ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿ ಥಂಡಿಗೆ ಸರ್ಕಸ್‌ನ ಗಮ್ಮತ್ತು

Last Updated 25 ಡಿಸೆಂಬರ್ 2017, 6:47 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ನವನಗರದ ಆರ್‌ಟಿಒ ಕಚೇರಿ ಪಕ್ಕದ ಮೈದಾನದಲ್ಲಿ ಸರ್ಕಸ್ ಕಂಪೆನಿ ಬೀಡುಬಿಟ್ಟಿದೆ. ಕನ್ನಡಿಗರ ಒಡೆತನದ ಏಕೈಕ ಸರ್ಕಸ್ ಕಂಪೆನಿ ಎಂಬ ಶ್ರೇಯ ಹೊಂದಿರುವ ಗ್ರೇಟ್ ಪ್ರಭಾತ್ ಸರ್ಕಸ್ ಇನ್ನೊಂದು ತಿಂಗಳು ಮುಳುಗಡೆ ನಗರಿಯ ಜನರನ್ನು ರಂಜಿಸಲಿದೆ.

ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ಇನ್ನೊಂದು ತಿಂಗಳು ನಾಟಕ, ಸಿನಿಮಾ ನೋಡಿ ಶರದೃತುವಿನ ಥಂಡಿ ಹವೆಯನ್ನು ಸಂಭ್ರಮಿಸಲು ಕಾದು ಕುಳಿತವರಿಗೆ ಇದೀಗ ಬೋನಸ್ ಎಂಬಂತೆ ಸರ್ಕಸ್ ನೋಡುವ ಅವಕಾಶ ದೊರೆತಿದೆ. ಡಿಸೆಂಬರ್‌ 22ರಿಂದ ಪ್ರತಿ ದಿನ ಮೂರು ಪ್ರದರ್ಶನದೊಂದಿಗೆ ಸರ್ಕಸ್ ಕಾರ್ಯಾರಂಭ ಮಾಡಿದೆ.

ಶಿವಲಿಂಗದ ಪೂಜೆ: ಬಹದ್ದೂರ್, ಲಕ್ಷ್ಮೀ, ರೂಪ ಹಾಗೂ ಪ್ರಭಾ ಹೆಸರಿನ ನಾಲ್ಕು ಆನೆಗಳು, ಚೋಟು ಹಾಗೂ ರಾಜಾ ಹೆಸರಿನ ಒಂಟೆಗಳು ಕಂಪೆನಿಯ ಪ್ರಮುಖ ಆಕರ್ಷಣೆಯಾಗಿವೆ. ಪ್ರದರ್ಶನದ ವೇಳೆ ನಾಲ್ಕು ಆನೆಗಳು ಸೇರಿ ಶಿವಲಿಂಗುವಿಗೆ ನೀರಿನ ಅಭಿಷೇಕ ಮಾಡಿ ಸಾಲಾಗಿ ನಿಂತು ನಮಿಸುತ್ತಾ ಪೂಜಿಸುವ ದೃಶ್ಯ ನೆರೆದವರನ್ನು ಭಾವನಾತ್ಮಕವಾಗಿ ಸೆಳೆಯಲಿದೆ.

155 ಕಲಾವಿದರು: ಪ್ರಭಾತ್ ಕಂಪೆನಿಯಲ್ಲಿ ಮಣಿಪುರ, ಪಶ್ಚಿಮ ಬಂಗಾಳ, ಅಸ್ಸಾಮ್, ಆಫ್ರಿಕಾ ಹಾಗೂ ಕೀನ್ಯಾ ದೇಶಗಳ ಸಾಹಸ ಕಲಾವಿದರು ಸೇರಿ ಒಟ್ಟು 155 ಮಂದಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ 70 ಮಂದಿ ಏರೊಬಾಟಿಕ್ ಸ್ಟಂಟ್‌ಗಳಿಂದ ನೋಡುಗರನ್ನು ತುದಿಗಾಲಲ್ಲಿ ನಿಲ್ಲಿಸಲಿದ್ದಾರೆ.

ಆಸ್ಟ್ರೇಲಿಯಾದ ಗಿಣಿಗಳು, ತರಬೇತಿ ಪಡೆದ ನಾಯಿಗಳು ಹಾಗೂ ನಗೆಗಡಲಲ್ಲಿ ತೇಲಿಸುವ ಜೋಕರ್‌ಗಳು ಮಕ್ಕಳನ್ನು ಸೆಳೆಯಲಿದ್ದಾರೆ. ಮೃತ್ಯುವಿನ ಬಾವಿ ಎಂಬ ಅನ್ವರ್ಥದಲ್ಲಿ ಕರೆಯುವ ರಿಂಗ್‌ ಒಳಗೆ ಬೈಕ್ ಓಡಿಸುವ ಸವಾರ ಚಳಿಯಲ್ಲೂ ನೆರೆದವರನ್ನು ಬೆವರುವಂತೆ ಮಾಡುವುದು ಕಾಣಬಹುದಾಗಿದೆ.

ಕೆಳಗೆ ಹರಡಿ ನಿಂತ ಬಲೆಯ ಆಸರೆ ನೆಚ್ಚಿಕೊಂಡು ಮೇಲೆ ತೂಗಾಡುತ್ತಲೇ ಸಾಹಸ ಪ್ರದರ್ಶನ ಮಾಡುವ ಕಲಾವಿದರು ಎರಡೂವರೆ ಗಂಟೆ ಕಾಲ ಪ್ರೇಕ್ಷಕರನ್ನು ಹಿಡಿದಿಡಲಿದ್ದಾರೆ.

65 ವರ್ಷಗಳ ಹಳೆಯದಾದ ಪ್ರಭಾತ್ ಸರ್ಕಸ್‌ ಕಂಪೆನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರದ ಪಿ.ಸಾಯಿಬಾಬಾ ಮಾಲೀಕರು. ಈ ಹಿಂದೆ 30ಕ್ಕೂ ಹೆಚ್ಚು ಹುಲಿ–ಸಿಂಹ, ಕರಡಿಗಳನ್ನು ಹೊಂದಿದ್ದ ಕಂಪೆನಿ, ಮುಂದೆ ವನ್ಯಜೀವ ಸಂರಕ್ಷಣೆ ಕಾಯ್ದೆ ಜಾರಿಯಾದ ನಂತರ ಅವೆಲ್ಲವನ್ನೂ ಅರಣ್ಯ ಇಲಾಖೆಗೆ ಒಪ್ಪಿಸಿದೆ. ದಿನಕ್ಕೆ 3 ಪ್ರದರ್ಶನ: ಪ್ರತಿ ಮಧ್ಯಾಹ್ನ 1, ಸಂಜೆ 4 ಹಾಗೂ 7 ಗಂಟೆಗೆ ಸರ್ಕಸ್ ಪ್ರದರ್ಶನ ನಡೆಯ ಲಿದೆ. ಟಿಕೆಟ್ ದರ ₹70 ಹಾಗೂ 200

* * 

ಸರ್ಕಸ್ ಆರಂಭವಾಗಿ ಎರಡು ದಿನ ಆಗಿದೆ. ಬಾಗಲಕೋಟೆ ಜನರ ಸ್ಪಂದನೆಯೂ ಚೆನ್ನಾಗಿದೆ. ಪ್ರೇಕ್ಷಕರ ಉತ್ಸಾಹಕ್ಕೆ ಕಲಾವಿದರು ಸಂತಸಗೊಂಡಿದ್ದಾರೆ
ವಿ.ದೇವರಾಜ್
ಸರ್ಕಸ್ ಕಂಪೆನಿ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT