7

ಉಡುಪಿಯಲ್ಲಿ ಕ್ರಿಸ್ಮಸ್ ಎಂದರೆ ಸಂಭ್ರಮ, ಸೌಹಾರ್ದ, ಪ್ರೀತಿ

Published:
Updated:
ಉಡುಪಿಯಲ್ಲಿ ಕ್ರಿಸ್ಮಸ್ ಎಂದರೆ ಸಂಭ್ರಮ, ಸೌಹಾರ್ದ, ಪ್ರೀತಿ

ಉಡುಪಿ ಕ್ರಿಸ್ಮಸ್ ಹಬ್ಬ ಬಂತೆಂದರೆ ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮ– ಸಡಗರದ ವಾತಾವರಣ ನಿರ್ಮಾಣವಾಗಿರುತ್ತದೆ. ಹಬ್ಬಕ್ಕೆ ಇನ್ನೂ 15 ದಿನ ಇರುವಂತೆಯೇ ಕ್ರಿಶ್ಚಿಯನ್ನರು ತಯಾರಿ ಆರಂಭಿಸುವುದರಿಂದ ಎಲ್ಲೆಡೆ ಏಸುಕ್ರಿಸ್ತರ ಹುಟ್ಟು ಬಗ್ಗೆ ಆಚರಣೆ ಉತ್ಸಾಹದ ಮುನ್ಸೂಚನೆ ಸಿಗುತ್ತದೆ. ಬಣ್ಣ ಬಣ್ಣದ ಗೂಡು ದೀಪಗಳು ಮನೆಯೇರಿ ಕುಳಿತಿರುತ್ತವೆ. ಯೇಸು ಕ್ತಿಸ್ತರ ಹುಟ್ಟಿನ ಬಗ್ಗೆ ಮಾಹಿತಿ ನೀಡುವ ಗೋದಲಿಗಳು ಮನೆ ಆವರಣದಲ್ಲಿ ನಿರ್ಮಾಣವಾಗಿರುತ್ತವೆ. ರಾತ್ರಿ ವೇಳೆ ಝಗಮಗಿಸುವ ಗೂಡು ದೀಪಗಳು ಕ್ರಿಸ್ಮಸ್ ವಾತಾವರಣಕ್ಕೆ ಮೆರುಗು ನೀಡುತ್ತವೆ.

ಜಿಲ್ಲೆಯಲ್ಲಿ ಸುಮಾರು 65 ಸಾವಿರ ಮಂದಿ ಕ್ರಿಶ್ಚಿಯನ್ನರಿದ್ದಾರೆ. ಒಟ್ಟು 51 ಚರ್ಚ್‌ ಹಾಗೂ 72 ಧರ್ಮಗುರುಗಳಿದ್ದಾರೆ. ಉಡುಪಿ, ಕಾರ್ಕಳ, ಕುಂದಾಪುರ, ಶಿರ್ವ ಮತ್ತು ಕಲ್ಯಾಣಪುರ ಎಂಬ ಐದು ವಲಯಗಳಾಗಿ ಇದನ್ನು ವಿಂಗಡಿಸಲಾಗಿದೆ. ಶಿರ್ವ, ಶಂಕರಪುರ ಹಾಗೂ ಮೂಡುಬೆಳ್ಳೆ ಕ್ರಿಶ್ಚಿಯನ್ ಬಾಹುಳ್ಯದ ಪ್ರದೇಶಗಳಾಗಿವೆ.

ಧರ್ಮ ಪ್ರಾಂತದ ಸಂದೇಶಗಳನ್ನು ಹಾಗೂ ಕಾರ್ಯಚಟುವಟಿಕೆಗಳನ್ನು ಜನರಿಗೆ ತಲುಪಿಸಲು ‘ಉಜ್ವಾಡ್’ ಎಂಬ ಪತ್ರಿಕೆಯೂ ಇದೆ.

ಮಂಗಳೂರು ಧರ್ಮ ಪ್ರಾಂತದಲ್ಲಿ ಸೇರಿದ್ದ ಉಡುಪಿ 2012ರಲ್ಲಿ ಪ್ರತ್ಯೇಕ ಧರ್ಮ ಪ್ರಾಂತ್ಯವಾಗಿ ಘೋಷಣೆಯಾಯಿತು. ಡಾ. ಜೆರಾಲ್ಡ್‌ ಐಸಾಕ್ ಲೋಬೊ ಅವರು ಈ ನೂತನ ಧರ್ಮ ಪ್ರಾಂತದ ಧರ್ಮಾಧ್ಯಕ್ಷರಾಗಿ ನೇಮಕವಾದರು. ಪೋಪ್ ಬೆನಿಡಿಕ್ಟ್ ಅವರು ಈ ಘೋಷಣೆ ಮಾಡಿದರು.

ಸುಮಾರು 300 ವರ್ಷಗಳಷ್ಟು ಹಳೆಯದಾದ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚ್‌ ಧರ್ಮಾಧ್ಯಕ್ಷರ ಚರ್ಚ್‌ ಆಗಿದೆ. ಸಾಮಾನ್ಯವಾಗಿ ಹೊಸ ಧರ್ಮ ಪ್ರಾಂತದ ಘೋಷಣೆಯಾದರೆ ಅದರ ವ್ಯಾಪ್ತಿಯಲ್ಲಿರುವ ಅತ್ಯಂತ ಹಳೆಯ ಚರ್ಚ್ ಅನ್ನು ಧರ್ಮಾಧ್ಯಕ್ಷರ ಚರ್ಚ್ ಎಂದು ಘೋಷಣೆ ಮಾಡಲಾಗುತ್ತದೆ. ಈ ಎಲ್ಲ ಪ್ರಕ್ತಿಯೆಗಳು ನಡೆದ ನಂತರ ಎಲ್ಲ ಹಬ್ಬಗಳ ಸಂಭ್ರಮ ಇನ್ನಷ್ಟು ಹೆಚ್ಚಾಯಿತು. ಜೆರಾಲ್ಡ್‌ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಅದ್ಧೂರಿ ಆಚರಣೆಗಳು ಆರಂಭವಾದವು.

ಸೌಹಾರ್ದ ಕೂಟಗಳು ವಿಶೇಷ: ಉಡುಪಿ ಧರ್ಮ ಪ್ರಾಂತ್ಯದಲ್ಲಿ ಕ್ರಿಸ್ಮಸ್ ಆಚರಣೆ ವೇಳೆ ಸೌಹಾರ್ದ ಕೂಟಗಳನ್ನು ನಡೆಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎಲ್ಲ ಧರ್ಮ, ಜಾತಿಯವರನ್ನು ಆಹ್ವಾನಿಸಿ ಸಾಂಕೇತಿಕವಾಗಿ ಸೌಹಾರ್ದ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಪರಸ್ಪರರಲ್ಲಿ ವಿಶ್ವಾಸ ಮೂಡಿಸಲು, ಒಗ್ಗಟ್ಟಿನ ಮಂತ್ರ ಪಠಿಸಲು ಹಬ್ಬದ ಅವಕಾಶವನ್ನು ಬಳಸಿಕೊಳ್ಳಲಾಗುತ್ತದೆ.

ಸುಮಾರು 25 ಚರ್ಚ್‌ಗಳಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಅಲ್ಲದೆ ದೀಪಾವಳಿ, ರಂಜಾನ್ ಸಮಯದಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಬಾರಿಯೂ ಹಲವು ಚರ್ಚ್‌ಗಳಲ್ಲಿ ಸರ್ವಧರ್ಮ ಕ್ರಿಸ್ಮಸ್ ಆಚರಿಸಲಾಗಿದೆ. ಶಂಕರಪುರದ ಸಂತ ಯೋವಾನ್ನರ ಚರ್ಚ್‌ ಯಂಗ್‌ಮನ್ ಕ್ರಿಶ್ಚಿಯನ್ ಅಸೋಸಿಯೇಶನ್ ಐಸಿವೈಎಂ ಸಹಯೋಗದಲ್ಲಿ ಈ ಬಾರಿ ‘ಕ್ರಿಸ್ತ ಕಿರಣ’ ಎಂಬ ಕಾರ್ಯಕ್ರಮ ಸಹ ಆಯೋಜಿಸಿತ್ತು.

ಯೇಸುಕ್ರಿಸ್ತರ ಜನನ ಹಾಗೂ ಅವರ ಸಂದೇಶಗಳನ್ನು ಸಾರುವ ಆಕರ್ಷಕ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು. ಜನನದಿಂದ ಶಿಲುಬೆ ಏರುವ ವರೆಗಿನ ಪ್ರಮುಖ ಘಟನಾವಳಿಗಳನ್ನು ಪ್ರಸ್ತುತಪಡಿಸಲಾಯಿತು. ಧ್ವನಿ– ಬೆಳಕು ಆಧಾರಿತ ನೃತ್ಯ ರೂಪಕವನ್ನು ಪ್ರದರ್ಶಿಸಲಾಯಿತು. ಸಾಂತಾಕ್ಲಾಸನ ಶುಭಾಶಯ ಹಾಗೂ ಕೇಕ್ ವಿತರಣೆ ಸಹ ಇತ್ತು. ಇನ್ನು ಕ್ರಿಶ್ಚಿಯನ್ ಶಾಲಾ– ಕಾಲೇಜುಗಳಲ್ಲಿಯೂ ಉತ್ಸಾಹ ಮೇರೆ ಮೀರುತ್ತದೆ. ಶಾಲೆಯ ಆವರಣದಲ್ಲಿ ಗೋದಲಿ ನಿರ್ಮಾಣ ಮಾಡಲಾಗುತ್ತದೆ. ವಿಶೇಷ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರೆಲ್‌ನಲ್ಲಿ ಜೆರಾಲ್ಡ್ ಐಸಾಕ್ ಲೋಬೊ ಅವರು ಬಲಿ ಪೂಜೆ ನೆವೇರಿಸಿ ಕ್ರಿಸ್ಮಸ್ ಸಂದೇಶ ನೀಡವುದು ಪದ್ಧತಿಯಾಗಿದೆ. ಸಾವಿರಾರ ಜನರು ಪ್ರಾರ್ಥನೆಯಲ್ಲಿ ಭಾಗವಹಿಸುತ್ತಾರೆ. ಒಟ್ಟಾರೆ ಕ್ರಿಸ್ಮಸ್ ಹಬ್ಬ ಬರುವ ಡಿಸೆಂಬರ್ ತಿಂಗಳಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಉತ್ಸಾಹ ತುಂಬಿರುತ್ತದೆ. ಹಬ್ಬ ಮುಗಿದು ಎರಡು ಮೂರೂ ದಿನ ಆದರೂ ಆ ಗುಂಗಿನಿಂದ ಹೊರಬರಲಾಗದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry