7

ರಸ್ತೆಯಲ್ಲಿ ಕೊಚ್ಚೆ ನೀರು, ಬೇಸತ್ತ ನಾಗರಿಕರು

Published:
Updated:

ಚಿಕ್ಕಬಳ್ಳಾಪುರ: ನಗರದ 5ನೇ ವಾರ್ಡ್‌ನ ಮುಖ್ಯರಸ್ತೆಯಲ್ಲಿರುವ ಒಳಚರಂಡಿ ಮಾರ್ಗದ (ಯುಜಿಡಿ) ಮ್ಯಾನ್‌ಹೋಲ್‌ ಹಾನಿಗೊಂಡು, ಕಳೆದ ಆರು ತಿಂಗಳಿನಿಂದ ರಸ್ತೆಯಲ್ಲಿ ಕೊಚ್ಚೆ ನೀರು ಹರಿಯುತ್ತ ಸುತ್ತಲಿನ ಪರಿಸರವನ್ನು ಅಧ್ವಾನಗೊಳಿಸುತ್ತಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸುತ್ತಿದೆ.

ನಗರದಿಂದ ದಿನ್ನೆಹೊಸಹಳ್ಳಿ, ಹನುಮಂತಪುರ, ಅಂಕಣಗೊಂದಿ, ಹೊಸೂರು, ಸೊಸೆಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ತ್ಯಾಜ್ಯ ನೀರಿನಿಂದ ದಿನೇ ದಿನೇ ಕೊಚ್ಚೆಗುಂಡಿಯಾಗುತ್ತಿರುವುದು ಸ್ಥಳೀಯರಿಗೆ ತಲೆನೋವು ತಂದಿದೆ. ಸದ್ಯ ಈ ದಾರಿಯಲ್ಲಿ ಜನರು ಮೂಗು ಮುಚ್ಚಿಕೊಂಡು, ಅಸಹ್ಯಪಟ್ಟುಕೊಂಡು ಓಡಾಡಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ.

ಶೌಚಾಲಯದ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣಕ್ಕೆ ದುರ್ವಾಸನೆ ರಸ್ತೆಯಲ್ಲಿ ಮನೆ ಮಾಡಿದ್ದು, ಸತತ ಹರಿಯುವ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ಇದರಿಂದಾಗಿ ಸ್ಥಳೀಯರು ಮನೆ ಬಾಗಿಲು ತೆಗೆಯಲು ಹಿಂದೇಟು ಹಾಕುವ ಸ್ಥಿತಿ ಬಂದಿದೆ. ಈ ಸಮಸ್ಯೆ ಬಗೆಹರಿಸಲು ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ನಾಗರಿಕರಲ್ಲಿ ಅಸಮಾಧಾನ ಮೂಡಿಸಿದೆ.

‘ಕಳೆದ ಆರು ತಿಂಗಳಿನಿಂದ ಇಲ್ಲಿ ಒಳಚರಂಡಿಯಲ್ಲಿ ತ್ಯಾಜ್ಯದ ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇನ್ನು ಸ್ಥಳೀಯ ಐದು ಮತ್ತು ನಾಲ್ಕನೇ ವಾರ್ಡ್‌ಗಳ ಕಾರ್ಪೊರೇಟರ್‌ಗಳು ಪರಸ್ಪರ ಆ ರಸ್ತೆ ನಮಗೆ ಸೇರಿಲ್ಲ ಎಂದು ನುಣುಚಿಕೊಳ್ಳುತ್ತಿದ್ದಾರೆ. ಹೀಗಾದರೆ ನಾವು ಯಾರಲ್ಲಿ ಈ ಬಗ್ಗೆ ಕೇಳುವುದು ಎಂದು ತಿಳಿಯುತ್ತಿಲ್ಲ’ ಎಂದು 5ನೇ ವಾರ್ಡ್‌ ನಿವಾಸಿ ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

‘ಈ ರಸ್ತೆ ಮೂಲಕ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಅನೇಕ ತಿಂಗಳಿನಿಂದ ಅಂಜುವಂತಾಗಿದೆ. ಇಷ್ಟೊಂದು ಸಮಸ್ಯೆ ಇದ್ದರೂ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಣ್ಣು ಹಾಯಿಸದಿರುವುದು ಸ್ಥಳೀಯರ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry