7

ಸಮಿತಿ ರಚಿಸಿ ತಪ್ಪು ಮಾಡಿದ ಸರ್ಕಾರ

Published:
Updated:
ಸಮಿತಿ ರಚಿಸಿ ತಪ್ಪು ಮಾಡಿದ ಸರ್ಕಾರ

ಗದಗ: ‘ಲಿಂಗಾಯತ–ವೀರಶೈವ ಎರಡೂಒಂದೇ. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಷಯದಲ್ಲಿ ಪರಿಣಿತರ ಸಮಿತಿ ರಚಿಸುವ ಮೂಲಕ ಸರ್ಕಾರ ತಪ್ಪು ಮಾಡಿದೆ. ಧರ್ಮ ಒಡೆಯಲು ಹೊರಟಿದೆ. ಡಿ. 24ರ ಸಮಾವೇಶದಲ್ಲಿ ಇದಕ್ಕೆ ತಕ್ಕ ಉತ್ತರ ನೀಡೋಣ’ ಎಂದು ಶನಿವಾರ ಇಲ್ಲಿ ಸಮಾರೋಪಗೊಂಡ ಜನ ಜಾಗೃತಿ ಪಾದಯಾತ್ರೆಯಲ್ಲಿ ಗುರು–ವಿರಕ್ತ ಮಠಾಧೀಶರು ನಿರ್ಣಯ ಕೈಗೊಂಡರು.

ಪಾದಯಾತ್ರೆ ಗದುಗಿನ ಅಂಬೇಡ್ಕರ್‌ ನಗರದ ದಲಿತರ ಕೇರಿಗಳಲ್ಲಿ ಸಾಗಿ, ಶಹಾಪುರಪೇಟೆಯ ಶಂಕರಲಿಂಗ ದೇವ]ಸ್ಥಾನದಲ್ಲಿ ಸಮಾರೋಪಗೊಂಡಿತು. ಹೊಂಬಳ ರಸ್ತೆಯಲ್ಲಿರುವ ಅಂಬೇಡ್ಕರ್‌ ನಗರದಲ್ಲಿ ದಲಿತರು ರಸ್ತೆಗೆ ನೀರು ಚಿಮುಕಿಸಿ, ರಂಗೋಲಿ ಹಾಕಿ ಮಠಾಧೀಶರನ್ನು ಸ್ವಾಗತಿಸಿದರು. ಪುಷ್ಪವೃಷ್ಟಿ ಮಾಡಿದರು. ಭಕ್ತರು ‘ಮಾನವ ಧರ್ಮಕ್ಕೆ ಜಯವಾಗಲಿ, ಲಿಂಗಾಯತ–ವೀರಶೈವ ಎರಡೂ ಒಂದೇ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ವಿಶ್ವವೇ ನಮ್ಮ ಬಂಧು’ ಎಂದು ಘೋಷಣೆ ಕೂಗಿದರು. ನೂರಾರು ಮಹಿಳೆಯರು ಕುಂಭ ಹೊತ್ತುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿ 50ಕ್ಕೂ ಹೆಚ್ಚು ಮಠಾಧೀಶರು ದಲಿತರಿಗೆ ಭಸ್ಮ ಧಾರಣೆ, 150ಕ್ಕೂ ಹೆಚ್ಚು ಜನರಿಗೆ ರುದ್ರಾಕ್ಷಿ ಧಾರಣೆ, ಲಿಂಗಧಾರಣೆ ಮಾಡುವ ಮೂಲಕ ಸಮಾನತೆಯ ಸಂದೇಶ ಸಾರಿದರು.

ಪಾದಯಾತ್ರೆ ಜನತಾ ಕಾಲೊನಿ ರಸ್ತೆ, ಮ್ಯಾಗೇರಿ ಓಣಿ, ಡೋಹರ ಗಲ್ಲಿ, ಡಿ.ಸಿ. ಮಿಲ್‌ ರಸ್ತೆ, ಕಳೆಗೇರಿ ಓಣಿ ಮಾರ್ಗವಾಗಿ ಸಂಚರಿಸಿತು. ಬಳಿಕ ನಡೆದ ಧರ್ಮ ಸಭೆಯಲ್ಲಿ ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಮಾತನಾಡಿದರು.

‘ವೀರಶೈವ–ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿ ಸಮಿತಿ ರಚಿಸಿರುವುದು ಸರ್ಕಾರದ ಏಕಪಕ್ಷಿಯ ನಿರ್ಧಾರವಾಗಿದೆ. ಸಮನ್ವಯ ಸಮಾವೇಶದಲ್ಲೇ ಇದಕ್ಕೆ ತಕ್ಕ ಉತ್ತರ ನೀಡಲಾಗುವುದು. ಸಮಾವೇಶದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಿಂದ ನೂರಾರು ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

‘ಕಳೆದ 13 ದಿನಗಳಿಂದ ನಗರದ 35 ವಾರ್ಡ್‌ಗಳಲ್ಲಿ ಧರ್ಮದ ಜಾಗೃತಿ ಪಾದಯಾತ್ರೆ ನಡೆದಿದೆ. ಡಿ. 24ರಂದು ನಡೆಯಲಿರುವ ಸಮಾವೇಶದಲ್ಲಿ ಭಕ್ತರು ಕುಟುಂಬ ಸಹಿತ ಪಾಲ್ಗೊಳ್ಳಬೇಕು’ ಎಂದು ಕೋರಿದರು. ಪಾದಯಾತ್ರೆಯಲ್ಲಿ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರ ಸ್ವಾಮೀಜಿ, ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಸೂಡಿ ಜುಕ್ತಿಹಿರೇಮಠದ ಶ್ರೀ, ಸೊರಟೂರ ಫಕ್ಕೀರೇಶ್ವರ ಶ್ರೀ, ಬಸವ ಕಲ್ಯಾಣದ ಗಡಿ ಗೌಡಗಾಂವ್‌ ಸ್ವಾಮೀಜಿ, ಅನ್ನದಾನೀಶ್ವರ ಶಾಖಾ ಮಠದ ವೀರೇಶ್ವರ ಸ್ವಾಮೀಜಿ, ಮಣಕವಾಡದ ಸಿದ್ದರಾಮ ದೇವರು ಹಾಗೂ ಬಸಣ್ಣ ಮಲ್ಲಾಡದ, ಚಂದ್ರು ಬಾಳಿಹಳ್ಳಿಮಠ, ವಿ.ಕೆ.ಗುರುಮಠ, ಪ್ರಕಾಶ ಬೇಲಿ ಹಾಗೂ1,500ಕ್ಕೂ ಹೆಚ್ಚು ಭಕ್ತರು ಇದ್ದರು.

* * 

ಸರ್ಕಾರ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವ ಸಮಿತಿ ರಚಿಸುವ ಅಗತ್ಯವಿರಲಿಲ್ಲ. ಬದಲಿಗೆ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಸಮಿತಿ ರಚಿಸಬೇಕಿತ್ತು

ಅನ್ನದಾನೀಶ್ವರ ಸ್ವಾಮೀಜಿ ಮುಂಡರಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry