ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸಿವೆ ಕಾಳು ಹೆಮ್ಮರವಾದ ಕಥನ...

Last Updated 25 ಡಿಸೆಂಬರ್ 2017, 8:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಪರಿವರ್ತನೆ ಜಗದ ನಿಯಮ. ಪರಿವರ್ತನೆಯ ಹಾದಿಯಲ್ಲಿ ನಡೆದವರಿಗೆ ಯಶಸ್ಸು ಸಿದ್ಧಿಸುತ್ತದೆ ಎಂದು ಪ್ರಾಜ್ಞರು ಹೇಳುತ್ತಾರೆ. ಈ ಮಾತಿಗೆ ಸಾಕ್ಷಿ ಎನ್ನುವಂತೆ ಚಿಕ್ಕಬಳ್ಳಾಪುರ ಪರಿಸರದಲ್ಲಿ ಒಂದು ಕಾಲದಲ್ಲಿ ಸಾಸಿವೆ ಕಾಳಿನಂತಿದ್ದ ಕ್ರೈಸ್ತ ಸಭೆ ಇವತ್ತು ಹೆಮ್ಮರವಾಗಿ ಸಿಎಸ್‌ಐ ಕ್ರೈಸ್ಟ್‌ ಚರ್ಚ್‌ನ ಭವ್ಯ ಆಲಯದ ರೂಪದಲ್ಲಿ ತಲೆ ಎತ್ತಿ ನಿಂತಿದೆ.

ಈ ಆಲಯದ ಭೌತಿಕ ಕಟ್ಟಡದ ನಿರ್ಮಾಣಕ್ಕೆ 23 ವರ್ಷಗಳ ಲೆಕ್ಕವಿದೆ. ಆದರೆ ಒಳಹೊಕ್ಕು ಇತಿಹಾಸದ ಪುಟಗಳನ್ನು ಅವಲೋಕಿಸಿದರೆ 136 ವರ್ಷಗಳಷ್ಟು ಸುದೀರ್ಘ ಪಯಣದ ರೋಚಕ ಕಥನ ಅನಾವರಣಗೊಳ್ಳುತ್ತದೆ.

ಒಂದೂವರೆ ಶತಮಾನದ ಹಿಂದೆ ಅತ್ಯಂತ ಹಿಂದುಳಿದಿದ್ದ ಈ ಭಾಗದಲ್ಲಿ ಲಂಡನ್ ಮಿಷನ್‌ ಸಂಘದ ವತಿಯಿಂದ ಸೌವಾರ್ತಿಕರಾಗಿ ಬಂದಿದ್ದ ವಿದೇಶಿ ಮತ್ತು ದೇಶಿಯ ಕ್ರೈಸ್ತ ಧರ್ಮೀಯರು ಇಲ್ಲಿನ ಜನಜೀವನದಲ್ಲಿ ಬೆರೆತು ಇಲ್ಲಿಯೇ ನೆಲೆ ನಿಂತು, ಕ್ರೈಸ್ತ ಸಭೆಗೆ ಭದ್ರ ಬುನಾದಿ ಹಾಕಿದ್ದು ಚಿಕ್ಕಬಳ್ಳಾಪುರದ ಕೈಸ್ತ ಸಭಾ ಚರಿತ್ರೆಯ ಮೈಲುಗಳಲ್ಲಿ ಪ್ರಮುಖವಾದ್ದದ್ದು.

1877–78ರಲ್ಲಿ ಸದ್ಯ ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡಿರುವ ಪ್ರದೇಶದಲ್ಲಿ ಭೀಕರ ಕ್ಷಾಮ ತಲೆದೋರಿತು. ಜೀತ ಪದ್ಧತಿ, ಅಸ್ಪಶ್ಯತೆ, ಬಡತನ, ಅನಕ್ಷರತೆ, ಮೂಢನಂಬಿಕೆಗಳು ಆಳವಾಗಿ ಬೇರೂರಿದ್ದ ಪ್ರದೇಶದಲ್ಲಿ ಕಾಲರಾ, ಪ್ಲೇಗ ಸೃಷ್ಟಿಸಿದ ‘ಸುನಾಮಿ’ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದರಿಂದ ಸ್ಥಳೀಯರೆಲ್ಲ ಸುರಕ್ಷಿತ ನೆಲೆಗಾಗಿ ವಲಸೆ ಹೋಗುವುದು ಕೂಡ ನಡೆದಿತ್ತು.

ಈ ವೇಳೆ ಬೆಂಗಳೂರಿನಲ್ಲಿದ್ದ ಲಂಡನ್‌ ಮಿಷನ್‌ ಸಂಘದ ಮಿಷನರಿಗಳಾದ ಇ.ಪಿ.ರೈಸ್ ಅವರು ತಮ್ಮ ಮೇಲಾಧಿಕಾರಿಗಳೊಡನೆ ಈ ವಿಚಾರ ಚರ್ಚಿಸಿ ದೇಶಿಯರೇ ಆದ ಸ್ಯಾಮ್‌ಸನ್‌ ಡೇವಿಡ್‌, ಆರೋಗ್ಯಂ ಮತ್ತು ಭದ್ರಪ್ಪ ಅವರನ್ನು ಸೌವಾರ್ತಿಕರನ್ನಾಗಿ ಚಿಕ್ಕಬಳ್ಳಾಪುರ ಭಾಗಕ್ಕೆ ಸೇವೆಗಾಗಿ ಕಳುಹಿಸಿದರು.

ಹೀಗೆ ಬಂದ ಸೌವಾರ್ತಿಕರು ದೇವರ ವಾಕ್ಯಗಳನ್ನು ಸಾರುತ್ತ, ಮನೆ ಮನೆಗೆ ಭೇಟಿ ನೀಡಿ ಕಷ್ಟ ಸುಖ ವಿಚಾರಿಸುವ ಜತೆಗೆ ಕಾಲಾಂತರದಲ್ಲಿ ಇಲ್ಲಿಯೇ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ವೈದ್ಯಕೀಯ ಸೇವೆಯ ಆರಂಭಿಸಿದರು. ಇವರೊಂದಿಗೆ ಜೋನಾ, ಜ್ಞಾನಕ್ಕಣ್, ಪೀರಾಜಿ, ಜೆ.ಪಾಲ್, ರಂಗನಾಥನ್‌ ಕೈಜೋಡಿಸಿದರು.

1881ರಲ್ಲಿ ರೂಬೆನ್ ಎಂಬುವರು ಸೌವಾರ್ತಿಕರಿಗಾಗಿ ಚಿಕ್ಕಬಳ್ಳಾಪುರದಲ್ಲಿ ಜಾಗ ಖರೀದಿಸಿ ಪುಟದೊಂದು ವಾಚನಾಲಯ ಆರಂಭಿಸುತ್ತಾರೆ. ಇದನ್ನು ಸ್ಥಳೀಯ ಕೈಸ್ತ ಸಭಾ ಚರಿತ್ರೆಯ ಮೊದಲ ಅಧ್ಯಾಯ ಎನ್ನಬಹುದು.

1892ರಲ್ಲಿ ಅಲ್ಲಿ ಎಲ್‌.ಎಂ.ಪಿ (ಲಂಡನ್‌ ಮಿಷನರಿ ಪ್ರೈಮರಿ ಸ್ಕೂಲ್) ಶಾಲೆ ಆರಂಭಿಸಿದರು. ಅದನ್ನು ಸತ್ಯವೀರ ಎಂಬ ದರ್ಜಿ ಮುತುವರ್ಜಿಯಿಂದ ನಡೆಸಿದರು. ಅದೇ ಶಾಲೆಯಲ್ಲಿ ಪ್ರತಿ ಭಾನುವಾರ ಆರಾಧನೆ ನಡೆಯುತ್ತಿತ್ತು. 125 ವರ್ಷಗಳ ಇತಿಹಾಸ ಹೊಂದಿರುವ ಆ ಶಾಲೆಯ ಕಟ್ಟಡವನ್ನು ಇಂದಿಗೂ ಬಾಪೂಜಿ ನಗರದಲ್ಲಿ ನೋಡಬಹುದು.

ಚಿಕ್ಕಬಳ್ಳಾಪುರದ ಕೈಸ್ತ ಸಭಾ ಚರಿತ್ರೆಯಲ್ಲಿಯೇ 1892 ಅತ್ಯಂತ ಮಹತ್ವದ್ದು. ಏಕೆಂದರೆ ಲಂಡನ್‌ ಮಿಷನ್‌ ಸಂಘದವರು ಆ ವರ್ಷದಲ್ಲಿ ಇ.ಪಿ.ರೈಸ್, ಆರ್‌.ಎ.ಹಿಕ್ಲಿಂಗ್ ಮತ್ತು ಕೇಯಿರ್ನ್ಸ್‌ ಅವರನ್ನು ಈ ಪ್ರದೇಶದ ಕ್ರೈಸ್ತ ಸಭಾ ಸೇವೆಗಾಗಿ ಕಳುಹಿಸಿದರು. ಹಿಕ್ಲಿಂಗ್ ಅವರು 1892ರ ಮಾರ್ಚ್‌ 8 ರಿಂದ 1893ರ ಜನವರಿ 11ರವರೆಗೆ ಮನೆಯೇ ಇಲ್ಲದೇ ಚಿತ್ರಾವತಿಯ ತೋಪಿನಲ್ಲಿ ತಾತ್ಕಾಲಿಕವಾಗಿ ಗುಡಾರ ಕಟ್ಟಿಕೊಂಡು ವಾಸವಿದ್ದು, ತಮ್ಮ ಸೇವೆ ಮುಂದುವರಿಸಿದ್ದರು.

ಅವರಿಗೆ ಮನೆ ಕಟ್ಟಿಸಿಕೊಡುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ 4 ಎಕರೆ 22 ಗುಂಟೆ ಸ್ಥಳವನ್ನು (ಈಗಿನ ಮಿಷನ್ ಬಂಗ್ಲೆ ಆವರಣ) 227 ರೂಪಾಯಿ 9 ಆಣೆ 3 ಪೈಸೆಗೆ ಖರೀದಿಸಲಾಗುತ್ತದೆ. ಒಂದೇ ವರ್ಷದಲ್ಲಿ ಅಲ್ಲಿ ಮನೆ ಕೂಡ ಕಟ್ಟಲಾಯಿತು.

1894ರಲ್ಲಿ ಈ ಭಾಗದಲ್ಲಿ ಸಾಂಕ್ರಾಮಿಕ ರೋಗಳಿಂದ ವ್ಯಾಪಕ ಸಾವುಗಳು ಸಂಭವಿಸಲು ಆರಂಭಿಸಿದ್ದವು. ಜನರು ಊರು ತೊರೆದು ತಂಡೊಪತಂಡವಾಗಿ ವಲಸೆ ಹೋಗಲು ಆರಂಭಿಸಿದ್ದರು. ಈ ವೇಳೆ ಹಿಕ್ಲಿಂಗ್‌ ತಮ್ಮ ಪತ್ನಿಯೊಂದಿಗೆ ಮನೆ ಮನೆಗೆ ಭೇಟಿ ಇತ್ತು ಆಹಾರ, ಔಷಧಿ ನೀಡಿ ಜನರ ಆರೈಕೆ ಮಾಡುತ್ತಿದ್ದರು. ಇಲ್ಲಿನ ವೈದ್ಯಕೀಯ ಅಗತ್ಯಗಳನ್ನು ಮನಗಂಡು 1913ರಲ್ಲಿ ಆಸ್ಪತ್ರೆ ತೆರೆದರು. ಅದು ಇಂದಿಗೂ ಸಿಎಸ್‌ಐ ಆಸ್ಪತ್ರೆಯಾಗಿ ಆರೋಗ್ಯ ಸೇವೆ ನೀಡುತ್ತಿದೆ.

ಎಲ್‌.ಎಂ.ಪಿ ಶಾಲೆಯಲ್ಲಿ ಆರಾಧನೆಗೆ ಜಾಗ ಸಾಕಾಗದಿದ್ದಾಗ ಲಂಡನ್‌ ಮಿಷನ್‌ ಸಂಘದವರು 1893 ಏಪ್ರಿಲ್‌ 5ರಂದು ಮುನಿಸಿಪಾಲಿಟಿ ಹರಾಜಿನಲ್ಲಿ ₹ 218ಕ್ಕೆ ಚಿಕ್ಕಬಳ್ಳಾಪುರದಲ್ಲಿದ್ದ ‘ಲೆಕ್ಚರ್ ಹಾಲ್’ ತಮ್ಮದಾಗಿಸಿಕೊಳ್ಳುತ್ತಾರೆ. ಅಲ್ಲಿ ದೇವಾಲಯ ಕಟ್ಟಲು ಅನುಮತಿ ದೊರೆಯದ ಕಾರಣ. ಅಲ್ಲಿನ ಕಟ್ಟಡಕ್ಕೆ ‘ವಿಂಟರ್‌ ಬಾಥಮ್‌ ಲೆಕ್ಚರ್ ಹಾಲ್‌’ ಹೆಸರಿಟ್ಟು ಮುನಿಸಿಪಾಲಿಟಿಯಿಂದ ಅನುಮತಿ ಪಡೆಯುತ್ತಾರೆ.

ಅದನ್ನು ಇವತ್ತು ಗಂಗಮ್ಮ ಗುಡಿ ರಸ್ತೆಯಲ್ಲಿ ‘ಹಿಕ್ಲಿಂಗ್ ಸ್ಮಾರಕ ಪ್ರಾರ್ಥನಾ ಮಂದಿರ’ವಾಗಿ ನೋಡಬಹುದಾಗಿದೆ. ಎಂಟು ಮೂಲೆಯ ಈ ಆರಾಧನಾ ಮಂದಿರ ಬೆತ್ಲೆಹೇಮ್‌ ನಗರದಲ್ಲಿರುವ ಕ್ರೀಸ್ತನ ದೇವಾಲಯ ನೆನಪಿಸುವಂತಿದೆ. ಇದರ ನಿರ್ಮಾಣಕ್ಕೆ ಮರವನ್ನು ಬಳಸಿಲ್ಲ ಎನ್ನುವುದೇ ವಿಶೇಷ. ಸಿಎಸ್‌ಐ ಕ್ರೈಸ್ಟ್‌ ಚರ್ಚ್ ನಿರ್ಮಾಣವಾಗುವ ಮೊದಲು ಇಲ್ಲಿಯೇ ಆರಾಧನೆ, ದೇವಾಲಯದ ಇತರೆ ಚಟುವಟಿಕೆಗಳು ನಡೆಯುತ್ತಿದ್ದವು.

ಕಾಲಾಂತರದಲ್ಲಿ ಈ ಭಾಗದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಹೆಚ್ಚುತ್ತಿದ್ದಂತೆ ಸಾಸಿವೆ ಕಾಳಿನಂತಿದ್ದ ಕ್ರೈಸ್ತ ಸಭೆ ಹೆಮ್ಮರವಾಗಿ ಬೆಳೆದು ನಿಂತಿತು. ಆರಾಧನೆಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಲೆಕ್ಚರ್ ಹಾಲ್‌ ಸಾಲದಾಯಿತು. ಆಗ ಸಭೆಯ ನಾಯಕರಿಗೆ ಹೊಸ ಆಲಯ ಕಟ್ಟಬೇಕೆಂಬ ಯೋಚನೆ ಬಂತು. ಆಗ ದೂರದೃಷ್ಟಿಯಿಂದ ಯೋಜಿಸಿದ್ದೇ ಸಿ.ಎಸ್‌.ಐ ಕ್ರೈಸ್ಟ್‌ ಚರ್ಚ್‌.

1986ರಲ್ಲಿ ಬಿಷಪ್ ಜತನ್ ಅವರು 100X50 ಅಡಿ ವಿಸ್ತಾರದ ಜಾಗದಲ್ಲಿ ಸಿಎಸ್‌ಐ ಕ್ರೈಸ್ಟ್ ಚರ್ಚ್ ನಿರ್ಮಾಣಕ್ಕೆ ಆಸ್ತಿವಾರ ಹಾಕಿದರು. ಇದಕ್ಕೆ ಆರಂಭದಲ್ಲಿ ಕೆಲವರು ಇಷ್ಟು ಚಿಕ್ಕ ಊರಿಗೆ ಇಷ್ಟೊಂದು ದೊಡ್ಡ ಚರ್ಚ್‌ ಅಗತ್ಯವಿದೆಯಾ ಎಂದೆಲ್ಲಾ ಪ್ರಶ್ನಿಸಿದ್ದು ಉಂಟು. ಈ ಯೋಜನೆಯ ಆರಂಭಿಕ ಅಂದಾಜು ವೆಚ್ಚ ₹ 4 ಲಕ್ಷ. ಕಾಮಗಾರಿ ವಿಳಂಬವಾಗುತ್ತಿದ್ದಂತೆ ಅದು ₹ 5ಲಕ್ಷಕ್ಕೆ ಏರಿತು.

ಚರ್ಚ್‌ಗೆ ಹಣ ಕೂಡಿಸಲು ಸಭಾ ನಾಯಕರು ಆವರಣದಲ್ಲಿದ್ದ ಬಾವಿಯ ನೀರನ್ನು ಗಾಡಿಯೊಂದಕ್ಕೆ ಒಂದು ರೂಪಾಯಿಯಂತೆ ಮಾರಿ ₹ 5 ಲಕ್ಷ ಸಂಗ್ರಹಿಸಿದರು.  ಸಭೆಯ ಯುವಜನರು ಲಾಟರಿ ಮೂಲಕ ₹ 30 ಸಾವಿರ ಸಂಗ್ರಹಿಸಿದರು. ಅನೇಕರು ದೇಣಿಗೆ ಕೊಟ್ಟರು. ಈ ಚರ್ಚ್‌ ಗೋಪುರ ನಕ್ಷೆ ವಿಶಿಷ್ಟವಾಗಿದ್ದ ಕಾರಣಕ್ಕೆ ಈ ಸಂಕೀರ್ಣ ನಿರ್ಮಾಣದ ಉಸ್ತುವಾರಿಗೆ ಚೆನೈನಿಂದ ವಾಸ್ತುಶಿಲ್ಪಿಗಳನ್ನು ಕರೆಯಿಸಲಾಗಿತ್ತು.

ಚರ್ಚ್‌ ಕಟ್ಟಡ ನಿರ್ಮಾಣವಾಗುತ್ತಿದ್ದಂತೆ ವೇದಿಕೆಯ ಮೇಜು, ಫ್ಯಾನ್, ಸ್ಪೀಕರ್, ಸ್ನಾನವೇದಿಕೆಯ ಸ್ಟ್ಯಾಂಡ್‌, ಪ್ರಸಂಗ ಪೀಠ, ಎಲ್ಲವೂ ದಾನವಾಗಿ ಹರಿದು ಬಂದವು. ಕೊಲ್ಕತ್ತಾದಿಂದ ₹ 80 ಸಾವಿರಕ್ಕೆ ಬೃಹತ್ ಗಂಟೆ ಖರೀದಿಸಿ ತರಲಾಯಿತು. ಅನೇಕರ ಹರಸಾಹಸದ ಫಲವಾಗಿ 1994ರ ಡಿಸೆಂಬರ್‌ 12 ರಂದು ಪ್ರಸಿದ್ಧ ಪ್ರಸಂಗಿ ಶೆಟ್ಟಿಯಾನ್‌ ಅವರು ಚರ್ಚ್‌ ಉದ್ಘಾಟಿಸಿದರು. ಆಗ ಸತ್ಯಾನಂದ ಪಾಲ್‌ ಸಭಾ ಪಾಲಕರಾಗಿದ್ದರು.

ಇವತ್ತು ನೂರಾರು ಕುಟುಂಬಗಳು ಈ ಆಲಯದ ಸದಸ್ಯರಾಗಿದ್ದಾರೆ. ಜಾತಿಬೇಧ ಮರೆತು ಎಲ್ಲ ಸಮುದಾಯಗಳ ಭಕ್ತರು ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಸದ್ಯ ಸಭಾಪಾಲಕರಾಗಿರುವ ಎಸ್‌.ದಿಶೋನ್‌ ಅವರ ನೇತೃತ್ವದಲ್ಲಿ ಚರ್ಚ್‌ನಲ್ಲಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ.

ಕ್ರಿಸ್ತನ ಸಂದೇಶ ಪ್ರಸಾರ

ಚಿಕ್ಕಬಳ್ಳಾಪುರ ಕ್ರೈಸ್ತ ಸಭಾ ಪಿತಾಮಹ ಎಂದೇ ಕರೆಯಲ್ಪಡುವ ಹಿಕ್ಲಿಂಗ್ ಸಂಸ್ಕೃತದೊಂದಿಗೆ ಅನೇಕ ಭಾಷೆಗಳನ್ನು ಕಲಿತಿದ್ದರು. ತಮ್ಮದೇ ಆದ ಭಾಷಾ ವೈಖರಿಯಿಂದ ಅವರು ಸ್ವಾರಸ್ಯಕರವಾದ ಕಥಾಕಾಲಕ್ಷೇಪಗಳ ಮೂಲಕ ಜನರಿಗೆ ಕರ್ತನ ಸಂದೇಶಗಳನ್ನು ಮುಟ್ಟಿಸುತ್ತಿದ್ದರು. ಅವರೊಂದಿಗೆ ಇತರ ಮಿಷನರಿಗಳು ಆಗಾಗ ಇಲ್ಲಿಗೆ ಬಂದು ಪ್ರಬೋಧನೆ ಮಾಡುತ್ತಿದ್ದರು. ಸಂತೆ, ಜಾತ್ರೆಗಳಲ್ಲಿ ದೊಡ್ಡ ಧ್ವನಿಯಲ್ಲಿ ಜನರಿಗೆ ಸುವಾರ್ತೆಯ ಕಥೆ ಹೇಳಿ ಕ್ರಿಸ್ತನ ಸಂದೇಶಗಳನ್ನು ಹರಡುತ್ತಿದ್ದರು.

‘ಪಂಚಮ’ ಶಾಲೆ

ಮನುಸ್ಮೃತಿ ಪ್ರತಿಪಾದಿಸುವ ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಕೊನೆಯವರಾದ ಪಂಚಮರ ಸ್ಥಿತಿ ಆ ಕಾಲಘಟ್ಟದಲ್ಲಿ ತುಂಬಾ ಹೀನಾಯವಾಗಿತ್ತು. ಅದನ್ನು ಅರಿತ ಮಿನಷರಿಗಳು ಅಸ್ಪೃಶ್ಯರು, ದಲಿತರ ಮಕ್ಕಳ ಶಿಕ್ಷಣಕ್ಕಾಗಿ ‘ಪಂಚಮ’ ಶಾಲೆ ಆರಂಭಿಸಲು ಮುನ್ಸಿಪಾಲಿಟಿಯಿಂದ ಕೋಟೆ ಪ್ರದೇಶದಲ್ಲಿ ₹ 25 ರೂಪಾಯಿಗೆ ಸ್ಥಳವೊಂದನ್ನು ಖರೀದಿಸಿದರು.

* * 

ಸಾಮಾಜಿಕವಾಗಿ, ಆರ್ಥಿಕವಾಗಿ ತೀರಾ ಹಿಂದುಳಿದ ಪ್ರದೇಶದ ಜನರ ಸೇವೆಗೆ ಬಂದ ವಿದೇಶಿಯರು ಇಲ್ಲಿಯೇ ನೆಲೆನಿಂತು, ಇಲ್ಲಿಯವರೇ ಆಗಿದ್ದಾರೆ
ಪಿ. ಷಾಡ್ರಾಕ್‌ ಕ್ರೈಸ್ತ ಧರ್ಮೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT