7

ನೇಮಕಾತಿಯಲ್ಲಿ ರಾಜಕೀಯ: ಎಂ.ಐ. ಸವದತ್ತಿ

Published:
Updated:

ಧಾರವಾಡ: ‘ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕುಲಪತಿ, ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲಿ ರಾಜಕೀಯ ಸೇರಿಕೊಂಡಿದೆ. ಇದು ಅತ್ಯಂತ ದುರದೃಷ್ಟಕರ ಸಂಗತಿ. ಈ ಮೊದಲು ಸೆನೆಟ್ ಮಂಡಳಿ ಕುಲಪತಿಗಳನ್ನು ಆಯ್ಕೆ ಮಾಡುತ್ತಿತ್ತು. ಈಗ ಎಲ್ಲವೂ ಸರ್ಕಾರದ ನಿಯಂತ್ರಣದಲ್ಲಿದೆ’ ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಐ. ಸವದತ್ತಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಮಹಾವಿದ್ಯಾಲಯ ಶತಮಾನೋತ್ಸವದ ವರ್ಷಾಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ಶತಮಾನದ ಅನುಭವದಲ್ಲಿ ಉನ್ನತ ಶಿಕ್ಷಣದ ಹಾದಿ’ ಎಂಬ ವಿಷಯದ ಕುರಿತ ಉಪನ್ಯಾಸ ಮಾಲೆ ಉದ್ಘಾಟಿಸಿ ಅವರು ಮಾತನಾಡಿದರು.

‘ಶೇ 80ರಷ್ಟು ಶಿಕ್ಷಕರು ಕಲಿಸುವ ಆಸಕ್ತಿಯನ್ನೇ ಕಳೆದುಕೂಂಡಿರುವುದು ನೋವಿನ ಸಂಗತಿ. ಅನೇಕ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ ಮತ್ತು ಮೂಲ ಸೌಕರ್ಯಗಳಿಂದಾಗಿ ಶಿಕ್ಷಣದ ಮೇಲೆ ದುಷ್ಪರಿಣಾಮ ಪರಿಣಾಮ ಬೀರಿದೆ. ಇಂದು ಶಿಕ್ಷಣದ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಡು ಉತ್ತಮ ಗುಣಮಟ್ಟದ ಸಂಶೋಧನೆಗಳಿಗೆ ಮಹತ್ವ ನೀಡಬೇಕಿದೆ. ಹೀಗಾಗಿ ಕುಲಪತಿಗಳು ಹಾಗೂ ಶಿಕ್ಷಕರು ಹೆಚ್ಚಿನ ಪರಿಶ್ರಮದಿಂದ ಕಾರ್ಯ ನಿರ್ವಹಿಸಬೇಕು’ ಎಂದರು.

‘ಸಮಾಜಕ್ಕೆ ಬೇಕಾಗುವ ಮೌಲ್ಯಯುತ ವ್ಯಕ್ತಿತ್ವ ಒಳಗೊಂಡ ವ್ಯಕ್ತಿಗಳನ್ನು ನಿರ್ಮಿಸುವ ಜವಾಬ್ದಾರಿ ಇಂದಿನ ಶಿಕ್ಷಣ ಸಂಸ್ಥೆಗಳ ಮೇಲಿದೆ. ‘ಇತ್ತೀಚಿನ ವರ್ಷಗಳಲ್ಲಿ ಅನೇಕ ಖಾಸಗಿ ಹಾಗೂ ಸ್ವಾಯತ್ತ ಸಂಸ್ಥೆಗಳು ಹುಟ್ಟಿಕೊಂಡಿವೆ. ಆದರೆ, ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎಂದು ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ‘ರೈತರಿಗೆ ಮತ್ತು ಗ್ರಾಮೀಣ ಮಕ್ಕಳಿಗೆ ಇಂದು ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ. ಪಾಲಕರು ಮಕ್ಕಳನ್ನು ಅಂಕ ಗಳಿಕೆಗೆ ಮಾತ್ರ ಸೀಮಿತ ಮಾಡಬಾರದು’ ಎಂದರು.

ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಮಹೇಶ್ವರಯ್ಯ, ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಡಾ. ಶಿವಪ್ರಸಾದ, ಪ್ರಾಧ್ಯಾಪಕರಾದ ಡಾ. ಬಿ.ಎಫ್ ಚಾಕಲಬ್ಬಿ, ಡಾ. ಡಿ.ಬಿ.ಕರಡೋಣಿ, ಡಾ. ಕೆ. ಕೊಟ್ರೇಶ್, ಡಾ. ಎ.ಎಸ್. ಬೆಲ್ಲದ, ಡಾ. ವಿಭಾವರಿ ಕುಲಕರ್ಣಿ, ಡಾ. ಬಿ.ಎಸ್. ಭಜಂತ್ರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry