7

ಬಯಲು- ಮನೆ- ದಾರಿ

Published:
Updated:
ಬಯಲು- ಮನೆ- ದಾರಿ

ಇಲ್ಲ.

ಈಗಂತಲೂ ಮಳೆ ಇಲ್ಲ. ಆದರೆ ಮಳೆಯ ತೇವ ಪೂರ್ಣವಾಗಿ ಇಂಗಿಹೋಗಿಲ್ಲ ಮಣ್ಣಲ್ಲಿ. ಇನ್ನೂ ಇದೆ. ಅದಕ್ಕೇ ಮಣ್ಣು ಒದ್ದೆಯಾಗಿದೆ. ತೀರ ಅಷ್ಟು ಒದ್ದೆಯಲ್ಲದಿದ್ದರೂ ಒಂದು ಸ್ವಲ್ಪಮಟ್ಟಿಗೆಯಾದರೂ ಸರಿ. ಹ್ಞಾ, ಹೌದು. ಅಕ್ಬರ್ ಇಂಥ ಮಣ್ಣಿನಲ್ಲಿ ಯಾವತ್ತೂ ತನ್ನದೊಂದು ಮನೆಯನ್ನು ಕಟ್ಟುತ್ತಿರುತ್ತಾನೆ. ನಿನ್ನೆಯೂ ಕಟ್ಟಿದ್ದ. ಮೊನ್ನೆಯೂ. ಕಟ್ಟುತ್ತಲೇ ಇರುತ್ತಾನೆ... ಹೀಗೆ ಮಳೆಯಿಂದ ಮಣ್ಣು ಹದವಾದಾಗೆಲ್ಲ.

ಆಮೀನಾ ನೋಡುತ್ತಾಳೆ. ಅಕ್ಬರ್ ತನ್ನ ಪುಟ್ಟ, ಪುಟ್ಟ ಕೈಗಳಿಂದ ಮಣ್ಣನ್ನು ಹದ ಮಾಡಿ ಹೇಗೆ ತನ್ನದೊಂದು ಮನೆಯನ್ನು ಕಟ್ಟುತ್ತಿದ್ದಾನೆ. ಆಮೀನಾ ಅವನು ಅದನ್ನು ಕಟ್ಟುವುದನ್ನು ಯಾವುತ್ತೂ ಹಾಗೇ ನೋಡುತ್ತಾಳೆ. ಹಾಗೆ ನೋಡುವಾಗ ಅವಳು ತನ್ನ ನೆನಪಿನ ಪದರಗಳೊಳಗೆ ಇಳಿದುಬಿಡುತ್ತಾಳೆ. ತಾನೂ ಮಗ ಅಕ್ಬರ್‌ನ ವಯಸ್ಸಿನಲ್ಲಿ ಹೀಗೆ ಇಂಥದ್ದೇ ಮಣ್ಣಿನಲ್ಲಿ ಮನೆಯನ್ನು ಕಟ್ಟುತ್ತಿದ್ದಳು. ಆಗ ಅವಳು ಮಣ್ಣಿನ ಮನೆಯನ್ನು ಅಮ್ಮಿಗೆ ತೋರಿಸಿ ಪುಟ್ಟ ಕೈಗಳಿಂದ ಚಪ್ಪಾಳೆ ತಟ್ಟಿ ಆನಂದಿಸುತ್ತಿದ್ದಳು. ಈ ತರಹ ಮನೆ ಕಟ್ಟುವುದನ್ನು ಅವಳು ತನ್ನ ಬಾಲ್ಯದ ಕೊನೆಯ ದಿನಗಳವರೆಗೂ ಮಾಡುತ್ತಿದ್ದಳು.

ಸರಾಸರಿ ಅಕ್ಬರನ ವಯಸ್ಸಿಗಿಂತ ಎರಡು ಪಟ್ಟು ದೊಡ್ಡದಿರುವಾಗ ಅಂದರೆ ಆಮೀನಾ ಹೆಣ್ಣಾಗುವುದಕ್ಕೆ ಸುಮಾರು ಎರಡು ತಿಂಗಳು ಮುಂಚೆ ಇರಬೇಕು. ಆಷಾಢದ ಗಾಳಿ, ಮಳೆ, ಬಿಸಿಲು ಸರಿಸಮವಾಗಿ ಸ್ಪರ್ಧೆಗಿಳಿದಿದ್ದ ದಿನಗಳಲ್ಲಿ ಒಂದು ಬೆಳಿಗ್ಗೆ ಆಮೀನಾ ತಮ್ಮ ಖೈಮೆ (ಡೇರೆ)ಯ ಹೊರಗೆ ಬಯಲಲ್ಲಿ ಮಳೆಯ ತೇವಕ್ಕೆ ಬಿಸಿಲಿನ ಕಿರಣಗಳು ಬೆರೆತು ಹದವಾಗಿದ್ದ ನೆಲದ ಮಣ್ಣನ್ನು ನಾದಿ ಒಂದು ಸುಂದರ ಮನೆಯನ್ನು ಕಟ್ಟಿದ್ದಳು. ಅದು ಅವಳ ಕೋಮಲವಾದ ಕೈಗಳಿಂದ ಪೂರ್ಣಗೊಂಡಾಗ ಮನದೊಳಗೆ ತೇಲಿದ ಭಾವವು ಹೀಗಿತ್ತು: ಹೀಗೆ ಈ ಮಣ್ಣಿನ ಮನೆಯ ಹಾಗೆ ನಮ್ಮದೊಂದು ಮನೆಯು ಏಕೆ ರಚನೆಯಾಗುವುದಿಲ್ಲ?

ಅದು ಆಗುತ್ತದೆ. ಆದರೆ ಏಕೆ ಆಗುವುದಿಲ್ಲ?

ಅಪ್ಪ, ಅಪ್ಪನ ಅಪ್ಪ ಮತ್ತು ಅವರ ಅಪ್ಪಂದಿರು, ಅಜ್ಜಂದಿರು ಏಕೆ ಅಂಥದೊಂದು ಮನೆಯನ್ನು ಕಟ್ಟಲಿಲ್ಲ?

ಅವರಿಂದ ಅದು ಆಗುತ್ತಿತ್ತು. ಹಾಗಾದರೆ ಆಗಲಿಲ್ಲ ಏಕೆ?

ಆಮೀನಾ ಇಂಥದೊಂದು ಮನೆಯನ್ನು ಕಟ್ಟಿದಾಗಲೆಲ್ಲ ಅವಳ ಮನಸ್ಸಿನಲ್ಲಿ ಒಂದು ಕನಸಿನ ಮನೆಯ ರೂಪವು ಹೆಪ್ಪುಗಟ್ಟುತ್ತಿತ್ತು, ಅಲ್ಲ ಹೆಪ್ಪುಗಟ್ಟುತ್ತಲೇಯಿತ್ತು.

ಈಗಲೂ ಹಾಗೇ ಆಯಿತು.

ಅದು ಅವಳ ಬಾಲ್ಯದ ದಿನಗಳಲ್ಲಿ ಅವಳು ಕಟ್ಟುತ್ತಿದ್ದ ಕನಸಿನ ಮನೆಯ ಹಾಗೆ.

ಐದು ವರುಷದ ಅಕ್ಬರ್ ತಾಯಿ ಆಮೀನಾಳ ಮುಖವನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದ. ಅವನ ಚಪ್ಪಾಳೆಯು ಆಮೀನಾಳನ್ನು ಎಚ್ಚರಿಸಿತು. ಸುಮಾರು ಹದಿನಾರು ವರುಷಗಳ ಹಿಂದಿನ ಪರದೆಗಳನ್ನು ದಾಟಿ ಹಿಂದಿರುಗಿದಳು. ಕಣ್ಣುಗಳಲ್ಲಿ ಮೂಡಿದ್ದ ಕನಸಿನ ಮನೆಯ ಚಿತ್ರ ರೆಪ್ಪೆಗಳ ಬಡಿತಕ್ಕೆ ಹಾರಿಹೋಯಿತು. ಈಗ ಅವಳ ಕಣ್ಣುಗಳಲ್ಲಿ ಎದುರಿಗೆ ನಿಂತ ಅಕ್ಬರ್‌ನ ಚಪ್ಪಾಳೆಯೊಂದಿಗೆ ನಗುತ್ತಿದ್ದ ಮುಖ, ಜೊತೆಗೆ ಅವನ ಕಾಲ ಬಳಿ ಭೂಮಿಯಿಂದ ಒಂದು ಅಡಿ ಮೇಲೆ ಎದ್ದುನಿಂತಿದ್ದ ಮಣ್ಣಿನ ಮನೆಯನ್ನು ನೋಡಿದಳು. ತುಟಿಯಲ್ಲಿ ನಗುವು ಅರಳಿರಲಿಲ್ಲ. ನಂತರ ಅರಳಿಸಿದಳು, ಕೇವಲ ಅಕ್ಬರ್‌ನ ಕಣ್ಣುಗಳಲ್ಲಿ ಕಾಣಲೆಂದು.

***

ದಾರಿಗಳು ಚಲಿಸುತ್ತವೆ. ಹೌದು ಚಲಿಸುತ್ತವೆ.

ಕಾಲುಗಳು? ಕಾಲುಗಳೂ ಚಲಿಸುತ್ತವೆ.

ದಾರಿಗಳು ಮುಗಿದಾಗ ಕಾಲುಗಳು ನಿಲ್ಲುತ್ತವೆ. ಆದರೆ ದಾರಿಗಳು ಎಂದಿಗೂ ಮುಗಿಯುವುದಿಲ್ಲ. ಹಾಗಾಗಿ ಕಾಲುಗಳು ಎಂದಿಗೂ ನಿಲ್ಲುವುದಿಲ್ಲ. ಒಂದಷ್ಟು ಹೊತ್ತು ದಾರಿಗಳು ದಣಿದು ಮತ್ತೆ ತೆರೆದುಕೊಂಡಾಗ ಕಾಲುಗಳು ಚಲಿಸಲಾರಂಭಿಸುತ್ತವೆ. ಹೀಗೆ ಆ ಬಯಲಿನಲ್ಲಿ ಬಿಡಾರೆ ಬಿಟ್ಟದ್ದ ಅಲ್ಲಿನ ಯಾವ ಕಾಲುಗಳು ಎಂದಿಗೂ ಒಂದು ಕಡೆ ಶಾಶ್ವತವಾಗಿ ನಿಂತಿರಲಿಲ್ಲ. ಹಾಗೇನಾದರೂ ಅವು ನಿಂತಿದ್ದವೆಂದರೆ ಬಹಳ ಬೇಗನೆ ಅವು ಮಣ್ಣಿನಾಳಕ್ಕೆ ಇಳಿದು ಮತ್ತೆ ಎಂದಿಗೂ ಕಾಣಿಸುತ್ತಿರಲಿಲ್ಲ. ಅಲ್ಲೊಂದು ಗೋರಿಯ ಹೊರತು.

ಆದರೆ, ಹಾಗಾಗಬಾರದು.

ಆದರೆ, ಹಾಗಾಗುತ್ತದೆ.

ಏಕೆ ಹಾಗೇ ಆಗಬೇಕು?

ಕಾಲುಗಳು ನಿಂತರೆ ಗೋರಿ ಏಕೆ ನಿರ್ಮಾಣ ಆಗಬೇಕು? ಮನೆ ಏಕೆ ನಿರ್ಮಾಣವಾಗಬಾರದು?

ಆಮೀನಾಳ ಕುಟುಂಬ ತನ್ನ ವಾರಗೆಯ ಹತ್ತಾರು ಕುಟುಂಬಗಳೊಂದಿಗೆ ದಾರಿಯಿಂದ ದಾರಿಗೆ, ಬಯಲಿನಿಂದ ಬಯಲಿಗೆ...

ಮತ್ತೆ... ದಾರಿ...

ಹೀಗೆ ಚಲಿಸುತ್ತಲೇ ಇತ್ತು. ನಿರಂತರ.

ಇದು ಎಷ್ಟು ನಿರಂತರವೆಂದರೆ, ಎಲ್ಲಿಯವರೆಗೂ ದಾರಿ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ...

ಅಕ್ಬರ್ ತಾನು ಕಟ್ಟಿದ ಮಣ್ಣಿನ ಮನೆ ಬಳಿ ಬೆಳಿಗ್ಗೆಯಿಂದಲೂ ಆಡುತ್ತಿದ್ದಾನೆ. ತಾಯಿ ಆಮೀನಾ ಕರೆದಾಗಲೆಲ್ಲ ತಿಂಡಿ, ಊಟ ಮುಗಿಸಿ ಬಂದು ಮತ್ತೆ ಆಡುತ್ತಿದ್ದ. ಆಟವು ನಡೆಯುತ್ತಲೇ ಇತ್ತು. ಸಂಜೆಯು ನೆಲ– ಮುಗಿಲನ್ನು ಸಾವರಿಸಿ ಹೆಪ್ಪುಗಟ್ಟುತ್ತಿತ್ತು. ಆಮೀನಾ ಮತ್ತೆ ಅಕ್ಬರನಲ್ಲಿಗೆ ಬಂದಳು. ಅಕ್ಬರ್ ತನ್ನ ಮಣ್ಣಿನ ಮನೆಗೆ ಕಾವಲು ಕಾಯುವವನಂತೆ ಕಂಡ.

‘ಬಾರೋ ಕತ್ತಲಾಯಿತು’ ಎಂದಳು.

‘ಅಮ್ಮಿ ಮನೆ?’ ಬೆರಳು ತೋರಿಸಿದನು.

ಆಮೀನಾ ಮನೆ ನೋಡಿದಳು. ಕಣ್ತುಂಬಿದವು.

‘ಬಾ, ಅದು ಮಣ್ಣಿನ ಮನೆ ಏನೂ ಆಗೋಲ್ಲ, ಅಲ್ಲೇ ಇರುತ್ತೆ’ ಎಂದಳು.

‘ಹೌದಾ ಅಮ್ಮೀ!?’

‘ಮಣ್ಣಿನ ಮನೆ ಗಟ್ಟಿ ಇರುತ್ತಾ?’ ಮರು ಪ್ರಶ್ನಿಸಿದನು.

‘ಹೌದು ಮಗ’.

ನಾಲ್ಕು ಹೆಜ್ಜೆಗಳ ನಂತರ ಅಕ್ಬರ್ ನಿಂತುಕೊಂಡನು.

ಆಮೀನಾ ‘ಯಾಕೋ’ ಎಂದಳು.

‘ಅಮ್ಮೀ, ಅಮ್ಮೀ ಅದಕ್ಕೆ ಬಾಗಿಲು ಹಾಕಿಲ್ಲ. ಹಾಕಿ ಬರ‍್ತೀನಿ’ ಎಂದು ಓಡಿ ಹೋಗಿ, ಮಣ್ಣಿನ ಮನೆಯ ಪಕ್ಕದಲ್ಲಿ ಬಿದ್ದಿದ್ದ ರಟ್ಟಿನ ತುಂಡನ್ನು ಹೊಸ್ತಿಲೇ ಇಲ್ಲದ ಆ ಪುಟ್ಟಮನೆಯ ಮುಂದುಗಡೆ ಇಟ್ಟು ಬಂದನು.

ರಾತ್ರಿ ಸುಮಾರು ಹೊತ್ತಾಗಿತ್ತು. ಮಗು ಅಕ್ಬರ್, ಗಂಡ ಅಮೀರ್ ಇಬ್ಬರೂ ಊಟ ಮುಗಿಸಿ ನಿದ್ದೆಗೆ ಜಾರಿದ್ದರು. ಆದರೆ ಆಮೀನಾಳ ತಲೆಯ ದಿಂಬು ಎಚ್ಚರವಾಗಿತ್ತು. ಏಕೆಂದರೆ, ಆಮೀನಾ ಇನ್ನು ಮಲಗಿರಲಿಲ್ಲ.

***

ಅದು ಆಮೀನಾಳ ಬಾಲ್ಯದ ದಿನಗಳು. ಆಮೀನಾಳೂ ಅಕ್ಬರ್‌ನಂತೆ ಮಣ್ಣಿನಲ್ಲಿ ಆಡುತ್ತಿದ್ದಳು. ಆದರೆ ಆಮೀನಾಳು ಹೆಚ್ಚಾಗಿ ಆಡುತ್ತಿದ್ದುದ್ದು ಒಂದೇ ಆಟ. ಅದು ಮಣ್ಣಿನಲ್ಲಿ ಮನೆಕಟ್ಟುವ ಆಟ. ಹಾಗೆ ಮನೆ ಕಟ್ಟಿ, ಚಪ್ಪಾಳೆ ತಟ್ಟಿ ಆನಂದಿಸುವಾಗ ಅನ್ನಿಸುತ್ತಿತ್ತು. ಇಂಥದೊಂದು ಸುಂದರ ಮನೆ ನಮ್ಮದಿದ್ದಿದ್ದರೆ? ಅವಳು ಎಷ್ಟೋ ವರ್ಷ ಅಂಥದ್ದೇ ಮನೆಯನ್ನು ಕಟ್ಟುತ್ತಿದ್ದಳು. ತಮ್ಮ ಬದುಕು ದಾರಿಗಳಲ್ಲಿ ಹರಿದು ಬಯಲುಗಳು, ಘಟ್ಟಗಳನ್ನು ತಲುಪಿದಾಗಲೂ ಅವಳು ಹಾಗೇ, ಅಂಥದ್ದೇ ಮನೆಯನ್ನು ಕಟ್ಟುತ್ತಿದ್ದಳು. ಆದರೆ ಅವಳು ಬಾಲ್ಯವನ್ನು ದಾಟಿ ಯೌವ್ವನಕ್ಕೆ ಏರಿದಾಗಲೂ ಅಂಥ ಮನೆಯ ಕನಸು ಮುರಿದಿರಲಿಲ್ಲ.

ಬದುಕಿನ ವಾಸ್ತವಕ್ಕೆ ಯೋಚನೆಗಳು ಬದಲಾಗಿದ್ದವು.

ಆದರೂ ಏಕೆ ಮಣ್ಣು, ಇಟ್ಟಿಗೆಗಳಿಂದ ಅಂಥದೊಂದು ಮನೆ ಕಟ್ಟಬಾರದು? ಬದುಕು ಏಕೆ ಅಲ್ಲಿ ಚಲಿಸಬಾರದು? ಎಂಬ ಸ್ಥಾಯಿ ವಿಚಾರವೊಂದು ಅವಳ ಮನದ ತರಂಗಗಳ ಮೇಲೆ ಹೆಪ್ಪುಗಟ್ಟುತ್ತಲೇ ಇತ್ತು.

ಮೊನ್ನೆ ನಾಲ್ಕು ತಿಂಗಳ ಹಿಂದಿನ ಘಟನೆ. ತಾನು ಪೇಟೆಗೆ ಕತ್ತೆ ಹಾಲನ್ನು ಮಾರಲು ಹೋಗಿದ್ದಾಗ, ಆನೆ ಬೀದಿಯಲ್ಲಿ ನಾಲ್ಕೈದು ಹೆಂಗಸರು ಗುಂಪು ಕಟ್ಟಿಕೊಂಡು ಮನೆಗಳ ಬಾಗಿಲು ಬಡಿದು ಏನೇನೊ ಹೇಳುತ್ತಿದ್ದರು, ವಿಚಾರಿಸುತ್ತಿದ್ದರು. ತಾನು ಕುತೂಹಲದಿಂದ ಒಬ್ಬ ಹೆಂಗಸನ್ನು ‘ಅದೇನು?’ ಎಂದು ಕೇಳಿದ್ದೆ. ಆಗ ಆಕೆ ‘ನಾವು ಶಾಲಾ ಶಿಕ್ಷಕರು. ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಿ, ಉಚಿತವಾಗಿ ವಿದ್ಯಾಭ್ಯಾಸ ನೀಡುತ್ತೇವೆ’ ಅಂತ.

‘ನಿಮಗೆ ಮಕ್ಕಳು ಎಷ್ಟು?’

‘ಒಂದು ಗಂಡು ಮಗು.’

‘ವಯಸ್ಸು?’

‘ಐದು’.

‘ಹಾಗಾದರೆ ಶಿಶುವಿಹಾರಕ್ಕೆ ಸೇರಿಸಿ’

‘ಮುಂದಿನ ವರುಷ ಒಂದನೇ ತರಗತಿಗೆ ಸೇರಿಸಿಕೊಳ್ಳೋಣ’.

‘ಎಲ್ಲಿ ನಿಮ್ಮ ಮನೆ?’ ಎಂದಳು ಆಕೆ.

ತಾನು ತಬ್ಬಿಬ್ಬಾದೆ. ಗಂಟಲು ಕಟ್ಟಿತು. ನಾಲಿಗೆ ತಿರುಗಲಿಲ್ಲ. ಅವಳು ಅಕ್ಷರಗಳಿಂದ ಮತ್ತೆ ಬೆನ್ನಟ್ಟಿದ್ದಳು. ತಾನು ಮೌನವಾಗಿ ತಪ್ಪಿಸಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಇನ್ನೊಬ್ಬಾಕಿ ಆ ಹೆಂಗಸನ್ನು ಕರೆದಳು. ಅವಳು ಅತ್ತ ನಡೆದಿದ್ದಳು. ತಾನು ಅಲ್ಲಿಂದ ಬೇಗ ಬೆನ್ನುಕೊಟ್ಟಿದ್ದೆ.

ಮಗ್ಗಲು ನೋಡಿದಳು. ಮಗು ಶಾಂತಚಿತ್ತದಿಂದ ಮಲಗಿತ್ತು. ಆದರೆ ಆಮೀನಾಳಿಗೆ ಅಕ್ಬರ್‌ನ ಹಣೆಯ ಮೇಲಿನ ಬೆವರಿನ ಬಿಂದುಗಳನ್ನು ನೋಡಿದಾಗ ಹಾಗನ್ನಿಸಲಿಲ್ಲ.

ಆ ಬಿಂದುಗಳಲ್ಲಿ ಹರಕು- ಮುರುಕು ಖೈಮೆಗಳು, ಆ ಖೈಮೆಗಳ ಒಳಗೆ ತಾನೂ ಮಲಗಿದ್ದಳು. ತನ್ನ ಅಪ್ಪ, ಅಜ್ಜ, ಅಜ್ಜನ ಅಜ್ಜ, ಮತ್ತವರ ಅಜ್ಜಂದಿರೂ ಮಲಗಿದ್ದರು. ಹೀಗೆ ಈ ಖೈಮೆಗಳಲ್ಲಿ ಮಲಗಿ, ಮಲಗಿ ಶತ- ಶತಮಾನಗಳ ತಳವು ಆಳವಾಗುತ್ತಲೇ ಹೋಯಿತು. ಇವತ್ತು ನನ್ನ ಮಗ ಅಕ್ಬರನೂ ಮಲಗುತ್ತಿದ್ದಾನೆ. ಇವನೂ ಹಾಗೇ ಮಲಗಬೇಕೆ? ಪ್ರಶ್ನೆಯನ್ನು ಬಿಗಿಹಿಡಿದಳು. ಭಾರವಾಯಿತು. ಆದರೂ ಹಾಗೇ ಹಿಡಿದಿದ್ದಳು. ಆಗ ಅಕ್ಬರ್ ಕಟ್ಟಿದ ಮಣ್ಣಿನ ಮನೆ ಕಣ್ಣ ಮುಂದೆ ಹಾಯಿತು.

ನಮಗೂ ಒಂದು ಮನೆ ಇದ್ದು, ಒಂದು ಕಡೆ ತಳವೂರಿದ್ದರೆ ಅಕ್ಬರನು ಹೀಗೆ ಮಲಗುತ್ತಿರಲಿಲ್ಲ. ಮತ್ತೆ ಶಾಲೆಗೂ ಹೋಗುತ್ತಿದ್ದನೇನೋ?..

ದಾರಿ ನಡೆಯುತ್ತಿತ್ತು.

ಆಮೀನಾ ಆ ದಾರಿಗೆ ಬೆನ್ನು ಕೊಟ್ಟು ಹಾಗೇ ನಡೆಯುತ್ತಿದ್ದಳು. ದಾರಿಗಳು ಅಗಲವಾದಂತೆ ದೊಡ್ಡ, ದೊಡ್ಡ ಮನೆಗಳು ಮಹಲುಗಳಂತೆ ಕಂಡವು.

ಮತ್ತೆ, ಮತ್ತೆ ಅದೇ ಬಯಲು.

ಮಗ ಕಟ್ಟಿದ್ದ ಮಣ್ಣಿನ ಮನೆ

ಮನಸ್ಸಿನ ತರಂಗಗಳು.

ಕನಸಿನ ಮನೆಯ ಅಂತರಲಾಗ.

ದಾರಿಗಳು ಚಲಿಸುತ್ತಲೇ ಇವೆ. ದಾರಿಯ ಮಗ್ಗಲುಗಳಲ್ಲಿ ಮಣ್ಣಿನ ಮನೆ ತನ್ನ ಕನಸಿನ ಮನೆ... ಕಪ್ಪು ಬಿಳುಪು ಆಟ ನಡೆಯುತ್ತಲೇ ಇತ್ತು.

ಅಮೀನಾ ಮನೆಯ ಪಾಯ ತೋಡುವ, ಮನೆ ಕಟ್ಟುವ ಕೆಲಸಕ್ಕೆ ಹೋಗುತ್ತಿದ್ದಳು. ಅವಳು ಮೊನ್ನೆಯೂ ಹೋಗಿದ್ದಳು. ಇಲ್ಲ, ಅವಳು ಹಿಂದೆ ಅಪ್ಪ, ಅವ್ವ, ಅಜ್ಜನ ಜೊತೆಗೂ ಹೋಗಿದ್ದಳು. ಈಗಲೂ ಹೋಗುತ್ತಾಳೆ ಗಂಡನ ಜೊತೆಗೆ.

ಅವತ್ತು, ಅಂದರೆ ಸುಮಾರು ಮೂರೂವರೆ- ನಾಲ್ಕು ವರುಷಗಳ ಹಿಂದಿನ ಮಾತು. ಅಕ್ಬರನ ವಯಸ್ಸು ಆಗ ಸುಮಾರು ಒಂದು- ಒಂದೂವರೆ ಇದ್ದಿರಬೇಕು. ಮದುವೆಯಾಗಿ ಮೊದಲ ಬಾರಿಗೆ ಹಾಗೆ ಗಂಡನ ಜೊತೆಗೆ ಕೆಲಸಕ್ಕೆ ಹೋಗಿದ್ದ ದಿನಗಳವು.

ಈಗ ತನಗೊಂದು ಕುಟುಂಬವಿದೆ. ತಾನು ಒಬ್ಬನ ಹೆಂಡತಿ, ಒಬ್ಬನ ತಾಯಿ. ಜೀವನದ ಸುಖ ದುಃಖಗಳು ಸಮರಸವಾಗಿ ಬಾಳಿಗೆ ಅಂಟಿಕೊಂಡಿವೆ. ಆದರೆ ತಾನು ಬಾಲ್ಯದ ದಿನಗಳಿಂದಲೂ ಕಂಡ ಕನಸಿನ ಮನೆಯ ಸಾಕಾರವು ಕೈಗೂಡಲಿಲ್ಲವಲ್ಲ ಎಂದು ಪರಿತಪಿಸಿದ್ದಳು.

ಆಗ ಮಣ್ಣಿನ ಇಟ್ಟಿಗೆಗಳನ್ನು ಗಂಡನ ಕೈಗಳಿಗೆ ಕೊಡುವಾಗ ಹೇಳಿದ್ದಳು. ಈ ಮನೆಯ ಕಟ್ಟುವ ಹಾಗೆ ನಾವೊಂದು ಪುಟ್ಟ ಮನೆಯನ್ನು ಏಕೆ ಕಟ್ಟಬಾರದು? ಅಮೀರ್ ಇಟ್ಟಿಗೆಗಳನ್ನು ತೆಗೆದುಕೊಂಡ, ಆದರೆ ಉತ್ತರ ಕೊಟ್ಟಿರಲಿಲ್ಲ. ಮೌನವಾಗಿ ಒಂದು ಬಾರಿ ಆಮೀನಾಳನ್ನು ನೋಡಿದ. ನಂತರ ಆಮೀನಾಳು ಗಂಡನನ್ನು ನೋಡಿ ಸುಮ್ಮನಾದಳು.

ಅತ್ತ, ಆ ಕಟ್ಟುತ್ತಿದ್ದ ಮನೆಯ ಹೊರೆಗೆ ಮಣ್ಣಿನ ಮೇಲೆ ಅಕ್ಬರ್ ಉಚ್ಚೆ ಹೊಯ್ದು ಮಣ್ಣನ್ನು ಕೈಗಳಿಂದ ಮೆತ್ತಿಸಿಕೊಂಡು ಆಡುತ್ತಿದ್ದ. ಆಮೀನಾ ಮಗನನ್ನು ಭಾವಪೂರ್ಣವಾಗಿ ನೋಡಿದ್ದಳು. ಗಂಡನು ಕೊಡದಿದ್ದ ಉತ್ತರವನ್ನು ಮಗ ಕೊಡುತ್ತಿದ್ದಾನೆ ಎಂದೆನಿಸಿತ್ತು. ಆಮೀನಾ ಅಕ್ಬರನ ಕೈಗಳನ್ನು ಹೇಗೆ ನೋಡಿದ್ದಳೆಂದರೆ, ನಿಜವಾಗಿಯೂ ಆ ಕೈಗಳಿಂದ ನಮ್ಮದೊಂದು ಕನಸಿನ ಮನೆ ರಚನೆಯಾಗುತ್ತದೆ ಎಂದು ಭಾವಿಸಿದ್ದಳು.

ಆಮೀನಾ ಈಗ ಮತ್ತೆ ಮಗ್ಗುಲು ಬದಲಾಯಿಸಿದಳು. ಅಂಗಾತವಾಗಿ ಹಣೆಯ ಮೇಲೆ ಬಲಗೈಯನ್ನು ಎತ್ತಿ ಇಟ್ಟಳು. ಗೊತ್ತಾಗಲಿಲ್ಲ, ಅದ್ಯಾವಾಗ ನಿದ್ದೆ ಹತ್ತಿತೋ ಗಾಢ ಕತ್ತಲು ಕರಗಿತೋ. ಆಮೀನಾ ಕಣ್ಣುಬಿಟ್ಟಾಗ ಸೂರ್ಯ ಪಟದಂತೆ ಹಾರಿದ್ದ.

***

ಸೂರ್ಯ ಮೂಡಿದ್ದ. ದಿನಾ ಮೂಡುತ್ತಾನೆ. ಆಮೀನಾ ಮೂಡುತ್ತಿರುವ ಸೂರ್ಯನಿಗೆ ದಿನಾ ವಂದಿಸುತ್ತಾಳೆ. ಇವತ್ತು ವಂದಿಸಿದ್ದಳು. ಆದರೆ ಇವತ್ತೂ ಹಾಗೆ ವಂದಿಸುತ್ತಿರುವಾಗ ಏನೋ ಕಳೆದುಕೊಳ್ಳುತ್ತಿದ್ದೇನೆ. ಎನಿಸಿತ್ತು. ಆದರೆ, ಏನೆಂದು ತಿಳಿಯಲಿಲ್ಲ. ಅದರ ಕುರಿತು ಏನೊಂದು ಯೋಚಿಸಲಿಲ್ಲ.

ತಮ್ಮ ವಲಸೆ ಗೂಡುಗಳಿಗೆಲ್ಲ ಒಬ್ಬ ಮಾಲಿಕನಿದ್ದ. ಆತನ ಹೆಸರು ಚಾನ್ ಸಾಬು. ಎಲ್ಲರೂ ಆತನನ್ನು ಮೇಸ್ತ್ರಿ ಚಾನ್ ಸಾಬು ಎಂದು ಕರೆಯುತ್ತಿದ್ದರು.

ವಿಷಯ ಏನೆಂದು ಯಾರಿಗೂ ಗೊತ್ತಾಗಿರಲಿಲ್ಲ. ಏಕೊ ಮೇಸ್ತ್ರಿ ಚಾನ್ ಸಾಬು ಎಲ್ಲರಿಗೂ ಬರೇಳವ್ರೆ ಎಂದು ಎಲ್ಲರೂ ಆತನ ಖೈಮೆಯ ಮುಂದೆ ಜಮಾ ಆಗಿದ್ದರು. ಚಾನ್ ಸಾಬು ಎಲ್ಲಾರಿಗೂ ಹಿಂಗೆ ಬರೇಳವ್ನೆ ಅಂದ್ರೆ ಇನ್ನು ಈ ಊರಿನ ಋಣ ಮುಗಿದಂಗೆ ಎಂದು ಗುಂಪಿನಲ್ಲಿ ಯಾರೊ ಪಿಸುಗುಟ್ಟಿದ್ದ. ಆಗ ಇನ್ನೊಬ್ಬ ‘ಈ ಜಾಗಕ್ಕೆ ಬಂದು ಹತ್ತತ್ರಾ ಒಂದು ವರ‍್ಸಾನೇ ಆತು’ ಎಂದ. ಅಷ್ಟರಲ್ಲಿ ಚಾನ್ ಸಾಬು ಕೆಮ್ಮುತ್ತಾ ಸಿಗರೇಟನ್ನು ಕೈಯಲ್ಲಿ ಹಿಡಿದು ಬಂದ.

‘ನೋಡಿ ಇಂದಿಗೆ ನಮ್ಮೆಲ್ಲರ ಕೆಲಸಗಳು ಪೂರ್ಣವಾಗಿ ಮುಗಿದಿವೆ. ನಿನ್ನೆ ತಾನೆ ಎರಡು ಮೂರು ಕಂತ್ರಾಟು ಸಿಕ್ಕವೆ. ವಿಷಯವನ್ನು ರಾತ್ರಿನೇ ಹೇಳಬೇಕು ಎಂದುಕೊಂಡೆ ಕತ್ತಲಾಗಿತ್ತು. ಹಾಗಾಗಿ ಈಗ ಬರಕ್ಹೇಳಿದ್ದು. ಇಂದು ಮಧ್ಯಾಹ್ನವೇ ಇಲ್ಲಿಂದ ಹೊರಡೋಣ. ಈ ನೆಲಕ್ಕೊಂದು ಕೊನೆಯ ಸಲಾಂ ಹೇಳಿ. ಹೋಗಿ ಈಗಲೇ ಎಲ್ಲರೂ, ತಮ್ಮ ತಮ್ಮ ಸಾಮಾನು ಸರಂಜಾಮುಗಳನ್ನು ಗಂಟು, ಮೂಟೆ ಕಟ್ಟಿ ತಯಾರಾಗಿ’ ಎಂದು ಆದೇಶಿಸಿದನು.

ಎಲ್ಲರೂ ನಕ್ಷತ್ರದ ಮೀನುಗಳು ಚದುರಿದಂತೆ ತಮ್ಮ, ತಮ್ಮ ಖೈಮೆಗಳ ಕಡೆ ಚದುರಿದರು.

ಈಗ ದಾರಿ ಮತ್ತೆ ಚಲಿಸಿತು. ಕ್ಷಣ ಹೊತ್ತು ನಿಂತಿದ್ದ ದಾರಿ, ತಾನು ತಾನೇ ಚಲಿಸಲಾರಂಭಿಸಿತು. ಈಗ ಕಾಲುಗಳು ಚಲಿಸಬೇಕು. ಚಲಿಸುತ್ತವೆ. ಹೌದು ಚಲಿಸಲೇಬೇಕು.

ಖೈಮೆಗಳನ್ನು ಕೆಲವರು ಬಿಚ್ಚಿದ್ದರು. ಕೆಲವರು ಬಿಚ್ಚುತ್ತಿದ್ದರು. ಈಗ ಆಮೀನಾ ಮತ್ತು ಅಮೀರೂ ತಮ್ಮ ಖೈಮೆಯನ್ನು ಬಿಚ್ಚಿದರು. ಬದುಕು ಬೆತ್ತಲಾಯಿತು. ಬದುಕಿನ ಚಿಕ್ಕ-ಪುಟ್ಟ ಸರಕುಗಳನ್ನು ಮಡಚಿ, ಕೆಲವು ಚಿಕ್ಕದನ್ನು ಇನ್ನೂ ಚಿಕ್ಕದು ಮಾಡಿ ದೊಡ್ಡ, ದೊಡ್ಡ ಎರಡು ಪೋಟಲಿಗಳಾಗಿ ಕಟ್ಟಿಟ್ಟರು. ಅದು ಹೇಗೆ ಕಟ್ಟಲ್ಪಟ್ಟಿದ್ದವು ಎಂದರೆ, ಸುಖ ಸಂತೋಷ ಮತ್ತು ಕನಸುಗಳನ್ನು ಗುಡಿಸಿ ಕೆಲಹೊತ್ತು ಕಟ್ಟಿಟ್ಟಂತೆ.

ಅಕ್ಬರನ ಕಣ್ಣಿನಾಳದಲ್ಲಿ ಇವತ್ತು ವಿಚಿತ್ರವಾದ ಒಂದು ಭಾವನೆ ಹೆಪ್ಪುಗಟ್ಟುತ್ತಿತ್ತು. ಅದನ್ನು ಅವನು ಮುರಿದು ಕೇಳಿದ ‘ಅಮ್ಮ ಏಕೆ ನಮ್ಮ ಮನೆಯನ್ನು ಕಿತ್ತಾಕಿಬಿಟ್ಟಿರಿ?’

‘ಈಗ ನಾವು ಎಲ್ಲಿರಬೇಕು? ಎಲ್ಲಿ ಮಲಗಬೇಕು?’

- ಆಮೀನಾ ಇಲ್ಲಿವರೆಗೂ ತಡೆದಿದ್ದ ದುಃಖವನ್ನು ಚೆಲ್ಲಿ ಅಕ್ಬರನನ್ನು ಎದೆಗವುಚಿ. ‘ಇಲ್ಲ ಮಗು ನಾವು ಮನೆಯನ್ನು ಕಿತ್ತಾಕ್ಲಿಲ್ಲ. ನೋಡು ಈಗ ನಾವು ಇಲ್ಲಿಂದ ಬೇರೆ ಊರಿಗೆ ಹೋಗೋಣ. ಅಲ್ಲಿ ಇದಕ್ಕಿಂತ ಚೆಂದದ ಮನೆ ಕಟ್ಟೋಣ’ ಎಂದಳು. ಆಗ ಆಮೀನಾಳ ಕಣ್ಣುಗಳಿಂದ ಉದುರುತ್ತಿದ್ದ ಪಸೆಹನಿಗಳು ಎದೆ ಮೇಲಿನ ಕುಪ್ಪಸವನ್ನು ಒದ್ದೆ ಮಾಡದೇ ಬಿಟ್ಟಿರಲಿಲ್ಲ.

ಆಮೀರ ಆಮೀನಾಳ ಬಳಿಗೆ ಬಂದು ಗಲ್ಲ ಮುಟ್ಟಿ ಹೀಗೆಂದ ‘ನೀನೇ ಹೀಗೆ ಅತ್ತರೆ ಹೇಗೆ? ಸಮಾಧಾನಿಸಿಕೊ, ಅಕ್ಬರನೂ ನಿನ್ನನ್ನು ನೋಡಿ ಅತ್ತಾನು’ ಎಂದು ಹೇಳಿ ಪಕ್ಕದಲ್ಲಿ ಖೈಮೆ ಇಳಿಸುತ್ತಿದ್ದಲ್ಲಿಗೆ ನಡೆದ.

ಮಧ್ನಾಹ್ನದ ಉರಿ ನೆತ್ತಿಯನ್ನು ಕೆಂಡ ಹಾಕಿ ಸುಟ್ಟಷ್ಟು ಜೋರಿತ್ತು. ಈಗ ಎಲ್ಲರೂ ಚಾನ್ ಸಾಬುನ ಮುಂದೆ ಜಮಾ ಆಗಿದ್ದರು. ಆ ಜಮಾವಣೆ ಹೇಗಿತ್ತು ಎಂದರೆ, ಹತ್ತಾರು ಸಣ್ಣ, ಸಣ್ಣ ತೊರೆಗಳು ಕೂಡಿ ಏಕಕಾಲಕ್ಕೆ ದಿಕ್ಕು ತೋಚಿದಂತೆ ಹರಿವ ನದಿಯ ಹಾಗೆ ಕಂಡಿತು.

ಈಗ ಮತ್ತೆ ರಸ್ತೆಗಳು ನಡೆಯುತ್ತಿವೆ. ಬಹುಶಃ ಈಗ ಎಲ್ಲಾ ರಸ್ತೆಗಳು ಒಂದೇ ಆಗಿ ನಡೆಯುವಂತೆ. ಮತ್ತೆ ಅವು ನಿಲ್ಲುತ್ತವೆ. ಕ್ಷಣ ಹೊತ್ತು. ಮತ್ತೆ... ನಡೆಯುತ್ತವೆ. ಎಲ್ಲಿಯವರೆಗೆ?

ಆಮೀನಾ ಮತ್ತು ಅಮೀರ್ ಇಬ್ಬರೂ ತಮ್ಮ ಗಂಟು ಪೋಟಲಿಗಳನ್ನು ಕತ್ತೆಗಳ ಬೆನ್ನಿಗೆ ಹಾಕಿ, ಇನ್ನೂ ಚಿಕ್ಕ- ಪುಟ್ಟ ಸಾಮಾನುಗಳನ್ನು ಕಟ್ಟಿ ಕೈಯಲ್ಲಿ ಹಿಡಿದು ನಡೆದರು.

ಆಮೀನಾ ‘ಅಕ್ಬರ್’ ಎಂದು ಕೂಗಿದಳು.

ಅಕ್ಬರ್ ಬಯಲಲ್ಲಿ ಇದ್ದನು. ಆಮೀನಾ ಬಯಲು ಸೇರಿದಳು.

‘ಅಕ್ಬರ್ ಬಾ ಹೋಗೋಣ, ಎಲ್ಲರೂ ಹೋಗ್ತಾ ಇದ್ದಾರೆ’ ಎಂದಳು.

ಅಕ್ಬರ್ ಹಾಗೇ ನಿಂತಿದ್ದ. ಅವನ ಕಣ್ಣುಗಳು ತಾನು ಕಟ್ಟಿದ್ದ ಮಣ್ಣಿನ ಮನೆಯನ್ನು ದಿಟ್ಟಿಸುತ್ತಿದ್ದವು. ಆಮೀನಾ ಮಣ್ಣಿನ ಮನೆಯನ್ನು ನೋಡಿದಳು. ಕಣ್ಣುಗಳು ಕಂಪಿಸಿದವು. ಆಮೀನಾ ಅಕ್ಬರನ ಕೈಯನ್ನು ಹಿಡಿದಳು. ಅಕ್ಬರನ ಕಣ್ಣುಗಳು ಒದ್ದೆಯಾದವು.

‘ಅಮ್ಮ ಮನೆ’ ಎಂದನು.

ಅಮೀನಾ ಅಕ್ಬರನ ದುಃಖವನ್ನು ಬೊಗಸೆಯಲ್ಲಿ ಹಿಡಿದವಳಂತೆ ಹಿಡಿದ ಕೈಯನ್ನು ಒತ್ತಿ ಹಿಡಿದು ನಡೆದಳು. ಅಕ್ಬರ್ ತಾನು ಕಟ್ಟಿದ್ದ ಮನೆಯ ಕಡೆ ಮುಖ ಮಾಡಿ ಮತ್ತೆ ನುಡಿದ:

‘ಅಮ್ಮ ಮನೆ’

ಆಮೀನಾ ಹಿಂತಿರುಗಿ ಆ ಮಣ್ಣಿನ ಮನೆಯತ್ತ ನೋಡಲಿಲ್ಲ. ಅಕ್ಬರನು ಮಾತ್ರ ತಾವು ಚಲಿಸುತ್ತಿರುವ ರಸ್ತೆಗಳು ಸೇರುವವರೆಗೂ ನೋಡುತ್ತಲೇ ನಡೆದ.

ಆಮೀನಾ ಈಗ ಕೊನೆಯ ಬಾರಿ ಎಂಬಂತೆ ಒಂದು ಸಲ ಹಿಂದೆ ತಿರುಗಿ ನೋಡಿದಳು.

ಬಯಲು ಬಯಲಾನೆ ಕೂಡಿ ಬಯಲಾಗಿತ್ತು.

ಕನಸಿನ ಮನೆ ಮನಸ್ಸಿನಲ್ಲಿ ಇನ್ನೂ ಹಸಿ ಹಸಿಯಾಗಿಯೇ ಇತ್ತು.

ಮುಂದೆ ದಾರಿ ಚಲಿಸುತ್ತಿತ್ತು. ಕಾಲುಗಳೂ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry