7

‘ಆಚರಣೆ ವಿಭಿನ್ನವಾದರೂ ಧರ್ಮಗಳ ಸಾರ ಒಂದೇ’

Published:
Updated:

ಔರಾದ್: ‘ಆಚರಣೆ ವಿಭಿನ್ನವಾದರೂ ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ’ ಎಂದು ಫಾದರ್ ಡೇವಿಡ್ ಹೇಳಿದರು. ತಾಲ್ಲೂಕಿನ ಸಂತಪುರ ಹೊಲಿಕ್ರಾಸ್ ಚರ್ಚ್‌ನಲ್ಲಿ ಶನಿವಾರ ಆಯೋಜಿಸಿದ್ದ ಕ್ರಿಸ್‌ಮಸ್‌ ಸೌಹಾರ್ದ ಕೂಟದಲ್ಲಿ ಮಾತನಾಡಿದ ಅವರು, ‘ಧರ್ಮದ ಅರ್ಥ ಬಹಳ ವಿಶಾಲವಾಗಿದೆ. ಮಾನವೀಯ ಮೌಲ್ಯ ಇರುವ ಕಡೆ ಧರ್ಮ ಇರುತ್ತದೆ. ಧರ್ಮ ಸನ್ಮಾರ್ಗ ಕಲಿಸಿಕೊಡುತ್ತದೆ. ಹೊರತು ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ’ ಎಂದು ತಿಳಿಸಿದರು.

‘ಯೇಸು ಸಮಾಜಕ್ಕೆ ಶಾಂತಿ ಮಂತ್ರ ಬೋಧಿಸಿದರು. ಮನುಷ್ಯನಲ್ಲಿ ಕ್ಷಮಾಗುಣ ಇರಬೇಕು. ಧರ್ಮಗಳ ವಿಚಾರದಲ್ಲಿ ಸಂಕಚಿತ ಮನೋಭಾವ ಇರಬಾರದು. ಎಲ್ಲ ಧರ್ಮಗಳು ಗೌರವದಿಂದ ಕಾಣಬೇಕು. ಮಾನವೀಯ ಮೌಲ್ಯಗಳು ಎತ್ತಿ ಹಿಡಿಯಬೇಕು’ ಎಂದು ಅವರು ಹೇಳಿದರು.

ಫಾದರ್ ನೆಲವಿನ್ ಮಾತನಾಡಿ, ಯೇಸು ಕ್ರಿಸ್ತರು ಜಗತ್ತಿಗೆ ಶಾಂತಿ ಸಂದೇಶ ನೀಡಿದರು. ಮನುಷ್ಯ ಧರ್ಮ ದೊಡ್ಡದು. ಮನುಷ್ಯ–ಮನುಷ್ಯರ ನಡೆವೆ ಪರಸ್ಪರ ಪ್ರೀತಿ ವಿಶ್ವಾಸ ಇರಬೇಕು. ಮನುಷ್ಯನಿಗೆ ದ್ರೋಹ ಮಾಡುವುದು ದೇವರಿಗೆ ದ್ರೋಹ ಮಾಡಿದಂತೆ ಎಂಬ ಸಂದೇಶ ನೀಡಿದ್ದಾರೆ’ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಅನಿಲ ಜಿರೋಬೆ ಮಾತನಾಡಿ, ‘ಇಲ್ಲಿಯ ಹೊಲಿಕ್ರಾಸ್ ಸಂಸ್ಥೆ ಮತ್ತು ದೀಪಾಲಯ ಶಾಲೆ ಬಡ ಜನರಿಗೆ ನೆರವು ನೀಡಿ ಮಾನವೀಯತೆ ಮರೆದಿದೆ. ಕಳೆದ ಮೂರು ದಶಕಗಳಿಂದ ಬಡ, ದೀನ ದಲಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ’ ಎಂದು ಹೇಳಿದರು.

ಫಾದರ್ ಪ್ರಶಾಂತ, ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಉಪನ್ಯಾಸಕ ಶಿವಕಾಂತ ಮಠಪತಿ, ಆನಂದ, ರಫಿ ಉಪಸ್ಥಿತರಿದ್ದರು. ಸಿಸ್ಟರ್ ಸರಿತಾ ಸ್ವಾಗತಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಕೇಕ್ ಕತ್ತರಿಸಿ ಮಕ್ಕಳಿಗೆ ಹಂಚಲಾಯಿತು. ಸಂತಪುರ ಹಾಗೂ ಸುತ್ತಲಿನ ಗ್ರಾಮಗಳ ಮಹಿಳೆಯರು ಸೇರಿದಂತೆ ನೂರಾರು ಕ್ರೈಸ್ತ ಸಮುದಾಯದವರು ಪಾಲ್ಗೊಂಡರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry