7

ಕಾಂಗ್ರೆಸ್‌ ಒಡೆದ ಮನೆ: ಯಡಿಯೂರಪ್ಪ

Published:
Updated:
ಕಾಂಗ್ರೆಸ್‌ ಒಡೆದ ಮನೆ: ಯಡಿಯೂರಪ್ಪ

ಹಾವೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ಪ್ರತ್ಯೇಕ ರ‍್ಯಾಲಿಗಳು, ಹಳೇ ಮತ್ತು ಹೊಸ ಕಾಂಗ್ರೆಸಿಗರ ಗುಂಪುಗಾರಿಕೆಗಳ ಮಧ್ಯೆ ಕಾಂಗ್ರೆಸ್ ಒಡೆದ ಮನೆಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಭಾನುವಾರ ಬಿಜೆಪಿ ಆಯೋಜಿಸಿದ ಪರಿವರ್ತನಾ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಗುಂಪುಗಾರಿಕೆ ಹಾಗೂ ಪರಿವರ್ತನಾ ರ‍್ಯಾಲಿಯ ಯಶಸ್ಸಿನಿಂದ ಹತಾಶರಾದ ಸಿದ್ದರಾಮಯ್ಯ ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ’ ಎಂದರು. ‘ಮಹದಾಯಿ ನೀರು ಹರಿಸುವ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಆದರೆ, ಈ ಹಿಂದೆ ಕಾಂಗ್ರೆಸ್‌ ವೈಫಲ್ಯದಿಂದಾಗಿ ನ್ಯಾಯಮಂಡಳಿ, ಸುಪ್ರೀಂ ಕೋರ್ಟ್ ಮತ್ತಿತರ ಸಮಸ್ಯೆಗಳು ಉಂಟಾಗಿದ್ದವು. ಈಗ 15 ವರ್ಷದ ಬಳಿಕ ಮೊದಲ ಪ್ರಯತ್ನ ನಡೆದಿದೆ’ ಎಂದ ಅವರು, ‘ಕಳಸಾ ಬಂಡೂರಿ ನಾಲಾ ಸಮಸ್ಯೆಯು ಕಾಂಗ್ರೆಸ್‌ ಪಾಪದ ಕೂಸು’ ಎಂದು ಆರೋಪಿಸಿದರು.

‘ತಲೆ ತಿರುಕ ಸಿಂ.ಎಂ. ವಿರುದ್ಧ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕು’ ಎಂದ ಅವರು, ‘ಯಡಿಯೂರಪ್ಪ ಅವರನ್ನು ರೈತರಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಸವಾಲು ಹಾಕಿದರು. ‘ಗುಜರಾತ್‌ನಲ್ಲಿ ಕಾಂಗ್ರೆಸ್ ನೆಗೆದುಬಿದ್ದರೆ, ಹಿಮಾಚಲ ಪ್ರದೇಶದಲ್ಲಿ ನೆಲಕಚ್ಚಿದೆ. ಕರ್ನಾಟಕವೂ ಕಾಂಗ್ರೆಸ್‌ ಮುಕ್ತ ಆಗಲಿದೆ’ ಎಂದರು.

‘ಅಂಬೇಡ್ಕರ್ ನಿಧನರಾದಾಗ ಗೌರವಯುತ ಅಂತ್ಯ ಸಂಸ್ಕಾರಕ್ಕೂ ಅವಕಾಶ ಮಾಡಿಕೊಡದ, ಬಾಬು ಜಗಜೀವನರಾಂ ಪ್ರಧಾನಿ ಆಗುವುದನ್ನು ತಪ್ಪಿಸಿದ ಕಾಂಗ್ರೆಸ್‌ ಅನ್ನು ಯಾವುದೇ ಕಾರಣಕ್ಕೂ ಕ್ಷಮಿಸಬೇಡಿ’ ಎಂದರು ಬಿ.ಎಸ್. ಯಡಿಯೂರಪ್ಪ ಅವರು ಬಸವಣ್ಣನವರಂತೆ ಎಂದು ಶಾಸಕ ಗೋವಿಂದ ಕಾರಜೋಳ ಬಣ್ಣಿಸಿದರು.

ಸಂಸದ ಶಿವಕುಮಾರ್ ಉದಾಸಿ ಮಾತನಾಡಿ, ‘ಇದು ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಪರಿವರ್ತನೆಯ ರ್‍ಯಾಲಿ. ಪ್ರಧಾನಿ ನರೇಂದ್ರ ಮೋದಿ ನೀಡಿದ ಕಾರ್ಯಕ್ರಮಗಳ ಫಲ ರಾಜ್ಯದ ಜನತೆಗೆ ದೊರೆಯಬೇಕಾದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು’ ಎಂದರು.

‘ಬದ್ಧತೆ ಇರುವ ಬಿ.ಎಸ್. ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ಬಗ್ಗೆ ಕನಸು ಕಾಣುತ್ತಾರೆ. ಆದರೆ, ನಾಲ್ಕೂವರೆ ವರ್ಷ ನಿದ್ದೆ ಮಾಡಿದ ಸಿದ್ದರಾಮಯ್ಯ ಅವರಿಗೆ ಈಗ ಕನಸು ಬೀಳುತ್ತಿದೆ’ ಎಂದು ಛೇಡಿಸಿದ ಅವರು, ‘ಬಿಜೆಪಿ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಸಿದ್ರಾಮಣ್ಣ ಮತ್ತು ರುದ್ರಪ್ಪಣ್ಣ ಉದ್ಘಾಟಿಸುತ್ತಿದ್ದಾರೆ. ಕೆಲವೆಡೆ ಕಲ್ಲು ಹಾಕುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡಿಸುವ ಬಿಜೆಪಿ ಪ್ರಯತ್ನವನ್ನು ಕಾಂಗ್ರೆಸ್ ವಿರೋಧಿಸಿತು. ಅಲ್ಪಸಂಖ್ಯಾತರಿಗೆ ಮೀಸಲಾದ ಹಣವನ್ನೂ ಸದ್ಬಳಕೆ ಮಾಡಲಿಲ್ಲ. ಇದು ಕಾಂಗ್ರೆಸ್‌ನ ‘ಅಹಿಂದ’ ಬದ್ಧತೆ’ಯೇ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಸಿ.ಎಂ. ಉದಾಸಿ, ಶಾಸಕರಾದ ಬಸವರಾಜ ಬೊಮ್ಮಾಯಿ, ಯು.ಬಿ. ಬಣಕಾರ, ಸಿ.ಟಿ. ರವಿ, ಸಂಸದ ಸಿದ್ದೇಶ್‌, ಮಾಜಿ ಶಾಸಕ ನೆಹರೂ ಓಲೇಕಾರ, ಮುಖಂಡರಾದ ಮಾ. ನಾಗರಾಜ, ವಾಮನಾಚಾರ್ಯ, ರವಿಕುಮಾರ್, ಶಿವರಾಜ ಸಜ್ಜನರ, ಮಹದೇವಪ್ಪ ಛ ನಾಗಮ್ಮನವರ, ವಿರೂಪಾಕ್ಷಪ್ಪ ಬಳ್ಳಾರಿ, ವಿರೂಪಾಕ್ಷಪ್ಪ ಕಡ್ಲಿ, ಸಿದ್ದರಾಜ ಕಲಕೋಟಿ, ಸುರೇಶ ಹೊಸ್ಮನಿ, ನಿರಂಜನ ಹೇರೂರ ಮತ್ತಿತರರು ಇದ್ದರು.

ಘೋಷಣೆಯಾಗದ ಅಭ್ಯರ್ಥಿ ಹೆಸರು

ಕಾರ್ಯಕರ್ತರ  ಅಭಿಪ್ರಾಯ ದಂತೆ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುವುದು. ಆದರೆ, ಯಾವುದೇ ಅಭ್ಯರ್ಥಿ ಹೆಸರು ಈಗ ಘೋಷಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ  ಹೇಳಿದಾಗ, ಮಾಜಿ ಶಾಸಕ ನೆಹರೂ ಓಲೇಕಾರ ಮೌನವಾಗಿದ್ದರೆ, ಉಳಿದ ಆಕಾಂಕ್ಷಿಗಳ ಮುಖ ಅರಳಿತು.

* * 

ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಹಿಡಿದಾದರೂ, ₨1 ಲಕ್ಷ ಕೋಟಿ ರೂಪಾಯಿ ರಾಜ್ಯಕ್ಕೆ ತಂದು ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇನೆ

ಬಿ.ಎಸ್. ಯಡಿಯೂರಪ್ಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry