ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲಿ’

Last Updated 25 ಡಿಸೆಂಬರ್ 2017, 6:49 IST
ಅಕ್ಷರ ಗಾತ್ರ

ಆನೇಕಲ್: ‘ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಈಗ ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆ, ಉದ್ಯಮ.. ಹೀಗೆ ಯಾವುದೇ ಅಧಿಕೃತ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಕನ್ನಡವನ್ನು ಒಂದು ಭಾಷೆಯಾಗಿ ಕಲಿತಿರುವುದು ಕಡ್ಡಾಯವಾಗಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸಾ.ರಾ.ಗೋವಿಂದು ಪ್ರತಿಪಾದಿಸಿದರು. ಚಂದಾಪುರದಲ್ಲಿ ಭಾನುವಾರ ನಡೆದ ಬೆಂಗಳೂರು ನಗರ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಕೇಂದ್ರೋದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಆದ್ಯತೆಯಾಗಬೇಕು. ಗಡಿನಾಡಿನ ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಗಡಿನಾಡಿನ ಜನರ ಕಷ್ಟಗಳನ್ನು ನೀಗಿಸಬೇಕು. ಗಡಿನಾಡಿನ ಅಭಿವೃದ್ದಿಗಾಗಿಯೇ ರಾಜ್ಯದ ಬಜೆಟ್‍ನಲ್ಲಿ ಪ್ರತ್ಯೇಕ ನಿಧಿ ನಿಗದಿಗೊಳಿಸಬೇಕು. ಹೊರನಾಡು ಕನ್ನಡಿಗರಿಗೆ ಪ್ರೋತ್ಸಾಹಕರ ಕಾರ್ಯಕ್ರಮಗಳನ್ನು ರೂಪಿಸಿ ಕನ್ನಡ ಭಾಷೆ ಉಳಿಸುವ ಚಟುವಟಿಕೆಗಳನ್ನು ಮಾಡಬೇಕು ಎಂದರು.

ಹೊರ ರಾಜ್ಯಗಳ ವಿಶ್ವ ವಿದ್ಯಾಲಯಗಳಲ್ಲಿ ಕನ್ನಡ ವಿಭಾಗಗಳನ್ನು ನಡೆಸಲಾಗುತ್ತಿದೆ. ಅಲ್ಲಿ ಎಂ.ಎ ಮತ್ತು ಸಂಶೋಧನದಾರರಿಗೆ ಧನಸಹಾಯ ನೀಡಬೇಕು. ವಿದ್ಯಾರ್ಥಿ ವೇತನ, ಗ್ರಂಥ ಸಹಾಯಗಳನ್ನು ನೀಡುವುದರ ಮೂಲಕ ಕನ್ನಡ ವಿಭಾಗಗಳಿಗೆ ಉತ್ತೇಜನ ನೀಡಬೇಕು. ಹೊರನಾಡಿನಲ್ಲಿ ಪ್ರೌಢ ಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಕರ್ನಾಟಕದ ಉದ್ಯೋಗ ವಿನಿಮಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶವಿರಬೇಕು ಎಂದರು.

ಬೆಂಗಳೂರಿನಲ್ಲಿ ಪ್ರತಿಯೊಂದು ಭಾಷಿಗರು ವಾಸ ಮಾಡುತ್ತಿದ್ದಾರೆ. ಆದರೆ, ಇಂದು ಬೆಂಗಳೂರು ಭಾಗದಲ್ಲಿ ಕನ್ನಡ ಭಾಷೆ ಮಾತನಾಡುವರು ಅಲ್ಪಸಂಖ್ಯಾತರಾಗಿದ್ದಾರೆ. ಅದಕ್ಕೆ ಆವಕಾಶ ನೀಡದೇ ಭಿನ್ನಾಭಿಪ್ರಾಯ ಬಿಟ್ಟು ಕನ್ನಡ ಭಾಷಾ ಅಭಿವೃದ್ಧಿಗೆ ಎಲ್ಲರೂ ದುಡಿಯಬೇಕು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಕಳಸ ಹೊತ್ತ ಮಹಿಳೆಯರು ಮತ್ತು ಜನಪದ ಕಲಾತಂಡಗಳಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಪ್ರದರ್ಶನದೊಂದಿಗೆ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಲಾಯಿತು. ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT