6

ಕ್ರೈಸ್ತರಿಂದ ಯೇಸು ಸಂದೇಶ ಸ್ಮರಣೆ

Published:
Updated:

ರಾಯಚೂರು: ಕ್ರೈಸ್ತ ಧರ್ಮ ಸಂಸ್ಥಾಪಕ ಯೇಸು ಕ್ರಿಸ್ತರ 2017ನೇ ಜನ್ಮದಿನ ಕ್ರಿಸ್‌ಮಸ್‌ ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಡಿಸೆಂಬರ್‌ 25 ರ ಮೊದಲು ಆಕಾಶದಲ್ಲಿ ಚುಕ್ಕೆಯೊಂದು ಕಾಣಿಸಿ ಕೊಂಡು ಯೇಸುಸ್ವಾಮಿ ಜನಿಸುವ ಮುನ್ಸೂಚನೆ ನೀಡಿತು. ತುಂಬಾ ಬಡಕುಟುಂಬದ ತಾಯಿ ಮೇರಿ ಡಿ. 25 ರಂದು ಗೊದಲಿಯಲ್ಲಿ ಯೇಸುವಿಗೆ ಜನ್ಮ ನೀಡಿದರು. ದೇವರ ಸ್ವರೂಪ ಯೇಸು ಜನಿಸಿದ ತಾಣವನ್ನು ಹುಡುಕಿಕೊಂಡು ಮೂವರು ಪಂಡಿತರು ಅಲ್ಲಿಗೆ ಬಂದರು. ಬಾಲ ಯೇಸುವಿನ ವಿಶೇಷವನ್ನು ಮೇರಿ ದಂಪತಿಗೆ ವಿವರಿಸಿದರು.

ಡಿಸೆಂಬರ್‌ 24 ರ ಮಧ್ಯರಾತ್ರಿ ಯೇಸುಸ್ವಾಮಿ ಜನಿಸಿದ್ದರಿಂದ, ಸಂಜೆ ಯಿಂದಲೇ ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಆರಂಭವಾಗುತ್ತದೆ. ಮಧ್ಯರಾತ್ರಿ 12 ಕ್ಕೆ ವಿಶೇಷ ಪೂಜೆ, ಭಜನೆ ಹಾಗೂ ಬಾಲ ಯೇಸುವಿನ ಸಂದೇಶಗಳ ಪಠಣ ಮಾಡಲಾಗುತ್ತದೆ. ಮನೆಯಲ್ಲಿ ಶಿಶುವೊಂದು ಜನಿಸಿದಾಗ ಏರ್ಪಡುವ ಸಂಭ್ರಮವು ಕ್ರೈಸ್ತರ ಮನೆಗಳಲ್ಲಿ ಈಗ ಕಂಡು ಬರುತ್ತದೆ. ಪರಸ್ಪರ ಸಿಹಿ ಹಂಚಿಕೊಳ್ಳುವುದು. ನೆರೆಹೊರೆಯ ಜನರಿಗೆ, ಅಂಧರಿಗೆ, ಅಂಗವಿಕಲರಿಗೆ ಹಾಗೂ ಸ್ನೇಹಿತರಿಗೆ, ಬಂಧು ಬಳಗಕ್ಕೆ ಕೇಕ್‌ ಅಥವಾ ಹಣ್ಣು, ಊಟ ಕೊಟ್ಟು ಸಂಭ್ರಮವನ್ನು ಆಚರಿಸುವುದು ಕ್ರೈಸ್ತರ ವಾಡಿಕೆ.

ವಿಶೇಷವೆಂದರೆ, ಯೇಸು ಜನಿಸಿದ ಡಿ. 24 ರ ರಾತ್ರಿಯುದ್ದಕ್ಕೂ ಜಾಗರಣೆ ನಡೆಯುತ್ತದೆ. 25 ರಿಂದ ಆರಂಭಿಸಿ ಹೊಸ ವರ್ಷ ಜನವರಿ 1 ವರೆಗೂ ಹಬ್ಬದ ಸಂಭ್ರಮ ಮುಂದುವರಿಯುತ್ತದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು, ದೇವದುರ್ಗದ ಕೆಲ ಭಾಗಗಳು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದವು. ಹೀಗಾಗಿ ಜಿಲ್ಲೆಯಾದ್ಯಂತ ತುಂಬಾ ಹಳೆಯ ಕಾಲದ ಚರ್ಚ್‌ಗಳಿವೆ ಮತ್ತು ಕ್ರೈಸ್ತರ ಸಂಖ್ಯೆಯೂ ಹೆಚ್ಚಾಗಿದೆ.

ರಾಯಚೂರಿನ ಫಾದರ್‌ ವೈ.ಎಸ್‌. ಲಿಯೊ ಮೈಕಲ್‌ ಅವರು ಹೇಳುವಂತೆ ‘ರಾಯಚೂರು ಜಿಲ್ಲೆಯಲ್ಲಿ 30 ಚರ್ಚ್‌ಗಳಿವೆ. ಎಲ್ಲ ಕ್ರೈಸ್ತರು ಕ್ರಿಸ್‌ಮಸ್‌ ಆಚರಿಸುತ್ತಾರೆ. ವಿಶೇಷ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ’ ಎಂದರು.

ಯೇಸು ಜನಿಸಿದ ವೃತ್ತಾಂತ ಬಿಂಬಿಸುವ ಗೊದಲಿ ಹಾಗೂ ಬೃಹತ್‌ ಚುಕ್ಕೆಯ ಅಲಂಕಾರವು ಇನ್‌ಫೆಂಟ್ ಜೀಸಸ್‌ ಶಾಲೆ ಮತ್ತು ಕಾಲೇಜುಗಳಲ್ಲಿ ಗಮನ ಸೆಳೆಯುವಂತೆ ಮಾಡಲಾಗಿದೆ. ವಾರದ ಹಿಂದೆ ಕ್ರಿಸ್‌ಮಸ್‌ ನಿಮಿತ್ತ ವಿಶೇಷ ಮೆರವಣಿಗೆ ಕೂಡ ನಡೆಯಿತು.

ನಗರದ ಬಹುತೇಕ ಶಾಲೆಗಳಲ್ಲಿ ಸಾಂತಾ ಕ್ಲಾಸ್‌ ವೇಷಭೂಷಣದೊಂದಿಗೆ ಮಕ್ಕಳಿಗೆ ಕ್ರಿಸ್‌ಮಸ್‌ ಹಬ್ಬದ ಮಹತ್ವವನ್ನು ಶಿಕ್ಷಕರು ತಿಳಿಸಿದ್ದಾರೆ. ಕೇಕ್‌ ಹಾಗೂ ಇತರೆ ಸಿಹಿ ಹಂಚಿಕೆಯೊಂದಿಗೆ ಕ್ರಿಸ್‌ಮಸ್‌ ವಿಶೇಷ ಕಳೆ ಪಡೆಯುತ್ತದೆ.

ಕುಷ್ಠರೋಗಿಗಳಿಗೆ, ಅಂಧಮಕ್ಕಳಿಗೆ ಸಿಹಿ

ಇನ್‌ಫೆಂಟ್ ಜೀಸಸ್‌ ಶಾಲೆಯಿಂದ ರಾಯಚೂರಿನ ಕುಷ್ಠರೋಗಿಗಳ ಕಾಲೊನಿ ಹಾಗೂ ಮಾಣಿಕಪ್ರಭು ಅಂದ ವಿದ್ಯಾರ್ಥಿಗಳ ಶಾಲೆಗಳಿಗೆ ಭೇಟಿ ನೀಡಲಾಯಿತು. ಫಾದರ್‌ ಲಿಯೋ ಮೈಕಲ್‌, ಫಾದರ್‌ ಜಾನ್‌ ಪೀಟರ್‌, ಶಿಕ್ಷಕರಾದ ಬೆಂಜಮಿನ್‌, ರಾಜಶೇಖರ್‌ ಇದ್ದರು. ಕುಷ್ಠರೋಗಿಗಳಿಗೆ ಮತ್ತು ಆಂಧ ಮಕ್ಕಳಿಗೆ ಸಿಹಿ ತಿನಿಸು ಹಂಚಲಾಯಿತು. ಅಲ್ಲಿಯೇ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

* * 

ಕ್ರಿಸ್‌ಮಸ್‌ ದಿನದಂದು ಧರ್ಮಗುರುಗಳು ಯೇಸುಸ್ವಾಮಿಯ ಸತ್ಯ ಸಂದೇಶ ಬೋಧಿಸುತ್ತಾರೆ. ಎಲ್ಲರೂ ಮನನ ಮಾಡಿಕೊಂಡು ಪಾಲನೆ ಮಾಡುತ್ತಾರೆ.

ಫಾ. ಲಿಯೋ ಮೈಕಲ್‌ ಮುಖ್ಯಸ್ಥರು, ಇನ್‌ಫೆಂಟ್‌ ಜೀಸಸ್‌ ಶಾಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry