7

ಡಂಬಳ ಉತ್ಸವ ಆಯೋಜನೆಗೆ ಆಗ್ರಹ

Published:
Updated:
ಡಂಬಳ ಉತ್ಸವ ಆಯೋಜನೆಗೆ ಆಗ್ರಹ

ಡಂಬಳ: ಬರದ ನಾಡಿನಲ್ಲಿರುವ ಡಂಬಳ ಗ್ರಾಮ ಮಲೆನಾಡಿನಂತೆ ಕಂಗೊಳಿಸುತ್ತಿದೆ. ಇಲ್ಲಿಂದ ಗುಳೆ ಹೋಗುತ್ತಿದ್ದ ಜನರು ಸದ್ಯ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮದ ಸುತ್ತಲಿನ ವಾತಾರಣ ಹಚ್ಚ ಹಸಿರಿನಿಂದ ಕೂಡಿದೆ. ಇಲ್ಲಿನ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿವೆ. ಆದರೆ, ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಡಂಬಳಕ್ಕೆ ಉತ್ಸವ ಭಾಗ್ಯ ದೊರೆಯುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಆರೋಿಸಿದ್ದಾರೆ.

ಡಂಬಳ ಗ್ರಾಮದ ವಾಯುವ್ಯ ಭಾಗದಲ್ಲಿರುವ ದೊಡ್ಡಬಸಪ್ಪನ ದೇವಸ್ಥಾನವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಅಡಿಯಿಂದ ಮುಡಿಯವರೆಗೆ ನಕ್ಷತ್ರಾಕಾರದ ವಿನ್ಯಾಸ ಹೊಂದಿರುವ ಈ ದೇವಸ್ಥಾನ ಕರ್ನಾಟಕದ ವಾಸ್ತುಶಿಲ್ಪ ಅಧ್ಯಯನಕ್ಕೆ ಪೂರಕವಾಗಿದೆ. ಕಲ್ಯಾಣ ಚಾಲುಕ್ಯ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿ. ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿ ಮಂಟಪಗಳನ್ನು ಹೊಂದಿದೆ. ನಕ್ಷತ್ರಾಕಾರದ ತಲವಿನ್ಯಾಸವು ದೇವಸ್ಥಾನದ ವಿಶೇಷ.

ಗ್ರಾಮದ ಮುಂಡರಗಿ–ಗದಗ ರಸ್ತೆಯಲ್ಲಿ ಡಬ್ಬುಗಲ್ಲು (ಸೋಮೇಶ್ವರ) ದೇವಸ್ಥಾನವಿದೆ. ಎತ್ತರದ ಕಟ್ಟೆಯ ಮೇಲೆ ನಿರ್ಮಾಣವಾಗಿದೆ. ದೇವಸ್ಥಾನದಲ್ಲಿ ಗರ್ಭಗೃಹ, ಅಂತರಾಳ ಹಾಗೂ ನವರಂಗಗಳಿವೆ. ನವರಂಗ ಮಂಟಪಕ್ಕೆ ಮೂರು ಕಡೆ ಪ್ರವೇಶ ದ್ವಾರಗಳಿದ್ದು, ಅವುಗಳ ಮೂಲಕ ಗುಡಿಯನ್ನು ಪ್ರವೇಶಿಸಬಹುದು.

ವಿಕ್ಟೋರಿಯಾ ಕೆರೆ ಭರ್ತಿಯಾಗಿ ಕೋಡಿ ಹರಿದ್ದರಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಕೆರೆ ತುಂಬಿದ್ದರಿಂದ ಗ್ರಾಮದಲ್ಲಿ ಬತ್ತಿ ಹೋಗಿದ್ದ ಬಹುತೇಕ ಬೋರ್‌ವೆಲ್‌ಗಳು ಮರುಜೀವ ಪಡೆದಿವೆ. ಅಂತರ್ಜಲ ವೃದ್ಧಿಯಾಗಿದ್ದರಿಂದ ಪ್ರಾಚೀನ ಕಾಲದ ಜಪದ ಬಾವಿ ತುಂಬಿದೆ. ತೋಂಟದಾರ್ಯ ಮಠ, ಪ್ರಾಚೀನ ಕಾಲದ ಗಣೇಶ ದೇವಸ್ಥಾನ, ಕೋಟೆ ಪ್ರವಾಸಿ ಮಂದಿರ ಪ್ರವಾಸಿಗರನ್ನು ಸೆಳೆಯುತ್ತಿವೆ.

‘ಕಾಲ ಗರ್ಭ ಸೇರುತ್ತಿರುವ ಕೆಲವು ಸ್ಮಾರಕಗಳನ್ನು ಅಭಿವೃದ್ಧಿಪಡಿಸಬೇಕು. ಪ್ರಾಚೀನ ಕಾಲದ ದೇವಸ್ಥಾನಗಳ ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಲಕ್ಕುಂಡಿ, ಗದಗ ಉತ್ಸವದಂತೆ ಡಂಬಳ ಉತ್ಸವ ಮಾಡಬೇಕು’ ಎಂದು ಗ್ರಾಮಸ್ಥ ಜಿ.ವಿ.ಹಿರೇಮಠ, ಮಂಜುನಾಥ ಅರವಟಿಗಿಮಠ, ಶಿಕ್ಷಕ ಯಂಕಪ್ಪ ತಳಗೇರಿ, ರಮೇಶ ಹೊಂಬಳ ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry