ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಕಾಯ್ದೆಗಳಿಂದಲೇ ಗಿರಿಜನ ಅಸ್ತಿತ್ವಕ್ಕೆ ಧಕ್ಕೆ

Last Updated 25 ಡಿಸೆಂಬರ್ 2017, 8:22 IST
ಅಕ್ಷರ ಗಾತ್ರ

ಕಳಸ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಅರಣ್ಯ ಕಾಯ್ದೆಗಳಿಂದಲೇ ಗಿರಿಜನರ ಅಸ್ತಿತ್ವಕ್ಕೆ ಧಕ್ಕೆ ಬಂದಿದ್ದು, ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆಗಳು ಗಿರಿಜನರ ಬದುಕನ್ನು ಕಸಿದುಕೊಳ್ಳುತ್ತಿವೆ ಎಂದು ಪ್ರಗತಿಪರ ಚಿಂತಕ ಕಲ್ಕುಳಿ ವಿಠಲ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಕರ್ನಾಟಕ ಆದಿವಾಸಿ ಪರಿಷತ್ ಆಶ್ರಯದಲ್ಲಿ ಭಾನುವಾರ ನಡೆದ ಆದಿವಾಸಿ ಕಲಾ ಮೇಳ ಮತ್ತು ಸಮಾವೇಶದಲ್ಲಿ ಅವರು ಮಾತನಾಡಿದರು.

ಮಾತೃಪ್ರಧಾನ ಕೌಟುಂಬಿಕ ವ್ಯವಸ್ಥೆಯ ಆದಿವಾಸಿಗಳ ಪೈಕಿ ಅನೇಕರು ಇಂದು ಪೇಟೆಯಲ್ಲಿ ವಾಸಿಸುವಂತಾಗಿದ್ದು, ಅಮೆರಿಕದಲ್ಲಿ ಕುಳಿತವರು ನಮ್ಮ ಗಿರಿಜನರನ್ನು ಕಾಡಿನಿಂದ ಹೊರಹಾಕುತ್ತಿದ್ದಾರೆ ಇದನ್ನು ಗಮನಿಸಿದ್ದೀರಾ ಎಂದು ಹೆಗಡೆ ವೇದಿಕೆಯಲ್ಲಿದ್ದ ರಾಜಕಾರಣಿಗಳನ್ನು ಪ್ರಶ್ಹಿಸಿದರು.

‘ಕುದುರೆಮುಖದಲ್ಲಿ ತೆರೆಮರೆಯಲ್ಲಿ 1992ರಿಂದಲೂ ಹುಲಿ ಯೋಜನೆ ಜಾರಿಯಲ್ಲಿದ್ದು, ಅಮೆರಿಕದ ಕಂಪೆನಿಯೊಂದರ ಪ್ರಾಯೋಜಕತ್ವದ ಈ ಯೋಜನೆಯಿಂದಲೇ ನೂರಾರು ಗಿರಿಜನರನ್ನು ಅರಣ್ಯದಿಂದ ಹೊರಹಾಕಲು ಹಣ ನೀಡಲಾಗಿದೆ. ಕಸ್ತೂರಿ ರಂಗನ್, ಗಾಡ್ಗೀಳ್ ವರದಿಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಚಟುವಟಿಕೆಯೂ ವಿದೇಶಿ ಸಂಸ್ಥೆಗಳ ಅನುದಾನದಿಂದಲೇ ನಡೆಯುತ್ತಿವೆ’ ಎಂದು ಅವರು ಆರೋಪಿಸಿದರು.

‘ಆದಿವಾಸಿಗಳನ್ನು ಆಧುನಿಕಗೊಳಿಸುವ ಮೂಲಕ ಅವರ ಅಭಿವೃದ್ಧಿಯ ಪ್ರಯತ್ನ ನಡೆದಿದೆ. ಆದರೆ ಇದರಿಂದ ಅವರ ವೈವಿಧ್ಯತೆ ನಾಶವಾಗಿದೆ. ಅನೇಕ ಆದಿವಾಸಿ ಪಂಗಡಗಳು ಅವಸಾನಕ್ಕೆ ತರಲುಪಿವೆ. ಅರಣ್ಯದಿಂದ ಒಕ್ಕಲೆಬ್ಬಿಸುವ ಗಿರಿಜನರಿಗೆ ಹಣ ನೀಡುವ ಬದಲು ಅವರಿಗೆ ಜಮೀನು ಮಂಜೂರು ಮಾಡಿ ಪುನರ್ವಸತಿ ನೀಡಿ’ ಎಂದು ಅವರು ಕೋರಿದರು.

ಶಾಸಕ ಬಿ. ಬಿ. ನಿಂಗಯ್ಯ ಮಾತನಾಡಿ ‘ಅರಣ್ಯ ಹಕ್ಕು ಕಾಯ್ದೆಯಲ್ಲಿ ಗಿರಿಜನರಿಗೆ ಭೂಮಿ ಸಿಗುವ ಅವಕಾಶ ಇದ್ದರೂ ಅಧಿಕಾರಿಗಳ ಅಸಹಕಾರದಿಂದಾಗಿ ಗಿರಿಜನರಿಗೆ ಅನ್ಯಾಯವಾಗಿದೆ. ಗಿರಿಜನ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಮೂಲಕ ಅಭಿವೃದ್ಧಿಯ ಪ್ರಯತ್ನ ನಡೆದಿದೆಯೇ ವಿನಾ ಅವರಿಗೆ ದುಡಿಯುವ ಅವಕಾಶ ಕಲ್ಪಿಸಲಾಗುತ್ತಿಲ್ಲ’ ಎಂದು ವಿಷಾದಿಸಿದರು.

ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ.ಕೆ.ಎಂ. ಮೈತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಆದಿವಾಸಿಗಳಿಗೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ನೀಡಿರುವ ಕ್ಷೇತ್ರ ಮೀಸಲಾತಿ ಬಯಲು ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಕ್ಕೆ ಸೀಮಿತವಾಗಿದೆ. ನೈಜ ಗಿರಿಜನರ ಸಮಸ್ಯೆ ಸರ್ಕಾರಕ್ಕೆ ತಲುಪಿಸಲು ಪ್ರತಿನಿಧಿಗಳೇ ಇಲ್ಲವಾಗಿದೆ. ಗಿರಿಜನರ ಹೆಸರನಲ್ಲಿ ಮಂಜೂರಾಗುವ ಹಣ ಬಲಾಢ್ಯರ ಪಾಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ‘ಮೂಲ ಗಿರಿಜನರಿಗೆ ಆದ್ಯತೆ ಸಿಗಬೇಕು. ಅವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು.ಆದರೆ ಕೆಲ ಗಿರಿಜನ ಸಂಘಟನೆಗಳೇ ಸರ್ಕಾರದ ದಾರಿತಪ್ಪಿಸಿ ಅರ್ಹರಿಗೆ ಸೌಲಭ್ಯ ಸಿಗದಂತೆ ಮಾಡುತ್ತಿವೆ’ ಎಂದು ಆಹಾರ ಯೋನೆಯ ಫಲಾನುಭವಿಗಳಿಗೆ ಆಗಿರುವ ಅನ್ಯಾಯ ಪ್ರಸ್ತಾಪಿಸಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್, ಸದಸ್ಯ ರಫೀಕ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಭಾಕರ್, ಅಮಿತಾ ಮುತ್ತಪ್ಪ, ಮುಖಂಡರಾದ ಧರಣೇಂದ್ರ, ಶ್ರೀನಿವಾಸ ಹೆಬ್ಬಾರ್, ಸುರೇಶ್ ಭಟ್, ಮುತ್ತಪ್ಪ, ರಾಜಮ್ಮ, ಶ್ರೀನಿವಾಸ ಗೌಡ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೆಲ ಆದಿವಾಸಿ ತಂಡಗಳೊಂದಿಗೆ ಕಲಾ ಜಾಥಾ ನಡೆಸಲಾಯಿತು.ಶಾಸಕ ನಿಂಗಯ್ಯ, ಮಾಜಿ ಶಾಸಕ ಕುಮಾರಸ್ವಾಮಿ ಜಾಥಾದೊಂದಿಗೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT