ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹದಾಯಿ ಯೋಜನೆ ಜಾರಿ ಮಾಡದಿದ್ದರೆ ಮನೆಗೆ ಕಳುಹಿಸಿ’

Last Updated 24 ಡಿಸೆಂಬರ್ 2017, 9:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹದಾಯಿ ಜಲ ವಿವಾದಕ್ಕೆ ಜಾರಿಗೆ ಸ್ಪಂದಿಸದ ಬಿಜೆಪಿಯವರನ್ನು ಮನೆಗೆ ಕಳುಹಿಸಿ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತನ್ನಿ’ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ನಗರದ ಅಮರಗೋಳ ಎಪಿಎಂಸಿ ವರ್ತಕರ ಸಂಘದ ಸಭಾಂಗಣದಲ್ಲಿ ಜೆಡಿಎಸ್‌ ಹುಬ್ಬಳ್ಳಿ–ಧಾರವಾಡ ಮಹಾನಗರ ಮತ್ತು ಗ್ರಾಮಾಂತರ ಜಿಲ್ಲಾ ರೈತ ದಳ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್‌ ಜನ್ಮ ದಿನ ಮತ್ತು ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹದಾಯಿ ಕಳಸಾ ಬಂಡೂರಿ ತಿರುವು ಯೋಜನೆಯನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದರು. ಅಲ್ಲದೆ, ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದರು. ಯೋಜನೆ ಜಾರಿಯಾಗುತ್ತದೆಂದು ಸಮಸ್ತ ರೈತರು ಸೇರಿದಂತೆ ನನಗೂ ಸಂತಸವಾಗಿತ್ತು. ಆದರೆ, ಸಹಸ್ರಾರು ಜನರ ಮುಂದೆ ಯಾವುದೇ ಆದೇಶ ಪ್ರಕಟಿಸದೇ ಮೋಸ ಮಾಡಿದರು’ ಎಂದು ದೂರಿದರು.

‘ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗೆ ಅವರು ಪತ್ರ ಬರೆಯಬೇಕಿತ್ತು. ಸಿದ್ದರಾಮಯ್ಯ ಅವರು ಬರೆದಿರುವ ಪತ್ರಕ್ಕೆ ಇನ್ನೂ ಉತ್ತರ ನೀಡಿಲ್ಲ. ಇದು ಸರಿಯಲ್ಲ’ ಎಂದು ಹೇಳಿದರು.

‘ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮಾಡುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಒಂದು ಕ್ಷಣದಲ್ಲಿ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ರೈತ ವಿಭಾಗದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ ‘ರೈತ ಪರವಾದ ಡಾ.ಸ್ವಾಮಿನಾಥನ್‌ ಆಯೋಗದ ವರದಿ ಇನ್ನೂ ಜಾರಿಯಾಗಿಲ್ಲ. ಅದನ್ನು ಯಥಾವತ್ತಾಗಿ ಜಾರಿ ಮಾಡಬೇಕು. ವರದಿ ಜಾರಿ ಮಾಡುವುದಾಗಿ ಪ್ರಧಾನಿ ಮೋದಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದರು. ಆದರೆ, ಅವರು ಮಾತಿನಂತೆ ನಡೆದುಕೊಂಡಿಲ್ಲ’ ಎಂದು ಟೀಕಿಸಿದರು.

‘ರೈತ, ಗ್ರಾಹಕ, ವಿಜ್ಞಾನಿ ಮೂವರ ಸಂಬಂಧ ಕುರಿತಾತ ಕೃಷಿ ನೀತಿ ಜಾರಿ ಆಗಬೇಕು. ರೈತರು, ರೈತರಿಗೆ ಆಸರೆಯಾಗುವ ಮೂಲಕ ಕೃಷಿ ಉತ್ಪನ್ನಗಳ ಉತ್ಪಾದನೆಗೆ ನೆರವಾಗುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಕಣ್ಮರೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಜೆಡಿಎಸ್‌ ಅಧ್ಯಕ್ಷ ರಾಜಣ್ಣ ಕೊರವಿ, ರಾಜ್ಯ ರೈತ ವಿಭಾಗ ಯುವ ಘಟಕ ಅಧ್ಯಕ್ಷ ನಾಗರಾಜ ಪಾಟೀಲ, ಪಾಲಿಕೆ ಜೆಡಿಎಸ್‌ ಸದಸ್ಯರಾದ ಅಲ್ತಾಫ್‌ ಕಿತ್ತೂರ, ಫೆಮಿದಾ ಕಿಲ್ಲೇದಾರ, ಮುಖಂಡರಾದ ನಾಗನಗೌಡ ಗದಿಗೆಪ್ಪಗೌಡ್ರ, ಸುರೇಶಗೌಡ ಪಾಟೀಲ, ಶ್ರೀಕಾಂತ ಮಗಜಿಕೊಂಡಿ, ಬಸವರಾಜ ನಾಯ್ಕರ, ಮಲ್ಲಮ್ಮ ನವಲೂರ, ಬಸಣ್ಣ ಅವರಾದಿ, ಬಸವರಾಜ ಮಾಯಕಾರ, ಸುರೇಶ ಬಾಗಮ್ಮನವರ, ಯಲ್ಲಪ್ಪಾ ಕಡಪಟ್ಟಿ, ಗಣೇಶ ದೇವಕ್ಕಿ, ಬಸವರಾಜ ಬಿ. ವಾಲಿಕಾರ, ಕಮಲಾ ಹೊಂಬಳ, ಜಯಶ್ರೀ ಸೂರ್ಯವಂಶಿ, ಭಾಗ್ಯಶ್ರೀ ಬಾಬಣ್ಣ, ದಮಯಂತಿ ಅಣ್ಣಿಗೇರಿ, ಫರಿದಾ ರೋಣದ ಇದ್ದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ

ಮಹದಾಯಿ ಯೋಜನೆ ಜಾರಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೆಡಿಎಸ್‌ ರೈತ ದಳದ ಮುಖಂಡರು ಮತ್ತು ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ರಸ್ತೆ ತಡೆ ಮಾಡಿದರು.

ಬಸವೇಶ್ವರರ ಪ್ರತಿಮೆಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದರು. ಇದರಿಂದ 15 ನಿಮಿಷಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಸಂಚಾರ ಸುಗಮಗೊಳಿಸಲು ಪೊಲೀಸರು ಹೆಣಗಾಡಿದರು. ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಡಾ.ಸ್ವಾಮಿನಾಥನ್‌ ವರದಿ ಶಿಫಾರಸಿನಂತೆ ರೈತರು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ಋಣಮುಕ್ತರಾಗಿಸಬೇಕು. ವೈಜ್ಞಾನಿಕ ರಾಷ್ಟ್ರೀಯ ಜಲನೀತಿ ಜಾರಿ ಮಾಡಬೇಕು. ರೈತರಿಗೆ ಸಾಲ ನೀಡಲು ರೈತರ ರಾಷ್ಟ್ರೀಯ ಬ್ಯಾಂಕ್‌ ರಚಿಸಬೇಕು. ವೈಜ್ಞಾನಿಕ ಬೆಳೆ ವಿಮೆ ಯೋಜನೆ ಜಾರಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT