7

ತೋಟಗಾರಿಕೆ ವಿ.ವಿ.ಗೆ ₹5 ಕೋಟಿ ನೆರವು

Published:
Updated:

ಬಾಗಲಕೋಟೆ: ‘ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲಯ 23 ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದೆ. ಈಗ ಪ್ರತಿ ಜಿಲ್ಲೆಗೆ ಒಬ್ಬರಂತೆ ರೈತರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ವಿ.ವಿಯ ಬೇಡಿಕೆಯಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ರೈತರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು’ ಎಂದು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ಇಲ್ಲಿನ ತೋಟಗಾರಿಕೆ ವಿಶ್ವವಿದ್ಯಾಲ ಯದ ಆವರಣದಲ್ಲಿ ಜರುಗಿದ ತೋಟಗಾರಿಕೆ ಮೇಳದಲ್ಲಿ ಭಾನುವಾರ ಫಲ ಶ್ರೇಷ್ಠರಿಗೆ ಪ್ರಶಸ್ತಿ ಪ್ರಧಾನ ಹಾಗೂ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ರೈತರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರಶಸ್ತಿ ಸಂಖ್ಯೆ ಹೆಚ್ಚಿಸಲಾಗುವುದು. ಗುಣಮಟ್ಟದ ಉತ್ಪಾದನೆ, ನವೀನ ಮಾದರಿಯ ತಾಂತ್ರಿಕತೆ, ಸಂಶೋಧನೆಗಳು ರೈತರಿಗೆ ತಲುಪಬೇಕು. ಈ ಭಾಗದ ವಾತಾವರಣಕ್ಕೆ ಹೊಂದುವಂತಹ ಬೆಳೆಗಳ ಸಂಶೋಧನೆ ಕೈಗೊಂಡು ರೈತರಿಗೆ ಅನುಕೂಲಕರವಾಗುವಂತೆ ಮಾಡಬೇಕು’ ಎಂದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಬೇಡಿಕೆಯಂತೆ ಇಲಾಖೆ ವತಿಯಿಂದ ₹ 5 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ ಸಚಿವರು, ಗೋದಾಮು ಹಾಗೂ ವಿವಿಧ ತಂತ್ರಜ್ಞಾನ ಅಳವಡಿಕೆಗೆ ತೋಟಗಾರಿಗೆ ಹಾಗೂ ಮಾರುಕಟ್ಟೆ ಇಲಾಖೆ ವತಿಯಿಂದ ₹ 5 ರಿಂದ 10 ಕೋಟಿ ಅನುದಾನ ನೀಡುವುದಾಗಿ ತಿಳಿಸಿದರು.

ಬೇರೆ ಬೇರೆ ದೇಶಗಳಲ್ಲಿ ಬೆಳೆಯುವ ಬೆಳೆಗಳ ಮಾಹಿತಿಯನ್ನು ರೈತರಿಗೆ ಪರಿಚಯಿಸುವ ಕೆಲಸವಾಗಬೇಕು. ರೈತರಿಗೆ ಅನುಕೂಲವಾಗುವ ಹೊಸ ಹೊಸ ತಂತ್ರಜ್ಞಾನಗಳ ಪರಿಚಯಿಸುವ ಮೂಲಕ ರೈತರ ಆರ್ಥಿಕ ಮಟ್ಟ ಹೆಚ್ಚಿಸುವ ಕೆಲಸವಾಗಬೇಕು ಎಂದರು.

ಮೇಳದಲ್ಲಿ 12 ತಾಂತ್ರಿಕ ವಿಷಯ, 11 ವಿವಿಧ ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆಗಳ ಪ್ರದರ್ಶನ, ತೋಟಗಾರಿಕೆ ಬೆಳೆ ಆಧಾರಿತ ಸಮಗ್ರ ಕೃಷಿ ಪದ್ದತಿ, ವಿವಿಧ ತರಹದ ಫಲಪುಷ್ಪಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ದೊಡ್ಡ ಮಟ್ಟದಲ್ಲಿ ರೈತರು ಮೇಳ ವೀಕ್ಷಣೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಏಳಿಗೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಗ್ರಾಮೀಣ ಪ್ರದೇಶದಲ್ಲಿ ನಾನಾ ಬಗೆಯ ದೇವರುಗಳ ದೇವಸ್ಥಾನಗಳನ್ನು ಕಾಣುತ್ತೇವೆ. ಅಲ್ಲಿ ಉತ್ಸವ ಜಾತ್ರೆಗಳನ್ನು ನೋಡುತ್ತೇವೆ. ಆದರೆ ನಾಡಿಗೆ ಅನ್ನ ನೀಡುವ ರೈತನ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿಜ್ಞಾನಿಗಳೆಂಬ ದೇವರನ್ನು ಒಳಗೊಂಡ ಈ ವಿಶ್ವವಿದ್ಯಾಲಯ ರೈತರ ದೇವಾಲಯವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು. ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ವೈ.ಕೆ.ಕೋಟಿಕಲ್ ಮೂರು ದಿನಗಳ ಕಾಲ ನಡೆದ ತೋಟಗಾರಿಕೆ ಮೇಳದ ವರದಿ ವಾಚಿಸಿದರು.

ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡ ಪರನಗೌಡರ, ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ವೈ.ಬಿ.ಪಾಟೀಲ, ಶಂಕರಪ್ಪ ಮಳಲಿ, ಎಸ್.ಎನ್.ಮಂಜುನಾಥಗೌಡ ಉಪಸ್ಥಿತರಿದ್ದರು.

23 ರೈತರಿಗೆ ಪ್ರಶಸ್ತಿ ಪ್ರದಾನ

ಈ ಬಾರಿ ಧಾರವಾಡ ಜಿಲ್ಲೆಯ ಉಳವಪ್ಪ ದಾಸನೂರ, ಕೊಪ್ಪಳ ಜಿಲ್ಲೆಯ ಯಂಕಪ್ಪ ಕಟ್ಟಿಮನಿ, ರಾಯಚೂರು ಜಿಲ್ಲೆಯ ಶಿವಪ್ರಸಾದ ಪಂಚಾಕ್ಷರಿಮಠ, ಬಳ್ಳಾರಿ ಜಿಲ್ಲೆಯ ಎಚ್.ವಿ.ಸಜ್ಜನ, ವಿಜಯಪುರ ಜಿಲ್ಲೆಯ ಬಶಿೀರ್‌ ಅಹಮದ್‌ ಬಳಗಾರ, ಮೈಸೂರಿನ ರಾಜಬುದ್ದಿ, ಬೆಳಗಾವಿಯ ರಾಜು ಬೈರುಗೋಳ, ತುಮಕೂರಿನ ಡಿ.ನರಸಿಂಹರಾಜು, ಗದಗಿನ ಮಹದೇವಗೌಡ, ಹಾವೇರಿಯ ಬಸವರಾಜ ಮಾವಿನಕಾಯಿ, ಬೆಂಗಳೂರಿನ ರವಿಕುಮಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿವಾನಂದ, ಕೋಲಾರದ ಕೆ.ಎಂ.ರಾಜಣ್ಣ, ಉತ್ತರ ಕನ್ನಡ ಮಧುಕೇಶ್ವರ ಹೆಗಡೆ, ಬಾಗಲಕೋಟೆಯ ಸದಾಶಿವ ಬಂಗಿ, ಮಂಡ್ಯದ ಬಿ.ವಿ.ರಾಜೇಗೌಡ, ಚಾಮರಾಜನಗರದ ದೇವಯ್ಯ ವೆಂಕಟಯ್ಯ, ಬೀದರ್‌ನ ವಿಠಲ್ ಪಾಂಚಾಳ, ಕಲಬುರಗಿಯ ಮಹಾದೇವಿ ವಣದೆ, ಯಾದರಿಯ ಎ.ವಿ.ಸುಬ್ಬಾರಾವ್‌ ಅಲಪಾಟಿ, ರಾಮನಗರದ ಜಿ.ರಮೇಶ ಹಾಗೂ ಹಾಸನ ಜಿಲ್ಲೆಯ ಓಂಕಾರಮೂರ್ತಿ ಅವರಿಗೆ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ ಪ್ರಶಸ್ತಿ ನೀಡಿ ಗೌರವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry