6
ಆಕ್ಷೇಪಾರ್ಹ ಸಂಭಾಷಣೆ ಆರೋಪ

‘ಅಂಜನಿಪುತ್ರ’ ಪ್ರದರ್ಶನಕ್ಕೆ ತಡೆ

Published:
Updated:
‘ಅಂಜನಿಪುತ್ರ’ ಪ್ರದರ್ಶನಕ್ಕೆ ತಡೆ

ಬೆಂಗಳೂರು: ನಟ ಪುನೀತ್ ರಾಜ್‌ ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಲನಚಿತ್ರದಲ್ಲಿ ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ವಕೀಲರು ಶನಿವಾರ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನಗರದ 40ನೇ ಸಿಟಿ ಸಿವಿಲ್ ನ್ಯಾಯಾಲಯವು ಜ.2ರ ವರೆಗೆ ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿದೆ.

ನಟ ರವಿಶಂಕರ್ ಅವರು, ಅವಹೇಳನಕಾರಿಯಾಗಿ ಮತ್ತು ಅಶ್ಲೀಲವಾಗಿ ವಕೀಲ ಪಾತ್ರಧಾರಿಗೆ ಹೇಳಿರುವ ಸಂಭಾಷಣೆ ಸಿನಿಮಾದಲ್ಲಿದೆ. ಈ ಸಂಭಾಷಣೆಯಿಂದ ವಕೀಲ ವೃತ್ತಿಗೆ ಅವಮಾನ ಮಾಡಲಾಗಿದೆ. ಹೀಗಾಗಿ, ಅದನ್ನು ಚಲನಚಿತ್ರದಿಂದ ತೆಗೆದುಹಾಕಬೇಕು. ಅಲ್ಲಿಯ ವರೆಗೆ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಕೋರಿ ವಕೀಲರಾದ ನಾರಾಯಣಸ್ವಾಮಿ, ವಿಜಯಕುಮಾರ್, ವಿನೋದ್‌ಕುಮಾರ್, ನಾಗೇಶ್‌, ನವೀನ್‌ಕುಮಾರ್ ಅವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.

‘ವಕೀಲರ ಹಾಗೂ ಪೊಲೀಸರ ನಡುವಿನ ಸಂಬಂಧ ಬಿರುಕು ಬಿಟ್ಟಿದೆ. ಈ ಸಂಭಾಷಣೆಯಿಂದ ನಮ್ಮ ಅವರ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೋಮಲಾ ಅವರು, ಮುಂದಿನ ವಿಚಾರಣೆವರೆಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದ್ದು, ನಿರ್ಮಾಪಕ ಎಂ.ಎನ್‌.ಕುಮಾರ್‌ ಹಾಗೂ ನಿರ್ದೇಶಕ ಎ.ಹರ್ಷ ಅವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry