7

1,350 ಋತ್ವೀಜರಿಂದ ಬೃಹತ್‌ ಯಾಗ

Published:
Updated:
1,350 ಋತ್ವೀಜರಿಂದ ಬೃಹತ್‌ ಯಾಗ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಾನದ ಸಮೀಪ ದಲ್ಲಿ ಸೋಮವಾರದಿಂದ ಅಂದಾಜು ₹ 10 ಕೋಟಿ ವೆಚ್ಚದಲ್ಲಿ 1,350 ಋತ್ವಿಜರಿಂದ ಆಯುತ ಚಂಡಿಕಾ ಮಹಾಯಾಗ ಆರಂಭವಾಗಲಿದೆ.

ತಮಿಳುನಾಡು ಕೊಯಮತ್ತೂರು ಮೂಲದ ಪ್ರಸ್ತುತ ಮಸ್ಕತ್‌ನಲ್ಲಿ ಉದ್ಯಮ ನಡೆಸುತ್ತಿರುವ ಪೆರಿಯ ಸ್ವಾಮಿ ಹಾಗೂ ಶಾಂತಿ ಪೆರಿಯ ಸ್ವಾಮಿ ಈ ಮಹಾಯಾಗದ ಕರ್ತೃಗಳು. ಕೊಲ್ಲೂರು ಶ್ರೀ ಮೂಕಾಂಬಿಕೆಯಲ್ಲಿ ಸಂಕಲ್ಪಿಸಿಕೊಂಡಿದ್ದ ಕಾರ್ಯವೊಂದು ಸಿದ್ಧಿಸಿದ ಕಾರಣದಿಂದ ಕೊಲ್ಲೂರಿನಲ್ಲಿಯೇ ಈ ಮಹಾಯಾಗವನ್ನು ನಡೆಸಬೇಕು ಎನ್ನುವ ಉದ್ದೇಶದೊಂದಿಗೆ ಇಲ್ಲಿ ಯಾಗಕ್ಕೆ ಸಿದ್ಧತೆ ನಡೆದಿದೆ.

ಆಯುತ ಚಂಡಿಕಾ ಯಾಗ: ಅತ್ಯಂತ ದೊಡ್ಡ ಸಮೂಹ ಚಂಡಿಕಾ ಯಾಗವಾಗಿ ಗುರುತಿಸಿಕೊಳ್ಳುವ ಆಯುರ್ ಚಂಡಿಕಾ ಯಾಗದಲ್ಲಿ 10 ಸಾವಿರ ಚಂಡಿಕಾ ಯಾಗವನ್ನು ನಡೆಸಲಾಗುತ್ತದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು 10 ಯಾಗ ಕುಂಡಗಳನ್ನು ನಿರ್ಮಿಸಲಾಗಿದೆ. 1,350 ಋತ್ವಿಜರು ಏಕ ಕಾಲದಲ್ಲಿ 4 ದಿನಗಳ ಕಾಲ ಯಾಗ ಹಾಗೂ ಇತರ ಧಾರ್ಮಿಕ ಕಾರ್ಯವನ್ನು ನಡೆಸುತ್ತಾರೆ. ಮೊದಲ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನದವರೆಗೆ, ನಂತರದ ಮೂರು ದಿನಗಳ ಕಾಲ ಮುಂಜಾನೆ 6ರಿಂದ ಮಧ್ಯಾಹ್ನ 12 ರವರೆಗೆ ಹಾಗೂ 29 ರಂದು ಪೂರ್ಣಾಹುತಿ ನಡೆಯಲಿದೆ.

ಚಂಡಿಕಾ ಮಹಾ ಯಾಗದ ಜತೆಯಲ್ಲಿ 1 ಕೋಟಿ ಲಲಿತಾ ಸಹಸ್ತ್ರ ಕುಂಕುಮಾರ್ಚನೆ ಹಾಗೂ ಅತಿರುದ್ರ ಪಾರಾಯಣವೂ ನಡೆಯುತ್ತದೆ. ಭಾರತದಲ್ಲಿ ನಡೆಯುತ್ತಿರುವ 5ನೇ ಆಯುತ ಚಂಡಿಕಾ ಮಹಾಯಾಗ ಇದು ಎಂದು ಹೇಳುವ ಯಾಗದ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಿರುವ ತಮಿಳುನಾಡಿನ ಶಿವಸ್ವಾಮಿಯವರು, ಇದರಿಂದ ಕೇವಲ ಯಾಗಕರ್ತರಿಗೆ ಮಾತ್ರವಲ್ಲ, ಲೋಕ ಕಲ್ಯಾಣವೂ ಆಗುತ್ತದೆ ಎನ್ನುತ್ತಾರೆ.

ಕುಂದಾಪುರದಿಂದ ಕೊಲ್ಲೂರಿಗೆ ಬರುವ ಹೆದ್ದಾರಿ ರಸ್ತೆ ಕೊಲ್ಲೂರು ಗ್ರಾಮವನ್ನು ಸಂಪರ್ಕಿಸುವಾಗಲೇ ಬಲಕ್ಕೆ ತಿರುವನ್ನು ಪಡೆದುಕೊಳ್ಳುವ ರಸ್ತೆಯಲ್ಲಿ ಮುಂದಕ್ಕೆ ಸಾಗಿದರೆ ಯಾಗ ಶಾಲೆಯ ವಿರಾಟ್ ಸ್ವರೂಪದ ದರ್ಶನವಾಗುತ್ತದೆ. 2 ತಿಂಗಳಿಂದ ಖಾಸಗಿ ಜಾಗವನ್ನು ಸಮತಟ್ಟುಗೊಳಿಸಿ ಕಾಂಕ್ರೀಟ್ ಹಾಸು ಹಾಗೂ ಭದ್ರವಾದ ಟೆಂಟ್‌ಗಳನ್ನು ನಿರ್ಮಿಸಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯಾಗ ಶಾಲೆ, ಪ್ರಾಂಗಣ, ಅಡುಗೆ ಕೋಣೆ, ಊಟದ ಸಭಾಂಗಣ ಸೇರಿದಂತೆ ಸಾವಿರಾರು ಜನರಿಗೆ ಏಕಕಾಲದಲ್ಲಿ ಅವಶ್ಯಕವಿರುವ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದೆ.

ಯಾಗಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಯಾಗ ಕಾರ್ಯಕ್ಕೆ ಬೇಕಾಗುವ ಹೆಚ್ಚಿನ ಸಾಮಗ್ರಿ ಹಾಗೂ ಪರಿಕರಗಳನ್ನು ತಮಿಳುನಾಡಿನಿಂದ ತರಿಸಲಾಗಿದೆ. ಯಾಗದ ಪೂಜಾ ವಿಧಿಯಲ್ಲಿ ಪಾಲ್ಗೊಳ್ಳಲು ತಮಿಳುನಾಡಿನಿಂದಲೇ 800 ಮಂದಿ ಋತ್ವೀಜರು ಬಂದಿದ್ದಾರೆ. ಉಳಿದವರು ಕರ್ನಾಟಕ, ಕೇರಳ ಹಾಗೂ ಆಂಧ್ರ ಪ್ರದೇಶದವರು.

ಯಾಗ ಶಾಲೆಯ ಒಳ ಪ್ರವೇಶಕ್ಕೆ ಕಟ್ಟುನಿಟ್ಟಿನ ಪ್ರವೇಶವನ್ನು ಒದಗಿಸಲಾಗಿದೆ. ಪ್ರತಿ ದಿನ 11 ರಿಂದ 12 ರವರೆಗೆ ಹಾಗೂ ಪೂರ್ಣಾಹುತಿಯ ದಿನದಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಒದಗಿಸಲಾಗಿದೆ. ಉಳಿದಂತೆ ಸಂಘಟಕರಿಂದ ಅಧಿಕೃತ ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗಿದೆ. ಯಾಗ ಕಾರ್ಯದ ಸಂಪೂರ್ಣ ವ್ಯವಸ್ಥೆ ಖಾಸಗಿಯವರೇ ವಹಿಸಿಕೊಂಡಿದ್ದು, ಕೊಲ್ಲೂರು ದೇವಸ್ಥಾನಕ್ಕೂ ಹಾಗೂ ಈ ಯಾಗಕ್ಕೂ ಯಾವುದೆ ಸಂಬಂಧವಿಲ್ಲ.

ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುವ ರಮೇಶ್ ಗಾಣಿಗ, ವಂಡಬಳ್ಳಿ ಜಯರಾಮ್ ಶೆಟ್ಟಿ, ಅಭಿಲಾಷ್ ಮುಂತಾದವರು ಸಂಘಟಕರಿಗೆ ಸ್ಥಳೀಯ ಸಹಕಾರವನ್ನು ನೀಡುತ್ತಿದ್ದಾರೆ. ದೇವಸ್ಥಾನದ ಅರ್ಚಕರಾಗಿರುವ ಮೂರ್ತಿ ಕಾಳಿದಾಸ್ ಭಟ್, ಡಾ.ಕೆ.ಎನ್.ನರಸಿಂಹ ಅಡಿಗ ಹಾಗೂ ಎನ್.ಸುರೇಶ್ ಭಟ್‌ ಧಾರ್ಮಿಕ ವಿಧಿಯಲ್ಲಿ ಭಾಗಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry