7

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಅಗತ್ಯ

Published:
Updated:

ರಾಯಚೂರು: ಇತ್ತೀಚಿನ ದಿನಗಳಲ್ಲಿ ಜನರು ಅನಾರೋಗ್ಯದ ಸಮಸ್ಯೆ ಎದುರಿಸುತ್ತಿರುವುದು ಅರಿತು ಸರ್ಕಾರ ಸಿರಿಧಾನ್ಯ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ. ಜನರು ಸಹಕಾರ ನೀಡುವ ಮೂಲಕ ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಹೇಳಿದರು.

ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿಯ ಕೃಷಿ ಇಲಾಖೆ, ಜಿಲ್ಲಾ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದಿಂದ ಹಮ್ಮಿಕೊಂಡಿರುವ ಸಾವಯವ ಮತ್ತು ಸಿರಿಧಾನ್ಯಗಳ ಮೇಳವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ 80ರಷ್ಟು ಜನರು ಕೃಷಿ ಆಧಾರಿತರಿದ್ದಾರೆ. ಕೃಷಿ ಬೆಳವಣಿಗೆಯ ಮೇಲೆ ರಾಜ್ಯದ ಅಭಿವೃದ್ಧಿ ಅವಲಂಬನೆಯಾಗಿದೆ. ಆದ್ದರಿಂದ  ನಾಲ್ಕು ವರ್ಷದ ಆಡಳಿತದಲ್ಲಿ ಕಾಂಗ್ರೆಸ್‌ ಸರ್ಕಾರ ರೈತರಿಗೆ ಬೀಜ ಹಾಗೂ ಗೊಬ್ಬರ ತೊಂದರೆ ಆಗದಂತೆ ನೋಡಿಕೊಂಡು ಕೃಷಿ ಬೆಳವಣಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ರಾಜ್ಯ ಸರ್ಕಾರ ತೊಗರಿಗೆ ₹ 6 ಸಾವಿರ ಬೆಂಬಲ ಬೆಲೆ ನಿಗದಿ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದ್ದು, ರೈತರು ನಷ್ಟ ಹೊಂದಬಾರದು ಎಂಬ ಕಾರಣಕ್ಕೆ ಖರೀದಿ ಕೇಂದ್ರಗಳ ಮೂಲಕ ತೊಗರಿಯನ್ನು ರಾಜ್ಯ ಸರ್ಕಾರ ಖರೀದಿಸುತ್ತಿದೆ ಎಂದು ತಿಳಿಸಿದರು.

ಹಿಂದಿನ ಸರ್ಕಾರಗಳು ಕೃಷಿ ಒದಗಿಸುತ್ತಿದ್ದ ಅನುದಾನದ ಎರಡು ಪಟ್ಟು ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ 2016–17ನೇ ಸಾಲಿನಲ್ಲಿ ಒದಗಿಸಿದೆ. ನೀರಾವರಿ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ಕಲ್ಪಿಸಿದೆ ಎಂದರು.

ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಸಿರಿಧಾನ್ಯಗಳು ಆರೋಗ್ಯಕ್ಕೆ ಬಹಳಷ್ಟು ಉಪಕಾರಿಯಾಗಿದ್ದು, ಈ ಧಾನ್ಯಗಳನ್ನು ಬಳಕೆ ಮಾಡುವ ಮೂಲಕ ಜನರು ಆರೋಗ್ಯವಂತರಾಗಿ ಇರಬೇಕು ಎಂದು ಹೇಳಿದರು.

ಸಿರಿಧಾನ್ಯಗಳನ್ನು ನಿರಂತರವಾಗಿ ಬಳಕೆ ಮಾಡುವುದರಿಂದ ಆರೋಗ್ಯದ ಸಲುವಾಗಿ ಔಷಧಗಳನ್ನು ಬಳಕೆ ಮಾಡುವುದು ಅರ್ಧದಷ್ಟು ಕಡಿಮೆ ಯಾಗಲಿದೆ ಎಂಬುದು ಸಾಬೀತಾಗಿದೆ. ಆದ್ದರಿಂದ ಸಿರಿಧಾನ್ಯಗಳಿಂದ ತಯಾರಿಸುವ ಖಾದ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ ಮಾತನಾಡಿ, ಸಿರಿಧಾನ್ಯಗಳು ಆರೋಗ್ಯಕ್ಕೆ ಬಹಳ ಹತ್ತಿರವಾಗಿದ್ದು, ಸಿರಿಧಾನ್ಯಗಳನ್ನು ಆರೋಗ್ಯ ಮಿತ್ರ ಎಂತಲೂ ಕರೆಯುತ್ತಾರೆ ಎಂದರು.

ನಾರಿನಾಂಶ ಹೊಂದಿರುವ ಕಾಳುಗಳು ಸಿರಿಧಾನ್ಯಗಳಾಗಿದ್ದು, ಹೃದಯ ಸಂಬಂಧಿ ಕಾಯಿಲೆ ಹಾಗೂ ಸಕ್ಕರೆ ಕಾಯಿಲೆ ದೂರು ಮಾಡುತ್ತವೆ. ಆದ್ದರಿಂದ ಸಿರಿಧಾನ್ಯಗಳ ಬಳಕೆಯನ್ನು ಪ್ರೋತ್ಸಹಿಸಲು ಸರ್ಕಾರ ಮುಂದಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಪಿ.ಎಂ.ಸಾಲಿಮಠ, ಶಂಕರೇಗೌಡ, ಜಿಲ್ಲಾ ಜಂಟಿ ನಿರ್ದೇಶಕ ಶರಣಪ್ಪ, ಸೋಮಶೇಖರ, ಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಕೇಶವರೆಡ್ಡಿ, ಎನ್.ಶಿವನಗೌಡ, ನಗರಸಭೆ ಪ್ರಭಾರ ಅಧ್ಯಕ್ಷ ಜಯಣ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ಕರೀಂ, ಅಶೋಕಪಾಟೀಲ ಇದ್ದರು.

ಸಾಲಮನ್ನಾ ಒತ್ತಾಯ: ಸಾವಯವ ಮತ್ತು ಸಿರಿಧಾನ್ಯಗಳ ಮೇಳದ ರಾಜಕೀ ಯಕ್ಕೆ ಬಳಿಸಿಕೊಂಡ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲವನ್ನು ಮನ್ನಾ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದರು.

ಕೇಂದ್ರ ಸರ್ಕಾರದ ಸಹಕಾರ ದೊಂದಿಗೆ ರಾಜ್ಯದಲ್ಲಿನ ಎಲ್ಲ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ಪ್ರಯತ್ನಿಸಿತ್ತು. ಆದರೆ, ಕೇಂದ್ರ ಸರ್ಕಾರ ಸಹಕಾರ ನೀಡಲಿಲ್ಲ. ಆದರೂ, ರಾಜ್ಯ ಸರ್ಕಾರ ಅಧೀನದಲ್ಲಿರುವ ಬ್ಯಾಂಕುಗಳಲ್ಲಿ ₹50 ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡಿದೆ. ಈಗಲಾದರೂ ಕೇಂದ್ರ ಸರ್ಕಾರ ಸಹಕಾರ ನೀಡಬೇಕು ಎಂದರು.

ಸಿರಿಧಾನ್ಯಗಳಿಂದ ರಂಗೋಲಿ

ಸಿರಿಧಾನ್ಯಗಳ ಮೇಳದ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆ ವಿಶೇಷವಾಗಿತ್ತು. ಸಿರಿಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಜೋಳ, ಹಾರಕ, ಸಾಮೆ, ಬರಗು, ಕೊರಲು ಮತ್ತು ಉದಲು ಕಾಳುಗಳಿಂದ ರಚಿಸಿದ ಎತ್ತಿನ ಜೊತೆ ನೆಗಿಲು ಹಿಡಿದ ರೈತ, ಗಣೇಶ, ಗುಡಿಸಲು, ದೀಪಗಳು, ಗುದ್ದಲಿ, ಸಲಾಕೆ, ಕೂರಗಿ, ಕುರುವಿ, ಕೊಳವೆ ಹೀಗೆ ವಿವಿಧ ರಂಗೋಲಿ ಚಿತ್ರಗಳು ನೋಡುಗರ ಗಮನ ಸೆಳೆದವು. ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಮಹಿಳೆಯರು ಹಾಗೂ ವಿವಿಧ ಶಾಲೆಯ ಮಕ್ಕಳು ಭಾಗವಹಿಸಿದ್ದರು.

* * 

ಹಿಂದಿನ ಸರ್ಕಾರಗಳಿಗಿಂತ ಕಾಂಗ್ರೆಸ್‌ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದೆ.

ಎನ್.ಎಸ್.ಬೋಸರಾಜು

ವಿಧಾನ ಪರಿಷತ್ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry