4
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಕ್ರಿಸ್‌ಮಸ್‌ ಸಡಗರ; ಮನದಲ್ಲಿ ಸಂಭ್ರಮ, ಮನೆಗಳಲ್ಲಿ ಅಲಂಕಾರ

Published:
Updated:
ಕ್ರಿಸ್‌ಮಸ್‌ ಸಡಗರ; ಮನದಲ್ಲಿ ಸಂಭ್ರಮ, ಮನೆಗಳಲ್ಲಿ ಅಲಂಕಾರ

ತುಮಕೂರು: ನಗರದಲ್ಲಿ ಕ್ರಿಸ್‌ಮಸ್‌ ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆದಿದ್ದು, ನಗರದ ಪ್ರಮುಖ ಚರ್ಚ್‌ಗಳು ದೀಪಗಳಿಂದ ಅಲಂಕಾರಗೊಂಡಿವೆ. ಗೊದಲಿ ಮತ್ತು ಕ್ರಿಸ್‌ಮಸ್‌ ಟ್ರೀಗಳನ್ನು ಸಿಂಗಾರ ಮಾಡಿರುವ ಮನೆಗಳು ಕಂಗೊಳಿಸುತ್ತಿವೆ.

ಕ್ರಿಸ್‌ಮಸ್‌ ಎಂದರೆ ಕ್ರಿಸ್ತನ ಆರಾಧನೆ ಎಂದರ್ಥ.  ಇದು ಕ್ರಿಶ್ಚಿಯನ್ನರ ಪ್ರಮುಖ ಹಬ್ಬ. ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನು ಕೇಳುವಂತವನಾಗಬೇಕು ಎನ್ನುವುದೇ ಈ ಹಬ್ಬದ ಧ್ಯೇಯ. ಕ್ರಿಸ್‌ಮಸ್‌ ಎಂದ ತಕ್ಷಣ ಕ್ರಿಸ್‌ಮಸ್‌ ಟ್ರೀ, ಕೇಕ್‌, ಸಾಂತಾಕ್ಲಾಸ್‌, ಶುಭ ಸಂಕೇತದ ಘಂಟೆ, ಕ್ರಿಶ್ಚಿಯನ್ನರ ಮನೆಗಳಲ್ಲಿ ಸಿಂಗರಿಸುವ ಕ್ರಿಬ್‌ಗಳೇ ನೆನಪಿಗೆ ಬರುತ್ತವೆ.

ಮನೆ ಮನೆಗಳಲ್ಲಿ ಕ್ರಿಬ್‌ ಅಲಂಕಾರ: ದೇವರ ಪುತ್ರನಾದ ಏಸು ತನ್ನ ದರ್ಶನ ಎಲ್ಲರಿಗೂ ಸಿಗಲಿ ಎಂದು ಗೊದಲಿಯಲ್ಲಿ (ಕೊಟ್ಟಿಗೆ) ಜನಿಸುತ್ತಾನೆ. ಇದನ್ನು ನೆನಪಿಸಿಕೊಳ್ಳುವ ಸಲುವಾಗಿ ಕ್ರಿಶ್ಚಿಯನ್ನರು ತಮ್ಮ ಮನೆಗಳಲ್ಲಿ ಗೊದಲಿಯ ಮಾದರಿಯನ್ನು ನಿರ್ಮಾಣ ಮಾಡಿ, ಅದರಲ್ಲಿ ಚಿಕ್ಕ ಚಿಕ್ಕ ಕುರಿಗಳ ಆಟಿಕೆಗಳನ್ನಿಟ್ಟು, ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡುತ್ತಾರೆ.

ಕ್ರಿಸ್ ಮಸ್ ಆಚರಣೆಯ ಮುಂಚೆ ಕ್ಯಾರೋಲ್‌ ಮಾಡಲಾಗುತ್ತದೆ. ಕ್ರಿಸ್‌ಮಸ್‌ಗಿಂತ ಹಲವು ದಿನಗಳ ಮೊದಲೇ ಆರಂಭವಾಗುವ ಈ ಒಂದು ಸಂಪ್ರದಾಯದಲ್ಲಿ ಯುವಕರ ಗುಂಪುಗಳು ತಮ್ಮ ಪ್ರದೇಶದ ಮನೆ ಮನೆಗೂ ಕ್ಯಾರೋಲ್‌ಗಳನ್ನು (ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್‌ಮಸ್ ಹಾಡುಗಳು) ಹಾಡುತ್ತಾ ತೆರಳಿ ಈ ಸಂಭ್ರಮದ ಹಬ್ಬದ ಸೌಹಾರ್ದತೆಯ ಸಂದೇಶವನ್ನು ಸಾರುತ್ತಾರೆ.

ಕ್ರಿಸ್‌ಮಸ್‌ ಸಂದರ್ಭದಲ್ಲಿ ಮನೆಗಳಲ್ಲಿ ನಕ್ಷತ್ರಗಳನ್ನು ಯಾಕೆ ತೂಗಿ ಹಾಕುತ್ತಾರೆ ಎನ್ನುವುದಕ್ಕೂ ಒಂದು ಕಥೆಯಿದೆ. ಕ್ರಿಸ್ತನ ಜನನವಾದಾಗ ಕ್ರಿಸ್ತನನ್ನು ಕಂಡು ಆರಾಧಿಸಲು ದೂರ ದೇಶಗಳಿಂದ ಮೂರು ಪಂಡಿತರು ಬರುತ್ತಾರೆ. ಆದರೆ ಅವರಿಗೆ ಕ್ರಿಸ್ತನ ಜನನದ ಸ್ಥಳ ತಿಳಿದಿರುವುದಿಲ್ಲ. ಆಗ ಬಾನಿನಲ್ಲಿ ಉದಯಿಸಿದ ನಕ್ಷತ್ರವು ಅವರ ಮುಂದೆ ಮುಂದೆ ಸಾಗಿ ಕ್ರಿಸ್ತನ ಜನನದ ಸ್ಥಳವನ್ನು ತೋರಿಸುತ್ತದೆ. ಅದರ ಸಂಕೇತವಾಗಿ ಕ್ರಿಸ್‌ಮಸ್‌ ಹಬ್ಬದಂದು ಎಲ್ಲರ ಮನೆಗಳಲ್ಲಿ ನಕ್ಷತ್ರಗಳನ್ನು ತೂಗಿಹಾಕುತ್ತಾರೆ. ಪ್ರತಿ ಮನೆಯಲ್ಲಿಯೂ ಶಾಂತಿ ಪ್ರೀತಿಯ ಕ್ರಿಸ್ತ ಜನಿಸಿದ್ದಾನೆ ಎನ್ನುವುದು ಇದರ ಅರ್ಥ ಎಂದು ವಿವರಿಸುತ್ತಾರೆ ಫಾದರ್‌ ಸುಧೀರ್‌.

ಕ್ರಿಸ್‌ಮಸ್‌ ಹಬ್ಬದ ಎಲ್ಲಾ ಚರ್ಚ್‌ಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪ್ರಾರ್ಥನೆ ನಡೆಯಲಿದ್ದು, ಏಸುವನ್ನು ನೆನೆದು ಜನರು ಶಾಂತಿ ಮತ್ತು ಸಮಾಧಾನ ಪಡೆಯಲಿ ಎಂದು ಸುಧೀರ್‌ ಹಾರೈಸುತ್ತಾರೆ.

ಮಕ್ಕಳಿಗೆ ಬಲು ಇಷ್ಟ ಈ ಚಾಕೊಲೇಟ್‌ ತಾತ

ಕ್ರಿಸ್‌ಮಸ್‌ ಹಬ್ಬದ ಮತ್ತೊಂದು ಬಹುಮುಖ್ಯ ವಿಶೇಷತೆ ಎಂದರೆ ಸಂತಕ್ಲಾಸ್‌. ಕ್ರಿಸ್‌ಮಸ್‌ ಹಬ್ಬದಂದು ವಿಶೇಷ ಉಡುಪಿನೊಂದಿಗೆ ವಿಶೇಷ ಉಡುಗೊರೆ ಮತ್ತು ಸಿಹಿತಿನಿಸುಗಳೊಡನೆ ಮಕ್ಕಳನ್ನು ಸಂತಸ ಪಡಿಸುವ ಈ ತಾತನನ್ನು ಕಂಡರೆ ಮಕ್ಕಳಿಗೆ ಬಲು ಇಷ್ಟ.

ನೂರಾರು ವರ್ಷಗಳ ಹಿಂದೆ ಈಗಿನ ಟರ್ಕಿಯಲ್ಲಿ ನೂರಾರು ಸಂತ ನಿಕೋಲಾಸ್ ಎಂಬ ಪಾದ್ರಿಯೊಬ್ಬರಿದ್ದರು. ಸರಳ ವ್ಯಕ್ತಿತ್ವದ ಇವರು ಬಡವರ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ಹಳ್ಳಿಗಳ ಮಕ್ಕಳಿಗೆ ಉಡುಗೊರೆ ಹಾಗೂ ಚಾಕೊಲೇಟ್‌ಗಳನ್ನು ಹಂಚುತ್ತಿದ್ದರು. ಅದರಲ್ಲಿಯೂ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಅವರು ತಮ್ಮ ಕಾರ‍್ಯಗಳಿಂದ ಎಶ್ಟು ಜನಪ್ರಿಯರಾಗಿದ್ದರೆಂದರೆ ಇವರನ್ನು ಮಕ್ಕಳು ಪಾದರ್ ನಿಕೊಲಾಸ್ ಎನ್ನುವ ಬದಲು ಸಂತಕ್ಲಾಸ್‌ ಎನ್ನುತ್ತಿದ್ದರು ಎನ್ನುತ್ತಾರೆ ಸುಧೀರ್‌.

ವೆಸ್ಲಿ ಚರ್ಚ್‌ನಲ್ಲಿ ಮನೆ ಮಾಡಿದ ಸಡಗರ

ನಗರದ ಅತ್ಯಂತ ಹಳೆಯ ಚರ್ಚ್‌ ಆಗಿರುವ ನಗರದ ಚರ್ಚ್‌ ವೃತ್ತದಲ್ಲಿರುವ ವೆಸ್ಲಿ ಚರ್ಚ್‌ನಲ್ಲಿ ಸಡಗರದ ವಾತಾವರಣ ಮನೆ ಮಾಡಿದೆ. ‘ಸುಮಾರು 170 ವರ್ಷಗಳ ಇತಿಹಾಸವಿರುವ ಈ ಚರ್ಚ್‌ ಜಾನ್‌ ವೆಸ್ಲಿ ಎನ್ನುವವರಿಂದ ಸ್ಥಾಪಿಸಲ್ಪಟ್ಟಿತು. ‘ಚರ್ಚ್‌ ಆಫ್‌ ಸೌಥ್‌ ಇಂಡಿಯಾ’ದ ಒಂದು ಸಭೆಯಾಗಿರುವ ಈ ಚರ್ಚ್‌ ಸ್ಥಾಪನೆಗೊಂಡ ನಂತರ ಬಡವರ ಮತ್ತು ನಿರಾಶ್ರಿತರ ಸೇವೆಯಲ್ಲಿ ತೊಡಗಿಕೊಂಡಿದೆ.

ಆಂಧ್ರ ಪ್ರದೇಶದಿಂದ ವಲಸೆ ಬಂದ ಜನರು ಮಕ್ಕಳನ್ನು ನಗರದಲ್ಲಿ ಬಿಟ್ಟು ಹೋಗುತ್ತಿದ್ದಾಗ, ಆ ಮಕ್ಕಳನ್ನು ಸಾಕುವ ಸಲುವಾಗಿ ಗಾಯತ್ರಿ ಚಿತ್ರಮಂದಿರದ ಹಿಂದೆ ಇರುವ ಅನಾಥಾಶ್ರಮವನ್ನು ಸ್ಥಾಪಿಸಲಾಯಿತು. ನಗರದಲ್ಲಿ ಪ್ರಾಟೆಸ್ಟೆಂಟರ ಅನೇಕ ಸಭೆಗಳಿದ್ದು, ಇದು ಪ್ರಮುಖ ಸಭೆಯಾಗಿದೆ’ ಎಂದು ಚರ್ಚಿನ ಇತಿಹಾಸವನ್ನು ಹೇಳುತ್ತಾರೆ ಚರ್ಚಿನ ಫಾದರ್‌ ರೆವಿರೆಂಡ್‌ ಸುಧೀರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry