7

ಚಿಕ್ಕಲ್ಲೂರಿನ ಜಾತ್ಯತೀತ ಜಾತ್ರೆ

Published:
Updated:
ಚಿಕ್ಕಲ್ಲೂರಿನ ಜಾತ್ಯತೀತ ಜಾತ್ರೆ

ಜನವರಿ ತಿಂಗಳ ಹೊಸ ವರ್ಷದ ಆಸುಪಾಸಿನಲ್ಲಿ ಹಾಲು ಹುಣ್ಣಿಮೆಯಂದು ಆರಂಭವಾಗುವ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಜಾತ್ರೆಯು ನಾಡಿನ ಜನಪದ ಜಾತ್ರೆಗಳಲ್ಲಿ ಒಂದಾಗಿದೆ. ನೀಲಗಾರ ಪರಂಪರೆಯ ಈ ಜಾತ್ರೆ ಮಂಟೇಸ್ವಾಮಿ ಶಿಶು ಮಗ ಸಿದ್ದಪ್ಪಾಜಿ ಹೆಸರಲ್ಲಿ ನಡೆದರೂ ಪರಂಪರೆಯ ಸಂತರೆಲ್ಲರಿಗೂ ಜಾತ್ರೆ ಸಲ್ಲುತ್ತದೆ.

‘ಮಂಟೇಸ್ವಾಮಿ ಕಾವ್ಯ’ದ ನಾಯಕ, ಗುರು ಮಂಟೇಸ್ವಾಮಿ ಆದರೂ ಶಿಶು ಮಗ ಸಿದ್ದಪ್ಪಾಜಿ ಕಾವ್ಯ ಮತ್ತು ಪರಂಪರೆಯಲ್ಲಿ ಅಷ್ಟೇ ಅಗ್ರಮಾನ್ಯ.

ಮಂಟೇಸ್ವಾಮಿ ಕಟ್ಟುವ ನೀಲಗಾರ ಪಂಥದ ಅಧಿಪತಿ, ನಾಯಕ ಸಿದ್ದಪ್ಪಾಜಿ. ಹಾಗಾಗಿ ಇವ ದಳವಾಯಿ ಸಿದ್ದಪ್ಪಾಜಿ, ನೀಲಗಾರರ ಗಂಡ, 88 ನೀಲಿಗಳಲ್ಲಿ ಅತಿ ಮುದ್ದು ಘನನೀಲಿಸಿದ್ಧ ಎನಿಸುವುದು. ಮಂಟೇಸ್ವಾಮಿ ಉತ್ತರಾಧಿಕಾರಿ ಆಗುವ ಸಿದ್ದಪ್ಪಾಜಿ ಪರಂಪರೆಯ ಮೊದಲ ನೀಲಗಾರ.

ನೀಲಗಾರ ಪರಂಪರೆ 15-16ನೇ ಶತಮಾನಗಳ ನಡುವೆ ತಲೆ ಎತ್ತಿದ ಕನ್ನಡ ನಾಡಿನ ಒಂದು ವಿಭಿನ್ನ ಪಂಥ. ಸಿದ್ಧ ಪಂಥದ ಭಾಗವಾದ ನೀಲಗಾರ ಸಂಸ್ಕೃತಿ ಕರ್ನಾಟಕದ ಒಂದು ವಿಶಿಷ್ಟ ಧಾರೆ. ಇದೊಂದು ಅವೈದಿಕ, ನೆಲಮೂಲ, ಸಮುದಾಯಗಳ ಧರ್ಮ. ಇದರ ಚರಿತ್ರೆ ಗಮನಿಸಿದರೆ ಬೌದ್ಧ, ಸಿದ್ಧ, ನಾಥ, ಸೂಫಿ, 12ನೇ ಶತಮಾನದ ಮಾದಾರ ಚನ್ನಯ್ಯ, ಬಸವಣ್ಣ, ಅಲ್ಲಮ ಧಾರೆಗಳು ಇದರಲ್ಲಿ ಏಕೀರ್ಭವಿಸಿರುವುದು ಕಾಣುತ್ತದೆ.

ಉತ್ತರ ಕರ್ನಾಟಕ ಭಾಗದ ಕೊಡೇಕಲ್ಲ ಬಸವಣ್ಣ ಪರಂಪರೆ, ದಕ್ಷಿಣದ ಮಂಟೇಸ್ವಾಮಿ ನೀಲಗಾರ ಪರಂಪರೆ, ಕರ್ನಾಟಕದ ಲಿಖಿತ ಚರಿತ್ರೆಯಲ್ಲಿ ದಾಖಲಾಗದೆ ಉಳಿದು ಹೋಗಿರುವ ಬಹುಮುಖ್ಯ ಅಧ್ಯಾಯಗಳು. ಈ ಗುರು- ಶಿಷ್ಯ ಪರಂಪರೆಗಳೆರಡೂ ಚಾರಿತ್ರಿಕವಾಗಿದ್ದು, ಸದ್ಯ ಜನಪದೀಕರಣವಾಗಿ ಉಳಿದಿವೆ. ವಿಜಯನಗರ ಸಾಮ್ರಾಜ್ಯದ ರಾಮರಾಯ, ಬಿಜಾಪುರದ ಯೂಸುಫ್‌ ಆದಿಲ್‍ಷಾಹಿ, ಮೈಸೂರು ಅರಸು ರಾಜಒಡೆಯ, ದಾಸಶ್ರೇಷ್ಠ ಕನಕದಾಸರ ಕಾಲಘಟ್ಟಕ್ಕೆ ಈ ಪಂಥದ ಸಂತರು ಸಮಕಾಲೀನರು. ಇದಕ್ಕೆ ‘ನಂದಿ ಆಗಮಲೀಲೆ’, ‘ರಾಜಾವಳಿ ಕಥಾಸಾರ’, ‘ಶ್ರೀತತ್ವನಿಧಿ’, ‘ಚಿಕ್ಕದೇವರಾಜ ವಿಜಯ’ ಕೃತಿಗಳಲ್ಲಿ ಚಾರಿತ್ರಿಕ ಆಧಾರಗಳಿವೆ.

ಮಂಟೇಸ್ವಾಮಿ ದ್ರಾವಿಡ ದೇಶದಲ್ಲಿ ಗುರುಬಾರ ಲಿಂಗಯ್ಯನ ಸೇವಕನಾಗಿದ್ದು, ಬಳಿಕ ಉತ್ತರ ಕರ್ನಾಟಕದ ಕೊಡೇಕಲ್ಲ ಬಸವಣ್ಣನ ಬಳಿ ಬಂದು ಶಿಷ್ಯನಾಗಿ ‘ಕಾಯಸಿದ್ಧಿ’ ಪಡೆದು ಮತ್ತೆ ದಕ್ಷಿಣಕ್ಕೆ ಹಿಂದಿರುಗಿದ. ಕೊಡೇಕಲ್ಲಿನಿಂದ ಬರುವಾಗ ಕಪ್ಪಡಿ ರಾಚಪ್ಪಾಜಿ, ತೋಪಿನ ದೊಡ್ಡಮ್ಮತಾಯಿ ಎಂದಿಲ್ಲಿ ಹೆಸರಾಗಿರುವ ಕೊಡೇಕಲ್ಲ ಬಸವಣ್ಣನ ಮಗ, ಸೊಸೆ, ಸೇವಕ ಫಲಾರದಯ್ಯ, ಹಂಪಿಯ ಗಾರುಡಿಗರ ಚನ್ನಾಜಮ್ಮ ಮಂಟೇಸ್ವಾಮಿ ಜತೆ ಮೈಸೂರು ಸೀಮೆಗೆ ಬಂದುದಾಗಿ ‘ವೀರಸಂಗಯ್ಯನ ನಂದಿಆಗಮ ಲೀಲೆ’ ಉಲ್ಲೇಖಿಸುತ್ತದೆ. ಅಮರಗನ್ನಡ ಲಿಪಿಯಲ್ಲಿ ಮಂಟೇಸ್ವಾಮಿ ಬರೆದ 13 ವಚನಗಳು, ರಾಚಪ್ಪಾಜಿ ಬರೆದ 10 ಕೃತಿಗಳು, 42 ತತ್ವಪದಗಳು ಕೊಡೇಕಲ್ಲ ಮಠದಲ್ಲಿ ಲಭ್ಯವಾಗಿವೆ. ಮೌಖಿಕ ಪರಂಪರೆ ನಾಯಕರೆನಿಸಿದ ಇವರೂ ಅಕ್ಷರಸ್ಥರು, ಸ್ವರ ವಚನಕಾರರು ಎಂಬುದು ಈವರೆಗೆ ಬೆಳಕಿಗೆ ಬಾರದಿರುವುದು ಚರಿತ್ರೆಯ ದುರಂತ.

ಘನನೀಲಿ ಸಿದ್ಧಪ್ಪಾಜಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಳ್ಳಿಯ ಪಂಚಾಳ ಬಾಚಿ ಬಸವಣ್ಣಾಚಾರಿ, ಭಕ್ತಿಉಳ್ಳ ಮುದ್ಧಮ್ಮನ ಮಗ ಕೆಂಪಾಚಾರಿಯನ್ನು ಶಿಶುಮಗನಾಗಿ ಪಡೆವ ಮಂಟೇದರು 12 ವರ್ಷ ಕಳೆದು ನೀಲಗಾರ ದೀಕ್ಷೆ ನೀಡಿ ಕೆಂಪಾಚಾರಿಯನ್ನು ಸಿದ್ಧಪ್ಪಾಜಿ ಮಾಡುತ್ತಾರೆ ಎಂಬ ಕಥೆ ಇದೆ. ಆದರೆ, ಅದಕ್ಕಿಂತ ಮಿಗಿಲಾಗಿ ಇವನಿಗೆ ಸಿದ್ದಪಂಥದ ಚರಿತ್ರೆ ಇದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಚಿಲ್ಲಾಪುರ ಕಾವೇರಿ ನದಿಯ ಎಡದಂಡೆಗೂ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ನದಿಯ ಬಲದಂಡೆಗೂ ಇದೆ.

ಈ ಪ್ರದೇಶಗಳು ವಿಜಯನಗರ ಅರಸರ ಕಾಲದಲ್ಲಿ ಪ್ರಮುಖ ಪಂಚಾಳರ ಕಬ್ಬಿಣ ಕುಲುಮೆ, ಕೈಗಾರಿಕಾ, ವಾಣಿಜ್ಯ ಕೇಂದ್ರಗಳಾಗಿದ್ದವು. ಇಂತಹ ಪ್ರದೇಶಗಳ ಪಂಚಾಳ ಕುಲಮೂಲದಿಂದ ಬರುವ ಸಿದ್ಧಪ್ಪಾಜಿ ನೀಲಗಾರನಾಗಿ ಹಲಗೂರು ಪಂಚಾಳರಿಂದ ಕಬ್ಬಿಣ ಭಿಕ್ಷೆ ತಂದು ಗುರು ಮಂಟೇದರು ನೆಲೆಸುವ ಬೊಪ್ಪೆಗೌಡನಪುರದಲ್ಲಿ ನೆಲಮಾಳಿಗೆ ನಿರ್ಮಿಸಿ, ಮಠ, ಮನೆ ಕಟ್ಟಿಸುತ್ತಾನೆ. ಹಲಗೂರು, ಚಿಲ್ಲಾಪುರ, ಚಿಕ್ಕಹಲಗೂರಿನಲ್ಲಿ ಪವಾಡಗಳನ್ನು ಮೆರೆದು, ಸುತ್ತಮುತ್ತಲ ಏಳೂರು ಒಕ್ಕಲು ಪಡೆದು ಚಿಕ್ಕಹಲಗೂರಲ್ಲಿ ಐಕ್ಯವಾಗುತ್ತಾನೆ.

ಚಿಕ್ಕಹಲಗೂರು ಕಾವೇರಿ ನದಿ ತಪ್ಪಲಿನ ಬೆಟ್ಟ, ಗುಡ್ಡ ಕಾಡು ನಾಡುಗಳ ನಡುವೆ ಅಲ್ಲಲ್ಲಿ ಕಬ್ಬಿಣದ ಕುಲುಮೆ ಅವಶೇಷಗಳನ್ನು ತುಂಬಿಕೊಂಡಿರುವ ಸಾವಿರಾರು ಎಕರೆ ವಿಸ್ತೀರ್ಣದ ಇಂದಿನ ಚಿಕ್ಕಲ್ಲೂರು. ಒಂದು ಕಾಲದ ಚಿಕ್ಕ ಹಲಗೂರು. ಕಬ್ಬಿಣ ಕಾರ್ಖಾನೆಗಳ ಟೌನ್‍ಷಿಪ್. ವಿಜಯನಗರ ಸಾಮ್ರಾಜ್ಯದಿಂದ ಶ್ರೀರಂಗಪಟ್ಟಣ, ಶಿವನಸಮುದ್ರದವರೆಗೆ ವ್ಯಾಪಾರ, ಸೇನಾ ಮಾರ್ಗವಿತ್ತು. ಹಲಗೂರು, ಚಿಲ್ಲಾಪುರ, ಚಿಕ್ಕಹಲಗೂರಿನಲ್ಲಿ ತಯಾರಾಗುತ್ತಿದ್ದ ಕಬ್ಬಿಣದ ಗೃಹೋಪಯೋಗಿ, ಯುದ್ಧ ಸಾಮಗ್ರಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇತ್ತೆಂದು ಫ್ರಾನ್ಸಿಸ್ ಬುಕೆನಾನ್ ಬರೆಯುತ್ತಾನೆ. ಇಂತಹ ಚಾರಿತ್ರಿಕ ಚಿಕ್ಕಹಲಗೂರು ಇಂದು ಜನಪದ ಕಾವ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಸಿದ್ಧಪ್ಪಾಜಿ ಹೆಸರಿನ ಚಿಕ್ಕಲ್ಲೂರು ಜಾತ್ರೆ ಖ್ಯಾತಿ ಪಡೆದಿದೆ.

ಸಿದ್ಧಪ್ಪಾಜಿ ಪವಾಡಗಳಿಗೆ ಮಣಿದು ಕಬ್ಬಿಣ ಭಿಕ್ಷೆ ನೀಡಿ ಒಕ್ಕಲಾಗುವ ಹಲಗೂರು ಚಿಲ್ಲಾಪುರ, ಚಿಕ್ಕಲಗೂರು ಪಾಳೇಗಾರ ಪಂಚಾಳ ಏಳುಜನ ಅಣ್ಣ ತಮ್ಮಂದಿರ ಪ್ರತಿನಿಧಿಗಳಂತೆ ಇಂದಿನ ತೆಳ್ಳನೂರು, ಕೊತ್ತನೂರು, ಬಾಣೂರು, ಬಾಳಗುಣಸೆ, ಇಕ್ಕಡಳ್ಳಿ, ಸುಂಡ್ರಳ್ಳಿ, ಶಾಗ್ಯ ಗ್ರಾಮಗಳೆಂಬ ಏಳೂರ ಜನ ಸೇರಿ ಚಿಕ್ಕಲ್ಲೂರು ಜಾತ್ರೆಗೆ ನಾಂದಿ ಹಾಡುತ್ತಾರೆ.

ಐದು ದಿನಗಳ ಚಿಕ್ಕಲ್ಲೂರು ಜಾತ್ರೆ

ಸುಗ್ಗಿ ಮುಗಿದು ಚುಮು ಚುಮು ಚಳಿ ಹೊರಡುವ ಹೊತ್ತಿಗೆ ಹೊಸ ವರ್ಷದ ಮೊದಲ ಹುಣ್ಣಿಮೆಯಿಂದ ಐದು ರಾತ್ರಿ ಐದು ಹಗಲು ನಡೆಯುತ್ತದೆ. ಇದೊಂದು ಸಾಹಿತ್ಯ, ಸಂಗೀತ, ಸಂಸ್ಕೃತಿ, ಅಧ್ಯಾತ್ಮದ ಜಾತ್ರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೀಡು ಬಿಡುವ ಜನಸಾಗರ, ಕಂಡಾಯಗಳು, ಬೆತ್ತ, ಜಾಗಟೆ, ಜೋಳಿಗೆ ಮೆರೆವ, ತಂಬೂರಿ, ಏಕನಾದ, ದಂಬಡಿ, ಗಗ್ಗರ ನುಡಿವ ನೀಲಗಾರ ಮೇಳ, ಬೋಳುತಲೆಯ, ಕಪ್ಪುದೂಳತ ಬಳಿದ, ಬೂದಿಸಿದ್ಧರು ಜಾತ್ರೆಯ ಚದುರಿದ ಚಿತ್ರಗಳು.

ಇದೇ ಜನವರಿ 2ರಿಂದ 6ರವರೆಗೆ ಚಿಕ್ಕಲ್ಲೂರು ಜಾತ್ರೆ ನಡೆಯುತ್ತದೆ. ಉತ್ತರ ಕರ್ನಾಟಕದ ಕೊಡೇಕಲ್ಲ ಮಠದ ಭಕ್ತರು, ದಕ್ಷಿಣದ ಹಳೇ ಮೈಸೂರು ಸೀಮೆಯ ಕತ್ತಲ ರಾಜ್ಯದ ಲಕ್ಷೋಪಲಕ್ಷ ಭಕ್ತರು ಜಾತ್ರೆಯಲ್ಲಿ ನೆರೆಯುತ್ತಾರೆ.

‘ಚಂದ್ರಮಂಡಲ’ ಜಾತ್ರೆಯ ಮೊದಲ ದಿನ ಸೇವೆ ನಡೆಯುತ್ತದೆ. ಸಿದ್ಧಪ್ಪಾಜಿ ಐಕ್ಯಗದ್ದಿಗೆ ಮುಂದೆ ಇದನ್ನು ಸಲ್ಲಿಸಲಾಗುವುದು. ಈ ಗದ್ದಿಗೆಯೇ ಜಾತ್ರೆಯ ಕೇಂದ್ರ, ಸುಮಾರು 10-15 ಅಡಿ ಎತ್ತರಕ್ಕೆ ಹಸಿ ಬಿದಿರು ಬೊಂಬು, ಅಚ್ಚೆಗಳಿಂದ ಜ್ಯೋತಿ ಸ್ವರೂಪದಿ ಕಟ್ಟಲಾಗುವ ಆಕೃತಿಯೆ ಚಂದ್ರಮಂಡಲ. ಮೂರು ಹಂತದ ಗೋಪುರದಂತ ಇದರ ಮೈ ತುಂಬಾ ಹರಳೆಣ್ಣೆ ಅದ್ದಿದ ಪಂಚುಗಳನ್ನು ಕಟ್ಟಿ, ಹೂವು ಹೊಂಬಾಳೆ ಧರಿಸಿ ಅಲಂಕರಿಸುತ್ತಾರೆ. ಈ ಬಾಬ್ತು ಸುತ್ತಲ ಏಳು ಊರುಗಳ ಎಡಗೈ- ಬಲಗೈ ದಲಿತರು, ಕುಂಚಟಿಗರು, ಮಡಿವಾಳರು, ಗಂಗಡಕಾರರು, ಗಾಣಿಗರು, ಕುರುಬ ಮೊದಲಾದ ನೀಲಗಾರರಿಗಿದೆ.

ಹುಣ್ಣಿಮೆ ಬೆಳದಿಂಗಳ ರಾತ್ರಿ 12 ಗಂಟೆಗೆ ಬೊಪ್ಪೇಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಧರ್ಮಾಧಿಕಾರಿ ಅವರು ಸತ್ತಿಗೆ ಸೂರಿಪಾನಿ, ಕೊಂಬುಕಹಳೆ, ತಮಟೆ ಜಾಗಟೆ, ಉರಿಕಂಡಾಯಗಳ ನೀಲಗಾರ ದಂಡಿನೊಂದಿಗೆ ಬಂದು ಸಿದ್ಧಪ್ಪಾಜಿ ಗದ್ದಿಗೆಗೂ, ಚಂದ್ರಮಂಡಲಕ್ಕೂ ಪೂಜೆ ಸಲ್ಲಿಸುತ್ತಾರೆ. ದೂಪ ಸಾಂಬ್ರಾಣಿ, ಕರ್ಪೂರದಾರತಿ ಬೆಳಗಿ ಅಗ್ನಿಸ್ಪರ್ಶ ಮಾಡಿದ ಚಂದ್ರಮಂಡಲವನ್ನು ಆಕಾಶಮುಖಿಯಾಗಿ ನಿಲ್ಲಿಸಲಾಗುತ್ತದೆ.

ಚಂದ್ರಮಂಡಲ ಆಕೃತಿಗೆ ಆವರಿಸುವ ‘ಉರಿ’ ಬೃಹತ್ ಜ್ಯೋತಿಯಾಗಿ, ದೊಡ್ಡಜ್ವಾಲೆಯಾಗಿ ಧಗಧಗಿಸುತ್ತದೆ. ಸುತ್ತಲೂ ನೆರೆವ ಸಾವಿರಾರು ಭಕ್ತರು ಧರೆಗೆ ದೊಡ್ಡವರ ಪಾದಕ್ಕೆ ಉಘೇ ಹಾಕುತ್ತಾ, ಸುಗ್ಗಿಯ ಮೀಸಲು ತೆನೆಗಳ ಧವಸ–ಧಾನ್ಯ, ಹಣ್ಣುಜವನ, ದುಡ್ಡುಕಾಸುಗಳನ್ನು ಚಂದ್ರಮಂಡಲಕ್ಕೆ ಸಮರ್ಪಿಸುತ್ತಾರೆ. ಕತ್ತಲ ರಾಜ್ಯಕ್ಕೆ ಪರಂಜ್ಯೋತಿಯಾದ ಮಂಟೇದರನ್ನು, ಬೆಂಕಿ-ಬೆಳಕಿನ ಶೋಧದ ಆದಿಮ ಪ್ರತಿಮೆ ‘ಮಹಾಜ್ಯೋತಿ’ ಆರಾಧನೆಯನ್ನು, ಕೃಷಿ ಸಮೃದ್ಧಿಯ ಸಂಭ್ರಮವನ್ನು ಚಂದ್ರಮಂಡಲ ಸೇವೆ ಧ್ವನಿಸುತ್ತದೆ. ಈ ಜ್ವಾಲೆ ಯಾವ ಕಡೆ ಹೆಚ್ಚು ವಾಲುತ್ತದೊ ಆ ಭಾಗಕ್ಕೆ ಈ ವರ್ಷ ಮಳೆ, ಬೆಳೆ ಸಮೃದ್ಧಿ ಎಂದು ನಂಬಲಾಗುತ್ತದೆ.

ಎರಡನೆ ದಿನದ ಜಾತ್ರೆ ದೊಡ್ಡವರ ಸೇವೆ. ಈ ದಿನದ ಪೂಜೆಗಳೆಲ್ಲಾ ಧರೆಗೆ ದೊಡ್ಡವರೆನಿಸಿದ ಮಂಟೇದರು, ರಾಚಪ್ಪಾಜಿ, ದೊಡ್ಡಮ್ಮತಾಯರಿಗೆ ಸಲ್ಲುತ್ತದೆ. ಗದ್ದಿಗೆ, ಬಿಡದಿಗಳಲ್ಲಿ ಹೆಸರನ್ನ ಪಾಯಸ, ಕಜ್ಜಾಯ ತುಪ್ಪ, ಫಲಾಹಾರ ಸೇವೆ ಈ ದಿನದ ವಿಶೇಷ. ಮೂರನೇ ದಿನದ ಸೇವೆ ಮುಡಿಸೇವೆ. ಕಷ್ಟ ನಿವಾರಣೆ, ಇಷ್ಟಾರ್ಥ ಸಿದ್ಧಿಗೆ ಭಕ್ತರು, ನೀಲಗಾರರು ತಲೆಕೂದಲು ತೆಗೆಸುವುದು ಮುಡಿಸೇವೆ. ಬೊಪ್ಪೇಗೌಡನಪುರ ಧರ್ಮಾಧಿಕಾರಿಯವರಿಂದ ಮೊದಲ ಮುಡಿ. ಅನಂತರ ಭಕ್ತಾದಿಗಳು, ನೀಲಗಾರರ ಮುಡಿಸೇವೆ ಆರಂಭವಾಗುತ್ತದೆ, ಬಹುಪಾಲು ಜಾತ್ರಾರ್ಥಿಗಳು ಮುಡಿ ಮಾಡಿಸುತ್ತಾರೆ.

ಐದು ದಿನಗಳ ಜಾತ್ರೆಯಲ್ಲಿ ನಾಲ್ಕನೇ ದಿನದ ‘ಸಿದ್ಧರ ಸೇವೆ’ ಚಿಕ್ಕಲ್ಲೂರು ಜಾತ್ರೆಯ ಪ್ರಸಿದ್ಧ ಸೇವೆ, ಲಕ್ಷಾಂತರ ಜನ ಜಾತ್ರೆ ಕಟ್ಟುವುದೇ ಅಂದು. ನೀಲಗಾರ ದೀಕ್ಷೆ, ಸಹ ಪಂಕ್ತಿ ಭೋಜನ ಸಿದ್ಧರ ಸೇವೆಯ ಮಹತ್ವದ ಆಚರಣೆಗಳು. ಸಿದ್ಧರ ಸೇವೆ ‘ಪಂಕ್ತಿಸೇವೆ ಎಂದೇ ಜನಪ್ರಿಯ’. ಪಂಕ್ತಿಗಳಲ್ಲಿ ನೀಲಗಾರರಿಗೆ ಊಟೋಪಚಾರ ನೀಡಿ ಸತ್ಕರಿಸುವುದೇ ಸಿದ್ಧರ ಸೇವೆ ಅಥವಾ ಪಂಕ್ತಿಸೇವೆ.

ಹಾಲಿ ಒಕ್ಕಲಿನವರು ತಮ್ಮನ್ನು ತಾವು ಪುನರ್ ನವೀಕರಿಸಿಕೊಳ್ಳಲು ಹಾಗೂ ಹೊರಗಿನವರು ಹೊಸದಾಗಿ ಒಕ್ಕಲಾಗಲು ‘ನೀಲಗಾರ ದೀಕ್ಷೆ’ ಪಡೆಯುತ್ತಾರೆ. ಕುಟುಂಬದ ಹಿರಿಯ ಗಂಡು ಮಗನಿಗೆ ವಿವಾಹಪೂರ್ವದಲ್ಲೇ ದೀಕ್ಷೆ ನೀಡುವುದು ಪದ್ಧತಿ. ತಲೆಕೂದಲು ತೆಗೆಸಿ, ಮಡಿಯುಡಿಸಿ, ರುದ್ರಾಕ್ಷಿ ಕಟ್ಟಿ, ಬಿಳಿಬಟ್ಟೆ ತೊಡಿಸಿ, ಕಪ್ಪು ದೂಳತ ಬಳಿದು, ಬೆತ್ತ, ಜಾಗಟೆ, ಜೋಳಿಗೆ ನೀಡಿ ಕಿವಿಯಲ್ಲಿ ಮಂಟೇದರ ಗುರುವಚನ ಬೋಧಿಸಿ ದೀಕ್ಷೆ ನೀಡಲಾಗುತ್ತದೆ. ನಂತರ ಎಲ್ಲರೂ ಕೂಡಿ ಜಾತಿ, ಮತ, ಧರ್ಮ, ಆಹಾರ ಭೇದವಿಲ್ಲದೆ ಸಹಪಂಕ್ತಿ ಭೋಜನ ಮಾಡುತ್ತಾರೆ. ಸಸ್ಯಾಹಾರಿಗಳು ಸಸ್ಯಾಹಾರವನ್ನು, ಮಾಂಸಾಹಾರಿಗಳು ಮಾಂಸಾಹಾರವನ್ನು ಪಂಕ್ತಿ ಸೇವೆಯಲ್ಲಿ ಭಕ್ತಾದಿಗಳಿಗೆ ಉಣಬಡಿಸುತ್ತಾರೆ. ಜಾತ್ಯತೀತ ಸಮಾಜದ ಕಡೆಗೆ ಪಂಕ್ತಿಸೇವೆ ಒಂದು ಮಹತ್ವದ ಹೆಜ್ಜೆ.

ಮುತ್ತತ್ತಿರಾಯನ ಸೇವೆ ಐದನೇ ದಿನದ ಕಡೆಯ ಜಾತ್ರೆ. ಚಿಕ್ಕಲ್ಲೂರ ಸಿದ್ಧಪ್ಪಾಜಿ ಗದ್ದಿಗೆ ಸಮೀಪ ಕಾವೇರಿ ನದಿ ಎಡದಂಡೆಗೆ ಮುತ್ತತ್ತಿರಾಯನ ವೈಷ್ಣವ ಕೇಂದ್ರವಿದೆ. ಹಲಗೂರಿಗೆ ಕಬ್ಬಿಣ ಭಿಕ್ಷೆಗೆ ಹೋಗುವಾಗ ಮುತ್ತತ್ತಿರಾಯ ಜತೆಯಾಗಿ ಸಿದ್ಧಪ್ಪಾಜಿ ಪವಾಡಗಳಿಗೆ ಸಾಕ್ಷಿಯಾಗುತ್ತಾನೆ. ಇವರಿಬ್ಬರ ಸ್ನೇಹದ ಕುರುಹಾಗಿ ಜಾತ್ರೆಯಲ್ಲಿ ಒಂದು ದಿನ ಮುತ್ತತ್ತಿರಾಯನಿಗೆ ಪೂಜೆ ಸೇವೆ ಎಡೆ ಅರ್ಪಿಸಲಾಗುತ್ತದೆ.

ಜಾತ್ರೆಯಲ್ಲಿ ನೀಲಗಾರರು ಈ ದಿನ ಶ್ರೀವೈಷ್ಣವ ಬಿರುದುದಾರ ‘ದಾಸಯ್ಯ’ರನ್ನ ಆಹ್ವಾನಿಸುತ್ತಾರೆ. ಸಸ್ಯಾಹಾರಿಗಳು ಸಸ್ಯಾಹಾರದ, ಮಾಂಸಾಹಾರಿಗಳು ಮಾಂಸಾಹಾರದ ಅಡುಗೆ ಮಾಡಿ ಅವರ ದಂಡುಕೋಲು, ಕಣಜ, ಅರಿಗೆಗಳಿಗೆ, ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಗಮನಾರ್ಹ ಸಂಗತಿ ಎಂದರೆ ನೀಲಗಾರರು ಹಣೆಯ ಮೇಲೆ ಈ ದಿನ ವೈಷ್ಣವ ಸಂಕೇತವಾದ 3 ನಾಮ ಹಾಕಿಕೊಂಡು ಭಕ್ತಿ ಮೆರೆಯುತ್ತಾರೆ. ಶೈವಸಿದ್ಧ ಹಿನ್ನೆಲೆಯ ನೀಲಗಾರರು ದಿನದ ಮಟ್ಟಿಗೆ ವೈಷ್ಣವ ಸಂಪ್ರದಾಯ ಅನುಸರಿಸುವುದು ಶೈವ- ವೈಷ್ಣವ ಪಂಥಗಳ ಸೌಹಾರ್ದದ ಪ್ರತೀಕ ಎನ್ನಬಹುದು.

ಪಂಕ್ತಿಸೇವೆ

ಸಹಪಂಕ್ತಿ ಭೋಜನ ಚಿಕ್ಕಲ್ಲೂರ ನೀಲಗಾರ ಪರಂಪರೆಯ ಜಾತ್ರೆ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ಪರಂಪರೆಯ ಜಾತ್ರೆ. ಒಂದು ಅರ್ಥದಲ್ಲಿ ಇದೊಂದು ಜಾತಿ ವಿನಾಶದ ಆಂದೋಲನವೂ ಹೌದು. ಇದು ಆದಿ ಒಳಗಲ ಬೀದಿ ಒಳಗಲ ಜ್ಯೋತಿ, ಬಡವ ಬಲ್ಲಿದರ ಮನೆ, ಸತ್ತವರ ಹೆತ್ತವರ ಮನೆ ಜ್ಯೋತಿ, ತಿಪ್ಪೆ ಮೇಲೆ ಅಸ್ಸಿಟ್ಟರು ಅತ್ಗ ಉರಿವ ಪರಂಜ್ಯೋತಿ. ಕುಲೇಳು ಹದಿನೆಂಟು ಜಾತಿಗಳನ್ನು ಒಂದು ಮಾಡುವ ಸೌಹಾರ್ದ, ಸಹಬಾಳ್ವೆ, ಬೋಧಿಸುವ ಸಂಸ್ಕೃತಿಯ ಜಾತ್ರೆ. ಜಾತಿ, ಮತ, ಧರ್ಮ, ಆಹಾರ ಭೇದಗಳಿಲ್ಲದ, ಹಿಂಸೆ, ದ್ವೇಷ, ಪ್ರತೀಕಾರಗಳಿಲ್ಲದ ಪಾರಂಪರಿಕ ಜಾತ್ರೆ. ಎಲ್ಲಾ ಅವೈದಿಕ, ದೇಸಿ, ಸಸ್ಯಾಹಾರಿ, ಮಾಂಸಾಹಾರಿ ಸಮುದಾಯಗಳು ಒಕ್ಕಲಾಗಿರುವ ನೀಲಗಾರರ ಜಾತ್ರೆ.

ಈ ಸಂತರ ಯಾವುದೇ ಕ್ಷೇತ್ರದ ಗದ್ದಿಗೆಗಳಲ್ಲಿ ‘ಬಲಿಪದ್ಧತಿ’ ಇಲ್ಲ. ಬಲಿಪೀಠವೂ ಇಲ್ಲ. ಈಚೆಗೆ ಮೂರ್ನಾಲ್ಕು ವರ್ಷಗಳಿಂದ ಚಿಕ್ಕಲ್ಲೂರು ಜಾತ್ರೆಯ ‘ಪಂಕ್ತಿ ಸೇವೆ’ಗೆ ಅಡ್ಡಿ ಆತಂಕಗಳು ಎದುರಾಗಿವೆ. ಈ ಪರಂಪರೆಯ ಚಿಕ್ಕಲ್ಲೂರು, ಕಪ್ಪಡಿ, ಕುರುಬನಕಟ್ಟೆ ಕ್ಷೇತ್ರದಲ್ಲಿ ನಡೆಯುವ ಆಚರಣೆ, ಸೇವೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಒಕ್ಕಲಿನವರು ನೀಲಗಾರ ಸಂಸ್ಕೃತಿಯಂತೆ ಗದ್ದಿಗೆ, ಕಂಡಾಯ, ಬಿರುದುಗಳಿಗೆ ಸಸ್ಯಾಹಾರಿಗಳು ಸಸ್ಯಾಹಾರದ, ಮಾಂಸಾಹಾರಿಗಳು ಮಾಂಸಾಹಾರದ ಅಡುಗೆ ಮಾಡಿ ಎಡೆ ಅರ್ಪಿಸುವುದು ಶತಶತಮಾನಗಳಿಂದ ನಡೆದು ಬಂದಿರುವ ಪದ್ಧತಿ.

ಜಾತ್ರೆಗಳಲ್ಲಿ ಮೂಲ ಗದ್ದಿಗೆಯಿಂದ ಬಹುದೂರ ಹೊಲ ಗದ್ದೆ, ತೋಪು, ಮರದ ಬುಡಗಳಲ್ಲಿ ಬಿಡದಿಗಳಾಗಿ ಬಿಡಾರ ಹೂಡುವ ಜನ ಪಂಕ್ತಿಸೇವೆ ದಿನ ಅನ್ನದಾನ ಮಾಡುವುದು ವಾಡಿಕೆ. ನೀಲಗಾರ ಪರಂಪರೆಯ ಜಾತ್ರೆಗಳು ಸಹಪಂಕ್ತಿ ಭೋಜನಕ್ಕೆ ಹೆಸರುವಾಸಿ. ಪ್ರತಿ ಮಾಂಸಾಹಾರಿ ಜನಸಮುದಾಯ ತಮ್ಮ ಬಿಡದಿಗಳಲ್ಲಿ ದೇವರಿಗೆ ಎಡೆ ಹಾಕುವ, ಅನ್ನದಾನ ಮಾಡುವ ಉದ್ದೇಶಗಳಿಂದ ಕುರಿ, ಕೋಳಿಯ ಮಾಂಸದಡುಗೆ ಮಾಡುತ್ತಾರೆ. ಎಡೆ ಅರ್ಪಿಸಿದ ಬಳಿಕ ಎಲ್ಲರೂ ಒಟ್ಟಿಗೆ ಕುಳಿತು ಸಹಪಂಕ್ತಿ ಭೋಜನ ಮಾಡುತ್ತಾರೆ.

ಮೈಸೂರು ಅರಸರಿಗೂ ಮಂಟೇಸ್ವಾಮಿ ಪರಂಪರೆಗೂ ಚಾರಿತ್ರಿಕ ಸಂಬಂಧವಿದೆ. ಒಡೆಯರ ಆಳ್ವಿಕೆಯಲ್ಲಿ ಕಾರುಗಹಳ್ಳಿ ಮಾರನಾಯಕನೆಂಬ ಪಾಳೇಗಾರ ಮೈಸೂರು ರಾಜ್ಯ ಸಿಂಹಾಸನ ಆಕ್ರಮಿಸುವ ಸಂಚು ರೂಪಿಸಿರುತ್ತಾನೆ. ಇದನ್ನು ವಿಫಲಗೊಳಿಸಿ ಮೈಸೂರು ಒಡೆಯರ ರಾಜ್ಯ ರಕ್ಷಿಸುವಲ್ಲಿ ರಾಚಪ್ಪಾಜಿ, ಮಂಟೇಸ್ವಾಮಿ ನೆರವಾಗುತ್ತಾರೆ. ಮೈಸೂರು ಅರಸರು ಮಂಟೇಸ್ವಾಮಿ ಒಕ್ಕಲಾಗುತ್ತಾರೆಂದು ಚರಿತ್ರೆ ಮತ್ತು ಜನಪದ ಕಾವ್ಯಗಳಲ್ಲಿ ದಾಖಲೆಗಳಿವೆ.

ಹಾಗೇ ಮೈಸೂರು ಅರಸರಿಗೂ, ಮಂಟೇಸ್ವಾಮಿ ಪರಂಪರೆಯ ಬೊಪ್ಪೆಗೌಡನಪುರ ಮಠ, ಮಳವಳ್ಳಿ ಮಠದ ಪೀಠಾಧಿಪತಿಗಳಿಗೂ ಇರುವ ಸಂಬಂಧ ಕೂಡ ಚಾರಿತ್ರಿಕವಾದುದು. ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಅರಸರು ಮೈಸೂರು ಒಡೆಯರ ಸಾಮಂತರಾಗಿದ್ದವರು. ಈ ಎರಡು ಅರಸು ಮನೆತನಗಳ ನಡುವೆ ವೈವಾಹಿಕ ಸಂಬಂಧ ಇತ್ತು.

ಮಂಟೇಸ್ವಾಮಿ ಅಂದು ಪಡೆದ ಇಬ್ಬರು ಶಿಶು ಮಕ್ಕಳು ಅದೇ ಸಖರಾಯಪಟ್ಟಣದ ಅರಸು ಮನೆತನಕ್ಕೆ ಸೇರಿದವರಾಗಿದ್ದು ಆ ಗುರು ಮಕ್ಕಳ ಸಂತತಿಯವರೇ ಇಂದಿನ ಬೊಪ್ಪೆಗೌಡನಪುರ, ಮಳವಳ್ಳಿ ಮಠದ ಪೀಠಾಧಿಪತಿಗಳು. ಮಂಟೇಸ್ವಾಮಿ ಪರಂಪರೆಯ ಗುರುಮಠಗಳ ಪೀಠಾಧಿಪತಿಗಳಾಗಿ ಬಂದ ಸಖರಾಯಪಟ್ಟಣದ ಅರಸು ಮಕ್ಕಳು ಮೈಸೂರು ಅರಸರ ಜತೆಗಿನ ವೈವಾಹಿಕ ಸಂಬಂಧವನ್ನು ಮುಂದುವರೆಸಿದ್ದಾರೆ. ಇಂದಿನ ಮಳವಳ್ಳಿ ಮಠದ ಪೀಠಾಧಿಪತಿಗಳಾದ ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸರು, ಜಯಚಾಮರಾಜ ಒಡೆಯರ ಮೊಮ್ಮಗ ಅಂದರೆ ರಾಜಕುಮಾರಿ ಮೀನಾಕ್ಷಿದೇವಿ ಒಡೆಯರ ಮಗ. ಬೊಪ್ಪೆಗೌಡನಪುರಮಠದ ಅರಸರಿಗೂ ಮೈಸೂರು ಒಡೆಯರಿಗೂ ವಿವಾಹ ಸಂಬಂಧವಿದೆ.

ಜಯಚಾಮರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಹಿಂದಿನ ರಾಜರ ಕಾಲದಿಂದಲೂ ಮಂಟೇಸ್ವಾಮಿ ಪರಂಪರೆಯ ಕ್ಷೇತ್ರಗಳಾದ ಬೊಪ್ಪೆಗೌಡನಪುರ, ಕಪ್ಪಡಿ, ಚಿಕ್ಕಲ್ಲೂರಿಗೆ ರಾಜರು ಬಂದು ಹೋಗುವ ಪರಿಪಾಠವಿದೆ, ಇದರ ಮುಂದುವರಿಕೆಯಾಗಿ ಇತ್ತೀಚೆಗೆ ಮೈಸೂರು ರಾಜವಂಶಸ್ಥ ಶ್ರೀಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುರುಬನಕಟ್ಟೆ ಕ್ಷೇತ್ರಕ್ಕೆ ಬಂದು ಧ್ಯಾನಮಂದಿರ ಉದ್ಘಾಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry