7

ಮಹಿಳೆಯರ ವಿಶ್ವಕಪ್‌ ಹಾದಿಯ ನೆನಪುಗಳು

Published:
Updated:
ಮಹಿಳೆಯರ ವಿಶ್ವಕಪ್‌ ಹಾದಿಯ ನೆನಪುಗಳು

ಭಾರತ ಮಹಿಳೆಯರ ತಂಡ ಏಕದಿನ ವಿಶ್ವಕಪ್‌ ಗೆದ್ದರೆ ಅದು ಪುರುಷರ ಕ್ರಿಕೆಟ್ ತಂಡದವರು ಮಾಡಿದ್ದಕ್ಕಿಂತ ದೊಡ್ಡ ಸಾಧನೆಯಾಗುತ್ತದೆ...’ ಹೀಗೆ ಹೇಳಿದ್ದು ಕ್ರಿಕೆಟಿಗ ಗೌತಮ್ ಗಂಭೀರ್‌.

ಗಂಭೀರ್ ಅವರು ಹೀಗೆ ಹೇಳುವುದಕ್ಕೂ ಕಾರಣ ಇತ್ತು. ಪುರುಷರ ತಂಡ 2011ರಲ್ಲಿ ವಿಶ್ವಕಪ್‌ ಗೆದ್ದಾಗ ಟೂರ್ನಿ ಉಪಖಂಡಗಳಲ್ಲಿ ಆಯೋಜನೆಯಾಗಿತ್ತು. ಆದರೆ ಮಹಿಳೆಯರ ವಿಶ್ವಕಪ್‌ ನಡೆದದ್ದು ಇಂಗ್ಲೆಂಡ್‌ನಲ್ಲಿ. ಆ ನೆಲದಲ್ಲಿ ಆಡಲು ಪುರುಷರ ತಂಡದ ಅನುಭವಿ ಆಟಗಾರರೂ ಕಷ್ಟಪಡುತ್ತಾರೆ. ಹೀಗಿರುವಾಗ ಮಹಿಳೆಯರ ತಂಡ ಅಲ್ಲಿ ವಿಶ್ವಕಪ್‌ ಜಯಿಸುವುದು ಸಾಮಾನ್ಯ ಸಂಗತಿ ಆಗಿರಲಿಲ್ಲ.

ಈ ಕಾರಣಕ್ಕೆ ಭಾರತ ತಂಡ ಫೈನಲ್‌ನಲ್ಲಿ ಸೋತಿದ್ದರೂ ಇದು ದೊಡ್ಡ ಸಾಧನೆ ಎಂದು ಕ್ರಿಕೆಟ್ ಪಂಡಿತರು ಬಣ್ಣಿಸುತ್ತಾರೆ. ವಿಶ್ವಕಪ್‌ನಲ್ಲಿ ಭಾರತದ ಹಾದಿ ಸುಲಭವಾಗಿರಲಿಲ್ಲ. ಈ ತಂಡದಲ್ಲಿ ಆಡಿದ ಕೆಲವೇ ಕೆಲವು ಆಟಗಾರ್ತಿಯರು ಮಾತ್ರ ಹಿಂದಿನ ವಿಶ್ವಕಪ್‌ನಲ್ಲಿ ಆಡಿದ್ದರು. ಮಿಥಾಲಿ ಪಡೆ ಯುವ ಆಟಗಾರ್ತಿಯರಿಂದ ಕೂಡಿತ್ತು. ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ್ ಕೂಡ ತಂಡದಲ್ಲಿ ಇದ್ದರು.

ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆದ್ದಿದ್ದ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿತವಾಗಿತ್ತು. ಆದರೆ ಐದನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎದುರು ದೊಡ್ಡ ಸೋಲು ಎದುರಾಯಿತು. ಈ ಪಂದ್ಯದಲ್ಲಿ 115 ರನ್‌ಗಳಿಂದ ಸೋತರೆ, ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 8 ವಿಕೆಟ್‌ಗಳಿಂದ ಸೋತಿತು.

ಎರಡು ಸೋಲುಗಳು ಭಾರತದ ಆತ್ಮವಿಶ್ವಾಸ ಕುಗ್ಗಿಸಿದವು. ನಂತರದ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಗೆದ್ದ ಭಾರತ ಮತ್ತೆ ಫೀನಿಕ್ಸ್‌ ಹಕ್ಕಿಯಂತೆ ಮೇಲೆದ್ದು ಬಂದಿತು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮತ್ತೊಮ್ಮೆ ಎದುರಿಸಬೇಕಾಯಿತು. ಬಹುತೇಕರು ಈ ಪಂದ್ಯದಲ್ಲಿಯೇ ಭಾರತ ವಿಶ್ವಕಪ್‌ನಿಂದ ಹೊರಬೀಳಲಿದೆ ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಮಹಿಳೆಯರ ತಂಡ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಸೋಲುಣಿಸಿ ಫೈನಲ್ ತಲುಪಿತ್ತು.–2017ರಲ್ಲಿ ಗಮನಾರ್ಹ ಆಟವಾಡಿದ ಭಾರತ ಮಹಿಳೆಯರ ತಂಡದ ಆಟಗಾರ್ತಿಯರು

ಇಂಗ್ಲೆಂಡ್ ತಂಡವನ್ನು ಲೀಗ್ ಹಂತದಲ್ಲಿ ಮಣಿಸಿದ್ದ ಭಾರತ ಫೈನಲ್‌ನಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ. ಬೌಲರ್‌ಗಳು ವೈಫಲ್ಯ ಕಂಡರು. ಇಂಗ್ಲೆಂಡ್‌ 229 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಪೂನಮ್ ರಾವುತ್‌ (86), ಹರ್ಮನ್‌ಪ್ರೀತ್‌ (51) ಮಿಂಚಿದರು. ಉಳಿದ ಪ್ರಮುಖ ಬ್ಯಾಟ್ಸ್‌ವುಮನ್‌ಗಳು ವಿಫಲರಾದರು.  219 ರನ್‌ಗಳ ವರೆಗೆ ಹೋರಾಟ ನಡೆಸಿದ ಭಾರತ ಕೊನೆಯಲ್ಲಿ ಸೋಲು ಕಂಡಿತು.

9 ರನ್‌ಗಳಲ್ಲಿ ಭಾರತಕ್ಕೆ ವಿಶ್ವಕಪ್‌ ಕೈತಪ್ಪಿಹೋಯಿತು. ಸೋತರೂ ಭಾರತದ ಆಟಗಾರ್ತಿಯರ ವೀರೋಚಿತ ಆಟಕ್ಕೆ ಸಾಕಷ್ಟು ಮನ್ನಣೆ ಸಿಕ್ಕಿತು. ಕರ್ನಾಟಕದ ವೇದಾಕೃಷ್ಣಮೂರ್ತಿ ಹಾಗೂ ಉತ್ತರಪ್ರದೇಶದ ದೀಪ್ತಿ ಶರ್ಮಾ ಅವರಿಗೆ ಆಸ್ಟ್ರೇಲಿಯಾದ ಮಹಿಳೆಯರ ಬಿಗ್‌ಬಾಷ್‌ ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿತು.

ಬಿಸಿಸಿಐ ಹಾಗೂ ಐಸಿಸಿ ಮಹಿಳೆಯರ ಕ್ರಿಕೆಟ್‌ನಲ್ಲಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಕುರಿತು ಚಿಂತನೆ ನಡೆಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry