕೆಂದರೆ, 2019ರಿಂದ 2021ರ ಅವಧಿಯಲ್ಲಿ ಚಾಲನರಹಿತ ವಾಹನಗಳನ್ನು ರಸ್ತೆಗಿಳಿಸುವ ಸಲುವಾಗಿ ಆ ಕಂಪೆನಿಯು 24,000 ವೋಲ್ವೊ ಸ್ಪೋರ್ಟ್ ಯುಟಿಲಿಟಿ ವೆಹಿಕಲ್‍ಗಳನ್ನು ಖರೀದಿಸುವುದಾಗಿ ಘೋಷಿಸಿದೆ.

ನಟರ ಕಥೆ ಇದಕ್ಕಿಂತ ಭಿನ್ನವೇ? ಡ್ವಾಯ್ನ್ ಜಾನ್ಸನ್‌ ‍ನಂತೆಯೇ ಸೂಕ್ಷ್ಮವಾಗಿ ಅಭಿವ್ಯಕ್ತಿಸಬಲ್ಲ ಹಾಗೂ ಭಾವನೆಗಳನ್ನು ದಾಟಿಸಬಲ್ಲ ಕಂಪ್ಯೂಟರ್ ತಂತ್ರಾಂಶಗಳ ಸೃಷ್ಟಿ ಅಸಾಧ್ಯ ಎಂದು ಈಗ ಅನ್ನಿಸಬಹುದು. ಆದರೆ, ವಾಸ್ತವವೇನೆಂದರೆ ಹಾಲಿವುಡ್ ಈಗಾಗಲೇ ‘ಸಿಲಿಕಾನ್ ವ್ಯಾಲಿ ಸೌಥ್’ ಎಂಬ ಅನ್ವರ್ಥವನ್ನು ತನ್ನದಾಗಿಸಿಕೊಂಡಿದೆ. ‘ರೋಗ್ ಒನ್: ಎ ಸ್ಟಾರ್ ವಾರ್ಸ್ ಸ್ಟೋರಿ’ ಎಂಬ ಚಿತ್ರದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗಳನ್ನು ಹೇಗೆಲ್ಲಾ ಪರಿಣಾಮಕಾರಿಯಾಗಿ ಬಳಸಲಾಗಿದೆ ಎಂಬುದನ್ನು ಗಮನಿಸಿದರೆ ಏನೆಲ್ಲಾ ಸಾಧ್ಯ ಎಂಬುದು ಗೋಚರಿಸುತ್ತದೆ.

ನನ್ನ ಚಿಕ್ಕ ಮಗ ಆಂಟನ್‍ಗೆ ಫುಟ್‍ಬಾಲ್ ಪಟು ಆಗಬೇಕೆಂದು ಆಸೆ. ರೋಬೊಟ್ ಫುಟ್‍ಬಾಲ್ ಎಂದರೆ, ‘ಇದೇನು ಹುಚ್ಚು’ ಎಂದು ಕೇಳಬಹುದು. ಆದರೆ ಮುಂಬರುವ ದಿನಗಳಲ್ಲಿ ಪ್ರತಿ ಸೋಮವಾರ ರಾತ್ರಿ ಡಲ್ಲಾಸ್ ಕೌಡ್ರಾಯ್ಡ್ಸ್ ಮತ್ತು ಸಿಯಾಟ್ಲ್ ಸೀಬೋಟ್ಸ್‍ಗಳ ನಡುವಣ ಪಂದ್ಯವೇ ಈಗ ಕ್ರೀಡೆಯಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಗೆ ಪರಿಹಾರ ಎಂಬಂತೆ ತೋರಿದರೆ ಆಶ್ಚರ್ಯವಿಲ್ಲ.

ಫುಟ್‍ಬಾಲ್‌ಪಟು ಆಗಬೇಕೆಂಬುದನ್ನು ಬಿಟ್ಟರೆ ಸೈನಿಕ ಆಗಬೇಕೆಂಬುದು ಅವನ ಇನ್ನೊಂದು ಆಸೆ. ಒಂದೊಮ್ಮೆ ಅವನು ಕಾಲಾಳು ಯೋಧ ಆಗಬೇಕೆಂದುಕೊಂಡರೆ ಆಗಲೂ ಅವನಿಗೆ ಯಾವುದೇ ಅವಕಾಶ ಸಿಗುವ ಸಾಧ್ಯತೆ ಇಲ್ಲ. ರಷ್ಯಾ ದೇಶವು ಈಚೆಗೆ ಫೆಡಾರ್ ಎಂಬ ರೋಬೊಟ್ ಸೈನಿಕನನ್ನು ಅನಾವರಣಗೊಳಿಸಿದ್ದು, ಇದು ಹ್ಯಾಂಡ್‍ಗನ್‍ಗಳಿಂದ ಗುಂಡು ಹಾರಿಸುವ, ವಾಹನಗಳನ್ನು ಚಲಾಯಿಸುವ, ಪ್ರಥಮ ಚಿಕಿತ್ಸೆ ನೀಡಬಲ್ಲ
ಸಾಮರ್ಥ್ಯವನ್ನೆಲ್ಲಾ ಹೊಂದಿದೆ. ಈಗ ಜಗತ್ತಿನ ಮುಂಚೂಣಿ ರಾಷ್ಟ್ರಗಳು ಯುದ್ಧಾಸ್ತ್ರಗಳ ತಯಾರಿಕೆಯಲ್ಲಿ ತುರುಸಿನ ಪೈಪೋಟಿಯಲ್ಲಿ ತೊಡಗಿರುವುದುನ್ನು ನೋಡಿದರೆ, 2025ರ ವೇಳೆಗೆ ಅಮೆರಿಕ ಪಡೆಯಲ್ಲಿ ಮಾನವ ಸೈನಿಕರಿಗಿಂತ ರೋಬೊಟ್ ಸೈನಿಕರ ಸಂಖ್ಯೆಯೇ ಜಾಸ್ತಿ ಇರಲಿದೆ ಎನ್ನುತ್ತದೆ ಬ್ರಿಟನ್ ಬೇಹುಗಾರಿಕಾ ದಳದ ತಜ್ಞ ವರದಿ.

ಇವೆಲ್ಲವೂ ಇನ್ನು 25 ವರ್ಷಗಳ ನಂತರ ಆಗುವಂಥವಲ್ಲ. ಈಗಾಗಲೇ ಆಗಿರುವಂಥವು ಎಂಬುದು ಗಮನಾರ್ಹ. ಆಗ ಉದ್ಯೋಗ ಮಾರುಕಟ್ಟೆ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತು. ಈ ಗೃಹದಲ್ಲಿ ಮನುಷ್ಯರೇ ಚತುರಮತಿಗಳು ಎಂಬ ಸ್ಥಿತಿಯೂ ಇಲ್ಲದೇ ಇರಬಹುದು.

ಯಾಂತ್ರಿಕ ಬುದ್ಧಿಮತ್ತೆಯು ಮಾನವ ಬುದ್ಧಿಶಕ್ತಿ ಮಟ್ಟವನ್ನು ಸರಿಗಟ್ಟಲಷ್ಟೇ ಅಲ್ಲ, ಅದನ್ನು ಮೀರಿ ಮುಂದೆ ಸಾಗಬಹುದು. ಅವು ನಮ್ಮನ್ನು ನಿರ್ದೇಶಿಸಿ ಆಳಬಹುದು. ಅವು ನಮ್ಮನ್ನು ಕೊಲ್ಲಬಹುದು. ಎಲಾನ್ ಮಸ್ಕ್ ಹೇಳುವ ಪ್ರಕಾರ, ‘ಕೃತಕ ಬುದ್ಧಿಮತ್ತೆಯು ಪರಮಾಣು ಬಾಂಬುಗಳಿಗಿಂತ ಹೆಚ್ಚು ಅಪಾಯಕಾರಿ ಆಗಬಲ್ಲ ಸಾಮರ್ಥ್ಯ ಹೊಂದಿದೆ’.

ಭವಿಷ್ಯ ಇಷ್ಟೊಂದು ಭೀತಿಯಿಂದ ತುಂಬಿದೆಯೇ ಎಂದೂ ಕೇಳಬಹುದು. ತಂತ್ರಜ್ಞಾನದ ಭಯವು 19ನೇ ಶತಮಾನದ ಆರಂಭದಿಂದಲೂ ಇದ್ದಿದ್ದೇ. ಆದರೆ ಈ ಕುರಿತ ಆತಂಕಗಳು ಅಂದುಕೊಂಡಷ್ಟು ಪ್ರಮಾಣದಲ್ಲಿ ದುಷ್ಪರಿಣಾಮ ಬೀರಿದ ನಿದರ್ಶನವಿಲ್ಲ ಎಂದು ವಾದ ಮಂಡಿಸಬಹುದು. ಆದರೆ, ‘ರೈಸ್ ಆಫ್ ದಿ ರೋಬೊಟ್ಸ್: ಟೆಕ್ನಾಲಜಿ ಅಂಡ್ ದಿ ಥ್ರೆಟ್ ಆಫ್ ಎ ಜಾಬ್‍ಲೆಸ್ ಫ್ಯೂಚರ್‌’ನ ಲೇಖಕ ಮಾರ್ಟಿನ್ ಫೋರ್ಡ್ ಹೇಳುವಂತೆ, ‘ಯಾಂತ್ರಿಕ ಕಲಿಕೆಯು ನಮಗೆ ಕೇವಲ ಹಳೆಯ ಯಂತ್ರಗಳನ್ನು ಬದಲಾಯಿಸುವ ಹೊಸ ಯಂತ್ರಗಳನ್ನಷ್ಟೇ ನೀಡುವುದಿಲ್ಲ. ಬದಲಿಗೆ, ನಮಗೇ ಬದಲಿ ಎನ್ನುವಂತಹ ಹೊಸ ಯಂತ್ರಗಳನ್ನು ಅದು ಒದಗಿಸುತ್ತದೆ. ನಾವು ಯಾವುದೇ ಹೊಸ ಉದ್ಯಮಕ್ಕೆ ವಲಸೆ ಹೋದರೂ ನಮ್ನನ್ನು ಅಕ್ಷರಶಃ ಬೆಂಬಿಡದ ಬೇತಾಳದಂತೆ ಹಿಂಬಾಲಿಸಿಕೊಂಡು ಬರಬಲ್ಲ ಸಾಮರ್ಥ್ಯ ಅವುಗಳಿಗೆ ಇರುತ್ತದೆ’.

‘ರೋಬೊಟ್ ಆರ್ಥಿಕತೆಯಿಂದ ಊಹಾತ್ಮಕವಾದ ಹಾಗೂ ಪುನರಾವರ್ತಿತ ಕೆಲಸಗಳನ್ನು ಅಪೇಕ್ಷಿಸುವ ವೃತ್ತಿಗಳು ಅಪಾಯಕ್ಕೆ ಸಿಲುಕುತ್ತವೆ’ ಎಂದೂ ಮಾರ್ಟಿನ್ ಹೇಳುತ್ತಾರೆ. ‘ನಾವು ಈಗ ಯಾವ ಕೆಲಸಗಳನ್ನು ಜ್ಞಾನಾಧಾರಿತ ಎನ್ನುತ್ತೇವೆಯೋ ಅವು ವಾಸ್ತವವಾಗಿ ತಥಾಕಥಿತ ಏಕತಾನತೆಯ ಕೆಲಸಗಳಾಗಿವೆ; ಕಂಪ್ಯೂಟರ್ ಮುಂದೆ ಕೂರುವುದು; ವರದಿ ಸಿದ್ಧಪಡಿಸಲು ಅಥವಾ ಪ್ರಮಾಣ ವಿಶ್ಲೇಷಣೆಗಳಿಗೆ ಪದೇಪದೇ ಏಕಮಾದರಿ ತಂತ್ರಾಂಶ ಬಳಸುವುದು ಇತ್ಯಾದಿ’.

ಇಂತಹ ಸನ್ನಿವೇಶದಲ್ಲಿ ಕ್ರಿಯಾಶೀಲತೆಗೆ ಆಸ್ಪದವಿರುವ ವೃತ್ತಿಗಳು ಸ್ವಲ್ಪಮಟ್ಟಿಗೆ ಸುರಕ್ಷಿತ ಎಂದುಕೊಳ್ಳಬಹುದು. ಹಾಗೆಯೇ ಸ್ಪಂದನಶೀಲ ಸಂವೇದನೆಗೆ ಇಂಬುನೀಡುವ ಮತ್ತು ಪರಸ್ಪರ ಸಂವಹನಕ್ಕೆ ಪೂರಕವಾದ ವೃತ್ತಿಗಳ ಬಗ್ಗೆಯೂ ಇದೇ ಮಾತು ಹೇಳಬಹುದು. ಆದರೆ ಇದನ್ನೂ ಅಂತಿಮ ಪರಿಹಾರ ಎಂದುಕೊಳ್ಳಲಾಗದು. ಜಗತ್ತಿನ ಅತ್ಯಂತ ಸಂಕೀರ್ಣವಾದ ಬೋರ್ಡ್ ಗೇಮ್ ಎನ್ನಲಾದ ‘ಗೇಮ್‌’ನಲ್ಲಿ ಗೂಗಲ್ ಅಭಿವೃದ್ಧಿಪಡಿಸಿದ ಆಲ್ಫಾಗೊ ತಂತ್ರಾಂಶವು 19 ವರ್ಷದ ಚೀನಾ ಮಾಸ್ಟರ್‌ನನ್ನು ಪರಾಭವಗೊಳಿಸಿದ್ದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ರೋಬೊಟ್ ಆರ್ಥಿಕತೆಗೆ ಸಂಬಂಧಿಸಿದ ಈ ಭೀತಿಗಳ ನಡುವೆಯೇ ಕೆಲವು ಆಶಾಭಾವನೆಗಳ ಬೆಳ್ಳಿಗೆರೆ ಕುರಿತೂ ಮಾತುಗಳು ಕೇಳಿಬರುತ್ತಿವೆ. ‘ಇದು ಮುಂದೊಂದು ದಿನ ನಿರುದ್ವಿಗ್ನ ಸಮಾಜವನ್ನು ಸೃಷ್ಟಿಸಬಹುದು; ನಮ್ಮ ಮುಂಬರುವ ಪೀಳಿಗೆಯನ್ನು ಹಳೆಯ ನೀರಸ ವೃತ್ತಿಗಳಿಂದ ಮುಕ್ತಗೊಳಿಸಬಹುದು; ಇದರಿಂದ ಮಕ್ಕಳಿಗೆ ಅನಗತ್ಯ ಹೊರೆಯಿಲ್ಲದ ವಿಪುಲ ವಿಶ್ರಾಂತಿ ಲಭ್ಯವಾಗಬಹುದು; ಪ್ರತಿಯೊಬ್ಬರಿಗೂ ಕನಿಷ್ಠ ಭತ್ಯೆ ಕೂಡ ಸಿಗುವ ಸಾಧ್ಯತೆ ಇದೆ’ ಎಂಬುದು ಪ್ರಭಾವಿ ತಾಂತ್ರಿಕ ಹೂಡಿಕೆದಾರ ಆಲ್ಬರ್ಟ್ ವೆಂಗರ್ ವಿವರಣೆ.

ರೋಬೊಟ್‍ಗಳು ಮನುಷ್ಯರಿಗಿಂತ ಚತುರಮತಿಗಳೇ? ಅಥವಾ ಅವು ಬುದ್ಧಿಮಾಂದ್ಯವೇ?- ಅರ್ಥಶಾಸ್ತ್ರಜ್ಞ ಡೇವಿಡ್ ಆಟರ್ ಅವರು ಜೋರಾಗಿ ನಕ್ಕು ಹೇಳುತ್ತಾರೆ, ‘ಎರಡೂ ಹೌದು’ ಎಂದು.

ಕಂಪ್ಯೂಟರ್‌ಗಳು ಈಗಾಗಲೇ ಮನುಷ್ಯರಿಗಿಂತ ಹೆಚ್ಚು ಇಂಪಾದ ಸಂಗೀತ ಸೃಷ್ಟಿಸುತ್ತಿವೆ. ‘ಮನುಷ್ಯರ ಕಿವಿಗೆ ಯಾವುದು ಇಂಪಾಗಿ ಕೇಳಿಸುತ್ತದೆ ಎಂಬ ನಿಯಮಗಳು ನಮಗೆ ಗೊತ್ತಿವೆ’ ಎನ್ನುತ್ತಾರೆ ಗೀತರಚನೆಕಾರ ಮೆಕ್‍ಅಫೀ. ಡಿಜಿಟಲ್ ಚಿತ್ರ ಸಾಹಿತಿಯ ಸಾಧ್ಯತೆ ನನ್ನನ್ನು ಅಚ್ಚರಿಗೊಳಿಸಿರುವುದಂತೂ ನಿಜ.

ಹಾಗಾದರೆ ಮುಂದಿನ 10 ವರ್ಷಗಳಲ್ಲಿ ಯಾವ ಉದ್ಯೋಗಗಳು ಉಳಿಯಬಹುದು ಎಂದು ಮೆಕ್‍ಅಫೀ ಅವರನ್ನು ಕೇಳಿದರೆ, ‘ಆರೋಗ್ಯ ಮಾರ್ಗದರ್ಶಕರಿಗೆ (ಹೆಲ್ತ್ ಕೋಚಸ್) ಉದ್ಯೋಗ ಮಾರುಕಟ್ಟೆಯಲ್ಲಿ ಅತ್ಯುತ್ತಮ ಭವಿಷ್ಯವಿದೆ. ಅಂತೆಯೇ ಉತ್ತಮ ಆತಿಥ್ಯಕ್ಕೆ ಹೆಸರಾದ ರೆಸ್ಟೋರೆಂಟ್‍ಗಳಿಗೂ ಆಪತ್ತು ಎದುರಾಗದು’ ಎನ್ನುತ್ತಾರೆ.

‘ಯಾರು ಕೈಕಸುಬುಗಳನ್ನು ಮಾಡುವರೋ ಅವರಿಗೂ ಒಳ್ಳೆಯ ಭವಿಷ್ಯವಿದೆ’ ಎಂಬುದು ಅವರ ಸ್ಪಷ್ಟ ಅನಿಸಿಕೆ.

ರೋಬೊಟ್ ಪ್ಲಂಬರ್ ಕಾಲ ಇನ್ನೂ ದೂರವಿದೆ.

ದಿ ನ್ಯೂಯಾರ್ಕ್ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT