ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲಹಾಬಾದ್ ಸಫೇದ್‌’ಗೆ ಹೆಚ್ಚಿದ ಬೇಡಿಕೆ

Last Updated 25 ಡಿಸೆಂಬರ್ 2017, 9:05 IST
ಅಕ್ಷರ ಗಾತ್ರ

ಚಿಂಚೋಳಿ: ಚಂದ್ರಂಪಳ್ಳಿ ಪೇರಲ ಹಣ್ಣು ಎಂದು ಕರೆಯುವ ಅಲಹಾಬಾದ್‌ ಸಫೇದ್‌ ತಳಿಯ ಸೀಬೆಹಣ್ಣಿನ ಸುಗ್ಗಿ ಪ್ರಾರಂಭವಾಗಿದ್ದು, ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಕಳೆದ ಎರಡು ವಾರಗಳಿಂದ ಹಣ್ಣಿನ ಸುಗ್ಗಿ ಪ್ರಾರಂಭವಾಗಿದೆ. ಇದರಿಂದ ವಿವಿಧೆಡೆ ಬಂಡಿಗಳ ಮೇಲೆ ಹಾಗೂ ಬೈಸಿಕಲ್‌ ಮೇಲೆ ಮಾರಾಟಗಾರರು ಹಣ್ಣುಗಳ ಮಾರಾಟದಲ್ಲಿ ತೊಡಗಿದ್ದಾರೆ. ಪ್ರಸಕ್ತ ವರ್ಷ ₹60ಕ್ಕೆ ಕೆ.ಜಿ.ಯಂತೆ ಹಣ್ಣು ಮಾರಾಟ ನಡೆಯುತ್ತಿದೆ. ಗ್ರಾಹಕರು ಮನೆಗೆ ಕೊಂಡೊಯ್ಯಲು 2 ಕೆ.ಜಿ ಖರೀದಿಸಿದರೆ, ದೂರದ ಊರುಗಳಲ್ಲಿ ನೆಲೆಸಿರುವ ಬಂಧು ಬಾಂಧವರಿಗೆ 4/5 ಕೆ.ಜಿ ಖರೀದಿಸಿ ಕಳುಹಿಸುತ್ತಿದ್ದಾರೆ.

ಪಟ್ಟಣದ ಗಜೇಂದ್ರ ಪಾಟೀಲ ಅವರ ಹೊಲದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಅಲಹಾಬಾದ್ ಸಫೇದ್‌ ತಳಿಯ ಸೀಬೆಹಣ್ಣು ಬೆಳೆಯಲಾಗುತ್ತಿದೆ. ಜತೆಗೆ, ಚಂದ್ರಂಪಳ್ಳಿಯ ತೋಟಗಾರಿಕಾ ಕ್ಷೇತ್ರ(ಫಾರಂ)ದಲ್ಲಿ 650 ಗಿಡಗಳು ಹಾಗೂ ಗೌಡನಹಳ್ಳಿಯ ರೇವಣಸಿದ್ದಪ್ಪ ಅವರ ಹೊಲದಲ್ಲಿ ಈ ಸೀಬೆ ಬೇಸಾಯ ನಡೆಯುತ್ತಿದೆ.

‘ನಾನು ನಿನ್ನೆಯೇ 5 ಕೆ.ಜಿ ಖರಿದಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದೇನೆ’ ಎಂದು ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ನಾಗಶೆಟ್ಟಿ ಭದ್ರಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪ್ರಸಕ್ತ ವರ್ಷ ಕೊನೆಯ ಮಳೆಗಾಲ ಅಧಿಕವಾಗಿದ್ದರಿಂದ ಫಸಲು ಕಡಿಮೆಯಾಗಿದೆ’ ಎಂದು ಮಾರಾಟಗಾರ ಮಹಮದ್‌ ಹೈದರ್‌ ತಿಳಿಸಿದರು.

ಪಟ್ಟಣದ ಕೆಲವು ಕಡೆ ಲಖನೌ–49 ತಳಿಯ ಸೀಬೆಹಣ್ಣನ್ನು ಚಂದ್ರಂಪಳ್ಳಿ ಸೀಬೆ ಎಂದು ಕೆಲವರು ಮಾರಾಟ ಮಾಡುತ್ತಿದ್ದಾರೆ. ಆದರೆ, ಲಖನೌ–49ಕ್ಕಿಂತ ಹಿತಕಾರಿಯಾಗಿರುವ ಹಣ್ಣು ಅಲಹಾಬಾದ್‌ ಸಫೇದ್‌ ಆಗಿದೆ. ಇವುಗಳ ಬೆಲೆ ಕೆ.ಜಿ.ಗೆ ₹60 ಇದ್ದರೆ, ಲಖನೌ–49 ತಳಿಯ ಸೀಬೆಹಣ್ಣು ಕೆ.ಜಿಗೆ ₹40ಕ್ಕೆ ಮಾರಾಟವಾಗುತ್ತಿದೆ.
‘ಚಂದ್ರಂಪಳ್ಳಿ ಫಾರಂನಲ್ಲಿ ಫಲ ಬಿಟ್ಟಿದ್ದು ಅವುಗಳ ಹರಾಜು ಪ್ರಕ್ರಿಯೆಗೆ ಟೆಂಡರ್‌ ಕರೆಯಲಾಗಿದೆ. ಡಿ. 28 ಕೊನೆಯ ದಿನವಾಗಿದೆ’ ಎಂದು ಕ್ಷೇತ್ರದ ಸಹಾಯಕ ನಿರ್ದೇಶಕ ಶಿವಕುಮಾರ ಪವಾಡಶೆಟ್ಟಿ ತಿಳಿಸಿದರು.

ಇದರ ಜತೆಗೆ 26 ಎಕರೆ ಪ್ರದೇಶದಲ್ಲಿ ಉತ್ತರ ಪ್ರದೇಶದಿಂದ ತಂದಿರುವ ಲಖನೌ–49, ಜಿವಿಲಾಸ ಹಾಗೂ ಲಲಿತ ತಳಿಯ ಸೀಬೆ ಸಸಿ ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

* * 

ಕಳೆದ ವರ್ಷ ಅಧಿಕ ಮಳೆ ಯಿಂದ ಸೀಬೆ ಫಸಲಿನ ಇಳುವರಿ ಕುಸಿದಿತ್ತು. ಪ್ರಸಕ್ತ ವರ್ಷವೂ ಮಳೆಗಾಲ ಹೆಚ್ಚಾಗಿದ್ದರಿಂದ ಮತ್ತೆ ಫಸಲು ಕಡಿಮೆ ಬಂದಿದೆ.
ಗಜೇಂದ್ರ ಪಾಟೀಲ, ಬೆಳೆಗಾರ,ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT