ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಮನೆ ‘ಪಿತಾಮಹ’ ಮನಮೋಹನ ಅತ್ತಾವರ

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಎಪ್ಪತ್ತರದ ದಶಕದ ಒಂದು ಮುಂಜಾನೆ. ತೆಳುವಾದ ಮಂಜಿನ ಹೊದಿಕೆ ಹೊದ್ದು ತಣ್ಣಗೆ ಮಲಗಿತ್ತು ಬೆಂಗಳೂರು ನಗರ. ಮುಂಜಾನೆ ಕೋಳಿ ಕೂಗುವುದಕ್ಕೆ ಮೊದಲೇ ರೈತರು ಭಾರಿ ಸಂಖ್ಯೆಯಲ್ಲಿ ಒಂದು ಕಂಪೆನಿಯ (ಇಂಡೋ– ಅಮೆರಿಕನ್‌ ಹೈಬ್ರೀಡ್‌ ಸೀಡ್ಸ್‌) ಎದುರು ಜಮಾಯಿಸಿದ್ದರು. ಅಲ್ಲಿ ಸೇರಿದ್ದ ರೈತರನ್ನು ನಿಯಂತ್ರಿಸಲು ಸಾಧ್ಯ ಆಗದೇ ಪೊಲೀಸರ ಮಧ್ಯ ಪ್ರವೇಶವೂ ಆಯಿತು. ಲಾಠಿ ಪ್ರಹಾರವೂ ಆಯಿತು. ರೈತರು ಅಲ್ಲಿ ಸೇರಲು ಕಾರಣ, ‘ಹೈಬ್ರೀಡ್‌ ಟೊಮೇಟೊ ಬೀಜ’ ಕೊಡುತ್ತಾರೆ ಎಂಬ ಕಾರಣಕ್ಕೆ. ಅಲ್ಲಿಯವರೆಗೆ ರೈತರಿಗೆ ಹೈಬ್ರೀಡ್‌ ತಳಿಗಳ ಪರಿಚಯ ಇರಲಿಲ್ಲ. ಆ ಕಾಲದಲ್ಲಿ ಭಾರಿ ಜನಪ್ರಿಯತೆ ಗಳಿಸಿತ್ತು. ಬೀಜ ಪಡೆಯಲು ನಿತ್ಯವೂ ರೈತರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ದೇಶದಲ್ಲೇ ಹಣ್ಣು ತರಕಾರಿಗಳ ಹೈಬ್ರೀಡ್‌ ಬೀಜಗಳ ಬಳಕೆ ಮೊದಲ ಆರಂಭಗೊಂಡಿದ್ದು ಬೆಂಗಳೂರಿನಲ್ಲಿ. ಈ ಬೀಜವನ್ನು ತಯಾರಿಸಿ ರೈತರ ಕೈಗೆ ಸೇರುವಂತೆ ಮಾಡಿದವರು ಡಾ. ಮನಮೋಹನ ಅತ್ತಾವರ. ಹಣ್ಣು– ತರಕಾರಿಗಳು ಮತ್ತು ಆಲಂಕಾರಿಕ ಹೂವಿನ ಗಿಡಗಳಿಗೆ ವಾಣಿಜ್ಯಿಕ ಮೌಲ್ಯವನ್ನು ಪರಿಚಯಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ‘ತೋಟಗಾರಿಕೆಯಲ್ಲಿ ರೈತರು ಈಗ ಕೈತುಂಬ ಹಣ ಮಾಡಿಕೊಳ್ಳಲು ಸಾಧ್ಯವಾಗಿದ್ದರೆ, ಅದಕ್ಕಾಗಿ ಯಾರನ್ನಾದರೂ ಸ್ಮರಿಸಿ ‘ಪಿತಾಮಹ’ ಎಂದು ಕರೆಯಬಹುದಾದರೆ, ಅದು ಮನಮೋಹನ ಅತ್ತಾವರ ಅವರನ್ನು’ ಎಂದು ಸ್ಮರಿಸುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ.

ದಕ್ಷಿಣಕನ್ನಡದ ಮನಮೋಹನ ಅತ್ತಾವರ ಬಾಲ್ಯದಿಂದಲೇ ಕೃಷಿಯ ಬಗ್ಗೆ ಒಲವು ಹೊಂದಿದ್ದರು. ಅವರು ಜನಿಸಿದ್ದು 1932ರಲ್ಲಿ. 1961ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪಡೆದು ಅಮೆರಿಕಕ್ಕೆ ತೆರಳಿದರು. ಅಮೆರಿಕಾದಲ್ಲೂ ಆಗ ಕೃಷಿ, ತೋಟಗಾರಿಕೆಯಲ್ಲಿ ಹೈಬ್ರೀಡ್‌ ಬೀಜ ಬಳಕೆ ಬಗ್ಗೆ ಸಾಕಷ್ಟು ಪ್ರಯೋಗ ನಡೆಯುತ್ತಿತ್ತು. ಈ ವಿಷಯಗಳ ಕುರಿತು ಅಧ್ಯಯನ ಮಾಡಲು ಅಮೆರಿಕಕ್ಕೆ ತೆರಳಿದ ಹೊಸ ತಲೆಮಾರಿನ ಭಾರತೀಯ ಕೃಷಿ ವಿಜ್ಞಾನಿಗಳ ಪೈಕಿ ಮನಮೋಹನ ಒಬ್ಬರಾಗಿದ್ದರು. ವಿಶೇಷವಾಗಿ ತಳಿ ಸಂವರ್ಧನೆ ಮತ್ತು ಸಸ್ಯಗಳ ವಂಶವಾಹಿಗಳ ಕುರಿತು ಮೊಂಟಾನ ರಾಜ್ಯ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪಡೆದರು. ಅಲ್ಲಿಂದ 1965ರಲ್ಲಿ ಭಾರತಕ್ಕೆ ಹಿಂತಿರುಗಿದರು. ಹಿಂದಿರುಗುವಾಗ ಬೀಜೋದ್ಯಮದ ಕನಸು ಹೊತ್ತು, ಅಲ್ಲಿಂದ ಹೈಬ್ರೀಡ್‌ ತಂತ್ರಜ್ಞಾನವನ್ನು ತಂದರು. ಬೆಂಗಳೂರಿನಲ್ಲಿ ಎನ್‌.ಕೆ.ಭಟ್‌ ಜತೆ ಸೇರಿ ‘ಇಂಡೋ– ಅಮೆರಿಕನ್‌ ಹೈಬ್ರೀಡ್‌ ಸೀಡ್ಸ್‌ ಕಂಪೆನಿ’ಯನ್ನು ಆರಂಭಿಸಿದರು.

ಅಮೆರಿಕದಲ್ಲಿ ಆಗ ಆಲಂಕಾರಿಕ ಸಸ್ಯಗಳು, ಹೂವು ಮತ್ತು ಆರ್ಕಿಡ್‌ಗಳಿಗೆ ಭಾರಿ ಬೇಡಿಕೆ ಇತ್ತು. ಅಲ್ಲಿ ಅಂತಹದ್ದೊಂದು ಕಂಪೆನಿ ಸ್ಥಾಪಿಸಿ ವ್ಯವಹಾರ ನಡೆಸುವುದು ಸುಲಭವಾಗಿರಲಿಲ್ಲ. ಅದೊಂದು ದುಬಾರಿ ಸಾಹಸವೇ ಆಗುತ್ತಿತ್ತು. ಭಾರತದಲ್ಲಿ  ಹೂವಿನ ಗಿಡಗಳ ಬೀಜವನ್ನು ತಯಾರಿಸಿ, ರಫ್ತು ಮಾಡುವ ಜವಾಬ್ದಾರಿಯನ್ನು ಅಮೆರಿಕದ ‘ಬಾಲ್‌ ಸೀಡ್ಸ್‌’ ಕಂಪೆನಿ ನೀಡಿತ್ತು. ಭಾರತದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಬೀಜ ಉತ್ಪಾದನೆ ಮಾಡಲು ಸಾಧ್ಯವಿತ್ತು. ಅಲ್ಲಿನ ಕಾರ್ಮಿಕರು ಒಂದು ಗಂಟೆಗೆ ಪಡೆಯುತ್ತಿದ್ದ ವೇತನವನ್ನು, ಭಾರತದಲ್ಲಿ ಒಂದು ತಿಂಗಳಿಗೆ ಕೊಟ್ಟು ಕೆಲಸ ಮಾಡಿಸಬಹುದಿತ್ತು. ಮೊದಲಿಗೆ ಅವರು ತಯಾರಿಸಿದ ಹೈಬ್ರೀಡ್‌ ಹೂವಿನ ಬೀಜವೆಂದರೆ ಆಲಂಕಾರಿಕ ಉದ್ದೇಶದ ಬಣ್ಣ, ಬಣ್ಣದ ‘ಪೆಟೊನಿಯಾ’.

ಇದೇ ವೇಳೆ ಭಾರತದಲ್ಲಿ ಕೃಷಿ ಕ್ಷೇತ್ರ ಕಳೆಗುಂದಿತ್ತು. ಏನೇ ಮಾಡಿದರೂ ಇಳುವರಿ ಹೆಚ್ಚುತ್ತಿರಲಿಲ್ಲ. ಆದಾಯವೂ ಅಷ್ಟಕಷ್ಟೆ. ಹೈಬ್ರೀಡ್‌ ತರಕಾರಿಗಳನ್ನು ಪರಿಚಯಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಹೈಬ್ರೀಡ್‌ ಟೊಮೇಟೊ (ಕರ್ನಾಟಕ) ಮತ್ತು ದೊಣ್ಣೆ ಮೆಣಸು ಅಥವಾ ಕ್ಯಾಪ್ಸಿಕಮ್ (ಭಾರತ್‌) ಬೀಜಗಳನ್ನು 1973ರಲ್ಲಿ ಅಭಿವೃದ್ಧಿಪಡಿಸಿದರು. ವರ್ಷವಿಡೀ ಬೀಜಗಳ ಉತ್ಪಾದನೆಗಾಗಿ ದೇಶದಲ್ಲೇ ಮೊದಲ ಬಾರಿಗೆ ‘ಹಸಿರು ಮನೆ’ಯನ್ನು ಆರಂಭಿಸಿದರು. ‘ಹಸಿರು ಮನೆ ನಿರ್ಮಿಸಿ ಪ್ರಯೋಗಗಳನ್ನು ನಡೆಸಲು ಡಾ. ಎಂ.ಎಚ್‌.ಮರಿಗೌಡ ಲಾಲ್‌ಬಾಗ್‌ನಲ್ಲಿ ಜಾಗ ನೀಡಿದ್ದರು. ಹೀಗಾಗಿ ಅತ್ತಾವರ ಅವರನ್ನು ಭಾರತದ ‘ಹಸಿರುಮನೆ ಪಿತಾಮಹ’ ಎಂದೇ ಕರೆಯಲಾಗುತ್ತದೆ’ ಎಂದು ಸ್ಮರಿಸುತ್ತಾರೆ ವಿಜ್ಞಾನಿ ಡಾ.ಜಯಪ್ರಸಾದ್‌.  ಆಗ ದೇಶದ ಹಲವು ಕೃಷಿ ವಿಶ್ವವಿದ್ಯಾಲಯಗಳ ಪ್ರಯೋಗಾಲಯಗಳಲ್ಲಿ ಬತ್ತ, ರಾಗಿ, ಸೂರ್ಯಕಾಂತಿಗಳ ಹೈಬ್ರೀಡ್‌ ತಳಿಯನ್ನು ಮಾತ್ರ ಅಭಿವೃದ್ಧಿಪಡಿಸುವ ಕಾರ್ಯ ನಡೆದಿತ್ತು.  ಹೈಬ್ರೀಡ್‌ ಬೀಜಗಳು ತರಕಾರಿ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು. ಹೈಬ್ರೀಡ್‌ ಬೀಜ ಬಿತ್ತಿ ಬೆಳೆದ ಬೆಳೆ ಮತ್ತು ಅದರಿಂದ ಬಂದ ಇಳುವರಿ ಪ್ರಮಾಣ ಕಂಡು ರೈತರು ಮತ್ತು  ಕೃಷಿ ತಜ್ಞರು ಚಕಿತರಾಗಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಇಂಡೋ – ಅಮೆರಿಕನ್‌ ಹೈಬ್ರೀಡ್‌ ಸೀಡ್‌ ಭಾರತ ಮಾತ್ರವಲ್ಲ, ವಿದೇಶಗಳಲ್ಲೂ ಜನಪ್ರಿಯತೆ ಪಡೆಯಿತು.

ವಿಶ್ವದ 10 ಪ್ರಮುಖ ಬೀಜ ಕಂಪೆನಿಗಳ ಪಟ್ಟಿಗೆ ಇದೂ ಸೇರಿತು. ಬೆಂಡೆಕಾಯಿ, ಬದನೆ, ಪಡುವಲ, ಸೋರೆ, ಕಲ್ಲಂಗಡಿ, ಕರಬೂಜ, ಈರುಳ್ಳಿಯ ಹೈಬ್ರೀಡ್‌ ತಳಿಗಳನ್ನು ರೈತರಿಗೆ ಪರಿಚಯಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಮೊದಲ ಸುಗಂಧಭರಿತ ಅಕ್ಕಿ (ಖುಷ್ಬೂ), ಅಧಿಕ ಇಳುವರಿ ನೀಡುವ ಹೈಬ್ರೀಡ್‌ ಅಕ್ಕಿ (ಸಾಮ್ರಾಟ್‌), ಬಿ.ಟಿ.ಹತ್ತಿ, ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳವನ್ನು ಮನಮೋಹನ ಜನಪ್ರಿಯಗೊಳಿಸಿದರು.

ತೋಟಗಾರಿಕೆಗೆ ಅಗ್ರ ಮನ್ನಣೆ ಸಿಗಲು, ಅದೊಂದು ವಾಣಿಜ್ಯ ಮಹತ್ವದ ಕ್ಷೇತ್ರವಾಗಿ ರೂಪುಗೊಳ್ಳಲು ಮನಮೋಹನ ಅವರ ದೂರದೃಷ್ಟಿಯೇ ಕಾರಣ ಎಂಬುದು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಅವರ ಜತೆ ಒಡನಾಡಿರುವ ಹಲವು ತಜ್ಞರ ಖಚಿತ ಅಭಿಪ್ರಾಯ. 60 ಮತ್ತು 70ರ ದಶಕದಲ್ಲಿ ತೋಟಗಾರಿಕಾ ಉದ್ಯಮ ಎಂದರೆ, ಲಾಲ್‌ಬಾಗ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಸಸಿಗಳನ್ನು ಮಾರಾಟ ಮಾಡುತ್ತಿದ್ದದ್ದು ಮಾತ್ರ. ಅದನ್ನು ಲಾಭದಾಯಕ ವಾಣಿಜ್ಯ ಉದ್ಯಮವಾಗಿ ಬೆಳೆಸಿದ್ದು ಮನಮೋಹನ ಅವರ ಹಿರಿಮೆ.‌ ಈ ಚಟುವಟಿಕೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಾನಾ ದೇಶಗಳಲ್ಲೂ ಈ ಚಟುವಟಿಕೆ ಆರಂಭವಾಯಿತು. ಬೆಂಗಳೂರಿನಿಂದ ಅಮೆರಿಕ, ಮಧ್ಯ ಪ್ರಾಚ್ಯದ ದೇಶಗಳಿಗೂ ಹೂವಿನ ಸಸ್ಯ, ಆಲಂಕಾರಿಕ ಸಸ್ಯಗಳು ಮತ್ತು ಅದರ ಬೀಜಗಳ ರಫ್ತು ಆರಂಭವಾಯಿತು.

ಅಂಗಾಂಶ ಕೃಷಿ, ಜೆನಿಟಿಕ್‌ ಎಂಜಿನಿಯರಿಂಗ್‌ ಪ್ರಯೋಗಾಲಯವನ್ನೂ ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು. ಇವರು ಸ್ಥಾಪಿಸಿದ ಬೀಜ ಪರೀಕ್ಷಾ ಪ್ರಯೋಗಾಲಯ ಏಷ್ಯಾದಲ್ಲೇ ಖಾಸಗಿ ವಲಯದ  ಅದ್ವಿತೀಯ ಪ್ರಯೋಗಾಲಯ ಎನಿಸಿದೆ. ಬೆಂಗಳೂರಿನಲ್ಲಿ ಉದ್ಯಾನ ಸೌಂದರ್ಯವೃದ್ಧಿಗಾಗಿ ಬಿಬಿಎಂಪಿ ಸ್ಥಾಪಿಸಿದ್ದ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ‘ಲ್ಯಾಬ್ ಟು ಲ್ಯಾಂಡ್‌’ ಪರಿಕಲ್ಪನೆಯನ್ನು ಅಕ್ಷರಶಃ ಪಾಲಿಸಿದವರು. ಕೃಷಿಯ ಬಗ್ಗೆ ದೊಡ್ಡ ಭಾಷಣಗಳನ್ನು ಮಾಡಲಿಲ್ಲ. ತಾವು ಕಲಿತಿದ್ದನ್ನು, ಪ್ರಯೋಗಾಲಯದಲ್ಲಿ ಪ್ರಯೋಗ ಮಾಡಿದರು. ಭೂಮಿಯಲ್ಲಿ ಅದರ ಸಾಕ್ಷಾತ್ಕಾರ ಪಡೆದರು. ಮಾತು ಕಡಿಮೆ– ಕೆಲಸ ಜಾಸ್ತಿ ಮಾತಿನಲ್ಲಿ ನಂಬಿಕೆ ಇಟ್ಟು  ಕೃಷಿ– ತೋಟಗಾರಿಕೆ ಕ್ಷೇತ್ರದಲ್ಲಿ ಮೌನ ಕಾಂತ್ರಿಯನ್ನೇ ಸೃಷ್ಟಿಸಿದರು. ಇಂದು ಮಾರುಕಟ್ಟೆಯಲ್ಲಿ ಒಂದು ಸುತ್ತು ಹೋದರೆ ಕಾಣಸಿಗುವ ಚೆಂದದ, ದೊಡ್ಡ ಗಾತ್ರದ ಹಣ್ಣು– ತರಕಾರಿಗಳು, ಉದ್ಯಾನಗಳಲ್ಲಿ ಕಂಡು ಬರುವ ಹೂವಿನ ಗಿಡಗಳು, ಆಲಂಕಾರಿಕ ಸಸ್ಯಗಳನ್ನು ಕಂಡಾಗ ಮನಮೋಹನ ಅವರ ನೆನಪು ಆಗುತ್ತದೆ. ಕೃಷಿ ಕ್ಷೇತ್ರದಲ್ಲಿ ತಪಸ್ಸಿನ ಜೀವನ ನಡೆಸಿದರು ಎಂದು ಕೃಷಿ ವಿಜ್ಞಾನಿ ಜಯಪ್ರಸಾದ್‌ ನೆನಪಿಸಿಕೊಳ್ಳುತ್ತಾರೆ. ಕೆಲ ಸಮಯದ ಹಿಂದೆ ಅವರ ಪತ್ನಿ ತೀರಿಕೊಂಡರು, ಇದೇ ಸಂದರ್ಭದಲ್ಲಿ ಕಂಪೆನಿಯೂ ಹೋಳಾಯಿತು. ಈ ವಿದ್ಯಮಾನಗಳಿಂದ ನೊಂದು ಕುಸಿದು ಹೋಗಿದ್ದರು. ಮನಮೋಹನ ಅವರ ತಂದೆ ಶಾಲಾ ಇನ್ಸ್‌ಪೆಕ್ಟರ್‌. ಸಹಜವಾಗಿ ಜೀವನದಲ್ಲಿ ಶಿಸ್ತು, ಕಠಿಣ ಪರಿಶ್ರಮ ಮೈಗೂಡಿಸಿಕೊಂಡಿದ್ದರು. ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿ ಇವರನ್ನು ಅರಸಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT