ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ

Last Updated 25 ಡಿಸೆಂಬರ್ 2017, 6:55 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು. ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ಬೆಳಗಿನ ಜಾವ 3 ಗಂಟೆಯಿಂದಲೇ ಪ್ರಾರಂಭವಾಗಿದ್ದವು. ಬೆಳಿಗ್ಗೆ 5.30 ರಿಂದ ಭಕ್ತಾದಿಗಳ ದರ್ಶನ ಆರಂಭವಾಗಿತ್ತು. ದೇವಾಲಯವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ಈ ಬಾರಿ ರಥೋತ್ಸವ ಭಾನುವಾರ ನಡೆದಿದ್ದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು.

ದರ್ಶನ ಪಡೆಯಲು ಮುಂಜಾವದಿಂದ ಭಕ್ತಾದಿಗಳು ಸಾಲುಗಟ್ಟಿ ನಿಂತ್ದಿದರು. ಕ್ಷೇತ್ರದಲ್ಲಿರುವ ನಾಗರಕಲ್ಲುಗಳಿಗೆ ಭಕ್ತ ಸಮೂಹ ಹಾಲೆರೆದು ಪೂಜಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಾಲ್ಲೂಕು ಸವಿತಾ ಸಮಾಜ, ಶ್ರೀಕ್ಷೇತ್ರ ಧರ್ಮಸ್ಥಳ ಅನ್ನದಾಸೋಹ ಸೇವಾ ಸಮಿತಿ, ನಗರ್ತ ಸಂಘ ಸೇರಿದಂತೆ ವಿವಿಧ ಭಕ್ತ ಮಂಡಳಿಗಳಿಂದ ಅರವಂಟಿಗೆ ಹಾಗೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ದರ್ಶನಕ್ಕೆ ಗಣ್ಯರ ದಂಡು: ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಬೆಂಗಳೂರಿಗೆ ಸಮೀಪದಲ್ಲಿಯೇ ಇರುವುದರಿಂದ ವಿವಿಧ ಇಲಾಖೆಗಳ ಹಾಗೂ ರಾಜಕಾರಣಿಗಳ ದಂಡೇ ದರ್ಶನಕ್ಕೆ ಹರಿದು ಬಂದಿತ್ತು. ದೇವರ ದರ್ಶನಕ್ಕೆ ಅಡ್ಡ ದಾರಿಯ ಮೂಲಕ ದೇವಾಲಯದ ಒಳಗೆ ನುಗ್ಗಿ ಹೋಗುತ್ತಿದ್ದ ಗಣ್ಯರನ್ನು ಕಂಡು ಗಂಟೆಗಟ್ಟಲೆ ದೇವರ ದರ್ಶನಕ್ಕೆ ಸರತಿ ಸಾಲಿ ಕಾದು ನಿಂತಿದ್ದ ಭಕ್ತರು ಹಿಡಿ ಶಾಪಹಾಕುತ್ತಿದ್ದಲ್ಲದೆ, ಒಂದೆರಡು ಬಾರಿ ಪೊಲೀಸರ ಹಾಗೂ ಭಕ್ತಾದಿಗಳ ನಡುವೆ ವಾಗ್ವಾದಗಳು ನಡೆದವು.ಇಷ್ಟಾದರು ಸಹ ಅಡ್ಡ ದಾರಿಯ ಮೂಲಕ ದೇವರ ದರ್ಶನಕ್ಕೆ ಗಣ್ಯರ ದಂಡು ಒಳನುಗ್ಗುವುದು ಮಾತ್ರ ನಿಲ್ಲಲೇ ಇಲ್ಲ.

ಎತ್ತ ನೋಡಿದರು ಜನಸಾಗರ: ಸಾಮಾನ್ಯ ದಿನಗಳಲ್ಲೇ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚು. ಈ ಬಾರಿ ಭಾನುವಾರ ಬ್ರಹ್ಮರಥೋತ್ಸವ ನಡೆದಿದ್ದರಿಂದ ಬೆಂಗಳೂರು, ಗೌರಿಬಿದನೂರು, ಹಿಂದೂಪುರ, ಚಿಕ್ಕಬಳ್ಳಾಪುರ ಹಾಗೂ ತಾಲ್ಲೂಕಿನ ಭಕ್ತರ ಸಂಖ್ಯೆಯೇ ಘಾಟಿ ಕ್ಷೇತ್ರದತ್ತ ಹರಿದು ಬಂದಿತ್ತು.

ಹೀಗಾಗಿ ದೇವಾಲಯದಿಂದ ಸುಮಾರು ಮೂರು ಕಿ.ಮೀಗೂ ಹೆಚ್ಚು ದೂರದವರೆಗೂ ಖಾಸಗಿ ವಾಹನಗಳ ನಿಲುಗಡೆ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮಾತ್ರ ದೇವಾಲಯದ ಹಿಂಭಾಗದಲ್ಲಿ ಬಸ್‌ ನಿಲ್ದಾಣದವರೆಗೆ ಹೋಗಿ ಬರಲು ಅವಕಾಶ ಕಲ್ಪಿಸಲಾಗಿತ್ತು.

ದೇವಾಲಯದ ಸುತ್ತ ಹಾಗೂ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳ ಸಂಚಾರವನ್ನು ನಿಯಂತ್ರಿಸಿದ್ದರು. ಇದಲ್ಲದೆ ಕೆಎಸ್‌ಆರ್‌ಟಿಸಿ ಸಹ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಬಸ್‌ಗಳ ಸಂಚಾರಕ್ಕೆ ಅಡ್ಡಿಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಬಸ್

ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಗೌರಿಬಿದನೂರು, ಬೆಂಗಳೂರು, ಹಿಂದೂಪುರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಕಡೆಗಳಿಂದ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆ ಒದಗಿಸಲಾಗಿತ್ತು.

ಜತೆಗೆ ತಾಲ್ಲೂಕು ಖಾಸಗಿ ಬಸ್ ಮಾಲೀಕರು ಮತ್ತು ಕಾರ್ಮಿಕರ ಸಂಘ, ಚಿರಋಣಿ ಕನ್ನಡಾಂಬೆ ಹೋರಾಟ ಸಮತಿ ವತಿಯಿಂದ ನಗರದ ಹಳೆಯ ಬಸ್ ನಿಲ್ದಾಣದಿಂದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಉಚಿತ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT