5

‘ಮತದಾನ ಬಹಿಷ್ಕಾರ ಭಾರತ’ದ ಪ್ರಶ್ನೆಗಳು

Published:
Updated:

ಗುಜರಾತ್‌ ಚುನಾವಣೆಯ ಸೋಲು– ಗೆಲುವಿನ ಚರ್ಚೆ ನಿಧಾನಕ್ಕೆ ಹಿಂದೆ ಸರಿಯುತ್ತಿದೆ. ಕಾಂಗ್ರೆಸ್‌ ಮೈಕೊಡವಿ ಎದ್ದ ಬಗ್ಗೆ, ಬಿಜೆಪಿಯ ತ್ರಾಸದ ಗೆಲುವು ಅಮಿತ್‍ ಷಾ ಮತ್ತು ನರೇಂದ್ರ ಮೋದಿಯವರಲ್ಲಿ ಆತಂಕ ಮೂಡಿಸಿದ ಬಗ್ಗೆ ಹಾಗೂ ಜನಸಾಮಾನ್ಯರ ಪ್ರತಿನಿಧಿಯಾಗಿ ಗೆದ್ದ ಜಿಗ್ನೇಶ್ ಮೆವಾನಿ ಪ್ರಜಾಪ್ರಭುತ್ವದ ಬಗ್ಗೆ ‌ಭರವಸೆ ಮೂಡಿಸಿರುವ ಬಗೆಗಿನ ಮಾತುಗಳು ಮುಂಬರುವ ಚುನಾವಣೆಗಳ ಲೆಕ್ಕಾಚಾರಗಳಿಗೆ ಅಳತೆಗೋಲಾಗುತ್ತಿವೆ. ಇದೇ ಹೊತ್ತಲ್ಲಿ ಗುಜರಾತಿನ ವಿಧಾನಸಭಾ ಚುನಾವಣೆಯಲ್ಲಿ 5.5 ಲಕ್ಷ ಮತದಾರರು (ಶೇ 1.8) ಚುನಾವಣಾ ಕಣದಲ್ಲಿದ್ದ ಯಾವ ಅಭ್ಯರ್ಥಿಗೂ ಮತ ಚಲಾಯಿಸದೆ ‘ನೋಟಾ’ (NOTA - None of the above. ಅಂದರೆ ಅಭ್ಯರ್ಥಿಗಳಲ್ಲಿ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದು ಅರ್ಥ) ಒತ್ತಿದ್ದಾರೆ ಎಂಬುದು ಸಹ ಪ್ರಮುಖ ಅಂಶ.

2014ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾರರಿಗೆ ನೋಟಾ ಆಯ್ಕೆಯನ್ನು ನೀಡಲಾಗಿತ್ತು. ಇದನ್ನು ನೀಡುವುದಕ್ಕೂ ಮುಂಚಿನಿಂದಲೇ ಜನರು ಮತ ಬಹಿಷ್ಕರಿಸುವ ಮೂಲಕ ಆಡಳಿತದ ವಿರುದ್ಧ ದೊಡ್ಡ ಧ್ವನಿಯನ್ನು ದಾಖಲಿಸುತ್ತಾ ಬಂದಿದ್ದಾರೆ. ಈ ಧ್ವನಿಯ ಶಕ್ತಿ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಹೀಗೆ ವಿಶ್ವದಲ್ಲಿಯೇ ಬೃಹತ್ ಪ್ರಜಾಪ್ರಭುತ್ವ ಹೊಂದಿದ ಇಂಡಿಯಾದ ಒಳಗೇ ಸದ್ದಿಲ್ಲದೆ ‘ಮತದಾನ ಬಹಿಷ್ಕಾರ ಭಾರತ’ವೊಂದು ರೂಪುಗೊಳ್ಳುತ್ತಿರುವುದು ಅಚ್ಚರಿಯಾದರೂ ವಾಸ್ತವ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಸಿದ್ಧತೆಯಲ್ಲಿ ತೊಡಗಿವೆ. 2019ರಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದೆ. ಈ ಸಂದರ್ಭಗಳಲ್ಲಿಯೂ ಮತದಾನ ಬಹಿಷ್ಕಾರದ ಸಂಗತಿಗಳು ಸದ್ದು ಮಾಡಬಹುದು. ಅಂತೆಯೇ ನೋಟಾ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಈ ಸಂದರ್ಭದಲ್ಲಿ ಈ ‘ಮತದಾನ ಬಹಿಷ್ಕಾರ ಭಾರತ’ ಸೂಚಿಸುತ್ತಿರುವುದು ಏನನ್ನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಿದೆ.

ಮತದಾನ ಬಹಿಷ್ಕರಿಸುವ ನಿರ್ಧಾರಗಳು ಆಡಳಿತದ ವಿರುದ್ಧ ಜನರೊಳಗಿದ್ದ ಸಿಟ್ಟು–ಸೆಡವುಗಳನ್ನು ಪ್ರತಿರೋಧದ ರೂಪದಲ್ಲಿ ಹೊರ ಹಾಕುತ್ತವೆ. ಇಂತಹ ಬಹಿಷ್ಕಾರವು ಬಹುತೇಕ ಸಂದರ್ಭಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ಒಂದೇ ಧ್ವನಿಯಿಂದ ಹೇಳುವ ಪ್ರಯತ್ನದಂತೆ ಕಾಣುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಬಹಿಷ್ಕಾರ ತಪ್ಪಾದರೂ ಅದು ಶಿಕ್ಷಾರ್ಹವಲ್ಲ. ಅಂತೆಯೇ, ನೋಟಾ ಆಯ್ಕೆಯನ್ನು ಜನರಿಗೆ ನೀಡಿದ ಮೇಲೆ ಇದು ಕೂಡ ಪ್ರಜಾಪ್ರಭುತ್ವದ ಲಕ್ಷಣವಾಗಿ ರೂಪುಗೊಂಡಿದೆ. ಮತದಾನ ಬಹಿಷ್ಕಾರ ಮುಖ್ಯವಾಗಿ ಜನಪ್ರತಿನಿಧಿಗಳ ಆಡಳಿತ ವೈಖರಿಯ ಪ್ರತಿಬಿಂಬವೂ ಆಗಿರುತ್ತದೆ.

2013ರಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕಡೆ ಮತದಾನ ಬಹಿಷ್ಕರಿಸಿದ ಸುದ್ದಿಯಾಗಿತ್ತು. ಆಗ ಆಡಳಿತದಲ್ಲಿ ಇದ್ದದ್ದು ಬಿಜೆಪಿ.  ಮತದಾನ ಬಹಿಷ್ಕರಿಸಿದ ಜನರ ಬಹುತೇಕ ಬೇಡಿಕೆಗಳು ಮೂಲ ಸೌಕರ್ಯಗಳಿಗೆ ಸಂಬಂಧಿಸಿದವು. ಅಂದರೆ ಜನರಿಗೆ ಅತ್ಯಗತ್ಯವಾದ ಕುಡಿಯುವ ನೀರು, ವಿದ್ಯುತ್‌, ಒಳ್ಳೆಯ ರಸ್ತೆ, ವಸತಿ, ಪರಿಸರದ ಸ್ವಚ್ಛತೆಗೆ ಸಂಬಂಧಿಸಿದವು. ಈ ಬಹಿಷ್ಕಾರಗಳಲ್ಲಿ ಬಹುಪಾಲು ಹಳ್ಳಿಗಳಲ್ಲೇ ಹುಟ್ಟಿರುವುದು ಗಮನಾರ್ಹ. ಕೆಲವು ಬಹಿಷ್ಕಾರಗಳು ರಾಜಕೀಯಪ್ರೇರಿತವಾಗಿದ್ದರೂ ಹೆಚ್ಚಿನವು ನಿಜವಾದ ಪ್ರತಿರೋಧಗಳೇ ಆಗಿದ್ದವು.

2014ರ ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ದೇಶದಾದ್ಯಂತ ಮತದಾನ ಬಹಿಷ್ಕಾರದ ವರದಿಗಳಾಗಿದ್ದವು. ಈ ಬಹಿಷ್ಕಾರಕ್ಕೆ ಜನರು ನೀಡಿದ ಕಾರಣಗಳನ್ನು ನೋಡಿದರೆ ಇಡೀ ದೇಶ ಎದುರಿಸುತ್ತಿರುವ ಪ್ರಮುಖ ಬಿಕ್ಕಟ್ಟುಗಳ ಪರಿಚಯವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಜನಸಾಮಾನ್ಯರು ಕನಿಷ್ಠ ಸೌಲಭ್ಯಗಳಿಗಾಗಿ ಪಡಿಪಾಟಲು ಪಡುತ್ತಿರುವ ಚಿತ್ರಗಳು ಸಾಲುಗಟ್ಟಿ ನಿಲ್ಲುತ್ತವೆ. ಈ ಚಿತ್ರಗಳು ‘ಮತದಾನ ಬಹಿಷ್ಕಾರ ಭಾರತ’ದ ಬಹುರೂಪಗಳನ್ನು ತೆರೆದು ತೋರುತ್ತವೆ. ಈ ಬೇಡಿಕೆಗಳು ದಿಢೀರನೆ ಹುಟ್ಟಿದವುಗಳಲ್ಲ, ಬದಲಾಗಿ ಶಾಶ್ವತವಾಗಿ ಕುರುಡು– ಕಿವುಡಾದ ಸರ್ಕಾರವನ್ನು ಎಚ್ಚರಿಸುವ ಭಾಗವಾಗಿ ಹುಟ್ಟಿದವು. ಈ ಬಹಿಷ್ಕಾರಗಳ ಹಿಂದೆ, ‘ಚುನಾಯಿತ ಅಭ್ಯರ್ಥಿ ಮತ್ತೆ ಸಿಗುವುದಿಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸುವುದಿಲ್ಲ’ ಎನ್ನುವ ಆತಂಕವಿದೆ. ಇದು ಚುನಾವಣಾ ವ್ಯವಸ್ಥೆಯ ಬಗ್ಗೆ, ಸರ್ಕಾರಗಳ ಬಗ್ಗೆ ಜನರ ವಿಶ್ವಾಸ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತಿದೆ.

ಮತದಾನ ಬಹಿಷ್ಕಾರದ ಬಹುಪಾಲು ಸುದ್ದಿಗಳು ಪತ್ರಿಕೆಗಳ ಸ್ಥಳೀಯ ಪುಟಗಳಲ್ಲಿರುತ್ತವೆ. ಹೀಗೆ ಸಿಟ್ಟು–ಸೆಡವಿನಿಂದ ಗ್ರಾಮಸ್ಥರು ತೆಗೆದುಕೊಂಡ ಬಹಿಷ್ಕಾರದ ನಿರ್ಧಾರವನ್ನು ಕೊನೆಯ ಗಳಿಗೆಯಲ್ಲಿ ಬದಲಾಯಿಸಿದ ಸಂದರ್ಭಗಳೂ ಇವೆ. ಅಂತೆಯೇ ಬಹಿಷ್ಕಾರದ ತೀರ್ಮಾನಕ್ಕೆ ಗಟ್ಟಿಯಾಗಿ ಅಂಟಿಕೊಂಡ ಪ್ರಸಂಗಗಳೂ ಇವೆ. ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಗಳು ಅಧಿಕಾರ ವಿಕೇಂದ್ರೀಕರಣ ರಾಜಕಾರಣದ ಫಲಾಫಲಗಳಿಗೆ ಕನ್ನಡಿ ಹಿಡಿಯುವಂತಿರುತ್ತವೆ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಮೂಲ ಸೌಕರ್ಯ ಇಲ್ಲದ್ದಕ್ಕೆ ಹಳ್ಳಿಗಳು ಚುನಾವಣೆಯನ್ನು ಬಹಿಷ್ಕರಿಸುವುದು ಏನನ್ನು ಸೂಚಿಸುತ್ತದೆ? ಪ್ರಜಾಪ್ರಭುತ್ವದ ಸೋಲನ್ನಲ್ಲವೇ?

ಮತ ಚಲಾಯಿಸುವಂತೆ ಅಧಿಕಾರಿಗಳು ಜನರ ಮನವೊಲಿಸಬಹುದು, ಕಣದಲ್ಲಿರುವ ಸ್ಪರ್ಧಿಗಳು ಭರವಸೆ ನೀಡಿ ಮತ ಹಾಕಲು ಪ್ರೇರೇಪಿಸಬಹುದು.

ಹೀಗಾಗಿ ಮತದಾನ ಬಹಿಷ್ಕಾರ ಮಾಡಿದವರು, ಕೊನೆಗೆ ಮತ ಚಲಾಯಿಸಲೂಬಹುದು. ಇಲ್ಲಿ ಜನಪ್ರತಿನಿಧಿಗಳನ್ನು ಚುನಾಯಿಸುವ ಮತ್ತು ಚುನಾಯಿಸದಿರುವ ಎರಡೂ ಮುಖಗಳನ್ನು ಕಾಣಬಹುದು. ಅಂತೆಯೇ ಮತದಾರರಿಗೂ, ಸ್ಪರ್ಧಿಗಳಿಗೂ ಇವು ಪ್ರಾಥಮಿಕ ಪಾಠಗಳೂ ಹೌದು. ಈ ಪಾಠಗಳು ಪರಿಣಾಮಕಾರಿಯಾಗಿ ಅವರನ್ನು ತಟ್ಟಬೇಕಷ್ಟೆ.

ಮತದಾನ ಬಹಿಷ್ಕಾರವನ್ನು ರಾಜಾರೋಷವಾಗಿ ಘೋಷಿಸುವ ಜನ ಒಂದು ಕಡೆ ಇದ್ದರೆ, ಮತ ಚಲಾಯಿಸದೆ ನುಣುಚಿಕೊಳ್ಳುವ ಜನರ ಸಂಖ್ಯೆಯೂ ದೊಡ್ಡದಿದೆ. ಹೀಗೆ ಮತ ಚಲಾಯಿಸದ ಶೇ 20ರಿಂದ 30ರಷ್ಟು ಪ್ರಜೆಗಳು ಆ ಮೂಲಕ ತಮ್ಮೊಳಗಿನ ಸಾತ್ವಿಕ ಸಿಟ್ಟನ್ನು ಪ್ರಕಟಿಸುತ್ತಿರಬಹುದು. ಆದರೆ ನುಣುಚಿಕೊಳ್ಳುವುದು ಪರಿಹಾರ ಅಲ್ಲ. ಈ ಬಗೆಯ ಪ್ರತಿರೋಧಗಳ ಹಿಂದಿರುವ ಕಾರಣಗಳ ಬಗ್ಗೆ ಚುನಾಯಿತ ಸದಸ್ಯರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಗಿರುವ ಸ್ಥಿತಿಯನ್ನು ನೋಡಿದರೆ ಅವರು ಕಲಿಯುತ್ತಾರೆ, ತಿದ್ದಿಕೊಳ್ಳುತ್ತಾರೆ ಎಂದು ಭಾವಿಸುವುದು ಕೂಡ ಅತಿಯಾದ ನಿರೀಕ್ಷೆಯಂತೆ ಕಾಣುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry