6

ಮಹದಾಯಿ: ಕುಡಿಯುವ ನೀರಲ್ಲೂ ರಾಜಕೀಯ ಬೆರೆಸುವುದು ಬೇಡ

Published:
Updated:
ಮಹದಾಯಿ: ಕುಡಿಯುವ ನೀರಲ್ಲೂ ರಾಜಕೀಯ ಬೆರೆಸುವುದು ಬೇಡ

ಮಹದಾಯಿ ನದಿಯ ನೀರಿಗಾಗಿ ಹುಬ್ಬಳ್ಳಿ– ಧಾರವಾಡ ಮತ್ತು ಸುತ್ತಲಿನ ಪ್ರದೇಶದ ಜನರು ಅನೇಕ ವರ್ಷಗಳಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ ಎಂಬುದು ನಮ್ಮ ರಾಜಕಾರಣಿಗಳಿಗೆ ಈಗ ನೆನಪಾಗಿದೆ. ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸಲು ಶುರು ಮಾಡಿದ್ದಾರೆ. ಅದಕ್ಕೆ ಏನು ಕಾರಣ ಎಂದು ತಿಳಿಯಲು ದೊಡ್ಡ ಪತ್ತೇದಾರಿಕೆ ಬೇಕಿಲ್ಲ. ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಮಹದಾಯಿಗೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿದೆ. ಅದನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಪಕ್ಷಗಳೆಲ್ಲ ಪೈಪೋಟಿಗೆ ಇಳಿದಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಪತ್ರಕ್ಕೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌ ನೀಡಿದ ಉತ್ತರವನ್ನೇ ದೊಡ್ಡ ಸಾಧನೆ ಎಂಬಂತೆ ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ‘ಗೋವಾ ಮುಖ್ಯಮಂತ್ರಿ ಈ ವಿಷಯದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ; ಕರ್ನಾಟಕದ ಮುಖ್ಯಮಂತ್ರಿ ಸ್ವತಃ ಅನೇಕ ಸಲ ಪತ್ರ ಬರೆದಿದ್ದರೂ ಅದಕ್ಕೆ ಉತ್ತರಿಸಿರಲಿಲ್ಲ. ಈಗ ಬಿಜೆಪಿ ಮುಖಂಡರಿಗೆ ಏಕಾಏಕಿ ಉತ್ತರ ಕಳಿಸಿರುವುದರ ಹಿಂದೆ ರಾಜಕೀಯ ಇದೆ’ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬರೆದ ಪತ್ರಗಳಿಗೆ ಉತ್ತರಿಸದ ಪರಿಕ್ಕರ್‌, ತಮ್ಮ ಪಕ್ಷದ ಮುಖಂಡರೊಬ್ಬರ ಪತ್ರಕ್ಕೆ ತರಾತುರಿಯಲ್ಲಿ ಉತ್ತರಿಸುವುದು ರಾಜಕೀಯ ಅಲ್ಲದೆ ಇನ್ನೇನು? ಪರಿಕ್ಕರ್‌ ಉತ್ತರದಲ್ಲೂ ಅಂತಹ ಸ್ಪಷ್ಟತೆ ಇಲ್ಲ. ‘ಮಾನವೀಯತೆಯ ಆಧಾರದಲ್ಲಿ, ಕರ್ನಾಟಕದ ಬರಪೀಡಿತ ಪ್ರದೇಶಗಳ ಅನುಕೂಲಕ್ಕಾಗಿ ಮಾತ್ರ ನ್ಯಾಯೋಚಿತ ಪ್ರಮಾಣದ ಕುಡಿಯುವ ನೀರಿನ ಬಳಕೆಗೆ ತಾತ್ವಿಕವಾಗಿ ಗೋವಾದ ವಿರೋಧ ಇಲ್ಲ. ಆದರೆ ಈ ಬಗ್ಗೆ ಪರಸ್ಪರ ಚರ್ಚೆ ನಡೆಯಬೇಕು’ ಎಂಬುದು ಅವರ ಪತ್ರದ ತಿರುಳು. ಅಂದರೆ ಕರ್ನಾಟಕ, ಗೋವಾ, ಮಹಾರಾಷ್ಟ್ರ ಈ ಮೂರೂ ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಚರ್ಚೆಯಾಗಿ ಒಮ್ಮತ ಮೂಡಬೇಕು. ಅದು ಯಾವಾಗ ಎನ್ನುವುದರ ಬಗ್ಗೆ ಯಾವುದೇ ಇಂಗಿತವಾಗಲೀ, ಸೂಚನೆಯಾಗಲೀ ಇಲ್ಲ. ಹೀಗಿರುವಾಗ ‘ಇದೊಂದು ರಾಜಕೀಯ ಗಿಮಿಕ್‌. ಚುನಾವಣೆ ಗೆಲ್ಲಲು ನಡೆಸುತ್ತಿರುವ ತಂತ್ರ’ ಎಂದು ಜನ ಭಾವಿಸಿದರೆ ಅದರಲ್ಲಿ ಯಾರೂ ತಪ್ಪು ಹುಡುಕುವಂತಿಲ್ಲ.

ಮಹದಾಯಿ ವಿವಾದಕ್ಕೆ ಒಂದು ಕಾಯಂ ಪರಿಹಾರ ಹುಡುಕುವ ಕೆಲಸವನ್ನು ಕಾಂಗ್ರೆಸ್‌, ಬಿಜೆಪಿ ಅಥವಾ ಜೆಡಿಎಸ್‌ ತಮ್ಮ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಮಾಡಲೇ ಇಲ್ಲ. ನಮ್ಮ ರಾಜ್ಯದಲ್ಲಿ ಮಹದಾಯಿ ಎಂಬ ಹೆಸರಿನಿಂದ ಹರಿದು ಮಹಾರಾಷ್ಟ್ರದ ಮೂಲಕ ಗೋವಾ ಪ್ರವೇಶಿಸಿ ಮಾಂಡೋವಿ ಎಂದು ಕರೆಸಿಕೊಳ್ಳುವ ಈ ನದಿಯ 7.56 ಟಿಎಂಸಿ ಅಡಿ ನೀರನ್ನು ಹುಬ್ಬಳ್ಳಿ–ಧಾರವಾಡ ಮತ್ತು ಸುತ್ತಲಿನ ಅನೇಕ ಹಳ್ಳಿ– ಪಟ್ಟಣಗಳ ಕುಡಿಯುವ ನೀರಿನ ದಾಹ ತಣಿಸಲು ಬಳಸಿಕೊಳ್ಳುವ ವಿಷಯವಂತೂ ಅಂತರರಾಜ್ಯ ಜಲವಿವಾದದ ಸ್ವರೂಪ ಪಡೆದುಕೊಂಡಿದೆ. ಎಲ್ಲ ಬಗೆಯ ಜಲಸಂಪನ್ಮೂಲ ಬಳಕೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡಬೇಕು ಎಂಬುದು ಅಂತರರಾಷ್ಟ್ರೀಯ ಮಟ್ಟದಲ್ಲೂ ಒಪ್ಪಿಕೊಂಡು ಬಂದಂತಹ ನೀತಿ. ಕರ್ನಾಟಕ ಕೇಳುತ್ತಿರುವುದು ಕುಡಿಯುವುದಕ್ಕೆ ನೀರು. ಅದನ್ನೂ ಗೋವಾ ವಿರೋಧಿಸುತ್ತಲೇ ಬಂದಿತ್ತು. ಕೇಂದ್ರ, ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಆಯಾ ಕಾಲಕ್ಕೆ ಅಧಿಕಾರದಲ್ಲಿ ಇದ್ದ ಪಕ್ಷಗಳ ಮರ್ಜಿಗೆ ಅನುಗುಣವಾಗಿ ರಾಜಕಾರಣಿಗಳ, ಜನಪ್ರತಿನಿಧಿಗಳ ಒಲವು– ನಿಲುವುಗಳು ಸಹ ಬದಲಾಗುತ್ತಲೇ ಬಂದಿವೆ. ಮಹದಾಯಿ ನೀರು ಬಳಸಿಕೊಳ್ಳಲು ಕೇಂದ್ರ ಜಲ ಆಯೋಗವು ಕರ್ನಾಟಕಕ್ಕೆ ನೀಡಿದ್ದ ತಾತ್ವಿಕ ಒಪ್ಪಿಗೆಯನ್ನು ತಡೆಹಿಡಿದದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ. ಕರ್ನಾಟಕದ ವಿರೋಧದ ನಡುವೆಯೂ ನ್ಯಾಯಮಂಡಳಿ ರಚನೆಯಾಗಿದ್ದು ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ. ಅದಕ್ಕೂ ಮುನ್ನ 2007ರಲ್ಲಿ ಗೋವಾ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ಸಿನ ಆಗಿನ ಅಧ್ಯಕ್ಷೆ ಸೋನಿಯಾ ಗಾಂಧಿ, ‘ಮಹದಾಯಿಯ ಒಂದು ಹನಿ ನೀರನ್ನೂ ತಿರುಗಿಸಲು ಬಿಡುವುದಿಲ್ಲ’ ಎಂದು ಘೋಷಣೆ ಮಾಡಿದ್ದರು. ಮಹದಾಯಿ ನೀರು ಆಗ ಅಲ್ಲಿ ಚುನಾವಣೆಯ ವಿಷಯವಾಗಿತ್ತು. ಆಗ ಕರ್ನಾಟಕದಲ್ಲಿ ಇದ್ದದ್ದು ಜೆಡಿಎಸ್– ಬಿಜೆಪಿ ಮೈತ್ರಿ ಸರ್ಕಾರ. ಈಗ ಅಧಿಕಾರ ಅದಲು ಬದಲಾಗಿದೆ. ‘ಕರ್ನಾಟಕದ ಬೇಡಿಕೆ ಒಪ್ಪಲು ಸಾಧ್ಯವೇ ಇಲ್ಲ’ ಎಂದು ಇದುವರೆಗೂ ಹೇಳುತ್ತಲೇ ಬಂದಿದ್ದ ಪರಿಕ್ಕರ್‌ ಮೃದು ಧೋರಣೆ ತಳೆದಿದ್ದರೂ ಅಲ್ಲಿನ ರಾಜಕೀಯ ಪಕ್ಷಗಳು ಮಣಿಯುತ್ತಿಲ್ಲ. ಇದು ರಾಜಕೀಯ ಲಾಭ– ನಷ್ಟದ ಪರಿಗಣನೆಯ ವಿಷಯ ಆಗುತ್ತಿರುವುದು ಶೋಚನೀಯ. ಇನ್ನಾದರೂ ಬಿಜೆಪಿ– ಕಾಂಗ್ರೆಸ್‌– ಜೆಡಿಎಸ್‌ ಈ ವಿಷಯದಲ್ಲಿ ಭಿನ್ನಾಭಿಪ್ರಾಯ ಬದಿಗಿಡಬೇಕು. ಇಷ್ಟುದಿನ ಚಿಲ್ಲರೆ ರಾಜಕಾರಣ ಮಾಡಿದ್ದು ಸಾಕು. ರಾಜ್ಯದ ಹಿತರಕ್ಷಣೆ ಬಗ್ಗೆ ಒಮ್ಮತ ಪ್ರದರ್ಶಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry