7

ಸರ್ಕಾರಿ ಕೆಲಸಕ್ಕೆ ಸಾರ್ವಜನಿಕರ ಅಲೆದಾಟ

Published:
Updated:
ಸರ್ಕಾರಿ ಕೆಲಸಕ್ಕೆ ಸಾರ್ವಜನಿಕರ ಅಲೆದಾಟ

ಹೊಸದುರ್ಗ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಒಬ್ಬರೂ ಶಿರಸ್ತೇದಾರರಿಲ್ಲ. ಇದರಿಂದಾಗಿ ವಿವಿಧ ಕೆಲಸಗಳಿಗೆ ಜನರು ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಆರ್‌.ಆರ್‌.ಟಿ ವಿಭಾಗ, ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಚುನಾವಣೆ ವಿಭಾಗದಲ್ಲಿದ್ದ ತಲಾ ಒಂದು ಶಿರಸ್ತೇದಾರರ ಹುದ್ದೆ ಖಾಲಿಯಾಗಿ ಆರು ತಿಂಗಳಿಗಿಂತಲೂ ಹೆಚ್ಚಾಗಿದೆ. ಗ್ರೇಡ್‌–2 ತಹಶೀಲ್ದಾರ್‌ ಹಾಗೂ ಶ್ರೀರಾಂಪುರದ ಉಪ ತಹಶೀಲ್ದಾರ್‌ ಹುದ್ದೆ, ಪ್ರಥಮ ಹಾಗೂ ಎರಡು ದ್ವಿತೀಯ ದರ್ಜೆ ಸಹಾಯಕರು, ಎರಡು ಬೆರಳಚ್ಚುಗಾರರು, ಮೂರು ಗ್ರಾಮ ಲೆಕ್ಕಿಗರ ಹಾಗೂ ಆರು ‘ಡಿ’ ಗ್ರೂಪ್‌ ಹುದ್ದೆಗಳು ಖಾಲಿ ಇವೆ ಎಂದು ತಾಲ್ಲೂಕು ಕಚೇರಿ ಮೂಲಗಳು ತಿಳಿಸಿವೆ.

ತಾಲ್ಲೂಕಿನಲ್ಲಿ 226 ಕಂದಾಯ ಗ್ರಾಮ, 33 ಗ್ರಾಮ ಪಂಚಾಯ್ತಿ, 21 ತಾಲ್ಲೂಕು ಪಂಚಾಯ್ತಿ ಕ್ಷೇತ್ರ, 6 ಜಿಲ್ಲಾ ಪಂಚಾಯ್ತಿ ಕ್ಷೇತ್ರ, 23 ವಾರ್ಡ್‌ಗಳಿರುವ ಪುರಸಭೆ ಇದೆ. ತಾಲ್ಲೂಕಿನಲ್ಲಿ ಸುಮಾರು 2.35 ಲಕ್ಷ ಜನ ವಾಸಿಸುತ್ತಿದ್ದಾರೆ. ವಿವಿಧ ಕೆಲಸಗಳಿಗೆ ಜನತ ನಿತ್ಯ ತಾಲ್ಲೂಕು ಕಚೇರಿಗೆ ದೂರದ ಊರುಗಳಿಂದ ಬರುತ್ತಾರೆ. ಆದರೆ, ತಾಲ್ಲೂಕು ಕಚೇರಿಯಲ್ಲಿ ಕಾಯಂ ಶಿರಸ್ತೇದಾರರು ಇಲ್ಲದಿರುವುದರಿಂದ ಹಲವು ಕೆಲಸಗಳು ಆಗುತ್ತಿಲ್ಲ ಎಂದು ನಾಗರಿಕರಾದ ಮಂಜುನಾಥ್‌ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕುಟುಂಬ ಯೋಜನೆಯಡಿ ಪರಿಹಾರ, ಅಂಗವಿಕಲರ ವೇತನ, ವೃದ್ಧಾಪ್ಯ ಹಾಗೂ ವಿಧವಾ ವೇತನ, ಅಂತ್ಯಸಂಸ್ಕಾರ ಪರಿಹಾರ ಧನವನ್ನು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಶಿರಸ್ತೇದಾರರ ಅಗತ್ಯವಿದೆ. ರೈತರ ಜಮೀನು ಖಾತೆ ಮಾಡಿಕೊಡಲು, ಪಹಣಿಯಲ್ಲಿ\ರುವ ದೋಷ ಸರಿಪಡಿಸಿಕೊಡಲು, ಆಸ್ತಿಪಾಸ್ತಿಗೆ ಸಂಬಂಧಿಸಿದ ಹಳೆಯ ದಾಖಲೆ ಕೊಡಲು ಆರ್‌ಆರ್‌ಟಿ ಶಿರಸ್ತೇದಾರ ಇರಬೇಕು. ಮತದಾರರ ಪಟ್ಟಿ ತಯಾರಿಸಲು, ಪರಿಷ್ಕರಿಸಲು, ಚುನಾವಣೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಚುನಾವಣೆ ವಿಭಾಗದಲ್ಲೂ ಶಿರಸ್ತೇದಾರರ ಅಗತ್ಯವಿದೆ.

ಈ ಮೂರು ವಿಭಾಗಗಳಲ್ಲಿ ಶಿರಸ್ತೇದಾರರ ಜವಾಬ್ದಾರಿಯನ್ನು ಪ್ರಭಾರಿಗಳೇ ನಿರ್ವಹಿಸುತ್ತಿದ್ದಾರೆ. ಅವರು ಸಭೆ, ಸಮಾರಂಭ, ತರಬೇತಿ, ಕಾರ್ಯಾಗಾರದಲ್ಲಿ ಪಾಲ್ಗೊಂಡಾಗ ಕಚೇರಿಯಲ್ಲಿ ಇರುವುದಿಲ್ಲ. ಇದರಿಂದಾಗಿ ನಾಗರಿಕರು ಕಚೇರಿಗೆ ವಾರಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸಕಾಲಕ್ಕೆ ಕೆಲಸ ಮಾಡಿಕೊಡಲು ಪೂರ್ಣಾವಧಿಗೆ ಶಿರಸ್ತೇದಾರರನ್ನು ನೇಮಕ ಮಾಡಿಕೊಳ್ಳಬೇಕು ಎಂದು ನಾಗರಿಕರಾದ ತಿಪ್ಪೇಶ್‌, ನಾಗರಾಜು, ಮಲ್ಲಿಕಾರ್ಜುನ್‌ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿಗೆ ಪ್ರಸ್ತಾವ

‘ಫೆಬ್ರುವರಿಯಲ್ಲಿ ಮಾಡದಕೆರೆ ಉಪ ತಹಶೀಲ್ದಾರ್‌, ಮಾರ್ಚ್‌ನಲ್ಲಿ ನಮ್ಮ ಜೀಪ್‌ ಚಾಲಕ ನಿವೃತ್ತಿ ಆಗಲಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಕಾರ್ಯವನ್ನು ಸುವ್ಯವಸ್ಥಿತವಾಗಿ ಮಾಡಲು ಹಾಗೂ ಸಾರ್ವಜನಿಕರ ಕೆಲಸಕ್ಕೆ ನೆರವಾಗಲು ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಹಶೀಲ್ದಾರ್‌ ಎಂ.ಪಿ.ಕವಿರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* * 

ಗ್ರೇಡ್‌–2 ತಹಶೀಲ್ದಾರ್‌, ಶಿರಸ್ತೇದಾರ ಹುದ್ದೆಗಳು ಖಾಲಿ ಇರುವುದರಿಂದ ಹಗಲು– ರಾತ್ರಿ ಸಾರ್ವಜನಿಕರ ಕೆಲಸ ಮಾಡುತ್ತಿದ್ದೇವೆ

ಎಂ.ಪಿ.ಕವಿರಾಜ್‌, ತಹಶೀಲ್ದಾರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry