7

ಸುಳಿವು ಕೊಡದ ಸಾವು

Published:
Updated:
ಸುಳಿವು ಕೊಡದ ಸಾವು

ಅವನ ಹೆಸರು ಸೂರ್ಯ. ಸುಮಾರು ಹತ್ತು ವರ್ಷ ವಯಸ್ಸಿನ ತುಂಟ ಪೋರ.ಹೆತ್ತವರಿಗೆ ಒಬ್ಬನೇ ಮುದ್ದಿನ ಮಗ. ಚಟಪಟನೆ ಹರಳು ಹುರಿದಂತೆ ಮಾತು. ನನ್ನನ್ನು‘ಅಂಕಲ್’ ಎಂದು ಒಂದು ಬಗೆಯ ವಿಶಿಷ್ಟ ಧ್ವನಿ ಹೊರಡಿಸಿ ಸಂಬೋಧಿಸುತಿದ್ದ.

ಮೊಟ್ಟ ಮೊದಲ ಬಾರಿಗೆ ನಾನು ಅವನನ್ನು ನೋಡಿದ್ದು ಸುಮಾರು ಐದು ವರ್ಷದವನಿದ್ದಾಗ. ಎದೆಯ ಮಧ್ಯ ಭಾಗ ಕೊಂಚ ಉಬ್ಬಿತ್ತೆಂದು ನನ್ನ ಬಳಿ ತೋರಿಸಲು ಕರೆತಂದಿದ್ದರು ಅವನ ತಂದೆ ತಾಯಿ. ಕೆಲವು ಮಕ್ಕಳಲ್ಲಿ ಕಂಡು ಬರುವ ಲಘು ಸ್ವರೂಪದ ಒಂದು ನ್ಯೂನತೆ ಅದಾಗಿದ್ದು, ಪಾರಿವಾಳದ ಉಬ್ಬಿದ ಎದೆಭಾಗದಂತೆ ಕಾಣುವುದರಿಂದ ವೈದ್ಯಕೀಯ ಪರಿಭಾಷೆಯಲ್ಲಿ ಪಾರಿವಾಳದ ಎದೆ (pigeon chest) ಎಂತಲೇ ಕರೆಯಲಾಗುತ್ತದೆ. ಕೂಲಂಕಷವಾಗಿ ಪರೀಕ್ಷಿಸಿದ ನಾನು ‘ನೋಡಲು ಸ್ವಲ್ಪ ಅಸಹಜವೆನಿಸುವುದಷ್ಟೇ ಹೊರತು ಅದರಿಂದ ಅಂತಹ ಗಂಭೀರ  ಸಮಸ್ಯೆಯೇನಿಲ್ಲ’ ಎಂದು ಸಮಾಧಾನ ಹೇಳಿ ಕಳಿಸಿದ್ದೆ. ಅದಾದ ನಂತರ ಶೀತ, ಕೆಮ್ಮು ಮುಂತಾದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಗಾಗ ನನ್ನಲ್ಲಿ ತೋರಿಸಿ ಸಲಹೆ ಪಡೆಯುತ್ತಿದ್ದರು ಅವನ ತಂದೆ ತಾಯಿ. ಅವನಾಗಲೇ ದೊಡ್ಡವನಾಗುತ್ತಲಿದ್ದುದರಿಂದ ಕಾಯಿಲೆಗಳ ಸಂಭವನೀಯತೆಯೂ ಕಡಿಮೆಯಾಗಿ ಅವನ ಭೇಟಿಯೂ ಅಪರೂಪವಾಗಿ ಬಿಟ್ಟಿತ್ತು.

ಸುಮಾರು ಒಂದು ವರ್ಷ ಕಾಲ ಅವನ ಮುಖದರ್ಶನವೇ ಆಗಿರಲಿಲ್ಲ. ಅದೊಂದು ಸಂಜೆ ಅವನನ್ನು ಕರೆತಂದ ಅವನ ತಂದೆ ‘ಬೆಳಿಗ್ಗೆಯಿಂದ ಯಾಕೋ ಹೊಟ್ಟೆನೋವು ಎನ್ನುತ್ತಿದ್ದಾನೆ’ ಎಂದರು. ಪರೀಕ್ಷಿಸಿದಾಗ  ಯಾವುದೇ ಗಮನಾರ್ಹ ಸಮಸ್ಯೆ ಕಂಡು ಬರಲಿಲ್ಲ. ಒಂದು ದಿನದ ಹೊಟ್ಟೆನೋವಿಗೆ ಯಾವುದೇ ಪರೀಕ್ಷೆಯ  ಅವಶ್ಯಕತೆ ಇರುವುದಿಲ್ಲವಾದ್ದರಿಂದ ನೋವುನಿವಾರಕ ಔಷಧವೊಂದನ್ನು ಬರೆದುಕೊಟ್ಟು ಕಳಿಸಿದೆ. ಮಾರನೇ ದಿನ ಮತ್ತೆ ಅವನೊಂದಿಗೆ ಬಂದ ಅವನ ತಂದೆ ‘ಪದೇ ಪದೇ ನೋವು ಎನ್ನುತ್ತಿದ್ದ; ಆದ್ದರಿಂದ ನಾನೇ ಹೇಳಿ ಸ್ಕ್ಯಾನ್ ಮಾಡಿಸಿಕೊಂಡು ಬಂದೆ’ ಎಂದು ರಿಪೋರ್ಟ್ ತೋರಿಸಿದರು. ಅದರಲ್ಲಿ  ಎಲ್ಲವೂ ನಾರ್ಮಲ್ ಇದ್ದು, ಪಿತ್ತ ಜನಕಾಂಗದಲ್ಲಿ ಮಾತ್ರ ಕೆಲವು ಚಿಕ್ಕ ಚಿಕ್ಕ ಗಂಟುಗಳಿರುವುದೆಂದು ಹೇಳಲಾಗಿತ್ತು. ‘ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ’ ಎಂದು ಹೇಳಿ ಪರಿಚಯದ ಮಕ್ಕಳ ಶಸ್ತ್ರವೈದ್ಯರ ಬಳಿ ಕಳಿಸಿಕೊಟ್ಟು, ಮರುದಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಪರೀಕ್ಷಕನಾಗಿ ಹೋಗಿಬಿಟ್ಟೆ. ಪರೀಕ್ಷೆಯಲ್ಲಿ  ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರಿಂದ ಸೂರ್ಯ ನನ್ನ ಚಿತ್ತಭಿತ್ತಿಯಿಂದ ತಾತ್ಕಾಲಿಕವಾಗಿ ಮರೆಯಾಗಿಬಿಟ್ಟಿದ್ದ.

ಅದಾಗಲೇ ಎರಡು ದಿನಗಳಾಗಿದ್ದವು; ಆಯಾಸಗೊಂಡಿದ್ದ ನಾನು ರಾತ್ರಿಯ ಊಟ ಮುಗಿಸಿ ಮಲಗಲು ಸಜ್ಜಾಗುತ್ತಿರುವಷ್ಟರಲ್ಲಿ ಮೊಬೈಲ್ ರಿಂಗಣಿಸಿತು.ನಾನು ‘ಹಲೋ’ ಎಂದೊಡನೆ ‘ನಾನು ಸಾರ್, ಸೂರ್ಯನ ತಂದೆ’ ಎಂದಿತು ಅತ್ತ ಕಡೆಯ ಧ್ವನಿ. ‘ಏನು ಹೇಳಿ‘ ಎಂದಾಗ ‘ಸೂರ್ಯ ಹೋಗಿಬಿಟ್ಟ ಸಾರ್’ ಎಂದರು ಆ ವ್ಯಕ್ತಿ ಕೊಂಚ ಗದ್ಗದಿತರಾಗಿ. ನನಗೆ ಅರೆಕ್ಷಣ ಏನು ಹೇಳಬೇಕೆಂದು ತೋಚದೆ ದಿಗ್ಮೂಢನಾಗಿಬಿಟ್ಟೆ. ಸಾವರಿಸಿಕೊಂಡು ‘ಇದೆಲ್ಲಾ ಹೇಗಾಯಿತು? ಎಂದಾಗ ‘ನೀವು ಹೇಳಿದ ಮಕ್ಕಳ ಶಸ್ತ್ರವೈದ್ಯರು ಪರೀಕ್ಷಿಸಿ, ಸಿ ಟಿ ಸ್ಕ್ಯಾನ್ ಮಾಡಿಸಲು ಹೇಳಿದರು. ಅದರ ರಿಪೋರ್ಟ್ ನೋಡಿ ಕ್ಯಾನ್ಸರ್ ಇರಬಹುದೆಂದು ಶಂಕಿಸಿ ಕಿದ್ವಾಯಿ ಆಸ್ಪತ್ರೆಗೆ ಕಳಿಸಿದರು. ನಿನ್ನೆ ಕರೆದುಕೊಂಡು ಬಂದೆವು. ಬೆಳಿಗ್ಗೆಯಿಂದಲೂ ಆಟವಾಡಿಕೊಂಡು ಚೆನ್ನಾಗಿಯೇ ಇದ್ದ. ಸ್ವಲ್ಪ ಹೊತ್ತಿಗೆ ಮುಂಚೆ ಹೀಗಾಯಿತು‘ ಎಂದರು.

ನಾನು ಆ ಮಾತುಗಳನ್ನು ಅರಗಿಸಿಕೊಳ್ಳಲಾಗದೆ, ಒಂದೆರಡು ಸಮಾಧಾನದ ನುಡಿಗಳನ್ನಾಡಿ ಫೋನ್ ಕೆಳಗಿಟ್ಟೆ. ಪರೀಕ್ಷೆಗೆಂದು ಪಿತ್ತಜನಕಾಂಗಕ್ಕೆ ಸೂಜಿ ಚುಚ್ಚಿದಾಗ ಅಸುನೀಗಿಬಿಟ್ಟಿದ್ದಾನೆ ಆ ಪೋರ. ಮೂರು ದಿನಗಳ ಹಿಂದಷ್ಟೇ ನಗು ನಗುತ್ತಾ ‘ಅಂಕಲ್ ಬೈ’ ಎಂದು ವಿದಾಯ ಹೇಳಿಹೋದ ಅವನದ್ದು ಅದೇ ಕಡೆಯ ವಿದಾಯವಾಗಬಹುದೆಂದು ಕನಸು ಮನಸಿನಲ್ಲೂ ಊಹಿಸಿರಲಿಲ್ಲ ನಾನು. ಸ್ವಲ್ಪವೂ ಸುಳಿವು ಕೊಡದೆ ದೇಹದಲ್ಲೆಲ್ಲೋ ಅವಿತು ಕುಳಿತಿದ್ದ ‘ಅರ್ಬುದ’ ಎಂಬ ಮಹಾಮಾರಿ ಮೌನವಾಗಿ ತನ್ನ ಕಬಂಧ ಬಾಹು ಚಾಚಿ ಎಳೆಕಂದನ ಜೀವವನ್ನು ಬಲಿ ತೆಗೆದುಕೊಂಡುಬಿಟ್ಟಿತ್ತು. ಮುಂಜಾನೆ ಉದಯಿಸಿ ಸಂಜೆಗೆ ಅಸ್ತಂಗತನಾಗುವ ಸೂರ್ಯನಂತೆ ಅಲ್ಪಾವಧಿಯ ತನ್ನ ಬದುಕಿನ ವ್ಯವಹಾರ ಮುಗಿಸಿ ಕಣ್ಮರೆಯಾಗಿಬಿಟ್ಟಿದ್ದ ಈ ಪುಟ್ಟ ಸೂರ್ಯ.

ಈಗಾಗಲೇ ಒಂದು ವರುಷ ಪೂರೈಸುವ ಹಂತದಲ್ಲಿದೆ. ಅವನ ಮುಖ ಕಣ್ಣೆದುರು ಬಂದಂತಾಗಿ ಮಾತು ಕಿವಿಯಲ್ಲಿ ಗುಂಯ್ ಎಂದಂತಾಗಿ ನಿಡುಸುಯ್ಯುತ್ತಿರುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry