ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುಗಾರಿನ ಪಾಡು ಕೇಳುವವರಿಲ್ಲ

Last Updated 25 ಡಿಸೆಂಬರ್ 2017, 8:25 IST
ಅಕ್ಷರ ಗಾತ್ರ

ಹೇರೂರು(ಬಾಳೆಹೊನ್ನೂರು): ಡಾಂಬರು ಕಾಣದ ರಸ್ತೆ, ಕುಸಿಯುವ ಹಂತ ತಲುಪಿದ ಕಿರುಸೇತುವೆ, ಕೆಟ್ಟು ನಿಂತ ಸೋಲಾರ್ ದೀಪ... ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನಲುಗುತ್ತಿರುವ ಹಾಡುಗಾರು ಗ್ರಾಮಸ್ಥರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ.

ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡುಗಾರಿನಲ್ಲಿ ದಲಿತರು ಹಿಂದುಳಿದ ವರ್ಗ, ಬ್ರಾಹ್ಮಣ, ಒಕ್ಕಲಿಗ, ಬಿಲ್ಲವ ಸೇರಿದಂತೆ ಸುಮಾರು 70 ಕುಟುಂಬಗಳು ಇವೆ. 300ಕ್ಕೂ ಹೆಚ್ಚು ಜನ ವಾಸವಾಗಿರುವ ಈ ಗ್ರಾಮ ಚಿಕ್ಕಮಗಳೂರು–ಶೃಂಗೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಿಂದ ಕೇವಲ ಅರ್ಧ ಕಿಮೀ ದೂರದಲ್ಲಿದ್ದರೂ ಊರಿನ ಮುಖ್ಯರಸ್ತೆ ಇದೂವರೆಗೂ ಸಂಪೂರ್ಣ ಡಾಂಬರು ಕಂಡಿಲ್ಲ.

ಇರುವ ಕಚ್ಚಾ ರಸ್ತೆ ಮಳೆಗಾಲದಲ್ಲಿ ಮನುಷ್ಯರು ಸಂಚರಿಸುವುದೇ ಕಷ್ಟವಾಗಿದ್ದು, ಸಾಮಾನು ಸರಂಜಾಮುಗಳನ್ನು ತಲೆಯ ಮೇಲೆ ಹೊತ್ತು ಸಾಗಬೇಕಾಗಿದೆ. ಊರನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಅಂಟಿಕೊಂಡಿರುವ ಕಿರುಸೇತುವೆ ಮೇಲೆ ಹೊಂಡ ಬಿದ್ದು ಮೂರು ವರ್ಷ ಕಳೆದರೂ ದುರಸ್ತಿ ಭಾಗ್ಯ ಕಂಡಿಲ್ಲ. ಅಲ್ಲಿಂದ ಮುಂದೆ ಸಾಗುವಾಗ ದಾರಿ ಮಧ್ಯೆದಲ್ಲಿರುವ ಹಳ್ಳಗಳಿಗೆ ಕಿರು ಸೇತುವೆ ಇಲ್ಲದ ಕಾರಣ ಊರಿನವರೇ ಕೈಸಂಕ ನಿರ್ಮಿಸಿಕೊಂಡಿದ್ದು, ಶಾಲೆಗೆ ತೆರಳುವ ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ಊರಿಗೆ ಇದ್ದ ಒಂದೇ ಸೋಲಾರ್ ದೀಪ ಕೆಟ್ಟು ನಿಂತು ಅನೇಕ ವರ್ಷಗಳೇ ಕಳೆದಿದ್ದು, ಇಲ್ಲಿನ ಶಾಲೆ, ಅಂಗನವಾಡಿಗಳಿಗೂ ಇದೂವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಸ್ವಸಹಾಯ ಸಂಘದ ಮಹಿಳೆಯರು ಸಂಘದ ಮಾಸಿಕ ಸಭೆಗಳನ್ನು ನಡೆಸಲು ಸಭಾಭವನವನ್ನು ಸುಸಜ್ಜಿತವಾಗಿ ನಿರ್ಮಿಸಿಕೊಡುವ ಉದ್ದೇಶದಿಂದ
ಕೆಡವಿ ನಾಲ್ಕು ವರ್ಷ ಕಳೆದರೂ ಪುನರ್ ನಿರ್ಮಾಣ ಕಾಮಗಾರಿ ಆರಂಭಗೊಂಡಿಲ್ಲ.

‘ಸ್ಥಳೀಯ ಹೇರೂರು ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಸೂಕ್ತ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಶಾಸಕರತ್ತ ಕೈ ತೋರಿ ತಮ್ಮ ಅಸಹಾಯಕತೆಯನ್ನು ಬಿಂಬಿಸುತ್ತಿದ್ದಾರೆ’ ಎನ್ನುವುದು ಸ್ಥಳೀಯರ ವಾದ.

10 ವರ್ಷಗಳಿಂದ ಈ ಭಾಗದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಬಿಜೆಪಿ ಪಕ್ಷದ ಸದಸ್ಯರೇ ಆಯ್ಕೆಗೊಳ್ಳುತ್ತಿದ್ದು, ಅಭಿವೃದ್ದಿ ಮರೀಚಿಕೆಯಾಗಿದೆ. ಇನ್ನು ಶಾಸಕರೂ ಈ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರ ಪರಿಣಾಮ ಕನಿಷ್ಠ ಮೂಲ ಸೌಲಭ್ಯದಿಂದಲೂ ವಂಚಿತವಾಗಿದೆ. ಇದನ್ನು ವಿರೋಧಿಸಿ ಇಲ್ಲಿನ ಮೂವರು ಬಿಜೆಪಿ ಮುಖಂಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯ ಮುನ್ನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದಿದ್ದಲ್ಲಿ ಸಂಪೂರ್ಣ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡುವತ್ತ ಗ್ರಾಮಸ್ಥರು ಚಿಂತಿಸಿದ್ದಾರೆ.

* * 

ಸ್ವಾತಂತ್ರ್ಯ ದೊರೆತು 70 ವರ್ಷ ಕಳೆದರೂ ಗ್ರಾಮದ ಮನೆಗಳಿಗೆ ವಿದ್ಯುತ್, ರಸ್ತೆ, ಕಿರುಸೇತುವೆಯಂತಹ ಮೂಲ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿರುವುದು ವಿಪರ್ಯಾಸ
ಪ್ರಸನ್ನ ಕುಮಾರ್
ಕಿಬ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT