7

ಅಭಿವೃದ್ಧಿ ನಿರೀಕ್ಷೆಯಲ್ಲಿ ಭೋಗಣ್ಣ ಜನ್ಮ ಸ್ಥಳ

Published:
Updated:
ಅಭಿವೃದ್ಧಿ ನಿರೀಕ್ಷೆಯಲ್ಲಿ ಭೋಗಣ್ಣ ಜನ್ಮ ಸ್ಥಳ

ಕೆಂಭಾವಿ: ಸುರಪುರ ತಾಲ್ಲೂಕಿನ ಕೆಂಭಾವಿಯ ಶರಣ ಭೋಗಣ್ಣ ತನ್ನ ಶಕ್ತಿಯಿಂದ ಅಸ್ಪೃಶ್ಯರ ಉದ್ಧಾರ, ಪರಂಪರಾಗತವಾಗಿ ಬಂದಿದ್ದ ಪ್ರಭುತ್ವ ವ್ಯವಸ್ಥೆಗೆ ಪ್ರತಿಭಟನೆ ತೋರಿದ್ದರು. ಅನುಭವ ಗೋಷ್ಠಿ, ದಾಸೋಹ ಕೈಗೊಂಡ ಮಹಾನ್‌ ಶರಣರು. ಆದರೆ, ಆತನ ಜನ್ಮ ಸ್ಥಳ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಭೋಗಣ್ಣನು ಶೈವ ಬ್ರಾಹ್ಮಣ ಮನೆ ತನದ ಶಾಂಭವಿಭಟ್ಟ- ಶಾಂಭವಿ ದಂಪತಿ ಮಗನಾಗಿ ಕ್ರಿ.ಶ 1120 ರಿಂದ 1165 ಅವಧಿಯಲ್ಲಿ ಬಾಳಿ ಬದುಕಿದರು. ಸಗರನಾಡನ್ನು ಆಳಿದ ಮಹಮಂಡೇಶ್ವರ 3ನೇ ಚಂದಿಮರಸ (ಚಂದರಸ) ಕಾಲದಲ್ಲಿದ್ದವನು. ಭೋಗಣ್ಣನು ಬ್ರಾಹ್ಮಣನಾಗಿದ್ದರಿಂದ ವಿದ್ಯೆ ಕಲಿಯಲು ಸಾಕಷ್ಟು ಅವಕಾಶಗಳಿ ದ್ದವು. ಇದರಿಂದ ವೇದಶಾಸ್ತ್ರ ಪಾರಂಗತ, ಘನ ವಿದ್ವಾಂಸನಾದ.

ಅಂದಿನ ಕಾಲದಲ್ಲಿ ಶೂದ್ರರ ಪರಿಸ್ಥಿತಿ ಚಿಂತಾಜನಕವಾಗಿತ್ತು. ಅದನ್ನು ಕಂಡ ಭೋಗಣ್ಣನು ಅವರ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ, ಪರಿಹಾರೋಪಾಯಗಳನ್ನು ಸೂಚಿಸ ಬೇಕೆಂಬ, ಇಂತಹ ಸಮಸ್ಯೆಗಳಿಂದ ತನ್ನ ಪರಿಸರವನ್ನು ಮುಕ್ತಗೊಳಿಸಬೇಕೆಂಬ ಪಣತೊಟ್ಟನು. ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಸಮಾನತೆ ಯನ್ನು ತರಲು ಪ್ರಯತ್ನಿಸಿದ ಶರಣ.

‘ಇಂತಹ ಶರಣರ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ದೇವಸ್ಥಾನ ಹಾಗೂ ಶಿಲಾಶಾಸನಗಳು ಹಾಳುಬಿದ್ದಿವೆ’ ಎಂದು ಜನ ದೂರುತ್ತಾರೆ.

ಪತ್ತೆಯಾದ ಶಿಲಾಶಾಸನಗಳು: ‘ಕೆಲ ವರ್ಷಗಳ ಹಿಂದೆ ಪಟ್ಟಣದ ಲಿಂಗನಗೌಡ ಮಾಲಿ ಪಾಟೀಲ ಅವರ ಬಾವಿಯಲ್ಲಿ ಪುರಾತನ ವಿಗ್ರಹ ಪತ್ತೆಯಾಗಿತ್ತು. ಈ ದೊಡ್ಡಗಾತ್ರದ ಶಿಲೆ ಮೂರು ದೇವತೆಗಳ ಒಳಗೊಂಡಿದೆ. ಕೆಂಭಾವಿಯು ಚಾಲುಕ್ಯರ ಕಾಲದಲ್ಲಿ ಸುಪ್ರಸಿದ್ಧ ಅಗ್ರಹಾರವಾಗಿತ್ತು ಎಂದು ಶಾಸನಗಳಿಂದ ತಿಳಿದು ಬರುತ್ತದೆ. ಅಲ್ಲದೆ, ಚಂದಿಮರಸನೆಂಬ ರಾಜ ಇಲ್ಲಿ ಆಡಳಿತ ನಡೆಸಿದ ಬಗ್ಗೆ ಕುರುಹುಗಳು ದೊರೆತಿವೆ. ಇತಿಹಾಸವುಳ್ಳ ಕಲೆ, ಶಾಸನ ಗಳ ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ’ ಎಂದು ಸುಮಿತ್ರಪ್ಪ ಅಂಗಡಿ ಹೇಳುತ್ತಾರೆ.

‘ಅದೇ ತರಹ ಭೋಗೇಶ್ವರ ದೇವಸ್ಥಾನದಲ್ಲಿ ತೀರ್ಥದ ಹೂಳೆತ್ತುವಾಗ ಆರು ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿದೆ. ಅಲ್ಲದೆ, ಈ ದೇವಸ್ಥಾನದ ಕೆಳಗೆ ಇನ್ನೂ ದೇವಾಲಯಗಳಿವೆ ಎಂದು ಇತಿಹಾಸ ಸಾರುತ್ತದೆ. ಹೀಗಿದ್ದರೂ ಕೂಡಾ ಪ್ರವಾಸೋದ್ಯಮ ಇಲಾಖೆ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಅವರು ತಿಳಿಸುತ್ತಾರೆ.

‘ಪುರಾತನ ದೇವಾಲಯವೆಂದೇ ಹೆಸರಾಗಿರುವ ರೇವಣಸಿದ್ದೇಶ್ವರ ದೇವಸ್ಥನವೂ ಇಲ್ಲಿದ್ದು, ಇತಿಹಾಸವನ್ನು ಎತ್ತಿ ತೋರಿಸುತ್ತದೆ. ಈ ಪ್ರದೇಶದಲ್ಲಿ ಇನ್ನೂ ಶಿಲಾಶಾಸನಗಳು ದೊರೆಯ ಬಹುದು’ ಎನ್ನುತ್ತಾರೆ ಹಿರಿಯರು.

‘ಜಿಲ್ಲೆಯಲ್ಲಿ ಅನೇಕ ಆಕರ್ಷಣೀಯ ತಾಣಗಳು ಇವೆ. ಅವುಗಳನ್ನು ಅಭಿವೃದ್ಧಿ ಪಡಿಸಿದಲ್ಲಿ ಜಿಲ್ಲೆಯೂ ಪ್ರವಾಸಿ ತಾಣವಾಗುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಜನರು ಆಗ್ರಹಿಸುತ್ತಾರೆ.

* * 

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಪ್ರವಾಸೋದ್ಯಮ ಸಚಿವರಾಗಿದ್ದು, ಈ ಭಾಗದ ಪ್ರಾವಾಸಿ ತಾಣಗಳ ಅಭಿವೃದ್ಧಿಗೆ ಶ್ರಮಿಸಬೇಕು.

ವಿಕಾಸ ಸೊನ್ನದ

ಪುರಸಭೆ ಸದಸ್ಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry