7

ಶಿಲ್ಪಕಲಾ ಕ್ಷೇತ್ರಕ್ಕೆ ಅದ್ಬುತ ಕೊಡುಗೆ ಬೆಳಗೊಳದ ಒಡೆಯ

Published:
Updated:
ಶಿಲ್ಪಕಲಾ ಕ್ಷೇತ್ರಕ್ಕೆ ಅದ್ಬುತ ಕೊಡುಗೆ ಬೆಳಗೊಳದ ಒಡೆಯ

ಶ್ರವಣಬೆಳಗೊಳ : ಸಾಂಸ್ಕೃತಿಕ ಲೋಕದಲ್ಲಿ ಏಕಶಿಲಾ ವಿಗ್ರಹದಲ್ಲಿ ಕೆತ್ತಲ್ಪಟ್ಟಿರುವ ವಿಸ್ಮಯಕಾರಿ ಬಾಹುಬಲಿ, ವಿಂಧ್ಯಗಿರಿಯ ಪರ್ವತದಲ್ಲಿ ಸೌಂದರ್ಯ ಖನಿಯಾಗಿ, ಶಾಂತಿದೂತನಾಗಿ ನಿಂತಿದ್ದಾನೆ.

ಶ್ರವಣಬೆಳಗೊಳದ ಭೂಮಟ್ಟದಿಂದ 470 ಅಡಿ ಎತ್ತರದ ದೊಡ್ಡಬೆಟ್ಟ ಅಥವಾ ವಿಂಧ್ಯಗಿರಿ ಬೆಟ್ಟದಲ್ಲಿ ಬಾಹುಬಲಿ ಮೂರ್ತಿಯನ್ನು ಗಂಗರ ಅರಸ 4ನೇ ರಾಚಮಲ್ಲನ ಪ್ರಧಾನ ಮಂತ್ರಿ ಚಾವುಂಡರಾಯನು ತನ್ನ ಮಾತೆ ಕಾಳಲಾದೇವಿಯ ಇಚ್ಛೆಯಂತೆ ಕ್ರಿ.ಶ. 981ರಲ್ಲಿ ನಿರ್ಮಿಸಿ ಶಿಲ್ಪಕಲಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾನೆ.

ಈ ದೈವೀ ಪುರುಷನನ್ನು ಉತ್ತರಾಭಿಮುಖವಾಗಿ ಖಡ್ಗಾಸನ ಭಂಗಿಯಲ್ಲಿ ನಿರ್ಮಿಸಿದ್ದು, ಬೆಣಚು ಕಲ್ಲಿನ ಶಿಲೆಯಲ್ಲಿ ಕೆತ್ತಲಾಗಿದೆ. ಕ್ರಿ.ಶ.1820ರಲ್ಲಿ ಕವಿ ಚಕ್ರವರ್ತಿ ಶಾಂತರಾಜ ಪಂಡಿತನು ಮೈಸೂರು ದೊರೆ ಮುಮ್ಮಡಿ ಕೃಷ್ಣರಾಜ ಒಡೆಯರ ಆಜ್ಞೆಯ ಮೇಲೆ ಈ ಮೂರ್ತಿ ಅಳತೆ ಮಾಡಿದ್ದಾನೆ. ಇದರ ಉದ್ದಗಳ ಕುರಿತು 16 ಪದ್ಯ ರಚಿಸಿ, ಅದರಲ್ಲಿ ಇದರ ಎತ್ತರ ಮುವತ್ತಾರು ಎಂಟನೆ ಒಂದು ಮೊಳ ಎಂದಿದ್ದಾನೆ.

1923ರಲ್ಲಿ ಶ್ರವಣಬೆಳಗೊಳದ ಶಾಸನಗಳನ್ನು ಸಂಪಾದಿಸಿದ ಆರ್‌.ನರಸಿಂಹಾಚಾರ್‌ ಅವರು ಮೂರ್ತಿಯು 57 ಅಡಿ ಎತ್ತರವಿದೆ ಎಂದೂ, 1957ರಲ್ಲಿ ಮೈಸೂರು ಪುರಾತತ್ವ ಇಲಾಖೆ 58 ಅಡಿ ಎತ್ತರವಿದೆ ಎಂದೂ ವರದಿ ಮಾಡಿತು. 1980ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಭಾರತೀಯ ಕಲಾ ಇತಿಹಾಸ ಸಂಸ್ಥೆಯು ಥಿಯೋಡಲೈಟ್‌ ಉಪಕರಣದ ಸಹಾಯದಿಂದ ಈ ವಿಗ್ರಹವನ್ನು ಕರಾರುವಕ್ಕಾಗಿ ಅಳೆದು, 58.8 ಅಡಿ ಎತ್ತರವಿದೆ ಎಂಬ ತೀರ್ಮಾನಕ್ಕೆ ಬಂದಿದೆ.

ಅದರ ಪ್ರಕಾರ ಬಾಹುಬಲಿಯ ಪಾದ 2.8 ಅಡಿ, ಪಾದದಿಂದ ಮೊಣಕಾಲು 15.2 ಅಡಿ, ಪಾದದಿಂದ ಟೊಂಕ 31.4 ಅಡಿ, ಪಾದದಿಂದ ಹೊಕ್ಕಳ 34.1 ಅಡಿ, ಪಾದದಿಂದ ಕತ್ತಿನರೇಖೆ 45.10 ಅಡಿ, ಪಾದದಿಂದ ಕತ್ತು 47.8 ಅಡಿ, ಮೊಣಕಾಲಿನಿಂದ ಟೊಂಕ 16.2 ಅಡಿ, ಟೊಂಕದಿಂದ ಹೊಕ್ಕಳ 2.9 ಅಡಿ, ಹೊಕ್ಕಳದಿಂದ ಕತ್ತಿನ ರೇಖೆ 10.11 ಅಡಿ, ಕತ್ತಿನ ರೇಖೆಯಿಂದ ಕತ್ತಿನ ಎತ್ತರ 2.8 ಅಡಿ, ಕತ್ತಿನ ಮೇಲ್ಬಾಗದಿಂದ ನೆತ್ತಿ 11 ಅಡಿ, ಬಾಹುವಿನ ಉದ್ದ 30 ಅಡಿ, ಶಿಶ್ನದ ಉದ್ದ 4 ಅಡಿ, ಕಿವಿಯ ಉದ್ದ 5.10 ಅಡಿ, ನಾಸಿಕದ ಉದ್ದ 3.9 ಅಡಿ, ಹಸ್ತದ ಮಧ್ಯದ ಬೆರಳಿನ ಉದ್ದ 8 ಅಡಿ, ತೀರ್ಬೆರಳು 7 ಅಡಿ, ಹೆಬ್ಬೆಟ್ಟು 5 ಅಡಿ ಇದೆ. ಕಿವಿ ಅಗಲ 8.10 ಅಡಿ, ಟೊಂಕದ ಅಗಲ 9.1 ಅಡಿ, ಭುಜದ ಅಗಲ 23.9 ಅಡಿ, ಎದೆಯ ಅಗಲ 12.8 ಅಡಿ, ಕತ್ತಿನ ಅಗಲ 6.4 ಅಡಿಗಳಿದೆ.

ಬಾಹುಬಲಿ ಮೂರ್ತಿಯ ಅಂಗಾಂಗಳು ಪ್ರಮಾಣ ಬದ್ಧವಾದ ಅಳತೆ ಹೊಂದಿದೆ. ಶಿಲ್ಪಿಯು ಮೂರ್ತಿ ಕೆತ್ತಲು ಕಲ್ಲಿನಲ್ಲಿ ಕೊರೆದ ಅಳತೆ ಪಟ್ಟಿ ಉಪಯೋಗಿಸಿದ್ದು, ಅದು ಮೂರ್ತಿಯ ಎಡ ಪಾದದ ಬಳಿ ಇರುವುದನ್ನು ಈಗಲೂ ಕಾಣಬಹುದು.

ವಿಂಧ್ಯಗಿರಿ ಬೆಟ್ಟದ ಮೇಲೆ 1037 ವರ್ಷಗಳಿಂದ ಅಚಲವಾಗಿ, ಆಗಸದೆತ್ತರಕ್ಕೆ ನಿಂತಿರುವ ಬಾಹುಬಲಿ ಮೂರ್ತಿ ನೋಡಿ ವಿಸ್ಮಿತರಾಗದವರಿಲ್ಲ. ಮುಖದಲ್ಲಿ ಸೂಸುತ್ತಿರುವ ಮುಗುಳ್ನಗೆಗೆ ಮನಸೋಲದವರಿಲ್ಲ. ಆ ಮುಗುಳ್ನಗೆಯಲ್ಲಿರುವ ಉದಾಸೀನ ಭಾವ ಜಗತ್ತಿನ ಜಂಜಾಟದಲ್ಲಿ ಮುಳುಗಿ ದುಃಖಿತರಾದವರಿಗೆ ವೈರಾಗ್ಯ ಮಾರ್ಗದಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ಸಂದೇಶ ಸಾರುವಂತಿದೆ.

ಬೊಪ್ಪಣ್ಣ ಕವಿ ಕ್ರಿ.ಶ. 1180ರಲ್ಲಿ ರಚಿಸಿದ ಕನ್ನಡದ ಪ್ರಥಮ ಶಿಲಾ ಶಾಸನ ಕಾವ್ಯವೆಂದು ಹೆಸರಾದ ಗೊಮ್ಮಟ ಜಿನಸ್ತುತಿಯ 37 ಪದ್ಯಗಳನ್ನು ರಚಿಸಿದ್ದು, 8ನೇ ಪದ್ಯದಲ್ಲಿ ಗೊಮ್ಮಟನ ಸೌಂದರ್ಯ, ಔನತ್ಯ, ಅತಿಶಯವನ್ನು ವರ್ಣಿಸಿದ್ದಾನೆ.

‘ಅತಿತುಂಗಾಕೃತಿಯಾದೊಡಾಗದದಳೊಳ್‌ ಸೌಂದರ್ಯಮೌನ್ನತ್ಯಮುಂನುತಸೌದರ್ಯಮುಮಾಗೆ ಮತ್ತತಿಶಯಂ ತಾನಾಗದೌನತ್ಯಮುಂ ನುತಸೌಂದರ್ಯಮುಮಾರ್ಜಿತಾಶಯಮುಂ ತನ್ನಲ್ಲಿ ನಿಂದಿರ್ದುವೇಂಕ್ಷಿತಿ ಸಂಪೂಜ್ಯಮೊ ಗೊಮ್ಮಟೇಶ್ವರಜಿನ ಶ್ರೀರೂಪಮಾತ್ಮೋಪಮಂ..

‘ಮೂರ್ತಿ ದೊಡ್ಡದಾದ (ಎತ್ತರವಾದ) ಮಾತ್ರಕ್ಕೆ ಸೌಂದರ್ಯ ಹೆಚ್ಚುವುದೆಂಬ ನಂಬಿಕೆಯಿಲ್ಲ. ಎತ್ತರವೂ ಇದ್ದು, ಸೌಂದರ್ಯವೂ ಜೊತೆಯಾದಾಗ ಅತಿಶಯವೂ ಇರುವುದೆಂದು ಹೇಳಲಾಗದು. ಪರಮಾತ್ಮ ರೂಪಿಯಾದ ಈ ಗೊಮ್ಮಟಮೂರ್ತಿ ಎತ್ತರವೂ ಹೌದು, ಕಾಮರೂಪಿಯೂ ಹೌದು. ಇದರಲ್ಲಿ ಅತಿಶಯವೂ ತುಂಬಿದೆ. ಎಂಥ ಲೋಕ ಪೂಜ್ಯವಯ್ಯ ಈ ಮಹಾಮೂರ್ತಿ’ ಎಂದು ಪ್ರಥಮ ಮನ್ಮಥನಾದ ಗೊಮ್ಮಟನನ್ನು ವರ್ಣಿಸಿದ್ದಾನೆ.

‘ಈ ಗೊಮ್ಮಟನ ಮಸ್ತದಲ್ಲಿ 64 ಗುಂಗುರು ಕೂದಲುಗಳನ್ನು ಶಿಲ್ಪಿಯು ಕೆತ್ತಿದ್ದು, ಅದು ಬಾಹುಬಲಿಯು 64 ಕಲೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರ ಪ್ರತೀಕವಾಗಿ ಕೆತ್ತಿದ್ದಾನೆ’ ಎಂದು ಪಟ್ಟಣದ ಹಿರಿಯ ವಿದ್ವಾಂಸ ಮತ್ತು ಕ್ಷೇತ್ರದ ಪ್ರತಿಷ್ಠಾಚಾರ್ಯ ಡಿ.ಪಾರ್ಶ್ವನಾಥ ಶಾಸ್ತ್ರಿ ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry