7

ಇಳುವರಿ ಲೋಪ ಸರಿಪಡಿಸಿ

Published:
Updated:

ಚಾಮರಾಜನಗರ: ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಇಳುವರಿಯಲ್ಲಿ ಆಗುತ್ತಿರುವ ಲೋಪವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಜಿಲ್ಲಾಧಿಕಾರಿ ಬಿ. ರಾಮು ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ಬಣ್ಣಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು 2016–17, 2017–18ನೇ ಸಾಲಿಗೆ ಇಳುವರಿಯನ್ನು ಶೇ 8.5 ಎಂದು ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. 10 ವರ್ಷದಿಂದ ಕಬ್ಬಿನ ಇಳುವರಿ ಶೇ 10.5 ಇತ್ತು. ಇದರಿಂದ ರೈತರಿಗೆ ಪ್ರತಿಟನ್‌ಗೆ ₹ 550 ನಷ್ಟವಾಗುತ್ತಿದೆ’ ಎಂದರು.

ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಟಾವು ಸಾಗಣೆ ಸೇರಿ ರೈತರಿಗೆ ₹ 3,000 ಹಾಗೂ ದಾವಣಗೆರೆಯಲ್ಲಿ ₹ 2,800 ಪಾವತಿಯಾಗುತ್ತಿದೆ. ಆದರಿಂದ ಎಸ್‍ಎಪಿ ಸಭೆಯಲ್ಲಿ ಸಕ್ಕರೆ ಸಚಿವರು ಮೌಖಿಕವಾಗಿ ಎಫ್‍ಆರ್‌ಪಿ ಮೇಲೆ ಹೆಚ್ಚುವರಿ ₹ 250 ಪಾವತಿಸುವಂತೆ ಸೂಚನೆ ನೀಡಿದ್ದರು. ಆದರೆ, ಕಾರ್ಖಾನೆ ಆಡಳಿತ ಮಂಡಳಿ ಇದಕ್ಕೆ ಒಪ್ಪುತ್ತಿಲ್ಲ. ಕಟಾವು ಕೂಲಿಯನ್ನು ರೈತರಿಂದ ನಗದು ರೂಪದಲ್ಲಿ ಪಡೆದು ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

‘ಜಿಲ್ಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ತ್ರಿಫೇಸ್ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹಾಲಿನ ದರವನ್ನು ಕಡಿತ ಮಾಡಿರುವುದು ಹಾಲು ಉತ್ಪಾದಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬ್ಯಾಂಕ್‌ಗಳು ಸಾಲ ವಸೂಲಿಗೆ ರೈತರ ಮೇಲೆ ಒತ್ತಡ ಹೇರುತ್ತಿರುವುದಲ್ಲದೇ, ಪ್ರಕರಣ ದಾಖಲಿಸುತ್ತಿರುವುದು ಸರಿಯಲ್ಲ. ರೈತರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಹಕಾರಿ ಸಂಘಗಳ ಸಾಲಮನ್ನಾದಲ್ಲಿ ಗೊಂದಲವಿದ್ದು, ಸಂಪೂರ್ಣ ಸಾಲಮನ್ನಾ ಮಾಡಬೇಕು. ಟೊಮೆಟೊ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಬೆಂಬಲ ಬೆಲೆಯಲ್ಲಿ ಎಪಿಎಂಸಿ ಮೂಲಕ ಖರೀದಿಸಬೇಕು. ಜಿಲ್ಲೆಯಲ್ಲಿ 4 ಸಾವಿರ ರೈತರಿಗೆ ಬೆಳೆವಿಮೆ ಹಣ ಪಾವತಿಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಮೂಕಹಳ್ಳಿ ಮಹದೇವಸ್ವಾಮಿ, ಮುಖಂಡರಾದ ಕುಂತೂರು ಪ್ರಭುಸ್ವಾಮಿ, ಪುಟ್ಟಸ್ವಾಮಿ, ಬಸವೇಗೌಡ, ಪ್ರಭುಸ್ವಾಮಿ, ಮಹದೇವ್, ಬಸವಣ್ಣ, ಮನು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry