7

ಅಹಂಕಾರ, ದರ್ಪ ಅಳಿಯಲಿ, ಮಾನವೀಯ ಧರ್ಮ ಉಳಿಯಲಿ

Published:
Updated:

ಹಿರಿಯೂರು: ಅಹಂಕಾರ, ದರ್ಪದಿಂದ ಏನೂ ಸಾಧನೆ ಮಾಡಲಾಗದು. ಶಾಂತಿ, ಸಮಾಧಾನ, ಪರಿಶ್ರಮ, ಸಹೋದರತ್ವದ ಮೂಲಕ ಸುಂದರ ದೇಶ ಕಟ್ಟೋಣ. ಮಾನವೀಯ ಧರ್ಮ ಮೆರೆಯೋಣ ಎಂದು ಅಸಂಷನ್ ಚರ್ಚ್‌ನ ಧರ್ಮಗುರು ಪೌಲ್ ಡಿಸೋಜ ಕರೆ ನೀಡಿದರು. ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ಹಬ್ಬಕ್ಕಾಗಿ ಈ ಸಂದೇಶ ನೀಡಿದರು.

ಡಿ. 24 ರಂದು ರಾತ್ರಿ 12ಕ್ಕೆ ಬಲಿ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಬಲಿ ಎಂದರೆ ಪ್ರಾಣಿ ಹತ್ಯೆಯಲ್ಲ. ಏಸುಪ್ರಭು ಇಡೀ ಮನುಕುಲಕ್ಕೆ ತಮ್ಮನ್ನೇ ಅರ್ಪಿಸಿಕೊಳ್ಳುವ ಪೂಜಾಬಲಿ. ಏಸುಪ್ರಭುವನ್ನು ಹಿಂಬಾಲಿಸುವ ಪ್ರತಿ ಕ್ರೈಸ್ತನೂ ತನ್ನಲ್ಲಿರುವ ಅಹಂ, ಸ್ವಾರ್ಥವನ್ನು ತ್ಯಜಿಸುವುದೇ ಬಲಿಯ ಅರ್ಪಣೆ. ಸ್ವಂತವಾಗಿ ನಮ್ಮನ್ನೇ ಅರ್ಪಿಸಿಕೊಳ್ಳುವ ಮೂಲಕ ಏಸುವಿನ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಅವರು ಹೇಳಿದರು.

ಪ್ರಪಂಚದಲ್ಲಿರುವ ಅನೇಕ ಪರ್ವತ, ಶಿಖರಗಳನ್ನು ಹತ್ತಿ ಸಾಧನೆಯ ಮೂಲಕ ಕೀರ್ತಿ ಪಡೆದವರಿದ್ದಾರೆ. ಹಾಗೆಯೇ ವಿಫಲರಾದವರೂ ಇದ್ದಾರೆ. ಮನುಷ್ಯನ ಬದುಕಲ್ಲಿ ನೈತಿಕತೆ ಮತ್ತು ಆಧ್ಯಾತ್ಮಿಕತೆ ಎಂಬ ಎರಡು ಶಿಖರಗಳಿವೆ. ಅಹಂ ಎಂಬ ಶಿಖರ ಹತ್ತುವುದು ಸುಲಭ ಆದರೆ ಇಳಿಯುವುದು ಕಷ್ಟ. ಸರಳತೆ, ವಿನಮ್ರತೆ, ಪರಿಶುದ್ಧತೆ, ಕ್ಷಮೆಗಳ ಮೂಲಕ ಅಹಂ ಅನ್ನು ತೊಡೆದುಹಾಕಬಹುದು. ಇದನ್ನೇ ಏಸುಪ್ರಭು ಮಾಡಿದ್ದರು. ಏಸು ಹುಟ್ಟಿದ್ದು ಗೋದಲಿಯಲ್ಲಿ, ಬದುಕಿದಾಗಲೂ ಒಂದು ಸ್ಥಳವಿರಲಿಲ್ಲ, ಸತ್ತನಂತರವೂ ಸ್ವಂತ ಸಮಾಧಿ ಇರಲಿಲ್ಲ. ಕಾರಣ ಇಷ್ಟೇ, ನಾವೆಲ್ಲರೂ ದೇವರ ಸೃಷ್ಟಿ. ಎಲ್ಲವನ್ನು ದೇವರಿಗೆ ಅರ್ಪಿಸಬೇಕು ಎಂದು ಪೌಲ್ ಡಿಸೋಜ ತಿಳಿಸಿದರು.

ಮನುಷ್ಯ ತನ್ನಲ್ಲಿರುವ ಅಹಂನಿಂದ ಪಾಪವೆಂಬ ಪ್ರಪಾತಕ್ಕೆ ಬಿದ್ದ. ಪ್ರಪಾತಕ್ಕೆ ಬಿದ್ದವರನ್ನು ಮೇಲೆತ್ತಲು ದೇವರು ಬಂದ ಸಮಯವೇ ಕ್ರಿಸ್ ಮಸ್. ಹೀಗಾಗಿ ಕ್ರಿಸ್ ಮಸ್ ಬೆಳಕಿನ ಹಬ್ಬ, ಕ್ಷಮೆಯ ಹಬ್ಬ. ನಿಜವಾದ ಅರ್ಥದಲ್ಲಿ ಮನುಷ್ಯರಾಗಿ ಜೀವಿಸುವುದು ಹೇಗೆ ಎಂಬ ಸಂದೇಶ ನೀಡುವ ಹಬ್ಬ ಎಂದು ಅವರು ಹೇಳಿದರು. ಡಿ.25 ರಂದು ಬೆಳಿಗ್ಗೆ 9 ಕ್ಕೆ ಚರ್ಚ್ ನಲ್ಲಿ ಮತ್ತೆ ಬಲಿ ಅರ್ಪಣೆ ನಡೆಯಲಿದೆ. ಸಂಜೆ ಕ್ರಿಸ್‌ಮಸ್ ಕಲಾಸಂಜೆ ನಡೆಯಲಿದೆ ಎಂದು ಪೌಲ್ ಡಿಸೋಜ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry