ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಸಂಭ್ರಮಕ್ಕೆ ಕೊಡಗಿಗೆ ಬಂದರು

Last Updated 25 ಡಿಸೆಂಬರ್ 2017, 9:17 IST
ಅಕ್ಷರ ಗಾತ್ರ

ಮಡಿಕೇರಿ: ವಾರಾಂತ್ಯ ರಜೆ ಹಾಗೂ ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಕೊಡಗಿನ ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿದರೂ ಜನವೋ ಜನ. ಮಾಗಿಯ ಚಳಿ ಕೊಡಗಿನಲ್ಲಿ ತೀವ್ರಗೊಂಡಿದ್ದು, ಅದರ ಅನುಭವ ಪಡೆಯಲು ಜಿಲ್ಲೆಯತ್ತ ಪ್ರವಾಸಿಗರು ಮುಖ ಮಾಡಿದ್ದಾರೆ. ಶನಿವಾರ ರಾತ್ರಿಯಿಂದಲೇ ಮಂಜಿನ ನಗರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪೊಲೀಸರೂ ಸುಗಮ ಸಂಚಾರಕ್ಕೆ ಹರಸಾಹಸ ಪಟ್ಟರು.

ಪ್ರತಿವರ್ಷದಂತೆ ಈ ಬಾರಿಯೂ ಕ್ರಿಸ್‌ಮಸ್‌ ಅನ್ನು ಅವಿಸ್ಮರಣೀಯ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ಹೀಗಾಗಿ, ಭಾನುವಾರ ಎಲ್ಲ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು.

ಮಡಿಕೇರಿಯ ರಾಜಾಸೀಟ್‌ ಭರ್ತಿಯಾಗಿತ್ತು. ಉದ್ಯಾನ, ಬೆಟ್ಟಗಳ ಸಾಲು ಕಣ್ತುಂಬಿಕೊಂಡು, ಪುಟಾಣಿ ರೈಲಿನಲ್ಲಿ ಕುಳಿತು ಸಂಭ್ರಮಿಸಿದರು. ಸೂರ್ಯನೆತ್ತಿಯ ಮೇಲೆ ಬಂದರೂ ಭಾನುವಾರ ಚಳಿ ಮಾಯವಾಗಿರಲಿಲ್ಲ. ಇನ್ನು ಅಬ್ಬಿ ಜಲಪಾತದಲ್ಲಿ ನಿಧಾನವಾಗಿ ನೀರಿನ ಪ್ರಮಾಣ ಕಡಿಮೆಯಾದರೂ ಅದನ್ನೇ ಆನಂದಿಸಿದರು. ಅಲ್ಲಿಯೂ ದಟ್ಟಣೆ ಹೆಚ್ಚಾಗಿತ್ತು.

ಮಾಂದಲ್‌ಪಟ್ಟಿ ಭರ್ತಿ: ಇದು ಕೊಡಗಿಗೆ ಬರುವ ಸಾಹಸಿ ಪ್ರವಾಸಿಗರು ಇಷ್ಟ ಪಡುವ ಸ್ಥಳ. ಮಾಂದಲ್‌ಪಟ್ಟಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ಜೀಪನ್ನೇರಿ ಕಲ್ಲುಮಣ್ಣಿನ ರಸ್ತೆಯಲ್ಲಿ ಸಾಗಿ ಖುಷಿಪಟ್ಟರು. ಹೀಗಾಗಿ, ಬಹುದಿನಗಳ ಬಳಿಕ ಜೀಪು ಚಾಲಕರು ಜೇಬ ತುಂಬಿಸಿಕೊಂಡರು. ಇನ್ನು ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲದ ಭಗಂಡೇಶ್ವರ ಸನ್ನಿಧಿ, ಪವಿತ್ರ ಕ್ಷೇತ್ರ ತಲಕಾವೇರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿಕೊಟ್ಟರು.  ಪಶ್ಚಿಮಘಟ್ಟದ ಬೆಟ್ಟಗಳು ಚಳಿಗಾಲ ಹಸಿರು ಉಡುಗೆ ತೊಟ್ಟಂತೆ ಕಾಣಿಸುತ್ತಿದ್ದು, ಎಲ್ಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು ಸಂಭ್ರಮಿಸಿದರು. 

ಹೋಂಸ್ಟೇಗಳೂ ಭರ್ತಿ: ಜಿಲ್ಲೆಯಾದ್ಯಂತ 4 ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳು, 15ಕ್ಕೂ ಹೆಚ್ಚು ರೆಸಾರ್ಟ್‌, ನೂರಾರು ವಸತಿಗೃಹಗಳಿದ್ದು, ಎರಡು ದಿನಗಳಿಂದ ತುಂಬಿ ತುಳುಕುತ್ತಿವೆ. ಕೆಲವೇ ದಿನಗಳಲ್ಲಿ ಹೊಸ ವರ್ಷಾಚರಣೆ ಇರುವುದರಿಂದ ಎಲ್ಲವೂ ಭರ್ತಿಯಾಗಿವೆ. ಮುಂಗಡವಾಗಿ ಕಾಯ್ದಿರಿಸದೇ ಬರುವ ಪ್ರವಾಸಿಗರಿಗೆ ಕೊಠಡಿಗಳೂ ಸಿಗುತ್ತಿಲ್ಲ. ಜತೆಗೆ, ಹೋಂಸ್ಟೇಗಳ ದರವು ದುಪ್ಪಟ್ಟಾಗಿದೆ.

ಕಳೆದ ತಿಂಗಳು ಎರಡು ಸಾವಿರದಷ್ಟಿದ್ದ ಹೋಂಸ್ಟೇ ದರವು ನಾಲ್ಕರಿಂದ ಐದು ಸಾವಿರಕ್ಕೆ ಏರಿಕೆಯಾಗಿದೆ. ಎಷ್ಟಾದರೂ ಹಣ ಇರಲಿ ಕೊಠಡಿ ಸಿಕ್ಕರೆ ಸಾಕು ಎನ್ನುವ ಸ್ಥಿತಿ
ಪ್ರವಾಸಿಗರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT