6

ಮೂಲಸೌಲಭ್ಯದಲ್ಲಿ ರಾಜ್ಯಕ್ಕೆ 2ನೇ ಸ್ಥಾನ

Published:
Updated:
ಮೂಲಸೌಲಭ್ಯದಲ್ಲಿ ರಾಜ್ಯಕ್ಕೆ 2ನೇ ಸ್ಥಾನ

ಮಡಿಕೇರಿ: ನ್ಯಾಯಾಲಯಗಳಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.

ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆಯಲ್ಲಿ ಶನಿವಾರ ನ್ಯಾಯಾಲಯ ಸಂಕೀರ್ಣ ಹಾಗೂ ನ್ಯಾಯಾಂಗ ಅಧಿಕಾರಿಗಳ ವಸತಿಗೃಹ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿವರ್ಷ ದೆಹಲಿಯಲ್ಲಿ ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಪಾಲ್ಗೊಳ್ಳುವ ಸಭೆಯಲ್ಲಿ ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ರಾಜ್ಯದ ಕೆಲಸಗಳ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 1,300 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ 254 ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

‘ಹೈಕೋರ್ಟ್‌ನಲ್ಲಿ 2.90 ಲಕ್ಷ ಪ್ರಕರಣಗಳ ಬಾಕಿ ಉಳಿದಿದ್ದು, ಅಧೀನ ನ್ಯಾಯಾಲಯದಲ್ಲಿ 13 ಲಕ್ಷ ಪ್ರಕರಣಗಳು ಬಾಕಿಯಿವೆ. ಅವುಗಳ ಇತ್ಯರ್ಥ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದು. ವಕೀಲರು ಕೇವಲ ವಕೀಲರಂತೆ ಕೆಲಸ ಮಾಡದೇ ನ್ಯಾಯಾಲಯದ ಅಧಿಕಾರಿಗಳಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

‘ನ್ಯಾಯ ಕೇಳಿ ನ್ಯಾಯಾಲಯಕ್ಕೆ ಬರುವ ಕಕ್ಷಿದಾರರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ವಕೀಲರ ವರ್ತನೆ ಇರಬಾರದು. ನಾಲ್ಕು ಹೋಬಳಿ ಸೇರಿಸಿ ಒಂದು ನ್ಯಾಯಾಲಯ ಸ್ಥಾಪಿಸಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲಿ ಎಂಬುದಲ್ಲ. ಇರುವ ಪ್ರಕರಣಗಳು ಬೇಗ ಇತ್ಯರ್ಥವಾಗಲಿ ಎಂಬುದು ಇಚ್ಛೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ನಾಲ್ಕು ವರ್ಷ ಎಂಟು ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಮೌಢ್ಯ ನಿಷೇಧ ಕಾನೂನು ಒಳಗೊಂಡಂತೆ 161 ಕಾನೂನು ಜಾರಿಗೆ ತಂದಿದೆ. ಅವುಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ ರಾಜ್ಯದ ಜನರು ನೆಮ್ಮದಿಯಿಂದ ಬದುಕು ನಡೆಸಲಿದ್ದಾರೆ. ಕೊಡಗಿನಲ್ಲಿ ನ್ಯಾಯಾಲಯಗಳಿಗಿಂತ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿ ಹಾಗೂ ತಹಶೀಲ್ದಾರ್‌ ನ್ಯಾಯಾಲಯದಲ್ಲೇ ಹೆಚ್ಚಿನ ಭೂಮಿ ಪ್ರಕರಣಗಳಿವೆ. ಅವುಗಳೂ ಬೇಗ ಇತ್ಯರ್ಥವಾಗಬೇಕು’ ಎಂದು ಜಯಚಂದ್ರ ಹೇಳಿದರು.

ಓಬಿರಾಯನ ಕಾನೂನು ಮಾರ್ಪಾಡು ಮಾಡಬೇಕಿದೆ. ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಶೇ 50 ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕು ಎನ್ನುವ ವಿಶೇಷ ಕಾನೂನು ತರಲಾಗಿದೆ ಎಂದು ಹೇಳಿದರು

ಹೈಕೋರ್ಟ್‌ ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಮಾತನಾಡಿ, ‘ಪ್ರಕರಣಗಳನ್ನು ಮಧ್ಯಸ್ಥಿಕೆ ಹಾಗೂ ಲೋಕ ಅದಾಲತ್‌ ಮೂಲಕ ಇತ್ಯರ್ಥ ಪಡಿಸಲು ವಕೀಲರು ಮುಂದಾಗಬೇಕು. ಪ್ರಕರಣವನ್ನು ಜಯಿಸಿಯೇ ತೀರುತ್ತೇವೆ ಎಂದರೆ ಪಟ್ಟು ಹಿಡಿದರೆ ಮತ್ತಷ್ಟು ಮನಸ್ತಾಪ ಉಂಟಾಗಲಿದೆ. ವಕೀಲರು ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರವು ಕೊಡಗು ಜಿಲ್ಲೆಯ ಕಣ್ಣೀರು ಒರೆಸಬೇಕು. ಸರ್ಕಾರ ಮನಸ್ಸು ಮಾಡಿದರೆ ದೊಡ್ಡ ವಿಚಾರವೇನೂ ಅಲ್ಲ. ಮಳೆಗಾಲದಲ್ಲಿ ರಸ್ತೆಗಳು ಹಾಳಾಗಿ ಸಂಚಾರ ಸಮಸ್ಯೆ ದೊಡ್ಡ ತಲೆನೋವಾಗಿದೆ ಎಂದು ಹೇಳಿದರು.

‘ಹೈಕೋರ್ಟ್‌ನಲ್ಲಿ 62 ನ್ಯಾಯಾಧೀಶರು ಕಾರ್ಯ ನಿರ್ವಹಿಸಬೇಕಿತ್ತು. ಅದರೆ, 24 ನ್ಯಾಯಾಧೀಶರು ಮಾತ್ರ ಇದ್ದಾರೆ. ಸ್ಥಳೀಯ ನ್ಯಾಯಾಲಯಗಳಲ್ಲೂ ನ್ಯಾಯಾಧೀಶರ ಕೊರತೆಯಿದೆ’ ಎಂದು ಗಮನ ಸೆಳೆದರು.

ಕೊಡಗು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಆರ್‌.ಬಿ. ಬೂದಿಹಾಳ್‌, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌, ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅಶೋಕ್‌ ಜಿ. ನಿಜಗಣ್ಣವರ್‌ ಮಾತನಾಡಿದರು.

ಜಿಲ್ಲಾ ಪ್ರಧಾನ ಹಾಗೂ ಸಿವಿಲ್‌ ನ್ಯಾಯಾಧೀಶ ಮಾಸ್ಟರ್‌ ಆರ್‌.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮನಿ ಪೊನ್ನಪ್ಪ, ಮಾಚಿಮಂಡ ಸುರೇಶ್‌ ಅಯ್ಯಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್‌.ಡಿ. ಕಾವೇರಿಯಪ್ಪ ಹಾಜರಿದ್ದರು.

ಮಹದಾಯಿ: ಸೌಹಾರ್ದವಾಗಿ ಬಗೆಹರಿಯಲಿ

ರಾಜ್ಯದ ಹಿತದೃಷ್ಟಿಯಿಂದ ಮಹದಾಯಿ ವಿವಾದವು ಸೌಹಾರ್ದವಾಗಿ ಬಗೆಹರಿಯಬೇಕು ಎಂಬುದು ಸರ್ಕಾರದ ಉದ್ದೇಶ. ಇದೇ ಕಾರಣದಿಂದ ಪಕ್ಷಾತೀತವಾಗಿ ಪ್ರಧಾನಿ ಮಂತ್ರಿಯನ್ನೂ ಭೇಟಿ ಮಾಡಲಾಗಿತ್ತು. ಕುಡಿಯುವ ನೀರಿನ ವಿಚಾರವು ಮಾತುಕತೆಯ ಮೂಲಕವೇ ಇತ್ಯರ್ಥ ಮಾಡಿಕೊಳ್ಳುವುದು ಸೂಕ್ತ ಎಂದು ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು. ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯ ಲಾಭಕ್ಕಾಗಿ ಬಿಜೆಪಿಯು ಮಹದಾಯಿ ವಿಚಾರ ಕೈಗೆತ್ತಿಕೊಂಡಿದೆ ಎಂದು ಟೀಕಿಸಿದರು.

* * 

ಶಿಸ್ತುಬದ್ಧ ಜೀವನ ನಡೆಸಿದರೆ ವಾಜ್ಯಗಳೂ ಕಡಿಮೆಯಾಗಲಿವೆ. ಈ ಹೊಣೆಗಾರಿಕೆ ಎಲ್ಲರ ಮೇಲೆಯೂ ಇದೆ

ಟಿ.ಬಿ. ಜಯಚಂದ್ರ, ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry