ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಗೆಲುವಷ್ಟೇ ಮಾನದಂಡ

Last Updated 24 ಡಿಸೆಂಬರ್ 2017, 6:44 IST
ಅಕ್ಷರ ಗಾತ್ರ

ಕೋಲಾರ: ‘ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಗುಣ, ನಡತೆ ಮಾನದಂಡ ಎನ್ನುವವರಿಗೆ ಈಗಲಾದರೂ ಬುದ್ಧಿ ಬರಲಿ. ಗೆಲುವಷ್ಟೇ ಮಾನದಂಡ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲಿ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಪರೋಕ್ಷವಾಗಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ಗೆ ತಿರುಗೇಟು ನೀಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಗ್ಯರು, ಅರ್ಹರು, ಗುಣ, ನಡತೆ ಎನ್ನುವ ಮಾನದಂಡ ಇರಿಸಿಕೊಂಡವರಿಗೆ ಗೆಲುವು ಮುಖ್ಯವಾಗಿ ಕಾಣುವುದಿಲ್ಲ. ಇದರಿಂದಲೇ ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಎರಡು ಬಾರಿ ಸೋಲಬೇಕಾಯಿತು. ತಾವೇ ಕಾಂಗ್ರೆಸ್. ತಾವು ಇಲ್ಲದಿದ್ದರೆ ಪಕ್ಷ ನಿರ್ನಾಮವಾಗುತ್ತದೆ ಎನ್ನುವವರು ಪಕ್ಷಕ್ಕೆ ಯಾಕೆ ಬೇಕು’ ಎಂದು ಕಿಡಿ ಕಾರಿದರು.

ಗಾಂಧಿ ತತ್ವ ಪಾಲನೆ ಅಗತ್ಯ. ಆದರೆ, ಇಂದು ಸಮಾಜ ಎಲ್ಲಿ ನಿಂತಿದೆ. ಸಾಧ್ಯ- ಅಸಾಧ್ಯಗಳನ್ನು ಚಿಂತಿಸಿ ರಾಜಕಾರಣ ಮಾಡಬೇಕು. ಬಿಜೆಪಿಯವರು ಆಪರೇಷನ್‌ ಕಮಲದ ಮೂಲಕ ರಾಜ್ಯಭಾರ ಮಾಡಿದ್ದಾರೆ. ಅವರೆಲ್ಲರೂ ನೀತಿವಂತರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಕಾಂಗ್ರೆಸ್‌ ಸಮಾವೇಶದಲ್ಲಿ ಸಚಿವ ರಮೇಶ್‌ಕುಮಾರ್‌, ಸಂಸ್ಕಾರ ಇಲ್ಲದವರು ರಾಜಕಾರಣದಲ್ಲಿ ಇರಬಾರದು. ಅಂತಹವರು ಶಾಸನ ಸಭೆಗೆ ಬರಲು ಅರ್ಹರಲ್ಲ. ಯಾವುದೇ ಪಕ್ಷವೇ ಆಗಲಿ ಯೋಗ್ಯರು ಮಾತ್ರ ಬರಬೇಕು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಹಾಯ ಮಾಡಿದ್ದಾನೆ: ‘ವರ್ತೂರು ಪ್ರಕಾಶ್‌ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಉದ್ದಟತನದಿಂದ ಮಾತನಾಡುತ್ತಿರಲಿಲ್ಲ. ಆತ ಲೋಕಸಭಾ ಚುನಾವಣೆಯಲ್ಲಿ ನನಗೆ ಎರಡು ಬಾರಿ ಸಹಾಯ ಮಾಡಿದ್ದಾನೆ. ಆದರೆ, ಸ್ವಪಕ್ಷಿಯರೇ ಮೋಸ ಮಾಡಿದರು, ಆ ವಂಚಕರ ಹೆಸರು ಹೇಳುವುದಿಲ್ಲ’ ಎಂದು ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್ ಗೆಲ್ಲಬೇಕಾದರೆ ವರ್ತೂರು ಪ್ರಕಾಶ್ ಸರಿಯಾದ ಅಭ್ಯರ್ಥಿ ಎನ್ನುವ ಕಾರಣಕ್ಕೆ ಸುಮ್ಮನಿದ್ದೆ. ಆತ ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಕ್ಕೆ ಅಡೆತಡೆ ಎದುರಾದ ಕಾರಣ ತಾಳ್ಮೆ ಕಳೆದುಕೊಂಡು ಹೊಸ ಪಕ್ಷ ಕಟ್ಟಿದ್ದಾನೆ, ಯದ್ವಾತದ್ವಾ ಮಾತನಾಡುತ್ತಿದ್ದಾನೆ ಎಂದು ಶಾಸಕರನ್ನು ಸಮರ್ಥಿಸಿಕೊಂಡರು.

ಕಾಂಗ್ರೆಸ್‌ನಲ್ಲಿ ಹುಟ್ಟಿ ಬೆಳೆದ ವರ್ತೂರು ಪ್ರಕಾಶ್‌ ಈಗ ಎಲ್ಲವನ್ನೂ ಮರೆತು ಮಾತನಾಡುತ್ತಿದ್ದಾನೆ. ಮಾನವೀಯತೆ ಇರಬೇಕು. ಏನೇ ಆಗಲಿ ಆತ ಕಾಂಗ್ರೆಸ್‌ ಪಕ್ಷವನ್ನು ಜರಿದ ಮೇಲೆ ಸುಮ್ಮನಿರಲು ಸಾಧ್ಯವಿಲ್ಲ. ಇನ್ನು ಯುದ್ಧ ಆರಂಭವಾದಂತೆ. ಮುಂದಿನ ಚುನಾವಣೆಯನ್ನು ಅಗ್ನಿ ಪರೀಕ್ಷೆಯಂತೆ ಸ್ವೀಕರಿಸುತ್ತೇವೆ ಎಂದರು.

ತಲೆ ನೋವಾಗಿದೆ: ಚುನಾವಣೆ ಸಮೀಪಿಸುತ್ತಿದ್ದು, ಕೋಲಾರ, ಕೆಜಿಎಫ್ ಹಾಗೂ ಮಾಲೂರು ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯು ತಲೆ ನೋವಾಗಿ ಪರಿಣಮಿಸಿದೆ. ಈ ಮೂರು ಕ್ಷೇತ್ರಗಳ ಕುರಿತು ಸ್ಪಷ್ಟತೆ ಸಿಕ್ಕಿದರೆ ತಯಾರಿ ಮಾಡಿಕೊಳ್ಳಬಹುದು ಎಂದು ಹೇಳಿದರು.

ಪಕ್ಷದಲ್ಲಿ ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಒಂದು ಗುಂಪಿದೆ. ಬೆಂಗಳೂರಿನಲ್ಲಿ ಇದ್ದುಕೊಂಡು ಇಲ್ಲಿಗೆ ಯಾರಾದರೂ ಮುಖಂಡರು ಬಂದಾಗ ಮಾತ್ರ ಆಗಮಿಸಿ ಮುಖ ತೋರಿಸಿ ಹೋಗುವ ಮತ್ತೊಂದು ಗುಂಪಿದೆ. ಆದರೆ, ಕ್ಷೇತ್ರದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದು ವರಿಷ್ಠರಿಗೆ ಗೊತ್ತಿದೆ ಎಂದು ಆಹಾರ ನಿಗಮದ ಉಪಾಧ್ಯಕ್ಷ ಶ್ರೀನಿವಾಸ್ ವಿರುದ್ಧ ಕಿಡಿಕಾರಿದರು.

ಅಲ್ಪಸಂಖ್ಯಾತರಿಗೆ ಅವಕಾಶ: ‘ಕೋಲಾರ ಜಿಲ್ಲೆಯ ಜನ ನನ್ನನ್ನು ಏಳು ಬಾರಿ ಗೆಲ್ಲಿಸಿದ್ದಾರೆ. ಆದರೆ, ಕೋಲಾರ ಕ್ಷೇತ್ರದಲ್ಲೇ ಕಾಂಗ್ರೆಸ್ ಗೆಲ್ಲದಿರುವುದು ಬೇಸರದ ಸಂಗತಿ. ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತರಿದ್ದು, ಈ ಬಾರಿ ಒಂದು ಕ್ಷೇತ್ರದಲ್ಲಿ ಅವರಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಹಾಜರಿದ್ದರು.

* *

ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯವರು ವಿದ್ಯುನ್ಮಾನ ಮತಯಂತ್ರಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡಿದ್ದಾರೆ. ವಿದ್ಯುನ್ಮಾನ ಮತಯಂತ್ರ ಬಳಸದ ಕಡೆ ಬೇರೆ ಪಕ್ಷದವರು ಗೆದ್ದಿದ್ದಾರೆ
ಕೆ.ಎಚ್‌.ಮುನಿಯಪ್ಪ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT