ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಸಂಚಾರ ದಟ್ಟಣೆ

Last Updated 25 ಡಿಸೆಂಬರ್ 2017, 5:39 IST
ಅಕ್ಷರ ಗಾತ್ರ

ಮೈಸೂರು: ಕ್ರಿಸ್‌ಮಸ್‌ ಹಾಗೂ ಮಾಗಿ ಉತ್ಸವಕ್ಕೆ ಪ್ರವಾಸಿಗರ ದಂಡು ಹರಿದು ಬಂದ ಪರಿಣಾಮ ನಗರದಲ್ಲಿ ಭಾನುವಾರ ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ವಸ್ತುಪ್ರದರ್ಶನ ಮೈದಾನ, ಪ್ರಾಣಿ ಸಂಗ್ರಹಾಲಯ ಹಾಗೂ ಅಂಬಾವಿಲಾಸ ಅರಮನೆಯ ಸುತ್ತಲಿನ ಎಲ್ಲ ಮಾರ್ಗಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಬೆಂಗಳೂರು–ಮೈಸೂರು ರಸ್ತೆಯಲ್ಲಿಯೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕ್ರಿಸ್‌ಮಸ್‌ ಪ್ರಯುಕ್ತ ಸೋಮ ವಾರವೂ ರಜೆ ಇರುವುದರಿಂದ ವಾರಾಂತ್ಯ ಪ್ರವಾಸದ ಹುಮ್ಮಸ್ಸು ಹೆಚ್ಚಿರುವುದು ಕಂಡುಬಂದಿತು. ಶನಿವಾರದಿಂದಲೇ ಮೈಸೂರಿನತ್ತ ಮುಖ ಮಾಡಿದ್ದ ಪ್ರವಾಸಿಗರು ಕೊಡಗು, ತಮಿಳುನಾಡು ಹಾಗೂ ಕೇರಳದ ಕಡೆಯೂ ಪ್ರವಾಸ ಬೆಳೆಸಿದರು. ಹೀಗಾಗಿ, ಬೆಂಗಳೂರು–ಮೈಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಂಜೆ 4 ಗಂಟೆಯ ಬಳಿಕ ಇದು ಇನ್ನಷ್ಟು ಹೆಚ್ಚಾತು.

ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್ ಬಳಿ ಬಹುದೂರದವರೆಗೂ ವಾಹನಗಳು ನಿಂತಿದ್ದವು. ಮಾಗಿ ಉತ್ಸವ ಕಣ್ತುಂಬಿಕೊಳ್ಳಲು ಪ್ರವಾಸಿಗರು ಭಾನುವಾರ ಬೆಳಿಗ್ಗೆ ತಂಡೋಪ ತಂಡವಾಗಿ ಅರಮನೆಗೆ ಭೇಟಿ ನೀಡಿದರು. ಕೋಟೆ ಮಾರಮ್ಮನ ದೇಗುಲದ ಸಮೀಪ ನಿಗದಿಪಡಿಸಿದ ಸ್ಥಳದಲ್ಲಿ ವಾಹನ ನಿಲುಗಡೆಗೆ ಜಾಗವಿರಲಿಲ್ಲ. ಹೀಗಾಗಿ, ಅನೇಕರು ರಸ್ತೆಬದಿಯಲ್ಲಿ ಕಾರು, ದ್ವಿಚಕ್ರ ವಾಹನ ನಿಲ್ಲಿಸಿದ್ದರು.

ವಸ್ತುಪ್ರದರ್ಶನ ಆರಂಭವಾದ ಪರಿಣಾಮ ಮಧ್ಯಾಹ್ನ 3 ಗಂಟೆಯ ಬಳಿಕ ದೊಡ್ಡಕೆರೆ ಏರಿಯ ಮೇಲೆ ವಾಹನ ಸಂಚಾರಕ್ಕೂ ತೊಂದರೆ ಉಂಟಾಯಿತು. ಇಟ್ಟಿಗೆಗೂಡು, ಎಂ.ಜಿ ರಸ್ತೆ, ಆಲ್ಬರ್ಟ್‌ ವಿಕ್ಟರ್‌ ರಸ್ತೆ, ಹಾರ್ಡಿಂಜ್‌ ವೃತ್ತ, ಕೆ.ಆರ್‌.ವೃತ್ತದಲ್ಲಿಯೂ ವಾಹನ ಸಾಲುಗಟ್ಟಿ ನಿಂತಿದ್ದವು.

ವಸ್ತುಪ್ರದರ್ಶನ 29ರವರೆಗೆ ಮುಂದುವರಿಕೆ

ಮೈಸೂರು: ದಸರಾ ವಸ್ತುಪ್ರದರ್ಶನವನ್ನು ಡಿ.29ರವರೆಗೆ ವಿಸ್ತರಿಸಲು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರಕ್ಕೆ ಅನುಮತಿ ಲಭಿಸಿದೆ. ದೊಡ್ಡಕೆರೆ ಮೈದಾನದಲ್ಲಿರುವ ಪ್ರಾಧಿಕಾರದ ಆವರಣದಲ್ಲಿ ಸೆ.20ರಂದು ಆರಂಭವಾಗಿದ್ದ 90 ದಿನಗಳ ವಸ್ತುಪ್ರದರ್ಶನ ಡಿ.19ಕ್ಕೆ ಮುಗಿಯಬೇಕಿತ್ತು. ಅದನ್ನು ಡಿ.24ರವರೆಗೆ ವಿಸ್ತರಿಸಲಾಗಿತ್ತು. ಬೇಡಿಕೆ ಬಂದ ಕಾರಣ ಮತ್ತೆ ವಿಸ್ತರಿಸಲು ಪ್ರವಾಸೋದ್ಯಮ ಇಲಾಖೆ ಅವಕಾಶ ನೀಡಿದೆ.

ವಸ್ತುಪ್ರದರ್ಶನಕ್ಕೆ ಭಾನುವಾರ ಜನಸಾಗರವೇ ಹರಿದುಬಂತು. ಹೀಗಾಗಿ, ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆ ನಿರ್ಮಾಣವಾಗಿತ್ತು. ‘ಸುಮಾರು 40 ಸಾವಿರ ಜನ ಭೇಟಿ ನೀಡಿದ್ದರು. ಇದು ದಾಖಲೆ. ಕ್ರಿಸ್‌ಮಸ್‌ ರಜೆ ಕಾರಣ ಈ ವಾರ ಹೆಚ್ಚಿನ ಜನ ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶಶಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT