7

ರೈತರ ಸೆಳೆದ ಡ್ರೋಣ್ ಸ್ಪ್ರೇಯರ್!

Published:
Updated:
ರೈತರ ಸೆಳೆದ ಡ್ರೋಣ್ ಸ್ಪ್ರೇಯರ್!

ಇಂದ್ರಕುಮಾರ ದಸ್ತೇನವರ

ಬಾಗಲಕೋಟೆ: ಮೊದಲ ದಿನ ಜನರಿಲ್ಲದೇ ಬಣಗುಟ್ಟಿದ್ದ ತೋಟಗಾರಿಕೆ ಮೇಳಕ್ಕೆ ಎರಡನೇ ದಿನವಾದ ಶನಿವಾರ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯರು ದಾಂಗುಡಿ ಇಟ್ಟರು. ಇದರಿಂದ ಮೇಳ ಜನರಿಂದ ತುಂಬಿ ತೋಟಗಾರಿಕೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಬ್ಬದ ಕಳೆ ಕಾಣಿಸಿತು. ವಾರಾಂತ್ಯ ಮಧ್ಯಾಹ್ನದ ನಂತರ ಜನರ ಪ್ರವಾಹ ಹೆಚ್ಚಳವಾಯಿತು. ಮೊದಲ ದಿನ ವ್ಯಾಪಾರವಿಲ್ಲದೇ ಮಂಕಾಗಿದ್ದ ಆಹಾರ ಮೇಳದ ಮಳಿಗೆಗಳಲ್ಲಿ ಗೆಲುವು ಕಾಣಿಸಿಕೊಂಡಿತು.

ಕೀಟನಾಶಕ ಸಿಂಪರಣೆಗೆ ಡ್ರೋಣ್: ರಾಯಚೂರು ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ಮಹಾವಿದ್ಯಾಲಯ ಅಭಿವೃದ್ಧಿಪಡಿಸಿದ್ದ ಕೀಟನಾಶಕ ಸಿಂಪರಣೆಯ ಡ್ರೋಣ್ ಯಂತ್ರಗಳು ರೈತರ ಆಕರ್ಷಣೆಯ ಕೇಂದ್ರಗಳಾಗಿದ್ದವು. ಸ್ಟಾಲ್ ಎದುರು ಪ್ರಾಯೋಗಿಕವಾಗಿ ನೀರು ಸಿಂಪರಿಸಿ ಅವುಗಳ ಕಾರ್ಯಕ್ಷಮತೆ ಪರಿಶೀಲಿಸಿ ಬೆಳೆಗಾರರು ಅಚ್ಚರಿಪಟ್ಟರು.

ಬ್ಯಾಟರಿ ಚಾಲಿತ ಈ ಡ್ರೋಣ್ ಸ್ಪ್ರೇಯರ್ ಬಳಸಿ ಮಾವು, ನಿಂಬೆ, ದಾಳಿಂಬೆ ಮೊದಲಾದ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಬಹುದು. ಒಮ್ಮೆಗೆ 9 ಕೆ.ಜಿ ತೂಕದ ಕೀಟನಾಶಕ ಹೊತ್ತೊಯ್ಯಲಿದೆ. 1 ಕಿ.ಮೀ ದೂರದಿಂದ ರಿಮೋಟ್ ಕಂಟ್ರೋಲ್ ಮೂಲಕ ಡ್ರೋಣ್ ಸ್ಪ್ರೇಯರನ್ನು ನಿಯಂತ್ರಿಸಬಹುದು ಎಂದು ತಜ್ಞರು ರೈತರಿಗೆ ಮಾಹಿತಿ ನೀಡಿದರು. ದೊಡ್ಡ ರೈತರಿಗೆ ಡ್ರೋಣ್ ಸ್ಪ್ರೇಯರ್ ವರದಾನವಾಗಿದೆ. ವಿ.ವಿಯ ತಾಂತ್ರಿಕ ವಿಭಾಗದ ಈ ಸಾಧನೆಯನ್ನು ಇನ್ನೂ ಮಾರುಕಟ್ಟೆಗೆ ಪರಿಚಯಿಸಿಲ್ಲ ಎಂದು ತಜ್ಞರು ತಿಳಿಸಿದರು. ಹೆಚ್ಚಿನ ಮಾಹಿತಿಗೆ: ಡಾ.ಎಂ.ವೀರನಗೌಡ ಅವರನ್ನು ಸಂಪರ್ಕಿಸಲು (ಮೊಬೈಲ್ ಸಂಖ್ಯೆ:9448303282) ಇಲ್ಲಿಗೆ ಸಂಪರ್ಕಿಸಲು ಕೋರಿದರು.

ಸಂಚಾರಿ ತಾರಾಲಯದ ಆಕರ್ಷಣೆ: ಮೇಳದಲ್ಲಿ ತಾರೇ ಜಮೀನ್ ಪರ್ ಹೆಸರಿನ ಸಂಚಾರಿ ತಾರಾಲಯ ಬಾಹ್ಯಾಕಾಶದ ಬಗೆಗಿನ ಕೌತುಕಗಳ ವೀಕ್ಷಣೆಗೆ ನೆರವಾಯಿತು. ಖಗೋಳ ಪರಿಸರವನ್ನು ಕೃತಕವಾಗಿ ಸೃಷ್ಟಿಸಿ ತಂತ್ರಾಂಶದ ಮೂಲಕ ಕತ್ತಲೆಯ ವಾತಾವರಣದಲ್ಲಿ ವೀಕ್ಷಣೆ ಮಾಡಿ ಹಲವರು ಖುಷಿಪಟ್ಟರು. 20 ನಿಮಿಷದ ವೀಕ್ಷಣೆಗೆ ₨50 ಶುಲ್ಕ ನಿಗದಿಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry