7

ನೀರೂರಿಸುವ ಖಾದ್ಯಗಳು...

Published:
Updated:
ನೀರೂರಿಸುವ ಖಾದ್ಯಗಳು...

ತುಮಕೂರು: ಕಲ್‌ಕಲಾ, ಮೊಟ್ಟೆ ಕಜ್ಜಾಯ, ಕರ್ಜಿಕಾಯಿ, ಕೋಡಬಳೆ, ಕರಿದ ಅವಲಕ್ಕಿ (ಚುವಡಾ), ಚಕ್ಕುಲಿ, ರೋಜ್‌ ಕುಕ್‌, ನಿಪ್ಪಟ್ಟು, ಕೇಕ್‌, ಕ್ಯಾರೆಟ್‌ ಹಲ್ವಾ, ಅಕ್ಕಿ ಮಿಠ್ಠಾ, ವೈನ್‌... ಇವೆಲ್ಲ ಯಾವುದೋ ಹೋಟೆಲ್‌ನ ರೆಸಿಪಿಯ ಮೆನು ಅಲ್ಲ. ಸ್ವಲ್ಪ ತಡೆಯಿರಿ, ವೈವಿಧ್ಯಮಯ ತಿನಿಸುಗಳನ್ನು ಕಣ್ಬಿಟ್ಟು ನೋಡುತ್ತ, ಬಾಯಲ್ಲಿ ನೀರೂರಿಸಿಕೊಳ್ಳಬೇಡಿ.

ಹೌದು ನಿಮ್ಮ ನಿಮ್ಮ ನಿರೀಕ್ಷೆಯಂತೆ ಕ್ರಿಸ್‌ಮಸ್‌ಗಾಗಿ ತಯಾರಿಸಿದ ತಿನಿಸಿಗಳು. ಏಸು ಜನ್ಮದಿನಕ್ಕಾಗಿ ಕ್ರೈಸ್ತ ಮಹಿಳೆಯರು ವಾರದಿಂದ ತಯಾರಿಸುತ್ತಿರುವ ಈ ತಿನಿಸುಗಳು ಹೆಸರು ಕೇಳಿದಾಕ್ಷಣ ಗಮನ ಸೆಳೆಯುತ್ತವೆ. ಅದರಲ್ಲೂ ವೈನ್‌, ಪಮ್‌ ಕೇಕ್‌, ಹಲ್ವಾ.. ಆಹಾ! ಅವುಗಳನ್ನು ನೆನಪಿಸಿಕೊಂಡರೆ ತಿನ್ನೋಕೆ ಮನಸ್ಸು ತಡೆಯಲ್ಲ.

ಕ್ರಿಸ್‌ಮಸ್‌ ಪ್ರಯುಕ್ತ ಮಹಿಳೆಯರು ವಾರದ ಹಿಂದಿನಿಂದಲೇ ಕುರಕಲು ತಿಂಡಿ ತಯಾರಿಸಿಡುವರು. ಡಬ್ಬಿಯಲ್ಲಿ ತುಂಬಿಟ್ಟ ತಿನಿಸುಗಳು ಅತಿಥಿಗಳಿಗೆ ಆತಿಥ್ಯದ ಪ್ರಮುಖ ಆಕರ್ಷಣೆಯಾಗಿವೆ. ಮೂರ್ನಾಲ್ಕು ತಿಂಗಳ ಹಿಂದೆಯೇ ತಯಾರಿಸಿ, ಶೇಖರಿಸಿಟ್ಟ ದ್ರಾಕ್ಷಿ ಹಣ್ಣಿನ ವೈನ್‌ಗಳಿಗೆ ತಿನಿಸುಗಳೂ ಸಾಥ್‌ ನೀಡುತ್ತವೆ. ಇನ್ನು ಹಬ್ಬದ ದಿನದಂದು ಕೋಳಿ, ಕುರಿ ಮಾಂಸದ ವೈವಿಧ್ಯಮಯ ಖಾದ್ಯಗಳು ವಿಶೇಷಗಳಾಗಿವೆ.

ರೋಜ್‌ ಕುಕ್‌: ಕ್ರಿಸ್‌ಮಸ್‌ಗೆ ರೋಜ್‌ ಕುಕ್‌ ವಿಶೇಷ ಖಾದ್ಯ ಹೌದು, ಹಿರಿಯರು ಹಾಗೂ ಮಕ್ಕಳು ಹೆಚ್ಚು ಇಷ್ಟಪಟ್ಟು ತಿನ್ನುವ ತಿಂಡಿ ಸಹ. ಇವು ರುಚಿಯಷ್ಟೇ ನೋಡಲು ಸುಂದರವಾಗಿರುತ್ತವೆ. ಒಂದು ಕೆ.ಜಿ. ಮೈದಾ ಹಿಟ್ಟಿಗೆ 3 ಮೊಟ್ಟೆ, 250 ಗ್ರಾಂ ಚಿರೋಟಿ ರವೆ, 500 ಗ್ರಾಂ ಸಕ್ಕರೆ, ಚಿಟಿಕೆ ಪಚ್ಚ ಕರ್ಪೂರ, ಸ್ವಲ್ಪ ಅಡುಗೆ ಸೋಡಾ, ಅರ್ಧ ಲೀಟರ್‌ ಹಾಲು ಬಳಸಿ ಇದನ್ನು ತಯಾರಿಸುತ್ತಾರೆ. ವಾರಗಟ್ಟಲೇ ಇಟ್ಟು ಇದನ್ನು ಸವಿಯುತ್ತಾರೆ.

ಕಲ್‌ಕಲಾ: ಒಂದು ಕೆ.ಜಿ. ಮೈದಾ ಹಿಟ್ಟಿಗೆ 3 ಮೊಟ್ಟೆ, 250 ಗ್ರಾಂ ಚಿರೋಟಿ ರವೆ, 500 ಗ್ರಾಂ ಸಕ್ಕರೆ, ಚಿಟಿಕೆ ಪಚ್ಚ ಕರ್ಪೂರ, ಸ್ವಲ್ಪ ಅಡುಗೆ ಸೋಡಾ, ಅರ್ಧ ಲೀಟರ್‌ ಹಾಲು ಬೆರೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಕರೆಯುತ್ತಾರೆ.  ನಾಲಿಗೆ ಮೇಲೆ ಇಟ್ಟ ಕ್ಷಣ ಕರಗೇ ಬಿಡುವ ಈ ಸಿಹಿ ಈ ಹಬ್ಬದ ವಿಶೇಷವಾಗಿದೆ.

ಮೊಟ್ಟೆ ಕಜ್ಜಾಯ:1 ಕೆ.ಜಿ ಮೈದಾ ಹಿಟ್ಟು, 500 ಗ್ರಾಂ ಸಕ್ಕರೆ, 4 ಮೊಟ್ಟೆ, 3 ಪಚ್ಚ ಬಾಳೆ ಹಣ್ಣು, 50 ಗ್ರಾಂ ಗಸಗಸೆ, ಸ್ವಲ್ಪ ಸೋಂಪು, ಚಿಟಿಕೆ ಅಡುಗೆ ಸೋಡಾ, ಮೈದಾ, ಮೊಟ್ಟೆ ಎಲ್ಲವನ್ನು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳುತ್ತಾರೆ. ಹೀಗೆ ಕಲುಹಿಸಿದ ಹಿಟ್ಟನ್ನು 5 ರಿಂದ 6 ತಾಸು ಬಳಿಕ ಎಣ್ಣೆಯಲ್ಲಿ ಕರೆದು ನಂತರ ಬಳಸುತ್ತಾರೆ.

ಅಕ್ಕಿ ಮಿಠ್ಠಾ: ಇದರ ವಿಶೇಷ ಅಂದರೆ ಇದಕ್ಕೆ ಜೀರಾ ಸಾಂಬಾ ಅಕ್ಕಿಯನ್ನೇ ಬಳಬೇಕು. ಜೀರಾ ಅಕ್ಕಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ರವೆ ಮಾಡಿಕೊಳ್ಳಬೇಕು. 2 ಲೀಟರ್‌ ಹಾಲನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ ಅದರಲ್ಲಿ ಒಂದು ಕಪ್‌ ರವೆ, ಸ್ವಲ್ಪ ಜಿರಂಜಿ, ಡ್ರೈ ಫ್ರೋಟ್ಸ್‌, ಮಿಲ್ಕ್‌ಮೇಡ್‌, ಫ್ರೆಶ್‌ ಕ್ರೀಮ್‌, ಕೊವ್ವಾ ಪುಡಿ ಮಾಡಿ ಹಾಕಬೇಕು. ರುಚಿ ಹೆಚ್ಚಿಸಲು ಇದಕ್ಕೆ 4 ಲವಂಗ, 4 ಏಲಕ್ಕಿ ಹಾಕುತ್ತಾರೆ. ಕ್ರಿಸ್‌ಮಸ್‌ನಲ್ಲೇ ಈ ತಿಂಡಿ ಇರದಿದ್ದರೆ ಹಬ್ಬಕ್ಕೆ ಸಂಭ್ರಮವೇ ಇರುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಇದು ಸ್ಥಾನಪಡೆದಿದೆ.

ವೈನ್‌

2 ಕೆ.ಜಿ. ದ್ರಾಕ್ಷಿ, 4 ಕೆ.ಜಿ ಸಕ್ಕರೆ, 1 ಒಂದು ಲೀಟರ್‌ ನೀರು, 200 ಗ್ರಾಂ ಭತ್ತ, 200 ಗ್ರಾಂ ಗೋಧಿ, 10 ಗ್ರಾಂ ಈಸ್ಟ್‌, ಚಿಟಿಕೆ ಅಡುಗೆ ಸೋಡಾ, 200 ಗ್ರಾಂ ಕರಿಮೆಣಸು, 20 ಗ್ರಾಂ ಏಲಕ್ಕಿ, 20 ರಿಂದ 30 ಗ್ರಾಂ ಚೆಕ್ಕೆ, ಒಂದು ಇಂಚು ಚೆನ್ನಾಗಿ ತೊಳೆದು ಚಚ್ಚಿದ ಹಸಿಶುಂಠಿ ಇವೆಲ್ಲವನ್ನು ಸೇರಿಸಿ 6 ಲೀಟರ್‌ನ ಜಾಡಿಯಲ್ಲಿ ಹಾಕಿ ಕಾಟನ್‌ ಬಟ್ಟೆಯನ್ನು ಗಟ್ಟಿಯಾಗಿ ಕಟ್ಟಿ, ಮುಚ್ಚಳವನ್ನು ಸರಿಯಾಗಿ ಮುಚ್ಚಬೇಕು. 90 ದಿನಗಳ ನಂತರ ಹೊರ ತೆಗೆದು ಕೈಯಿಂದ ಚೆನ್ನಾಗಿ ಹಿಸುಕಬೇಕು. 2 ತಾಸುಗಳ ನಂತರ ಸೋಸಿ ಸಿಹಿ, ಉಪ್ಪು ಸರಿ ಇದಿಯಾ ಎಂದು ರುಚಿ ನೋಡಬೇಕು. ಸಿಹಿ ಕಡಿಮೆ ಅನಿಸಿದಲ್ಲಿ ಸಕ್ಕರೆಯನ್ನು ಪಾಕ ಮಾಡಿ ಸೇರಿಸಿ ಫ್ರಿಜ್ಡ್‌ನಲ್ಲಿ ಇಟ್ಟರೆ  ಘಮ, ಘಮ ವೈನ್‌ ಸಿದ್ಧವಾಗುತ್ತದೆ.

ಪಮ್‌ ಕೇಕ್

3 ಕಪ್‌ ಮೈದಾ, 1 ಕಪ್‌ ಬೆಣ್ಣೆ, 3 ಕಪ್‌ ಬ್ರೌನ್‌ ಶುಗರ್‌, 4 ಮೊಟ್ಟೆ, 2 ಚಮಚ ವೆನಿಲಾ, ಸ್ವಲ್ಪ ಬೇಕಿಂಗ್‌ ಕೋಕೋ, ಸ್ವಲ್ಪ ಅಡುಗೆ ಸೋಡಾ, ಅರ್ಧ ಚಮಚ (ಟೇಬಲ್‌ ಚಮಚ‌), ಡ್ರೈಫ್ರೂಟ್ಸ್‌, ದ್ರಾಕ್ಷಿ, ಗೋಡಂಬಿ, ಬದಾಮಿ, ಪಿಸ್ತಾ, ಚೆಕ್ಕೆ, ಲವಂಗ ಕಾಲು ಕಪ್‌ ಹಾಗೂ ಒಂದು ಕಪ್‌ ರಮ್‌ ಮಿಕ್ಸ್‌ ಮಾಡಿ  ಇದನ್ನು ತಯಾರಿಸುತ್ತಾರೆ.

* * 

ಅಜ್ಜಿ ಮಾಡಿದ ಕಜ್ಜಾಯ ತುಂಬಾ ಇಷ್ಟ. ಕ್ರಿಸ್‌ಮಸ್‌ ಹಬ್ಬಕ್ಕೆ ಬೇರೆ ಬೇರೆ ತಿಂಡಿ ಮಾಡಿ ಕೊಡ್ತಾರೆ. ಅದಕ್ಕಾಗಿ ಹಬ್ಬಕ್ಕೆ ಒಂದು ವಾರ ಮುಂಚಿತವಾಗಿ ಅಜ್ಜಿ ಮನೆಗೆ ಬಂದಿದ್ದೇನೆ.

ಶಾನಾನ್‌ ಸಾಲೋಮನ್‌, ಬಿಷಪ್‌ ಸಾರ್ಜೆಂಟ್‌ ಸ್ಕೂಲ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry