7

ರೈತರನ್ನು ಗಮನದಲ್ಲಿಟ್ಟು ಯೋಜನೆ ರೂಪಿಸಿ

Published:
Updated:

ಕೊಪ್ಪಳ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್‍ ಹೇಳಿದರು. ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ರೈತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ದುಬಾರಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ. ಅಲ್ಲದೆ. ಕೃಷಿ ಹೊಂಡಗಳನ್ನು ನಿರ್ಮಿಸಿ ಬೇಸಿಗೆಯಲ್ಲಿಯೂ ಸಹ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲ ಕಲ್ಪಿಸಿದೆ. ಸಂಚಾರಿ ಮಣ್ಣು ಪರೀಕ್ಷಾ ಕೇಂದ್ರಗಳನ್ನು ಬಿಡುಗಡೆಗೊಳಿಸಿ, ಮೊಬೈಲ್‍ ಮೂಲಕ ಮಣ್ಣಿನ ಗುಣಮಟ್ಟವನ್ನು ರೈತರಿಗೆ ತಲುಪಿಸುವಂತೆ ಮಾಡುತ್ತಿದೆ. ಇದರಿಂದ ರೈತರಿಗೆ ಆಯಾ ಮಣ್ಣಿಗೆ ಸೂಕ್ತವಾದ ಬೆಳೆ ಬೆಳೆಯಲು ಅನುಕೂಲವಾಗಿದೆ ಎಂದರು.

ಸತತ 3 ವರ್ಷಗಳ ಬರಗಾಲದಿಂದ ಕಂಗೆಟ್ಟಿದ್ದ ಜಿಲ್ಲೆಯ ರೈತರ ಸ್ವಾವಲಂಬಿ ಬದುಕಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ದೊರೆತಿದೆ. ಕೃಷಿ ಸಚಿವರಿಂದ ಜಿಲ್ಲೆಯಲ್ಲಿ ಎರಡು ಕೃಷಿ ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸುಮಾರು 2 ಲಕ್ಷ ರೈತರು ಈ ಸಮಾವೇಶಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭಾನ್ವಿತ ರೈತರನ್ನು ಸನ್ಮಾನಿಸಿ, ಯುವ ಜನತೆಯಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

’₹ 50 ಸಾವಿರದವರೆಗಿನ ರೈತರ ಸಾಲವನ್ನು ಮನ್ನಾ ಮಾಡಿರುವ ರಾಜ್ಯ ಸರ್ಕಾರ ಸದಾ ರೈತರ ಹಿತ ಕಾಯುತ್ತಿದೆ. ಅವರನ್ನು ಆರ್ಥಿಕ, ಸಾಮಾಜಿಕವಾಗಿ ಸಶಸಕ್ತಗೊಳಿಸುವುದು ಅದರ ಗುರಿ. ಈ ನಿಟ್ಟಿನಲ್ಲಿ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಖರ್ಚು ಕಡಿಮೆ ಮಾಡಿ ರೈತರಿಗೆ ಅಧಿಕ ಲಾಭ ತರಲು ಅನುಕೂಲ ಕಲ್ಪಿಸಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವ ನಿಟ್ಟಿನಲ್ಲಿ ಆನ್‍ಲೈನ್‍ ಮೂಲಕ ಖರೀದಿಗೆ ಉತ್ತೇಜನ ನೀಡಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಸ್ತರಣಾ ಮುಂದಾಳು ಎಂ.ಬಿ.ಪಾಟೀಲ್‍, ’ದೇಶದ 5ನೇ ಪ್ರಧಾನಿ ಚೌದ್ರಿ ಚರಣ್‍ಸಿಂಗ್‍ರ ನೆನಪಿಗಾಗಿ ಪ್ರತಿ ವರ್ಷ ಡಿ.23 ರಂದು ರೈತ ದಿನಾಚರಣೆ ಆಚರಿಸಲಾಗುತ್ತಿದೆ. ಒಬ್ಬ ರೈತ ಕೂಡ ಪ್ರಧಾನಿ ಆಗಬಹುದು ಎಂಬುದಕ್ಕೆ ಚೌದ್ರಿ ಚರಣ್‍ಸಿಂಗ್‍ ಉದಾಹರಣೆ. ರೈತರೊಂದಿಗೆ ಚರ್ಚಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಹಾಗೂ ಸಶಕ್ತ ಕೃಷಿಯಿಂದ ಸಾರ್ಥಕ ಕೃಷಿಯೆಡೆಗೆ ರೈತ ಸಮುದಾಯವನ್ನು ಕೊಂಡೊಯ್ಯುವುದು ಈ ದಿನದ ಮತ್ತೊಂದು ಕಾರಣ’ ಎಂದರು.

ಬಳಿಕ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರನ್ನು ಸನ್ಮಾನಿಸಲಾಯಿತು. ಕೃಷಿಕ ಸಮಾಜದ ಅಧ್ಯಕ್ಷ ಶಿವಣ್ಣ ಮೂಲಿಮನಿ, ರಾಜ್ಯ ಕೃಷಿಕ ಸಮಾಜದ ಸದಸ್ಯ ಶಂಕ್ರಪ್ಪ ಚವಡಿ, ವಿರೂಪಣ್ಣ ನವೋದಯ, ಪ್ರಗತಿಪರ ರೈತ ವೆಂಕನಗೌಡ ಪಾಟೀಲ್‍, ರುದ್ರಮುನಿ ಗಾಳಿ, ತಾಲ್ಲೂಕ ಕಾಂಗ್ರೆಸ್‍ ಅಧ್ಯಕ್ಷ ಸುರೇಶ್‍ ಭೂಮರೆಡ್ಡಿ, ಜಂಟಿ ಕೃಷಿ ನಿರ್ದೇಶಕ ಡಾ.ವೀರೇಶ್‍, ತಾಲ್ಲೂಕ ಸಹಾಯಕ ಕೃಷಿ ನಿರ್ದೇಶಕ ತುಕಾರಾಂ ಇದ್ದರು.

* * 

ಕೃಷಿ ಅರ್ಥವ್ಯವಸ್ಥೆಯ ಬೆನ್ನೆಲುಬು.  ದೇಶದ ಅಭಿವೃದ್ಧಿಯ ಬಹುಪಾಲು ಕೊಡುಗೆ ರೈತರದ್ದಾಗಿದೆ. ರೈತರನ್ನು ಕಡೆಗಣಿಸಿದ ಯಾವ ಸರ್ಕಾರಕ್ಕೂ ಎಂದಿಗೂ ಉಳಿಗಾಲವಿಲ್ಲ.

ಕೆ.ರಾಘವೇಂದ್ರ ಹಿಟ್ನಾಳ್‍, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry