7

ಅನುದಾನ ಬಳಕೆಗೆ ವಿಫಲ: ಚಂದ್ರು ವಿಷಾದ

Published:
Updated:

ಚಿಕ್ಕೋಡಿ: ‘ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಗಡಿನಾಡಿನಲ್ಲಿ ಕನ್ನಡ ನಾಡು, ನುಡಿ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ₹25 ಕೋಟಿ ಅನುದಾನವನ್ನು ಸದ್ಬಳಕೆ ಮಾಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕಿನ ಕಾರದಗಾ ಗ್ರಾಮದಲ್ಲಿ ಕನ್ನಡ ಬಳಗ ಭಾನುವಾರ ಹಮ್ಮಿಕೊಂಡಿದ್ದ 2ನೇ ಕನ್ನಡ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಇರುವಾಗ ಪ್ರಾಧಿಕಾರದಿಂದ ಆ ಅನುದಾನವನ್ನು ವಿನಿಯೋಗಿಸುವುದು ಸಾಧ್ಯವಿಲ್ಲ. ಮುಂದಿನ ಸರ್ಕಾರದಿಂದಲಾದರೂ ಅನುದಾನ ಸದ್ಬಳಕೆಗೆ ಒತ್ತಾಯ ಪಡಿಸುತ್ತೇನೆ’ ಎಂದರು.

‘ಐಎಎಸ್‌, ಐಪಿಎಸ್‌ ಅಧಿಕಾರಿಗಳು ಅಥವಾ ಮಾಧ್ಯಮಗಳಿಂದ ಕನ್ನಡ ಭಾಷೆ ಉಳಿದಿಲ್ಲ. ಹಳ್ಳಿಗಾಡಿನ ಮಹಿಳೆಯರು, ರೈತರ ಬಾಯಿಯಲ್ಲಿ, ಮಠಾಧೀಶರಿಂದ ಕನ್ನಡ ಜನಪದ ಭಾಷೆ ಉಳಿದಿದೆ. ಅಧಿಕಾರಿಗಳ ಊದಾಸೀನತೆ, ತಾತ್ಸಾರ, ಉದ್ಧಟತನ, ಜನಪ್ರತಿನಿಧಿಗಳ ರಾಜಕೀಯ ಕುತಂತ್ರಗಳಿಂದಾಗಿ ಹಾಗೂ ವಿದ್ಯಾವಂತರಿಂದಲೇ ಪ್ರಾದೇಶಿಕ ಭಾಷೆಗಳು ನಶಿಸುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವಿಶ್ವದಲ್ಲಿ ಸುಮಾರು 7000ಕ್ಕೂ ಹೆಚ್ಚು ಭಾಷೆಗಳಿದ್ದವು. ಇಂಗ್ಲಿಷ್‌ ಪ್ರಭಾವದಿಂದಾಗಿ ಸುಮಾರು 3000ದಷ್ಟು ಭಾಷೆಗಳು ನಶಿಸಿವೆ. ಉಳಿದಿರುವ ಸುಮಾರು 3500ರಿಂದ 4000 ದಷ್ಟು ಭಾಷೆಗಳ ಪೈಕಿ 2000 ದಷ್ಟು ಭಾಷೆಗಳು ಭಾರತದಲ್ಲಿಯೇ ಇವೆ. ಅಮೇರಿಕೆ ನಡೆಸಿರುವ ಸಮೀಕ್ಷೆವೊಂದರ ಪ್ರಕಾರ 30 ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ಕನ್ನಡಕ್ಕೆ 2000 ವರ್ಷಗಳ ಸುದೀರ್ಷ ಇತಿಹಾಸವಿದೆ. ಆದರೂ 500 ವರ್ಷಗಳ ಇತಿಹಾಸವಿರುವ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡುವುದು ಸರಿಯೇ?’ ಎಂದರು.

‘ಇಂಗ್ಲಿಷ್‌ ಕಲಿತರೆ ಮಾತ್ರ ಕಲಿತರೆ ಮಕ್ಕಳು ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ ಎಂಬುದು ಭ್ರಮೆ. ಯಾವ ಭಾಷೆ ಶ್ರೇಷ್ಠವೂ ಅಲ್ಲ, ಕನಿಷ್ಠ ಅಥವಾ ಅನಿಷ್ಟವೂ ಅಲ್ಲ. ಉದಾರೀಕರಣ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಮಾತ್ರ ಇಂಗ್ಲಿಷ್‌ ಬೆಳೆದಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಯಾವ ಭಾಷೆಯನ್ನು ತಿರಸ್ಕರಿಸಬಾರದು’ ಎಂದು ‘ಮುಖ್ಯಮಂತ್ರಿ’ ಚಂದ್ರು ತಿಳಿಸಿದರು.

ಚಿಕ್ಕೋಡಿ ಜಿಲ್ಲೆಗೆ ಒತ್ತಾಯ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ 25 ಲಕ್ಷ ಜನರ ಅನುಕೂಲತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು’ ಎಂದು ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದರು.

ಚಿಕ್ಕೋಡಿ ಜಿಲ್ಲೆ ಘೋಷಣೆ ಮಾಡಬೇಕು ಎಂಬ ಬೇಡಿಕೆ ಸಮ್ಮತವಾಗಿದೆ. ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಿದರೆ ಕನ್ನಡಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಚುನಾವಣೆಗೂ ಮುನ್ನವೇ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry