ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಷ್ಮಕೆರೆಯಲ್ಲೀಗ ಜಟ್ಸಕೀ ಸದ್ದು

Last Updated 25 ಡಿಸೆಂಬರ್ 2017, 8:46 IST
ಅಕ್ಷರ ಗಾತ್ರ

ಗದಗ: ಉಡುಪಿ, ಮಂಗಳೂರಿನಲ್ಲಿ ಸೀಮಿತವಾಗಿದ್ದ ವಾಟರ್‌ ಬೈಕ್‌ (ಜಟ್ಸಕೀ) ರೈಡಿಂಗ್‌ ಸದ್ಯ ಗದುಗಿನ ಐತಿಹಾಸಿಕ ಭೀಷ್ಮಕೆರೆಯಲ್ಲಿ ಕಳೆದ ಎರಡು ವಾರದಿಂದ ಆರಂಭಿಸಿದ್ದು, ಪ್ರವಾಸಿಗರಲ್ಲಿ ಹರ್ಷ ಮೂಡಿದೆ. ಗದಗ ಉತ್ಸವ ನೆಪದಲ್ಲಿ ಜಲ ಸಾಹಸ ಕ್ರೀಡೆಗಳು ಪ್ರಾರಂಭವಾಗಿದ್ದವು.

ಈಗ ಪ್ರತಿನಿತ್ಯ ಜಲಕ್ರೀಡೆ ಮುಂದುವರಿಯುತ್ತಿವೆ. ವಾರಾಂತ್ಯದಲ್ಲಿ ಕೆರೆ ಅಂಗಳದಲ್ಲಿ ಪುಟಾಣಿಗಳ ಕಲರವ ಕಂಡುಬರುತ್ತದೆ. ಸಾರ್ವಜನಿಕರು ಕುಟುಂಬ ಸಮೇತರಾಗಿ ಬಂದು ಹಾಗೇ ಜಲವಿಹಾರ ಕೈಗೊಳ್ಳುತ್ತಿದ್ದಾರೆ. ಕೆರೆ ಪಕ್ಕದಲ್ಲಿ ನಿಂತಿದ್ದ ಕೆಲವು ಜನರು ದೋಣಿಗಳ ಸದ್ದು ಕೇಳಿ ಕೇಕೆ ಹಾಕುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ.

ವಾಟರ್‌ ಬೈಕ್, ಬಂಪರ್‌ ರೈಡ್‌ ಭಾರಿ ಬೇಡಿಕೆ: ಭೀಷ್ಮ ಕೆರೆಯಂಗಳದಲ್ಲಿ ಜಲ ಸಾಹಸ ಕ್ರೀಡೆಗೆ 5 ಬೋಟ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಾಟರ್‌ ಬೈಕ್‌ಗೆ ತಲಾ ₹ 150 (ಒಬ್ಬರಿಗೆ), ಬನಾನಾ ರೈಡ್‌ಗೆ ₹ 75 (6 ಜನರಿಗೆ) ಹಾಗೂ ಬಂಪರ್‌ ರೈಡ್‌ಗೆ ₹ 100 (ಇಬ್ಬರಿಗೆ) ಶುಲ್ಕ ನಿಗದಿಪಡಿಸಲಾಗಿದೆ. ಇದರ ನಿರ್ವಹಣೆಯನ್ನು ಜಿಲ್ಲಾಡಳಿತ ಅಡ್ವೆಂಚರ್ಸ್‌ ಸಂಸ್ಥೆಗೆ ವಹಿಸಿದೆ.

‘ವಾಟರ್‌ ಬೈಕ್‌(ಜಟ್ಸಕೀ) ಮತ್ತು ಬಂಪರ್‌ ರೈಡ್‌ಗೆ ಭಾರಿ ಬೇಡಿಕೆ ಇದೆ. ಈ ಎರಡು ರೈಡಿಂಗ್‌ ಯುವಕರಿಗೆ ಅಚ್ಚು ಮೆಚ್ಚು. . ಮಷಿನ್‌ ಆಪರೇಟರ್‌, ವಾಟರ್‌ ಬೈಕ್‌ ರೈಡರ್‌ ಸೇರಿ ಒಟ್ಟು 12 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ಎಚ್.ಎಸ್.ಸೌಮ್ಯಾ.

‘ಜಟ್ಸಕೀ ಹಾಗೂ ಬಂಪರ್‌ ರೈಡ್‌ನಿಂದ ಕೆರೆಯನ್ನು ಒಂದು ಸುತ್ತು ಹಾಕಿದರೆ ತುಂಬ ಮಜಾ ಸಿಗುತ್ತದೆ. ನಾಲ್ವರು ಸ್ನೇಹಿತರು ಬೋಟಿಂಗ್‌ ಮಾಡಲು ಬಂದಿದ್ದೆವು. ಇಬ್ಬರು ವಾಟರ್‌ ಬೈಕ್‌ ಹಾಗೂ ಇನ್ನಿಬ್ಬರು ಬಂಪರ್‌ ರೈಡ್‌ ಮಾಡಿ ಖುಷಿ ಅನುಭವಿಸಿದೆವು’ ಎಂದು ಹೇಳುತ್ತಾರೆ ಪ್ರವಾಸಿ ಕಿರಣ ಗಾಣಿಗೇರ.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ಕೆರೆ ಮಧ್ಯದಲ್ಲಿರುವ ಬಸವೇಶ್ವರ ಮೂರ್ತಿ, ಉದ್ಯಾನ ವೀಕ್ಷಣೆ ಹಾಗೂ ದೋಣಿ ವಿಹಾರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವರ್ಷದ ಹಿಂದೆ ತರಲಾದ ಫ್ರೀಡಂ ಮೋಟರ್‌ ಬೋಟ್‌, ರಾ ಬೋಟ್‌, ಎರಡು ಫ್ಯಾಮಿಲಿ ಕ್ಯಾನೊವ್, ಸಿ ಕ್ಯಾನೊವ್, ಮೂರು ಪೆಡಲ್ ಬೋಟ್‌ಗಳು ಸೇರಿ ಎಂಟು ದೋಣಿಗಳು ಜಲ ಸವಾರಿ ನಡೆಸುತ್ತಿವೆ.

ದೋಣಿ ವಿಹಾರಕ್ಕೆ ತೆರಳುವವರು ಲೈಫ್‌ ಜಾಕೇಟ್‌ ಧರಿಸುವುದು ಕಡ್ಡಾಯ. ಜಾಕೇಟ್‌ ಹಾಕಿಕೊಳ್ಳದೇ ಬೋಟಿಂಗ್‌ ಮಾಡಲು ಅವಕಾಶವಿಲ್ಲ. ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ 200 ರಿಂದ 300ಕ್ಕೂ ಹೆಚ್ಚು ಪ್ರವಾಸಿಗರು ಜಲ ಸವಾರಿ ಮಾಡಿ, ಖುಷಿ ಅನುಭವಿಸುತ್ತಿದ್ದಾರೆ. ಉಳಿದ ದಿನಗಳಲ್ಲಿ 100ರಿಂದ 150 ಜನರು ಬೋಟಿಂಗ್‌ ಮಾಡುತ್ತಿದ್ದಾರೆ ಎನ್ನುತ್ತಾರೆ ದೋಣಿ ವಿಹಾರ ನಿರ್ವಹಿಸುತ್ತಿರುವ ಸಂಸ್ಥೆಯ ಸಿಬ್ಬಂದಿ.

ಬಟ್ಟೆ ಬದಲಿಸಲು ಕೊಠಡಿ ಸೌಕರ್ಯ

ಭೀಷ್ಮಕೆರೆಯಲ್ಲಿ ಜಟ್ಸಕೀ, ಬಂಪರ್‌ ರೈಡ್ ಹಾಗೂ ಬನಾನಾ ರೈಡ್‌ ಮಜಾ ಅನುಭವಿಸಲು ಬರುವ ಪ್ರವಾಸಿಗರು, ಪ್ರತ್ಯೇಕ ಬಟ್ಟೆಗಳನ್ನು ತರಬೇಕಾಗುತ್ತದೆ. ಜಲವಿಹಾರ ನಡೆಸಿದಾಗ ಬಟ್ಟೆ ಒದ್ದೆಯಾಗುತ್ತದೆ. ಇದರಿಂದ ಸಂತೋಷಕ್ಕೆ ಅಡ್ಡಿಯಾಗುತ್ತದೆ. ಕೆರೆಯ ಆವರಣದಲ್ಲಿರುವ ಟಿಕೆಟ್ ಕೌಂಟರ್‌ ಪಕ್ಕದಲ್ಲಿ ಬಟ್ಟೆ ಬದಲಿಸಿಕೊಳ್ಳಲು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರ ರಕ್ಷಣೆಗೆ ಪ್ರಮುಖ ಆದ್ಯತೆ ನೀಡಲಾಗಿದೆ.

ಮದ್ಯಪಾನ ಮಾಡಿದವರಿಗೆ ಬೋಟಿಂಗ್‌ ಮಾಡಲು ಅವಕಾಶ ಇಲ್ಲ. ಬೋಟಿಂಗ್‌ ಸಿಬ್ಬಂದಿ ತಿಳಿಸುವ ರಕ್ಷಣಾ ಸೂತ್ರಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಪ್ರವಾಸಿಮಿತ್ರರು ಕೆರೆಯ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಮನಹರಿಸುತ್ತಿದ್ದಾರೆ ಎಂದು ಅಡ್ವೆಂಚರ್ಸ್‌ ಸಂಸ್ಥೆಯ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಗದುಗಿನ ಭೀಷ್ಮಕೆರೆಯಲ್ಲಿ ವಾಟರ್‌ ಬೈಕ್‌ ಮೂಲಕ ಸಂಚರಿಸಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರುವುದು ಉತ್ತರ ಕರ್ನಾಟಕದಲ್ಲೇ ಮೊದಲು. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
ಜಿ.ವಿ.ಶಿರೋಳ
ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT