7

ಮನಸಿಗೂ ಡಯೆಟ್

Published:
Updated:
ಮನಸಿಗೂ ಡಯೆಟ್

‘ಲೈಫ್‌ ಇಷ್ಟೇನೇ’, ‘ಒಗ್ಗರಣೆ’, ‘ದಯವಿಟ್ಟು ಗಮನಿಸಿ’ ಚಿತ್ರಗಳಲ್ಲಿ ನಟಿಸಿರುವ ನಟಿ ಸಂಯುಕ್ತಾ ಹೊರನಾಡು ಫಿಟ್‌ನೆಸ್ ಕಾಪಾಡಿಕೊಳ್ಳುವ ವಿಚಾರದಲ್ಲಿ ತೊಂದರೆ ತೆಗೆದುಕೊಳ್ಳುವುದಿಲ್ಲ. ಡಾನ್ಸ್ ಅಂದ್ರೆ ಅವರಿಗೆ ಇಷ್ಟ. ಪ್ರತಿದಿನ ಮುಂಜಾನೆ ‘ಝುಂಬಾ ಡಾನ್ಸ್’ ಮಾಡುತ್ತಾರೆ. ಇದು ಖುಷಿಕೊಡುವುದರೊಂದಿಗೆ ದೇಹಕ್ಕೆ ಸಾಕಷ್ಟು ವ್ಯಾಯಾಮವನ್ನೂ ಒದಗಿಸುತ್ತದೆ.

‘ಡಾನ್ಸ್‌ ಸ್ಟೆಪ್‌ಗಳು ಮಾಂಸಖಂಡಗಳ ಚಟುವಟಿಕೆ ಹೆಚ್ಚಿಸುತ್ತದೆ. ತೊಡೆ ಹಾಗೂ ಹೊಟ್ಟೆ ಭಾಗದ ಕೊಬ್ಬು ಕರಗಿಸುತ್ತದೆ. ವ್ಯಾಯಾಮದ ಏಕತಾನತೆ ಇದರಲ್ಲಿ ಇರುವುದಿಲ್ಲ’ ಎನ್ನುವುದು ಅವರ ಖುಷಿ ಖುಷಿ ಮಾತು. ಬೆಳಿಗ್ಗೆ ಹೊತ್ತು ಕೊಂಚ ವಾಕ್ ಕೂಡಾ ಮಾಡ್ತಾರೆ. ಬಳಿಕ ಉಪಾಹಾರ ಸೇವಿಸಿ ಕೊಂಚ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.

ಸಂಯುಕ್ತಾ ಯೋಗ ಕೂಡ ಮಾಡುತ್ತಾರೆ. ‘ಯೋಗ ಮಾಡುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ. ದಿನಪೂರ್ತಿ ಖುಷಿ ಇರುತ್ತದೆ’ ಎನ್ನುವುದು ಅವರು ಅನುಭವದಿಂದ ಕಂಡುಕೊಂಡಿರುವ ಸತ್ಯ.

ಡಯಟ್‌ ವಿಚಾರದಲ್ಲಿ ಅವರು ಅಂಥ ಕಟ್ಟುನಿಟ್ಟು ಪಾಲಿಸಲ್ಲ. ‘ಮನಸ್ಸಿಗೆ ಇಷ್ಟವಾದದ್ದನ್ನು ತಿನ್ನುತ್ತೇನೆ. ಬಳಿಕ ವರ್ಕೌಟ್‌ ಮಾಡುತ್ತೇನೆ. ಸೇವಿಸಿದ ಆಹಾರದ ಮೇಲೆ ನನ್ನ ವರ್ಕೌಟ್‌ ಸಮಯ ನಿಗದಿ ಆಗಿರುತ್ತದೆ. ವ್ಯಾಯಾಮ ಮಾಡಿದ ಬಳಿಕವೂ ಅಷ್ಟೇ, ದೇಹಕ್ಕೆ ವಾಪಸ್‌ ಶಕ್ತಿ ಪಡೆದುಕೊಳ್ಳಲು ಏನಾದರೂ ಸತ್ವಯುತ ಆಹಾರ ಸೇವಿಸುತ್ತೇನೆ. ದೇಹಕ್ಕೆ ನೋವಾಗುವ ಹಾಗೇ ಕಠಿಣ ಡಯೆಟ್‌ ಅನುಸರಿಸಲ್ಲ’ ಎನ್ನುವುದು ಅವರ ಡಯೆಟ್ ಮಂತ್ರ.

ಡಾರ್ಕ್‌ ಚಾಕೊಲೇಟ್, ಮೊಸರನ್ನ ಇಷ್ಟಪಟ್ಟು ತಿನ್ನುತ್ತಾರೆ. ಪ್ಯಾಕ್ಡ್‌ ತಂಪುಪಾನೀಯಗಳು, ಸೋಡಾದಿಂದ ದೂರ. ಆದರೆ ತಾಜಾ ಹಣ್ಣುಗಳ ರಸವನ್ನು ಆಗಾಗ ಕುಡಿಯುವುದನ್ನು ತಪ್ಪಿಸುವುದಿಲ್ಲ.

‘ದೇಹದ ಆಕಾರ ಚೆನ್ನಾಗಿದ್ದ ಮಾತ್ರಕ್ಕೆ ಎಲ್ಲವೂ ಸಿಕ್ಕಂತೆ ಅಲ್ಲ. ಮಾನಸಿಕ ಆರೋಗ್ಯದ ಬಗ್ಗೆಯೂ ಲಕ್ಷ್ಯ ಕೊಡಬೇಕು. ಒಂಟಿಯಾಗಿದ್ದರೂ ನಮ್ಮನ್ನು ನಾವು ಖುಷಿಪಡಿಸಿಕೊಳ್ಳುತ್ತಿರಬೇಕು. ನಮ್ಮ ನಂಬಿಕೆ, ಆತ್ಮವಿಶ್ವಾಸವೇ ನಮ್ಮ ಸಾಧನೆಯ ಮೂಲ, ದೇಹಕ್ಕಷ್ಟೇ ಅಲ್ಲ, ಮನಸಿಗೂ ಡಯೆಟ್ ಬೇಕಾಗುತ್ತದೆ’ ಎನ್ನುತ್ತಾರೆ ಸಂಯುಕ್ತಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry